ಕೆಳಹಂತದ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸುವ ವಕೀಲರ ಪಾಡು ಯಾರಿಗೂ ಬೇಡ: ವಿ ಬಿ ಚೌಕಿಮಠ

ಉನ್ನತ ನ್ಯಾಯಾಲಯಗಳ ವಕೀಲರು ಒಂದು ಟೀ ಕುಡಿಯಲು ಎರಡು ಸಾವಿರ ರೂಪಾಯಿ ಬೇಕಾದರೂ ಖರ್ಚು ಮಾಡುವಷ್ಟು ಶಕ್ತರಾಗಿರುತ್ತಾರೆ. ಆದರೆ ಕೆಳಹಂತದ ನ್ಯಾಯಾಲಯಗಳಲ್ಲಿ ಎಷ್ಟೋ ಬಾರಿ ಒಂದು ಪ್ರಕರಣಕ್ಕೆ 2000 ರೂಪಾಯಿ ಗಳಿಸುವುದೂ ಕಷ್ಟ.
ಕೆಳಹಂತದ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸುವ ವಕೀಲರ ಪಾಡು ಯಾರಿಗೂ ಬೇಡ: ವಿ ಬಿ ಚೌಕಿಮಠ

ವಿ ಬಿ ಚೌಕಿಮಠ (ವೀರೇಶ್ವರ ಬಸವಂತಯ್ಯ ಚೌಕಿಮಠ) ಬಾಗಲಕೋಟೆ ಜಿಲ್ಲೆಯ ಹಿರಿಯ ವಕೀಲರಲ್ಲಿ ಒಬ್ಬರು. ಬೆಳಗಾವಿಯ ರಾಜಾ ಲಕ್ಮಗೌಡ ಕಾನೂನು ಕಾಲೇಜಿನಲ್ಲಿ ಅಧ್ಯಯನ ಮಾಡಿದ ಅವರು ನ್ಯಾಯವಾದಿಯಾಗಿ ಕಳೆದ 33 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ನೋಟರಿ ಪಬ್ಲಿಕ್‌ ಆಗಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಬಾಗಲಕೋಟೆ ವಕೀಲರ ಸಂಘದ ಅಧ್ಯಕ್ಷರಾಗಿ ನಾಲ್ಕು ಬಾರಿ ಚುನಾಯಿತರಾಗಿರುವುದು ನ್ಯಾಯಾವಾದಿ ಸಮುದಾಯದಲ್ಲಿ ಅವರು ಗಳಿಸಿರುವ ಜನಪ್ರಿಯತೆಗೆ ಸಾಕ್ಷಿ.

ಅಂತೆಯೇ ಬಾಗಲಕೋಟೆಯ ವಕೀಲ ಸಮುದಾಯದ ಸುಖ ದುಃಖಗಳನ್ನೂ ಅವರು ಆಳವಾಗಿ ಬಲ್ಲರು. ʼಬಾರ್‌ ಅಂಡ್‌ ಬೆಂಚ್‌ʼ ಜೊತೆ ಕೋವಿಡ್‌ ಸಂಕಷ್ಟಗಳನ್ನು ಹಂಚಿಕೊಳ್ಳುತ್ತಾ ವಕೀಲ ಸಮುದಾಯ ಕಳೆದ ಒಂದು ವರ್ಷದಿಂದ ಎದುರಿಸಿದ ಸವಾಲುಗಳನ್ನು ಅವರು ವಿವರವಾಗಿ ಬಿಚ್ಚಿಟ್ಟಿದ್ದಾರೆ. ಸುಪ್ರೀಂಕೋರ್ಟ್‌, ಹೈಕೋರ್ಟ್‌ ವಕೀಲರ ಬದುಕಿನ ಶೈಲಿಯೇ ಬೇರೆ, ಕೆಳಹಂತದ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸುವ ವಕೀಲರ ಜೀವನವೇ ಬೇರೆ ಎನ್ನುವ ಅವರು ಕೋವಿಡ್‌ ಸಂದರ್ಭದಲ್ಲಿ ಸರ್ಕಾರ ಕೆಳಹಂತದ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸುವ ವಕೀಲ ಸಮುದಾಯದತ್ತ ಗಮನ ಹರಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ.

Q

ಕೋವಿಡ್‌ ಸಂದರ್ಭದಲ್ಲಿ ಬಾಗಲಕೋಟೆಯ ವಕೀಲರ ಪರಿಸ್ಥಿತಿ ಹೇಗಿತ್ತು?

A

ಕಳೆದ ವರ್ಷ ಮಾರ್ಚ್‌ನಲ್ಲಿ ಲಾಕ್‌ಡೌನ್‌ ಘೋಷಣೆಯಾದ ಬಳಿಕ ಪ್ರಕರಣಗಳೇ ನಡೆಯದೆ ಸಾಕಷ್ಟು ತೊಂದರೆ ಉಂಟಾಯಿತು. ಕಕ್ಷೀದಾರರು ವಕೀಲರಿಗೆ ಫೀ ಕೊಟ್ಟಾಗ ಮಾತ್ರ ವಕೀಲರು ಬದುಕಲು ಸಾಧ್ಯ. ಯಾಕೆಂದರೆ ವಕೀಲರು ಬೇರೆ ವೃತ್ತಿ ನೆಚ್ಚಿಕೊಳ್ಳುವುದು ಅಸಾಧ್ಯ. ಮುಂಜಾನೆ ಕೇಸ್‌ ಅಧ್ಯಯನ, ನಂತರ ಬೆಳಿಗ್ಗೆಯಿಂದ ಸಂಜೆಯವರೆಗೆ ಕೋರ್ಟ್‌ ಕರ್ತವ್ಯ ಮತ್ತೆ ಸಂಜೆ ಕಕ್ಷೀದಾರರ ಭೇಟಿ ಹೀಗೆ ಸಾಮಾನ್ಯವಾಗಿ ವಕೀಲರ ದಿನಚರಿ ಇರುತ್ತದೆ. ಅವರ ಬದುಕಿಗೆ ಕಕ್ಷೀದಾರರೇ ಆಧಾರ. ಇಂತಹ ಹೊತ್ತಿನಲ್ಲಿ ಕೋವಿಡ್‌ ಕಕ್ಷೀದಾರರನ್ನು ಕಿತ್ತುಕೊಂಡಿತು. ನಮ್ಮಲ್ಲಿ ಸುಮಾರು 600 ಮಂದಿ ವಕೀಲರಿದ್ದು 300 ಮಂದಿ ನಿಗದಿತವಾಗಿ ನ್ಯಾಯಾಲಯಕ್ಕೆ ಹಾಜರಾಗುತ್ತಾರೆ. ಈ ಆರುನೂರು ಮಂದಿಯಲ್ಲಿ ಶೇ 80ರಷ್ಟು ಮಂದಿ ಕೋವಿಡ್‌ನಿಂದ ತೊಂದರೆ ಅನುಭವಿಸಿದರು.

Q

ಇಂತಹ ಕಷ್ಟದ ಕಾಲದಲ್ಲಿ ಬಾಗಲಕೋಟೆ ವಕೀಲರ ಸಂಘ ವಕೀಲ ಸಮುದಾಯಕ್ಕೆ ಹೇಗೆ ನೆರವು ನೀಡಿತು?

A

ವಕೀಲರಿಗೆ ನಾನು ಖುದ್ದಾಗಿ ಮೆಸೇಜ್‌ ಕಳುಹಿಸಿ ಯಾರಾದರೂ ನ್ಯಾಯವಾದಿಗಳು ಸಂಕಷ್ಟದಲ್ಲಿದ್ದರೆ ತಿಳಿಸಲು ಕೋರಿದೆ. 20ರಿಂದ 30 ಮಂದಿ ತೀವ್ರ ಸಂಕಷ್ಟದಲ್ಲಿದ್ದರು. ದೇವರ ಆದೇಶದಂತೆ ಅವರ ಸಹಾಯಕ್ಕೆ ನಿಂತೆ. ಸಂಘದ ಸದಸ್ಯರೆಲ್ಲಾ ಸೇರಿ ತಿಂಗಳಿಗೆ ಆಗುವಷ್ಟು ಆಹಾರ ಸಾಮಗ್ರಿಗಳನ್ನು ಅವರಿಗೆ ಒದಗಿಸಿದೆವು.

ವಕೀಲರ ವೃತ್ತಿಯಲ್ಲಿ ಸೆಟಲ್‌ ಆಗಲು ಕನಿಷ್ಠ ಎಂಟು ವರ್ಷವಾದರೂ ಬೇಕು. ಎರಡು ಮೂರು ವರ್ಷ ಅನುಭವ ಇರುವ ವಕೀಲರಿಗೆ ಯಾವುದೇ ಪ್ರಕರಣಗಳು ಸಿಗುವುದಿಲ್ಲ. ಕಚೇರಿ ನಿರ್ವಹಣೆ, ಅಧ್ಯಯನಕ್ಕೆ ಬೇಕಾದ ಪುಸ್ತಕಗಳು, ವಕೀಲರ ನಿತ್ಯದ ಖರ್ಚುಗಳನ್ನು ನಿಭಾಯಿಸುವುದು ಸುಲಭದ ಮಾತಲ್ಲ. ಹೀಗಾಗಿ ಕೂಲಿ ಮಾಡುವವರು ವಕೀಲರಿಗಿಂತಲೂ ನೆಮ್ಮದಿಯಾಗಿ ಬದುಕುತ್ತಾರೆ ಎಂದು ಹಲವು ಬಾರಿ ಅನ್ನಿಸಿದೆ. ಕೋಟು, ಪ್ಯಾಂಟು, ಬೂಟು ತೊಡದೇ ವಕೀಲಿಕೆ ನಡೆಯುವುದೇ ಇಲ್ಲ. ಕಕ್ಷಿದಾರರು ನಮ್ಮ ಬಳಿ ಬರಬೇಕೆಂದರೆ ನಮ್ಮ ಅಪಿಯರೆನ್ಸ್‌ ಚೆನ್ನಾಗಿರಬೇಕು. ಆದರೆ ಅನೇಕ ಬಾರಿ ಇಸ್ತ್ರಿಗೆ ಹಣ ನೀಡಲು ಕೂಡ ವಕೀಲರ ಬಳಿ ಹಣ ಇರುವುದಿಲ್ಲ. We are helpless…

Q

ಈ ಸಂದರ್ಭದಲ್ಲಿ ಸರ್ಕಾರ ಹೇಗೆ ನೆರವು ನೀಡಿತು?

A

ಸರ್ಕಾರದಲ್ಲಿರುವವರಿಗೆ ತೊಂದರೆಯಾದಾಗ ಅವರು ಮೊದಲು ನೆನೆಯುವುದೇ ವಕೀಲರನ್ನು. ಆದರೆ ವಕೀಲರು ಸಂಕಷ್ಟದಲ್ಲಿದ್ದಾಗ ಮಾತ್ರ ಯಾರೂ ನೆರವಿಗೆ ಬರುವುದಿಲ್ಲ. ನಾವೇನು ಇವರಿಗೆ ಪುಕ್ಕಟ್ಟೆ ಸಲಹೆಕೊಡಬೇಕೆ? ವಕೀಲರೇನಾದರೂ ಸಾವನ್ನಪ್ಪಿದರೆ ಅವರ ಹೆಂಡತಿ ಮಕ್ಕಳು ಅಕ್ಷರಶಃ ನಿರ್ಗತಿಕರಾಗುವಂತಹ ಸ್ಥಿತಿ. ಏಕೆಂದರೆ ಎಷ್ಟೋ ವಕೀಲರ ದುಡಿಮೆ ಅಂದಂದಿಗೆ ಸಾಕಾಗುತ್ತದೆ. ಬೇರೆ ವೃತ್ತಿಪರರಿಗೆ ನೆರವು ನೀಡಿದಷ್ಟು ಸರ್ಕಾರ ವಕೀಲರ ಬಗ್ಗೆ ಗಮನ ಹರಿಸಿಲ್ಲ.

Q

ಕೆಎಸ್‌ಬಿಸಿಯಿಂದ ನೆರವು ಪಡೆಯಬಹುದಿತ್ತಲ್ಲವೇ?

A

ನಾವು ಸ್ಟಾಂಪ್‌ ಹಚ್ಚಿದ್ದರಲ್ಲಿ 20 ರಿಂದ 30 ರೂಪಾಯಿಗಳನ್ನು ವಕೀಲರ ಕ್ಷೇಮಾಭಿವೃದ್ಧಿಗೆಂದೇ ತೆಗೆದಿಡಲಾಗುತ್ತದೆ. ಆ ಹಣ ಎಲ್ಲಿ ಹೋಗುತ್ತದೆ ಗೊತ್ತಾಗುವುದಿಲ್ಲ. ಅಲ್ಲದೆ ಕೆಎಸ್‌ಬಿಸಿ ಸರ್ಕಾರದಿಂದಲೂ ಧನಸಹಾಯ ಕೋರಬಹುದು. ವಕೀಲರು ಮೃತಪಟ್ಟರೆ ಎಂಟು ಲಕ್ಷ ರೂಪಾಯಿ ನೀಡಲಾಗುತ್ತದೆ. ಈ ಮೊತ್ತ ಯಾವುದಕ್ಕೆ ಸಾಲುತ್ತದೆ? ಇದನ್ನು ಕನಿಷ್ಠ 30 ಲಕ್ಷಕ್ಕೆ ಏರಿಕೆ ಮಾಡುವಂತೆ ಎಷ್ಟೋ ಬಾರಿ ಕೇಳಿದ್ದೇವೆ. ಕೋವಿಡ್‌ ವೇಳೆಯೂ ಕೆಎಸ್‌ಬಿಸಿ ಸೂಕ್ತವಾಗಿ ಸ್ಪಂದಿಸಲಿಲ್ಲ.

Q

ನ್ಯಾಯಾಲಯಗಳಲ್ಲಿ ಪರಿಸ್ಥಿತಿ ಈಗ ಹೇಗಿದೆ?

A

‌Slow motionನಲ್ಲಿ ನ್ಯಾಯಾಲಯಗಳು ನಡೆಯುತ್ತಿವೆ. ಮೊದಲಿಗೆ ಹೋಲಿಸಿದರೆ ಈಗ ಪರಿಸ್ಥಿತಿ ಪರವಾಗಿಲ್ಲ.

Q

ವರ್ಚುವಲ್‌ ಕಲಾಪ ಒಳ್ಳೆಯದೋ ಭೌತಿಕ ಕಲಾಪ ಸೂಕ್ತವೋ?

A

ಕೆಳ ಹಂತದ ನ್ಯಾಯಾಲಯಗಳು ನೇರವಾಗಿ ವಿಚಾರಣೆ ನಡೆಸುವುದೇ ಸೂಕ್ತ. ಎಲ್ಲಾ ವಕೀಲರ ಬಳಿ ಲ್ಯಾಪ್‌ಟಾಪ್‌, ಇಂಟರ್‌ನೆಟ್‌ ವ್ಯವಸ್ಥೆ ಇರುತ್ತದೆ ಎಂದು ಹೇಳಲಾಗದು. ಕೆಳಹಂತದ ನ್ಯಾಯಾಲಯಗಳಲ್ಲಿರುವ ವಕೀಲರ ಬದುಕು ಹೈಕೋರ್ಟ್‌, ಸುಪ್ರೀಂಕೋರ್ಟ್‌ ವಕೀಲರ ಬದುಕಿಗಿಂತಲೂ ಭಿನ್ನ. ಉನ್ನತ ನ್ಯಾಯಾಲಯಗಳ ವಕೀಲರು ಒಂದು ಟೀ ಕುಡಿಯಲು ಎರಡು ಸಾವಿರ ರೂಪಾಯಿ ಬೇಕಾದರೂ ಖರ್ಚು ಮಾಡುವಷ್ಟು ಶಕ್ತರಾಗಿರುತ್ತಾರೆ. ಆದರೆ ಕೆಳಹಂತದ ನ್ಯಾಯಾಲಯಗಳಲ್ಲಿ ಎಷ್ಟೋ ಬಾರಿ ಒಂದು ಪ್ರಕರಣಕ್ಕೆ 2000 ರೂಪಾಯಿ ಗಳಿಸುವುದೂ ಕಷ್ಟ. ಉನ್ನತ ನ್ಯಾಯಾಲಯಗಳಲ್ಲಿ ಒಂದು ಭೇಟಿಗೆ ಒಂದು ಲಕ್ಷ ರೂಪಾಯಿ ಪಡೆಯುವ ವಕೀಲರು ಸಿಗುತ್ತಾರೆ. ಕೆಳ ಹಂತದ ನ್ಯಾಯಾಲಯಗಳಲ್ಲಿ ಕೂಲಿಕಾರ್ಮಿಕನೊಬ್ಬನ ಮಗ ಕೂಡ ವಕೀಲನಾಗಿರುತ್ತಾನೆ.

Q

ಮುಂದೆ ಕೋವಿಡ್‌ ರೀತಿಯ ಸಂಕಷ್ಟಗಳನ್ನು ನಿವಾರಿಸಲು ವಕೀಲ ಸಂಘಗಳೇ ಪ್ರಯತ್ನಿಸಬಹುದಲ್ಲವೇ?

A

ಇದೊಂದು ಬೃಹತ್‌ ಸವಾಲು. ಇದನ್ನು ಎದುರಿಸಲು ದೊಡ್ಡ ಮಟ್ಟದ ಬೆಂಬಲ ಅಗತ್ಯ. ಕೆಎಸ್‌ಬಿಸಿ, ಭಾರತೀಯ ವಕೀಲರ ಪರಿಷತ್ತು, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಎಲ್ಲವೂ ಜೊತೆಗೂಡಿ ವಕೀಲರ ನೆರವಿಗೆ ಬರಬೇಕು. ಕೇವಲ ಒಂದು ವಕೀಲರ ಸಂಘದಿಂದ ಏನೂ ಮಾಡಲಾಗದು.

Related Stories

No stories found.
Kannada Bar & Bench
kannada.barandbench.com