ಆಡಳಿತ ಪಕ್ಷ ಬದಲಾದರೆ ಅಡ್ವೊಕೇಟ್ ಜನರಲ್ ರಾಜೀನಾಮೆ ನೀಡುವ ಅಗತ್ಯವಿಲ್ಲ: ಕರ್ನಾಟಕ ಎಜಿ ಪ್ರಭುಲಿಂಗ ನಾವದಗಿ

ಕಟಕಟೆಯಲ್ಲಿರುವ ವಿವಾದಾತ್ಮಕ ವಿಷಯಗಳು, ನೀತಿ ನಿರೂಪಣೆ ಹಾಗೂ ವಿದ್ಯಮಾನಗಳ ಕಾನೂನಾತ್ಮಕ ವ್ಯಾಖ್ಯಾನಗಳು, ಹಲವು ಅರ್ಥಗಳನ್ನು ತುಣುಕಿಸುವ ಕವಿತೆಯ ಸಾಲುಗಳು... ಇಲ್ಲಿದೆ ಎಜಿ ನಾವದಗಿಯವರ ಮುಕ್ತ ಮಾತು.
Advocate General of Karnataka, Senior Advocate Prabhuling K Navadgi
Advocate General of Karnataka, Senior Advocate Prabhuling K Navadgi

ಇತ್ತೀಚೆಗೆ ಕರ್ನಾಟಕ ರಾಜ್ಯ ಹಲವು ಕಾನೂನು ಹೋರಾಟದ ರಣಾಂಗಣವಾಯಿತು. ಇವುಗಳಲ್ಲಿ ಪ್ರಮುಖವಾದ ಹಿಜಾಬ್‌ ವಿವಾದ ದೇಶದೆಲ್ಲೆಡೆ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಯಿತು. ಅದು ಮತ್ತು ಅಂತಹ ಹಲವು ಪ್ರಕರಣಗಳಲ್ಲಿ ರಾಜ್ಯ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಾ ಬಂದವರು ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ.

ಕಾಂಗ್ರೆಸ್‌- ಜೆಡಿಎಸ್‌ ನೇತೃತ್ವದ ಸರ್ಕಾರ ಅಧಿಕಾರ ಕಳೆದುಕೊಂಡ ಬಳಿಕ ಜುಲೈ 2019ರಲ್ಲಿ ಎ ಜಿ ಹುದ್ದೆಯಿಂದ ಕೆಳಗಿಳಿದ ಉದಯ್‌ ಹೊಳ್ಳ ಅವರ ಸ್ಥಾನವನ್ನು ನಾವದಗಿ ಮತ್ತೆ ಅಲಂಕರಿಸಿದರು. ಅದಕ್ಕೂ ಮುನ್ನ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಂಡ ಸಮಯದಲ್ಲಿ ಅಂದರೆ ಜುಲೈ 2018ರಲ್ಲಿ ನಾವದಗಿ ಅವರ ಸ್ಥಾನಕ್ಕೆ ಹೊಳ್ಳ ಅವರು ಬಂದಿದ್ದರು.

ಬಾರ್‌ ಅಂಡ್‌ ಬೆಂಚ್‌ನ ವರದಿಗಾರ ದೇಬಯಾನ್‌ ರಾಯ್‌ ಅವರೊಂದಿಗಿನ ಸಂದರ್ಶನದಲ್ಲಿ ನಾವದಗಿ ಅವರು ಸರ್ಕಾರ ಬದಲಾದರೆ ಎಜಿಗಳ ಬದಲಾಗುವಿಕೆ, ನ್ಯಾಯಾಲಯದ ಮುಂದಿರುವ ವಿವಾದಾತ್ಮಕ ವಿಷಯಗಳಿಂದ ಹಿಡಿದು ಬಾಲಿವುಡ್‌ ಹಾಡಿನೊಂದಿಗೆ ವಾದ ಮುಕ್ತಾಯಗೊಳಿಸುವವರೆಗಿನ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಸಾರ ರೂಪ ಇಲ್ಲಿದೆ:

Q

ಬಾರ್‌ ಅಂಡ್‌ ಬೆಂಚ್‌: ನೀವು ಕಾನೂನು ಕ್ಷೇತ್ರವನ್ನು ಆಯ್ದುಕೊಂಡಿದ್ದು ಏಕೆ?

A

ಪ್ರಭುಲಿಂಗ ನಾವದಗಿ: ನನ್ನ ತಂದೆ ನ್ಯಾಯಾಧೀಶರಾಗಿದ್ದರು. ಆದರೆ ವಿಪರ್ಯಾಸವೆಂದರೆ ನಾನು ಕಾನೂನು ಓದುವುದು ಅವರಿಗೆ ಇಷ್ಟವಿರಲಿಲ್ಲ. ವಾಸ್ತವವಾಗಿ ನಾನೊಬ್ಬ ವೈದ್ಯನಾಗಬೇಕೆಂದು ಬಯಸಿದ್ದ ಅವರು ವೈದ್ಯಕೀಯ ಕಾಲೇಜಿಗೆ ಸೇರಲು ನನ್ನ ಮನವೊಲಿಸಿದರು. ಆದರೆ ಅದು ಹೇಗೋ, ನನ್ನ ಬಾಲ್ಯದ ದಿನಗಳಿಂದಲೂ ನಾನು ಸದಾ ಕಾನೂನು ಕ್ಷೇತ್ರವನ್ನೇ ಕಲ್ಪಿಸಿಕೊಳ್ಳುತ್ತಿದ್ದೆ. ಬಹುಶಃ ನನ್ನ ಸುಪ್ತಪ್ರಜ್ಞೆಯಲ್ಲಿ ನನ್ನ ತಂದೆ ವಕೀಲರಾಗಿ ನಂತರ ನ್ಯಾಯಾಧೀಶರಾದ ಬಗ್ಗೆ ಪ್ರಭಾವಿತನಾಗಿದ್ದೆ ಎಂದು ಕಾಣುತ್ತದೆ.

ಪಿಯುಸಿ ದಿನಗಳಿಂದಲೂ ರಾಜ್ಯಶಾಸ್ತ್ರ ಮತ್ತು ಕಾನೂನು ಕ್ಷೇತ್ರದಲ್ಲಿನನಗೆ ಆಸಕ್ತಿ ಇತ್ತು. ವೃತ್ತಿಯಲ್ಲಿ ನನ್ನ ತಂದೆಯ ಅಗಾಧ ಅಸ್ತಿತ್ವ ಪ್ರಾಯಶಃ ನಾನು ವಕೀಲ ವೃತ್ತಿ ಆಯ್ಕೆ ಮಾಡಿಕೊಳ್ಳುವಂತೆ ಮಾಡಿತು.

Q

ಬಾರ್‌ ಅಂಡ್‌ ಬೆಂಚ್‌: ಪಕ್ಷ ಅಧಿಕಾರ ಕಳೆದುಕೊಂಡಾಗ ಅಡ್ವೊಕೇಟ್ ಜನರಲ್ ಹುದ್ದೆಗೆ ರಾಜೀನಾಮೆ ನೀಡುವುದು ಸಂಪ್ರದಾಯವಾಗಿದೆ. ಇದು ಸರಿಯಾದ ನಡೆ ಎಂದು ನಿಮಗನ್ನಿಸಿದೆಯೇ? ಎಜಿ ಎಂಬುವವರು ಅಧಿಕಾರದಲ್ಲಿರುವವರಿಗಿಂತ ಮೇಲಿರಬೇಕಲ್ಲವೇ?

A

ನಾವದಗಿ: ಅಡ್ವೊಕೇಟ್ ಜನರಲ್ ಹುದ್ದೆಯ ಇತಿಹಾಸ ನೋಡಿದರೆ, ದೇಶದ ಕಾನೂನು ಸಚಿವರನ್ನು ಅಟಾರ್ನಿ ಜನರಲ್ ಆಗಿ ನೇಮಿಸಬೇಕು ಮತ್ತು ರಾಜ್ಯದ ಕಾನೂನು ಸಚಿವರನ್ನು ಅಡ್ವೊಕೇಟ್ ಜನರಲ್ ಆಗಿ ನೇಮಿಸಬೇಕು ಎಂಬ ಸಲಹೆ ಇತ್ತು. ಆದರೆ ನಂತರ, ನಮಗೆ ರಾಜ್ಯ ಅಥವಾ ಕೇಂದ್ರ ಸರ್ಕಾರದ ಕಾನೂನು ಅಧಿಕಾರಿ ಬೇಕು, ಅವರು ರಾಜಕೀಯೇತರವಾಗಿಯಷ್ಟೇ ಅಲ್ಲದೆ ಸ್ವತಂತ್ರವಾಗಿರಬೇಕು ಎಂದು ಹೇಳಿ ಆ ಸಲಹೆ ತಿರಸ್ಕರಿಸಲಾಯಿತು. ಹೀಗಾಗಿ, ಅಡ್ವೊಕೇಟ್ ಜನರಲ್ ಹುದ್ದೆಯನ್ನು ರಚಿಸಲಾಯಿತು.

ರಾಜಕೀಯ ಸ್ಥಾನ ಪಲ್ಲಟವಾದ ತಕ್ಷಣ ಅಡ್ವೊಕೇಟ್ ಜನರಲ್ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ ಎಂದು ಭಾವಿಸುತ್ತೇನೆ.

ಆದರೆ ಅಡ್ವೊಕೇಟ್‌ ಜನರಲ್‌ ಎಂಬುವವರು ಆಯಾ ಸರ್ಕಾರದ ಆಯ್ಜೆಯಾಗಿರುವುದರಿಂದ ಅತ್ಯುನ್ನತ ಸಂಪ್ರದಾಯವು ಆಯಾ ಸರ್ಕಾರವೇ ಅಡ್ವೊಕೇಟ್‌ ಜನರಲ್‌ ಅವರನ್ನು ಆಯ್ಕೆ ಮಾಡುತ್ತದೆ ಎಂದು ಗುರುತಿಸುತ್ತದೆ.

ಅದರಲ್ಲಿ ನನಗೇನೂ ತಪ್ಪು ಕಾಣಿಸುವುದಿಲ್ಲ, ಏಕೆಂದರೆ ಅಂತಿಮವಾಗಿ, ಆಯಾ ಸರ್ಕಾರದ ನೀತಿ ನಿರ್ಧಾರಗಳು ನ್ಯಾಯಾಲಯದ ಮುಂದೆ ತಾರತಮ್ಯ ಇಲ್ಲದೇ ಪ್ರಶ್ನೆಗೊಳಗಾಗುತ್ತವೆ. ಅಡ್ವೊಕೇಟ್ ಜನರಲ್ ಅವರು ರಾಜ್ಯದ ಪ್ರಪ್ರಥಮ ಕಾನೂನು ಅಧಿಕಾರಿಯಾಗಿದ್ದು, ಆ ನಿರ್ಧಾರಗಳನ್ನು ಸಮರ್ಥಿಸಲು ಮಾತ್ರವಲ್ಲ, ಸರ್ಕಾರಕ್ಕೆ ಸೂಕ್ತವಾಗಿ ಸಲಹೆ ನೀಡಲು ಸಹ ಬದ್ಧರಾಗಿದ್ದಾರೆ.

ಇಡೀ ರಾಜಕೀಯ ವರ್ಣಪಟಲದಲ್ಲಿ, ಒಂದು ರಾಜಕೀಯ ಆಡಳಿತ ಹಿಂದಿನ ಆಡಳಿತಕ್ಕೆ ಸಂಪೂರ್ಣ ವಿರುದ್ಧವಾದ ದೃಷ್ಟಿಕೋನ ತೆಗೆದುಕೊಳ್ಳಬಹುದು. ಆದ್ದರಿಂದ, ಹಿಂದಿನ ಆಡಳಿತದಿಂದ ನೇಮಕಗೊಂಡ ಅಡ್ವೊಕೇಟ್ ಜನರಲ್ ಮುಂದುವರಿಯಬೇಕಾದರೆ, ಆತ ಹಿಂದಿನ ಎಜಿ ತೆಗೆದುಕೊಂಡ ನಿರ್ಧಾರವನ್ನು ವಿರೋಧಿಸಬೇಕಾದ ಸ್ಥಿತಿಗೆ ಬರಬಹುದು. ಈ ರೀತಿಯ ಮುಜುಗರದ, ಸಂಘರ್ಷದ ಸಂದರ್ಭಗಳನ್ನು ತಪ್ಪಿಸಲು, ಅಡ್ವೊಕೇಟ್ ಜನರಲ್ ಅವರನ್ನು ನಂತರದಲ್ಲಿ ಅಧಿಕಾರಕ್ಕೆ ಬರುವ ಸರ್ಕಾರ ಹೊಸದಾಗಿ ನೇಮಿಸಿದರೆ ತಪ್ಪೇನಿಲ್ಲ.

Q

ಬಾರ್‌ ಅಂಡ್‌ ಬೆಂಚ್‌: ಎಜಿಯಾಗಿ ನಿಮ್ಮ ಕಾನೂನು ಸಲಹೆ ಸರ್ಕಾರದ ಅಪೇಕ್ಷೆಗೆ ವಿರುದ್ಧವಾದಂತಹ ನೈತಿಕ ಸಂದಿಗ್ಧತೆಯನ್ನು ನೀವು ಎದುರಿಸಿದ್ದೀರಾ?

A

ನಾವದಗಿ: ಇವೆಲ್ಲಾ ನೈತಿಕ ಸಂದಿಗ್ಧತೆ ಅಥವಾ ಅಂತಹದ್ಯಾವುದೂ ಅಲ್ಲ. ನಾವು ಯಾವಾಗಲೂ ಸಮಾಲೋಚಿಸಿ, ಒಟ್ಟಿಗೆ ಕೆಲ ತೀರ್ಮಾನಗಳಿಗೆ ಬರುತ್ತೇವೆ. ನಮ್ಮಲ್ಲಿ ಭಿನ್ನಾಭಿಪ್ರಾಯಗಳು ಬರಬಹುದು, ಆದರೆ ಅದು ಹಾಗಿರಬೇಕು ಎಂದೇನೂ ಇಲ್ಲ. ನಮ್ಮಲ್ಲಿ ಭಿನ್ನಾಭಿಪ್ರಾಯ ಇರಲೇಬೇಕು ಎಂದೇನೂ ಅಲ್ಲ. ನನಗೆ ಅಂತಹದ್ದು ಯಾವುದೂ ಎದುರಾಗಿಲ್ಲ. ನಾನು ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಜೊತೆಗೆ ಯಾವುದೇ ನೈತಿಕ ಸಂದಿಗ್ಧತೆಯನ್ನು ಎದುರಿಸಿಲ್ಲ.

Q

ಬಾರ್‌ ಅಂಡ್‌ ಬೆಂಚ್‌:, ಸರ್ಕಾರ ಕಾನೂನು ಮತ್ತು ನೀತಿ ರೂಪಿಸುವಾಗ ಅಡ್ವೊಕೇಟ್ ಜನರಲ್ ಆಗಿ ನಿಮ್ಮ ಸಲಹೆ ಪಡೆಯುತ್ತದೆಯೇ?

A

ನಾವದಗಿ: ಸರ್ಕಾರ ನಮ್ಮ ಸಲಹೆ ಕೇಳುತ್ತದೆ.

Q

ಬಾರ್‌ ಅಂಡ್‌ ಬೆಂಚ್‌: ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಕರ್ನಾಟಕ ರಕ್ಷಣೆ ಮಸೂದೆ- 2021 ಅನ್ನು ಮಂಡಿಸುವ ಅಗತ್ಯವೇನಿತ್ತು?

A

ನಾವದಗಿ: ಇದು ನೀವು ಬೇರೆಯವರನ್ನು ಕೇಳಬೇಕಾದ ಪ್ರಶ್ನೆ, ನನ್ನನ್ನಲ್ಲ.

Q

ಬಾರ್‌ ಅಂಡ್‌ ಬೆಂಚ್‌: ಆದರೆ ಅದನ್ನು ರೂಪಿಸುವಾಗ ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರಲ್ಲವೇ?

A

ನಾವದಗಿ: ಇವೆಲ್ಲವೂ ನೀತಿ ನಿರೂಪಣೆಗೆ ಸಂಬಂಧಿಸಿದ ವಿಚಾರಗಳು.

Q

ಬಾರ್‌ ಅಂಡ್‌ ಬೆಂಚ್‌: ಹೈಕೋರ್ಟ್‌ನಲ್ಲಿ ಹಿಜಾಬ್ ಪ್ರಕರಣದ ವಿಚಾರಣೆ ವೇಳೆ ನೀವು ರಾಜ್ಯ ಸರ್ಕಾರದ ಪರವಾಗಿ ಭಾವಪೂರ್ಣ ವಾದ ಮಂಡಿಸಿದ್ದೀರಿ. ಸಮವಸ್ತ್ರದ ವಿಚಾರದಲ್ಲಿ ಪೇಟ ಮತ್ತು ಹಿಜಾಬ್ ನಡುವೆ ಹೇಗೆ ವ್ಯತ್ಯಾಸ ಗುರುತಿಸುತ್ತೀರಿ ?

A

ನಾವದಗಿ: ಈ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರ ತೆಗೆದುಕೊಂಡ ನಿಲುವು ಎಂದರೆ ಸಮವಸ್ತ್ರದ ಬಗ್ಗೆ ನಿರ್ಣಯ ತೆಗೆದುಕೊಳ್ಳುವುದು ಕಾಲೇಜು ಆಡಳಿತ ಮಂಡಳಿಯ ಹಕ್ಕು ಎಂಬುದು. ಸಮವಸ್ತ್ರ ಯಾವುದು ಎಂಬುದನ್ನು ಸೂಚಿಸುವುದು ಸಂಬಂಧಪಟ್ಟ ಸಂಸ್ಥೆಗೆ ಬಿಟ್ಟದ್ದು ಎಂದು ರಾಜ್ಯ ಸರ್ಕಾರ ಹೇಳಿದೆ. ಈಗ ಪ್ರತಿಯೊಂದು ಸಂಸ್ಥೆಯೂ ಸ್ಥಳೀಯ ಪರಿಸ್ಥಿತಿ, ಅಲ್ಲಿರುವ ವಿದ್ಯಾರ್ಥಿಗಳ ವಿಧವನ್ನು ನೋಡಿ ಸಮವಸ್ತ್ರ ಶಿಫಾರಸು ಮಾಡುವ ತನ್ನದೇ ಆದ ವಿಧಾನವನ್ನು ಹೊಂದಿವೆ.

ಹೀಗಾಗಿ, ಅವು ಕೆಲ ನಿಯಮ ನಿಬಂಧನೆಗಳನ್ನು ಸೂಚಿಸಿವೆ. ಭೇದ ಉಂಟಾಗುವುದಿಲ್ಲ. ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಅದು ಯಾವುದೇ ಪೇಟ ಅಥವಾ ಹಿಜಾಬ್ ಬಗ್ಗೆ ಏನನ್ನೂ ಹೇಳಿಲ್ಲ. ಸಂಸ್ಥೆ ಸೂಚಿಸಬೇಕು ಎಂದಷ್ಟೇ ನಾವು ಹೇಳಿದೆವು. ಸಾಂಸ್ಥಿಕ ನಿರ್ಣಯಗಳ ಅವಶ್ಯಕತೆಗಳನ್ನು ವಿದ್ಯಾರ್ಥಿಗಳು ಈಡೇರಿಸುವವರೆಗೆ, ಅವರಿಗೆ ಅವಕಾಶ ಇರುತ್ತದೆ.

Q

ಬಾರ್‌ ಅಂಡ್‌ ಬೆಂಚ್‌: ದ್ವೇಷ ಭಾಷಣದ ವಿರುದ್ಧ ಹೆಚ್ಚು ಕಟ್ಟುನಿಟ್ಟಾದ ನಿರ್ಬಂಧಕ ಕ್ರಮಗಳು ಇರಬೇಕು ಎಂದು ನೀವು ಭಾವಿಸುತ್ತೀರಾ? ಇದು ಸಮುದಾಯ-ನಿರ್ದಿಷ್ಟವಾಗುತ್ತಿದೆ ಎಂದು ನಿಮಗೆ ಅನ್ನಿಸಿದೆಯೇ?

A

ನಾವದಗಿ: ನಮ್ಮಲ್ಲಿ ಅಸ್ತಿತ್ವದಲ್ಲಿರುವ ಕಾನೂನು ಚೌಕಟ್ಟು ಅದನ್ನು ನೋಡಿಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ.

Q

ಬಾರ್‌ ಅಂಡ್‌ ಬೆಂಚ್‌: ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ (ಎನ್‌ಸಿಆರ್‌ಬಿ) ವರದಿಯ ಪ್ರಕಾರ, ಕರ್ನಾಟಕ 2019ರಲ್ಲಿ ದೇಶದಲ್ಲಿ ಅತಿ ಹೆಚ್ಚು ದೇಶದ್ರೋಹ ಪ್ರಕರಣಗಳನ್ನು (22) ದಾಖಲಿಸಿದೆ. ಈ ಕಾಯಿದೆ ಇನ್ನೂ ಕಾನೂನು ಪುಸ್ತಕದಲ್ಲಿಯೇ ಉಳಿಯಬೇಕು ಎಂದು ನೀವೇಕೆ ಯೋಚಿಸುತ್ತೀರಿ?

A

ನಾವದಗಿ: ನಾನು ಇಷ್ಟು ಮಾತ್ರ ಹೇಳುತ್ತೇನೆ, ಪ್ರಕರಣ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದ್ದು ಕೆಲವು ಮಧ್ಯಂತರ ಆದೇಶಗಳನ್ನು ಜಾರಿಗೊಳಿಸಲಾಗಿದೆ. ನಾನು ಏನನ್ನಾದರೂ ಹೇಳುವುದು ಅನುಚಿತವಾಗುತ್ತದೆ

ಆದರೆ ವಾಸ್ತವದ ಸಂಗತಿಯೆಂದರೆ, ಇದು ಒಂದು ಅವಶ್ಯಕತೆಯಾಗಿತ್ತು ಮತ್ತು ಇದು ಶಾಸನದಲ್ಲಿದೆ.

Q

ಬಾರ್‌ ಅಂಡ್‌ ಬೆಂಚ್‌: ಇತ್ತೀಚಿನ 'ಬುಲ್ಡೋಜರ್ ರಾಜಕೀಯ'ಕ್ಕೆ ಸಂಬಂಧಿಸಿದಂತೆ, ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸುವ ಮೊದಲು ನ್ಯಾಯಯುತ ವಿಚಾರಣೆ ಎಷ್ಟು ಮುಖ್ಯ?

A

ನಾವದಗಿ: ನೋಡಿ, ಈ ವಿಷಯಗಳನ್ನು ಇದಮಿತ್ಥಂ ಸೂತ್ರದಲ್ಲಿ ಪರಿಗಣಿಸಲಾಗದು. ಯಾವ ಸಂದರ್ಭಗಳಲ್ಲಿ ನಿಮಗೆ ವಿಚಾರಣೆಗೆ ಅವಕಾಶ ಕಲ್ಪಿಸಬೇಕು, ಯಾವ ಸಂದರ್ಭಗಳಲ್ಲಿ ವಿಚಾರಣೆಗೆ ಕೋರುವ ಹಕ್ಕನ್ನು ನೀಡಲಾಗದು ಎನ್ನುವುದು ನಮ್ಮಲ್ಲಿದೆ. ನಮ್ಮಲ್ಲಿ ನಿರ್ಣಯೋತ್ತರ ವಿಚಾರಣೆ ಮತ್ತು ನಿರ್ಣಯಪೂರ್ವ ವಿಚಾರಣೆಯ ಪರಿಕಲ್ಪನೆ ಇದೆ.

ಹಾಗಾಗಿ ಈ ಪ್ರಕರಣದಲ್ಲಿ ವಿಚಾರಣೆ ನಡೆಯಬೇಕಿತ್ತು ಅಥವಾ ಈ ಪ್ರಕರಣದಲ್ಲಿ ವಿಚಾರಣೆ ನಡೆಯಬಾರದಿತ್ತು ಎಂಬ ಕುರಿತು ಹೌದು ಎಂದು ಹೇಳುವ ಮೂಲಕ ನಾನು ನೇರವಾಗಿ ಉತ್ತರಿಸುವುದಿಲ್ಲ,.

ಒಂದು ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಲಾಗಿದ್ದು ಯಾರಾದರೂ ಅದನ್ನು ಅಕ್ರಮವಾಗಿ ಅತಿಕ್ರಮಿಸಿಕೊಂಡಿದ್ದರೆ ಅದನ್ನು ಆಕ್ರಮಿಸಿಕೊಳ್ಳಲು ಅವರಿಗೆ ಯಾವುದೇ ಹಕ್ಕಿಲ್ಲ ಎನ್ನಬಹುದು. ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಸರ್ಕಾರ ಆಸ್ತಿ ಹಿಂಪಡೆಯಲು ಸಂಪೂರ್ಣ ಅರ್ಹವಾಗಿರುತ್ತದೆ. ನಿರ್ಧಾರೋತ್ತರ ವಿಚಾರಣೆಯ ಪರಿಕಲ್ಪನೆಯನ್ನು ಸುಪ್ರೀಂ ಕೋರ್ಟ್ ವಿಕಸನಗೊಳಿಸಿದೆ. ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ.

ಕಾನೂನುಬಾಹಿರ ಅತಿಕ್ರಮಣ ಪರಿಗಣಿಸುವುದು ಮತ್ತು (ಅಂತಹ ಸಂದರ್ಭಗಳಲ್ಲಿ) ಸಹಜ ನ್ಯಾಯದ ತತ್ವಗಳು ಎಲ್ಲಿ ಅನ್ವಯವಾಗುವುದಿಲ್ಲ ಎಂಬ ಬಗ್ಗೆ ಕರ್ನಾಟಕ ಹೈಕೋರ್ಟಿನ ತೀರ್ಪೊಂದು ಉತ್ತಮವಾದ ವ್ಯತ್ಯಾಸಗಳನ್ನು ತಿಳಿಸಿದೆ. ಆದ್ದರಿಂದ, ಆಡಳಿತಾತ್ಮಕ ಕಾನೂನಿನ ಅಡಿಯಲ್ಲಿ ವಿಕಸನಗೊಂಡ ಈ ಪರಿಕಲ್ಪನೆಗಳನ್ನು ಪ್ರತಿ ಪ್ರಕರಣದ ವಾಸ್ತವಾಂಶಗಳನ್ನು ಅವಲಂಬಿಸಿ ಅನ್ವಯಿಸಬಹುದು.

Q

ಬಾರ್‌ ಅಂಡ್‌ ಬೆಂಚ್‌: ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ಪಿಐಎಲ್‌ ನ್ಯಾಯವ್ಯಾಪ್ತಿ ಬಗ್ಗೆ ನಿಮ್ಮ ಅಭಿಪ್ರಾಯವೇನು? ನ್ಯಾಯಾಂಗವು ನಿಷ್ಪ್ರಯೋಜಕ ಅರ್ಜಿಗಳನ್ನು ನೈಜ ಅರ್ಜಿಗಳಿಂದ ಹೇಗೆ ಪ್ರತ್ಯೇಕಿಸಬಲ್ಲದು?

A

ನಾವದಗಿ: ಸುಪ್ರೀಂ ಕೋರ್ಟ್ ಸ್ವತಃ ಹಲವಾರು ತೀರ್ಪುಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳಲ್ಲಿ ಯಾವ ರೀತಿಯ ಅರ್ಜಿಗಳನ್ನು ಪರಿಗಣಿಸಬೇಕು ಎಂಬ ಬಗ್ಗೆ ಈ ನ್ಯಾಯಶಾಸ್ತ್ರವನ್ನು ಅನ್ವಯಿಸುತ್ತದೆ,. ಕೆಲವು ಪ್ರಚಾರ ಹಿತಾಸಕ್ತಿ ಮೊಕದ್ದಮೆಗಳು ಮತ್ತು ಸೈದ್ಧಾಂತಿಕ ಹಿತಾಸಕ್ತಿ ಮೊಕದ್ದಮೆಗಳು ಹಾಗೂ ರಾಜಕೀಯ ಪ್ರೇರಿತ ಹಿತಾಸಕ್ತಿ ದಾವೆಗಳು ಇದ್ದು, ಇವುಗಳನ್ನು ಪುರಸ್ಕರಿಸಲು ಸಾಧ್ಯವಿಲ್ಲ.

ನೀವು ಸರಿಯಾಗಿ ಸೂಚಿಸಿದಂತೆ, ನ್ಯಾ. ಪಿ ಎನ್ ಭಗವತಿ ಅವರ ಸಿದ್ಧಾಂತವೆಂದರೆ, ಆರ್ಥಿಕವಾಗಿ ದುರ್ಬಲರಾಗಿರುವ ಕಾರಣದಿಂದ ಅಥವಾ ತಮ್ಮ ಧರ್ಮದ ಕಾರಣದಿಂದ ನ್ಯಾಯ ಪಡೆಯಲು ಸಾಧ್ಯವಾಗದ ವ್ಯಕ್ತಿಗಳಿಗೆ ಅಥವಾ ತಮ್ಮ ಜೀವನದಲ್ಲಿ ನ್ಯಾಯಾಲಯದ ಮೆಟ್ಟಿಲೇರಲು ಸಾಧ್ಯವಾಗದ ವ್ಯಕ್ತಿಗಳಿಗೆಂದು ಪಿಐಎಲ್‌ ಮೀಸಲಾಗಿದೆ.

ಇದಕ್ಕೆ ಹೊರತಾದವರು ತಮ್ಮ ಅಸಮಾಧಾನ ಹೊರಹಾಕಬಹುದು. ಸಾರ್ವಜನಿಕ ಹಿತಾಸಕ್ತಿ ದಾವೆಗಳ ಸಿದ್ಧಾಂತ ಸಾಂಪ್ರದಾಯಿಕವಾಗಿ ಹೀಗೆ ಕಾರ್ಯನಿರ್ವಹಿಸುತ್ತದೆ. ಆದರೂ, ನಂತರ, ನ್ಯಾಯಾಲಯಗಳು ಸರ್ಕಾರದ ನೀತಿ ನಿರ್ಧಾರಗಳು, ಪೊಲೀಸರ ಅನಿಯಂತ್ರಿತ ಕ್ರಮ, ಕಾರ್ಯಾಂಗದ ಅನಿಯಂತ್ರಿತ ಕ್ರಮ ಕಾನೂನಿಗೆ ಅನುಗುಣವಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು (ನ್ಯಾಯಾಂಗ) ಪಿಐಎಲ್‌ ವ್ಯಾಪ್ತಿ ವಿಸ್ತರಿಸಿರುವುದನ್ನು ನಾವು ನೋಡಿದ್ದೇವೆ.

ಆದರೆ, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ ಸೋಗಿನಲ್ಲಿ, ಬೇರೆಯವರ ಅಹವಾಲುಗಳನ್ನು ಗಾಳಿಗೆ ತೂರಲಾಗುತ್ತಿದೆಯೇ ಅಥವಾ ಇತರ ಕೆಲವು ವಿಷಯಗಳನ್ನು ಪರಿಹರಿಸಲಾಗಿದೆಯೇ ಎಂದು ನೋಡಲು ನ್ಯಾಯಾಲಯಗಳು ಯಾವಾಗಲೂ ಈ ಸಮತೋಲನವನ್ನು ಕಾಯ್ದುಕೊಂಡಿವೆ ಎಂದು ನಾನು ಹೇಳಲೇಬೇಕು. ನ್ಯಾಯಾಲಯಗಳು ಸದಾ ಅದನ್ನು ಪರಿಶೀಲಿಸುತ್ತವೆ. ಮತ್ತು ಅಂತಹ ಸಂದರ್ಭಗಳಲ್ಲಿ, ಅವು ಈ ಅರ್ಜಿಗಳನ್ನು ಅನುಕರಣೀಯ ದಂಡಗಳೊಂದಿಗೆ ವಜಾಗೊಳಿಸಿವೆ.

Q

ಬಾರ್‌ ಅಂಡ್‌ ಬೆಂಚ್‌: ಪರಿಹಾರ ಕೋರಿ ವ್ಯಕ್ತಿಗಳ ಪರವಾಗಿ ಸಂಘಟನೆಗಳು ನ್ಯಾಯಾಲಯದ ಮೊರೆ ಹೋಗುವ ಉದಾಹರಣೆಗಳು ಇಂದು ಸಾಕಷ್ಟು ಇವೆ. ಅಂತಹ ಅರ್ಜಿಗಳನ್ನು ಪರಿಗಣಿಸಬೇಕು ಎಂದು ನೀವು ಭಾವಿಸುತ್ತೀರಾ?

A

ನಾವದಗಿ: ನಾವು ಸಾರ್ವಜನಿಕ ಹಿತಾಸಕ್ತಿ ದಾವೆಗಳ ಮೂಲ ಸಿದ್ಧಾಂತವನ್ನು ಗಮನಿಸಬೇಕು. ಕೆಲವು ಪರಿಗಣನೆಗಳ ಕಾರಣದಿಂದಾಗಿ ನ್ಯಾಯ ಪಡೆಯಲು ಸಾಧ್ಯವಾಗದ ವ್ಯಕ್ತಿಗಳ ಗುಂಪು ಇದೆ ಎಂದು ಸಾಬೀತಾಗದ ಹೊರತು, ಬೇರೆಯವರು ನ್ಯಾಯಾಲಯದ ಮೊರೆ ಹೋಗುವುದಕ್ಕೆ ಯಾವುದೇ ಕಾರಣ ಇರುವುದಿಲ್ಲ. ರೂಢಿಗತ ಸಿದ್ಧಾಂತದ ಪ್ರಕಾರ, ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸುವ ವ್ಯಕ್ತಿ ನ್ಯಾಯಾಲಯಕ್ಕೆ ಬರಬೇಕು.

ಯಾರೇ ಆದರೂ ವಕೀಲರ ನೆರವು ಪಡೆಯಬಹುದು. ನಮ್ಮಲ್ಲಿ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ ಇದ್ದು ಅಲ್ಲಿ ಉಚಿತ ಕಾನೂನು ನೆರವು ನೀಡಲಾಗುತ್ತದೆ. ಬೇರೊಬ್ಬರ ಕುಂದುಕೊರತೆಗಳನ್ನು ಪರಿಶೀಲಿಸುತ್ತೇವೆ ಎಂಬುದಾಗಿ ವಿವಿಧ ಸಂಘಟನೆಗಳು ಹೇಳುವುದನ್ನು ಒಪ್ಪಬೇಕು ಎಂದು ನನಗನ್ನಿಸುವುದಿಲ್ಲ.

Q

ಬಾರ್‌ ಅಂಡ್‌ ಬೆಂಚ್‌: ಸುಲಭವಾಗಿ ನ್ಯಾಯ ಪಡೆಯುವ ಸಲುವಾಗಿ ಸುಪ್ರೀಂ ಕೋರ್ಟ್‌ಗೆ ಪ್ರಾದೇಶಿಕ ಪೀಠಗಳು ಅಗತ್ಯ ಎಂದು ಕೆಲವರು ಬೇಡಿಕೆ ಇಟ್ಟಿದ್ದು ಇದಕ್ಕೆ ಓಗೊಡುತ್ತೀರಾ?

A

ನಾವದಗಿ: ಇಲ್ಲ, ನಾನು ಈಗ ಸರ್ಕಾರವನ್ನು ಪ್ರತಿನಿಧಿಸುವುದರಿಂದ ಅದನ್ನು ಹೇಳುವುದು ಸೂಕ್ತವಲ್ಲ. ಇದು ಸರ್ಕಾರದ ನೀತಿಯ ವಿಚಾರ. ಅದರ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದು ನನ್ನ ಕಡೆಯಿಂದ ಅನುಚಿತವಾಗುತ್ತದೆ.

ಬೇಡಿಕೆ ಇದೆ ಎಂದು ನಾನು ನಿಮಗೆ ಹೇಳಲೇಬೇಕು, ವಾಸ್ತವವಾಗಿ ದಕ್ಷಿಣ ಭಾರತದಲ್ಲಿ ಪೀಠ ಸ್ಥಾಪನೆಗೆ ಭಾರಿ ಬೇಡಿಕೆಯಿದೆ.

Q

ಬಾರ್‌ ಅಂಡ್‌ ಬೆಂಚ್‌: ಬಾಲಿವುಡ್ ಹಾಡುಗಳ ಸಾಲುಗಳನ್ನು ಉಲ್ಲೇಖಿಸಿ ನ್ಯಾಯಾಲಯದಲ್ಲಿ ಎಜಿ ವಾದ ಅಂತ್ಯಗೊಳಿಸುವುದು ಬಹಳ ಅಪರೂಪ. ‘ನಾ ಮುಹ್ ಛುಪಾ ಕೆ ಜಿಯೋ, ನಾ ಸರ್ ಝುಕಾ ಕೆ ಜಿಯೋ, ಘಮೋಂ ಕಾ ದೌರ್ ಭಿ ಆಯೇ ತೊ ಮುಸ್ಕರಾಕೆ ಜಿಯೋ’ (ಮುಖ ಮುಚ್ಚಿಕೊಂಡು ಬದುಕಬೇಡಿ, ತಲೆ ತಗ್ಗಿಸಿ ಬದುಕಬೇಡಿ, ದುಃಖದ ಸಮಯದಲ್ಲಿಯೂ ಕೂಡ ನಗುತ್ತಾ ಬದುಕಿ) ಎಂದು ಹೇಳುವ ಮೂಲಕ ಹಿಜಾಬ್ ಪ್ರಕರಣದಲ್ಲಿ ನಿಮ್ಮ ವಾದ ಕೊನೆಗೊಳಿಸಿದಿರಿ,' ನೀವು ಆ ಮೂಲಕ ತಿಳಿಸಲು ಬಯಸಿದ ಸಂದೇಶವೇನು?

A

ನಾವದಗಿ: ಆ ಸಾಲುಗಳಲ್ಲಿಯೇ ಒಂದು ಪ್ರಖರ ಸಂದೇಶ ಇದೆ ಎಂದು ನಿಮಗನಿಸುವುದಿಲ್ಲವೇ? ಅದು ಯಾವುದೇ ಪ್ರಕರಣವಿರಲಿ... ನಮ್ಮ ತಲೆ ಮೇಲೆತ್ತಿ ಬದುಕಲು ನಮಗೆಲ್ಲರಿಗೂ ಕಲಿಸಲಾಗಿದೆ ಎಂದು ಅದು ಹೇಳುತ್ತದೆ. ಮತ್ತು ಅಂತಿಮವಾಗಿ ಅದು ಹೇಳುತ್ತದೆ, ಘಮೋಂ ಕಾ ದೌರ್ ಆಯೆ ತೋ ಭಿ, ಸರ್ ಉಠಾ ಕರ್ ಜಿಯೋ (ದುಃಖದ ಸಮಯ ಎದುರಾದಾಗಲೂ ತಲೆಯನ್ನು ಮೇಲೆತ್ತಿ ಬದುಕಿ). ಇದಕ್ಕೆ ಹೆಚ್ಚಿನ ವಿವರಣೆಯ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ.

Q

ಬಾರ್‌ ಅಂಡ್‌ ಬೆಂಚ್‌: ಹಿರಿಯ ವಕೀಲರಾಗಿ ಸ್ವತಂತ್ರ ಪ್ರಕರಣಗಳಲ್ಲಿ ವಾದಿಸುವ ನಿಮ್ಮ ಹಿಂದಿನ ಬದುಕನ್ನು ಕಳೆದುಕೊಂಡಿದ್ದೀರಿ, ಬಹುಶಃ ಶಾಂತಿಯುತವಾಗಿ ನಿದ್ರಿಸುವುದನ್ನು ಕೂಡ ಎಂದು ಅನ್ನಿಸುವುದಿಲ್ಲವೇ?

A

ನಾವದಗಿ: ಇದಕ್ಕೆ ನಾನು ಈ ಸಾಲುಗಳ ಮೂಲಕ ಉತ್ತರಿಸುತ್ತೇನೆ: ಹರ್ ಕಿಸಿ ಕೋ ಮುಕಮ್ಮಲ್ ಜಹಾನ್ ನಹಿ ಮಿಲ್ತಾ, ಕಿಸಿ ಕೋ ಆಸಮಾ ತೋ ಕಿಸಿ ಕೋ ಜಮಿ ನಹೀ ಮಿಲ್ತಾ (ಪ್ರತಿಯೊಬ್ಬರಿಗೂ ಎಲ್ಲವೂ ಪರಿಪೂರ್ಣವಾಗಿ ದಕ್ಕದು, ಕೆಲವರಿಗೆ ಆಗಸ ದಕ್ಕದೆ ಹೋದರೆ ಮತ್ತೆ ಕೆಲವರಿಗೆ ಭೂಮಿ...)

ತುಂಬಾ ಧನ್ಯವಾದಗಳು.

Related Stories

No stories found.
Kannada Bar & Bench
kannada.barandbench.com