ಪ್ರಮಾಣಕ್ಕಿಂತ ಗುಣಮಟ್ಟದ ಬಗ್ಗೆ ಹೆಚ್ಚು ಗಮನ ಹರಿಸಿದ್ದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ ಇಂದಿರಾ ಬ್ಯಾನರ್ಜಿ ಅವರ ಅಧಿಕಾರಾವಧಿಯ ವೈಶಿಷ್ಟ್ಯಗಳಲ್ಲಿ ಒಂದು. ಮಿತಭಾಷಿಯಾದರೂ ಅವರು ಕೇಳುತ್ತಿದ್ದ ಮೊನಚು ಪ್ರಶ್ನೆಗಳು ಎದುರಿದ್ದ ವಕೀಲರನ್ನು ಉತ್ತರಕ್ಕಾಗಿ ತಡಬಡಾಯಿಸುವಂತೆ ಮಾಡುತ್ತಿತ್ತು.
ಸೇವೆಯಿಂದ ನಿವೃತ್ತರಾದ ಒಂದು ದಿನದ ಬಳಿಕ ನ್ಯಾ. ಬ್ಯಾನರ್ಜಿ ಅವರು ಬಾರ್ ಅಂಡ್ ಬೆಂಚ್‌ನ ಪತ್ರಕರ್ತ ದೇಬಯಾನ್ ರಾಯ್ ಅವರೊಂದಿಗೆ ಕಾನೂನು ಲೋಕದಲ್ಲಿ ತಾವು ಸಾಗಿ ಬಂದ ಹಾದಿಯ ಬಗ್ಗೆ ಮಾತನಾಡಿದ್ದಾರೆ. ಸುಪ್ರೀಂ ಕೋರ್ಟ್‌ನ ಎಂಟನೇ ಮಹಿಳಾ ನ್ಯಾಯಮೂರ್ತಿ ಎನಿಸಿಕೊಂಡ ಅವರು ತಾವು ಬರೆದ ಐದು ತೀರ್ಪುಗಳನ್ನು ತಮಗಿಂತ ವಯಸ್ಸಿನಲ್ಲಿ ಕಿರಿಯರಾದ ನ್ಯಾಯಮೂರ್ತಿಯೊಬ್ಬರು ಹೇಗೆ ಪ್ರಕಟಿಸದಂತೆ ತಡೆದರು ಎಂಬುದನ್ನು ಹೇಳುವುದರ ಜೊತೆಗೆ ವೃತ್ತಿಯಲ್ಲಿ ಮಹಿಳೆ ಎದುರಿಸಬೇಕಾದ ಸಂಘರ್ಷಗಳನ್ನು ವಿವರಿಸಿದ್ದಾರೆ. ಸಂದರ್ಶನದ ಆಯ್ದಭಾಗ ಹೀಗಿದೆ:
ಬಾರ್ ಅಂಡ್ ಬೆಂಚ್: ನ್ಯಾಯಾಂಗದಲ್ಲಿ, ವಿಶೇಷವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮಹಿಳಾ ಪ್ರಾತಿನಿಧ್ಯ ಕೇವಲ ಸಾಂಕೇತಿಕ ಎಂದು ನೀವು ಭಾವಿಸುವಿರಾ? ನ್ಯಾಯಾಂಗದಲ್ಲಿ ಮಹಿಳೆಯ ಉತ್ತಮ ಪ್ರಾತಿನಿಧ್ಯ ಹೇಗೆ ಸಾಧ್ಯವಾಗಬಹುದು?
ನ್ಯಾ. ಬ್ಯಾನರ್ಜಿ: ಮಹಿಳಾ ನ್ಯಾಯಾಧೀಶರನ್ನು ನೇಮಿಸುವ ಕುರಿತಾದ ಪ್ರಚಾರ ಅನಗತ್ಯವಾದದ್ದು, ನಾನು ನ್ಯಾಯಮೂರ್ತಿಯಾದಾಗ ಸುಪ್ರೀಂ ಕೋರ್ಟ್‌ನಲ್ಲಿ ಮೂವರು ಮಹಿಳಾ ನ್ಯಾಯಮೂರ್ತಿಗಳಿದ್ದಾರೆ ಎಂದು ನನ್ನ ಹೆಸರು ಹೆಡ್‌ಲೈನ್‌ಗಳಲ್ಲಿ ಬರುತ್ತಿತ್ತು. ಆದರೆ ಮಹಿಳೆ ಎಂಬ ಕಾರಣಕ್ಕೆ ನನಗಾದ ಉಪಯೋಗವೇನು? ಏನೂ ಇಲ್ಲ.
ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳನ್ನು ನೇಮಿಸುವಾಗ, ಕೆಲವು ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಲಾಗುತ್ತದೆ. ಅದರಲ್ಲಿ ಒಂದು ಪ್ರಾದೇಶಿಕ ಪ್ರಾತಿನಿಧ್ಯ; ನ್ಯಾಯಮೂರ್ತಿಗಳು ಬೇರೆ ಬೇರೆ ಹೈಕೋರ್ಟ್‌ಗಳಿಂದ ಬಂದವರೇ ಎಂಬುದನ್ನು ಗಮನಿಸಲಾಗುತ್ತದೆ. ಎರಡನೆಯದು ಹಿರಿತನ, ಕಾನೂನಿನ ಜ್ಞಾನ, ಸಾಮರ್ಥ್ಯ ಅಲ್ಲದೆ ನ್ಯಾಯಮೂರ್ತಿಗಳು ತಮ್ಮ ಸೇವಾವಧಿಯಲ್ಲಿ ಗಳಿಸಿದ ಖ್ಯಾತಿ.
ಕಲ್ಕತ್ತಾ ಹೈಕೋರ್ಟ್ ವಿಷಯಕ್ಕೆ ಬರುವುದಾದರೆ, ನನಗಿಂತ ಹಿಂದೆ ಅಲ್ಲಿಂದ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಹೊಂದಿದ್ದು ಪಿ ಜಿ ಘೋಷ್, 2013ರಲ್ಲಿ. ಆನಂತರ ಯಾವುದೇ ಪದೋನ್ನತಿ ಇರಲಿಲ್ಲ. ನ್ಯಾ. ಘೋಷ್ ಅವರು 2017ರಲ್ಲಿ ನಿವೃತ್ತರಾದರು. ಮೇ 2017ರಿಂದ ಆಗಸ್ಟ್ 2018ರವರೆಗೆ (ನಾನು ನೇಮಕಗೊಳ್ಳುವವರೆಗೆ) ಸುಪ್ರೀಂ ಕೋರ್ಟ್‌ನಲ್ಲಿ ಕಲ್ಕತ್ತಾ ಹೈಕೋರ್ಟ್‌ನಿಂದ ಯಾವ ನ್ಯಾಯಮೂರ್ತಿಯೂ ಪದೋನ್ನತಿ ಹೊಂದಿರಲಿಲ್ಲ. ಬಾಂಬೆ ಹೈಕೋರ್ಟ್ ಹೊರತುಪಡಿಸಿ ನಾನು ದೇಶದಲ್ಲೇ ಅತ್ಯಂತ ಹಿರಿಯಳಾದ ನ್ಯಾಯಮೂರ್ತಿಯಾಗಿದ್ದೆ, ಹಿರಿತನದಲ್ಲಿ ದೇಶದಲ್ಲೇ ನಾಲ್ಕನೆಯವಳಾಗಿದ್ದೆ. ಸುಪ್ರೀಂ ಕೋರ್ಟ್‌ನಲ್ಲಿ ಅದಾಗಲೇ ಬಾಂಬೆ ಹೈಕೋರ್ಟ್‌ನ ಮೂವರು ನ್ಯಾಯಮೂರ್ತಿಗಳಿದ್ದರು.
ಇಲ್ಲಿಯವರೆಗೆ (ನ್ಯಾಯಾಂಗದಲ್ಲಿ) ಕಡಿಮೆ ಮಹಿಳೆಯರಿದ್ದರೆ ಅದಕ್ಕೆ ಮನಸ್ಥಿತಿಯಲ್ಲಿ ಇರುವ ದೋಷ ಕಾರಣ. ಮಹಿಳೆ ತನ್ನ ವೃತ್ತಿಗೆ ಸಮಯ ನೀಡುತ್ತಾ ಹೋದರೆ ಆಕೆ ತನ್ನ ಮನೆ ನಿರ್ಲಕ್ಷಿಸುತ್ತಾಳೆ ಎಂಬ ಸಮಾಜದಲ್ಲಿನ ಪುರುಷ- ಮಹಿಳಾ ರೂಢಮಾದರಿಯು ಮಹಿಳಾ ಸಮಾನತೆಗೆ ದೊಡ್ಡ ಅಡ್ಡಿ.
ವಿದೇಶದಲ್ಲಿಯೂ ನ್ಯಾಯಾಧೀಶರು ಎದುರಿಸುವ ತಾರತಮ್ಯದ ಬಗ್ಗೆ ಅಲ್ಲಿನ ನ್ಯಾಯಾಧೀಶರು ನನ್ನೊಂದಿಗೆ ಮಾತನಾಡಿದ್ದಾರೆ. ಅಮೆರಿಕದ ಸುಪ್ರೀಂ ಕೋರ್ಟ್‌ಗೆ ಮತ್ತೊಬ್ಬ ಮಹಿಳೆಯನ್ನು ನೇಮಿಸಿದರೆ ನಿಮಗೆ ಸಂತೋಷವಾಗುತ್ತದೆಯೇ ಎಂದು (ಅಮೆರಿಕ ನ್ಯಾಯಿಕ ಲೋಕದ ದಂತಕತೆ- ಲಿಂಗ ಸಮಾನತೆಗೆ ಭದ್ರ ಬುನಾದಿ ಹಾಕಿದ) ನ್ಯಾ. ರುತ್ ಬೇಡರ್ ಗಿನ್ಸ್‌ಬರ್ಗ್ ಅವರನ್ನು ಕೇಳಿದಾಗ ಅವರು ಅಲ್ಲಿ ಎಲ್ಲ ನ್ಯಾಯಮೂರ್ತಿಗಳೂ ಮಹಿಳೆಯರೇ ಆದಾಗ ನನಗೆ ಸಂತಸವಾಗುತ್ತದೆ ಎಂದು ಹೇಳಿದ್ದರು. ಸುಪ್ರೀಂ ಕೋರ್ಟ್‌ನಲ್ಲಿರುವ ನ್ಯಾಯಮೂರ್ತಿಗಳೆಲ್ಲಾ ಪುರುಷರಿದ್ದಾಗ ಆಶ್ಚರ್ಯಪಡದವರು ಮಹಿಳಾ ನ್ಯಾಯಮೂರ್ತಿಯನ್ನು ನೇಮಿಸಿದಾಗ ಏಕೆ ಹುಬ್ಬು ಹಾರಿಸುತ್ತಾರೆ ಎಂದು ಆಕೆ ಕೇಳಿದ್ದರು.
ಇಲ್ಲಿನ ಮತ್ತೊಂದು ಅಂಶ ಎಂದರೆ ಅದು ಓಡಾಟಕ್ಕೆ ಸಂಬಂಧಿಸಿದ್ದು. ನಾನು ಕೆಲವೊಮ್ಮೆ ಮಹಿಳೆಯರಿಗೆ ಅನ್ಯಾಯ ಮಾಡಿದ್ದೇನೆ, ಮಹಿಳಾ ಖಾಸಗಿ ಸಹಾಯಕರನ್ನು (ಪಿಎ) ನನಗೆ ನಿಯೋಜಿಸಿದಾಗ, ನಾನು ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಲಿಲ್ಲ. ನ್ಯಾ. ಅಶೋಕ್ ಗಂಗೂಲಿ ಅವರು ನನಗೆ ಮಹಿಳಾ ಪಿಎ ನಿಯೋಜಿಸಿದಾಗ ನಿರಾಕರಿಸಿದೆ.
ನನ್ನ ಚೇಂಬರ್‌ನಲ್ಲಿ ಮಹಿಳೆ ಇರುವುದನ್ನು ವಿರೋಧಿಸುವುದಕ್ಕೆ ಸ್ವಾರ್ಥದ ಕಾರಣವಿತ್ತು. ಕಲ್ಕತ್ತಾ ಹೈಕೋರ್ಟಿನಲ್ಲಿದ್ದಾಗ ನಾನು ಮಹಿಳಾ ಪಿಎ ಇರಿಸಿಕೊಳ್ಳಲು ಹೋಗಲಿಲ್ಲ. ಪುರುಷರನ್ನೇ ಆರಿಸಿಕೊಂಡೆ, ಏಕೆಂದರೆ ನಾನು ತಡರಾತ್ರಿಯವರೆಗೆ ಕೆಲಸ ಮಾಡುತ್ತಿದ್ದೆ. ಅಂತಹ ಸಂದರ್ಭದಲ್ಲಿ ನಾನು ಮಹಿಳಾ ಪಿಎ ನೇಮಿಸಿಕೊಂಡಿದ್ದರೆ, ನಾನು ಅವರ ಸುರಕ್ಷಿತ ಪ್ರಯಾಣದ ಬಗ್ಗೆ ಚಿಂತಿಸಬೇಕಿತ್ತು. ಆಕೆ ಯಾರದಾದರೂ ಬೆಂಗಾವಲಲ್ಲಿ ಹೋಗಲು ವ್ಯವಸ್ಥೆ ಮಾಡಬೇಕಿತ್ತು. ಅವರಿಗೆ ತಮ್ಮ ಮಕ್ಕಳು ಕುಟುಂಬದ ಜೊತೆಗೆ ಇರುವುದು ಅಗತ್ಯವಿರುತ್ತಿತ್ತು. ಆದರೆ ಒಬ್ಬ ಪುರುಷನಾದರೆ, ಆತ ರಾತ್ರಿ 11 ಗಂಟೆಯಾದರೂ ರೈಲಿನಲ್ಲಿ ಪಯಣಿಸಬಹುದಿತ್ತು. ಇಲ್ಲವೇ ಅವನಿಗಾಗಿ ಟ್ಯಾಕ್ಸಿ ಬುಕ್ ಮಾಡಿದರೆ ಸಾಕಿತ್ತು.
ಸುಪ್ರೀಂ ಕೋರ್ಟ್‌ನಲ್ಲಿ ನನಗೆ ಮಹಿಳಾ ಪಿಎ ಇದ್ದು ಆಕೆ ಖುದ್ದು ವಾಹನ ಚಲಾಯಿಸುತ್ತಿದ್ದರು ಮತ್ತು ಅನತಿ ದೂರದಲ್ಲೇ ಇದ್ದರು.
ಮಹಿಳೆಯರಿಗೆ ಮುಕ್ತವಾಗಿ ಓಡಾಡುವ ಸ್ವಾತಂತ್ರ್ಯ ಇರಬೇಕು ಎಂದು ಹೇಳುವುದು ತುಂಬಾ ಸುಲಭ, ಆದರೆ ನನ್ನ 65 ವರ್ಷ ವಯಸ್ಸಿನಲ್ಲೂ ಒಬ್ಬಂಟಿಯಾಗಿ, ಬೆಂಗಾವಲು ಇಲ್ಲದೆ ಬೀದಿಯಲ್ಲಿ ನಡೆಯುವುದು ಸುರಕ್ಷಿತವೇ ಎಂಬುದು ಪ್ರಶ್ನೆಯಾಗಿದೆ.
ಕಲ್ಕತ್ತಾದ ಕಾನೂನು ಸಂಸ್ಥೆಯೊಂದರಲ್ಲಿ ನನಗೆ ಕೆಲಸ ಕೊಡಲಿಲ್ಲ. ಹಾಗೆಂದು ಅವರು ಲಿಂಗ ತಾರತಮ್ಯ ಮಾಡಿದರು ಎಂದಲ್ಲ. ಆದರೆ ಅಲ್ಲಿನ ಮುಖ್ಯಸ್ಥರು ವಕೀಲರೊಂದಿಗೆ ಮಧ್ಯರಾತ್ರಿ ಹೊತ್ತಿಗೆ ಪ್ರಕರಣಗಳ ಕುರಿತು ಚರ್ಚಿಸುತ್ತಿದ್ದರು. ಆಗೆಲ್ಲ ವಕೀಲೆ ಅಲ್ಲಿದ್ದರೆ ಆಕೆಯ ಪ್ರಯಾಣ ಮತ್ತು ರಕ್ಷಣೆ ಬಗ್ಗೆ ಯೋಚಿಸಬೇಕಾಗುತ್ತದೆ ಎಂಬುದು ಆ ನಿರ್ಧಾರದ ಹಿಂದಿನ ಕಾರಣವಾಗಿತ್ತು.
ಬಾರ್ ಅಂಡ್ ಬೆಂಚ್: ಸುಪ್ರೀಂ ಕೋರ್ಟ್‌ನಲ್ಲಿದ್ದ ವೇಳೆ, ನೀವು 400ಕ್ಕೂ ಹೆಚ್ಚು ಪೀಠಗಳ ಸದಸ್ಯರಾಗಿದ್ದಿರಿ, ಅವುಗಳಲ್ಲಿ ಹಲವು ಪೀಠಗಳ ನೇತೃತ್ವ ವಹಿಸಿದ್ದಿರಿ. ಮಹಿಳಾ ನ್ಯಾಯಮೂರ್ತಿಗಳು ಪೀಠದ ನೇತೃತ್ವ ವಹಿಸಿಕೊಳ್ಳುವುದನ್ನು ಜೀರ್ಣಿಸಿಕೊಳ್ಳಲು ಪುರುಷ ನ್ಯಾಯಮೂರ್ತಿಗಳಿಗೆ ಈಗಲೂ ಸ್ವಲ್ಪ ಕಷ್ಟ ಎಂದು ನೀವು ಭಾವಿಸುತ್ತೀರಾ?
ನ್ಯಾ. ಬ್ಯಾನರ್ಜಿ: ನೀವು ನನಗೆ ಮುಜುಗರ ಉಂಟು ಮಾಡುತ್ತಿದ್ದೀರಿ. ಉತ್ತರ ನಿಮಗೇ ಬಹುಶಃ ತಿಳಿದಿರಬಹುದು. ನಾನು ಅತ್ಯಂತ ಸೌಜನ್ಯದಿಂದ ವರ್ತಿಸಿದ ನ್ಯಾಯಮೂರ್ತಿ ಎ ಎಸ್ ಬೋಪಣ್ಣ ಅವರೊಂದಿಗೆ ಪೀಠ ಹಂಚಿಕೊಂಡಿದ್ದೇನೆ, ದುರದೃಷ್ಟವಶಾತ್, ಆ ಪೀಠದ ಅವಧಿ ಅಲ್ಪಕಾಲಿಕವಾಗಿತ್ತು. ನ್ಯಾ. ವಿ ರಾಮಸುಬ್ರಮಣಿಯನ್ ಅವರ ಪೀಠಕ್ಕೆ ಸಂಬಂಧಿಸಿದಂತೆಯೂ ಹಾಗೆಯೇ ಆಯಿತು.
ಪ್ರತಿಯೊಬ್ಬ ನ್ಯಾಯಾಧೀಶರಿಗೂ ಮಾತನಾಡುವ ಹಕ್ಕಿದೆ ಆದರೆ ಕೆಲವರಿಗೆ ಮಾತನಾಡದೇ ಇರುವ ಹಕ್ಕಿದೆ. ಕೆಲವರು ವಾಚಾಳಿ ಸ್ವಭಾವದವರಾಗಿದ್ದು ಆ ನ್ಯಾಯಮೂರ್ತಿಗಳು ತಮಗಿಂತ ಹಿರಿಯ ಪುರುಷ ನ್ಯಾಯಮೂರ್ತಿಗಳೊಡನೆ ಪೀಠ ಹಂಚಿಕೊಂಡಿದ್ದನ್ನು ನೋಡುವ ಅವಕಾಶ ನನಗೆ ಸಿಗಲಿಲ್ಲ.
ಪೀಠದಲ್ಲಿ ಮೌನಿ ನ್ಯಾಯಮೂರ್ತಿಗಳೂ ಇರುತಾರೆ. ಆದರೆ ಪೀಠ ಮಹಿಳೆಯ ನೇತೃತ್ವದಲ್ಲಿದೆ ಎಂಬುದನ್ನು ಅರಗಿಸಿಕೊಳ್ಳುವುದು ಕಷ್ಟವೇನೋ ಎನ್ನುವ ಭಾವನೆ ಇದೆ. ಒಂದು ತೆರನಾದ ಮನಸ್ಥಿತಿ ಇದರ ಹಿಂದಿರುತ್ತದೆ ಎನ್ನುವುದು ನನ್ನ ಭಾವನೆ.
ಬಾರ್ ಅಂಡ್ ಬೆಂಚ್: ನೀವು ಮಹಿಳೆ ಎಂಬ ಒಂದೇ ಕಾರಣಕ್ಕೆ ಪೀಠದಲ್ಲಿನ ಶ್ರೇಣೀಕರಣವನ್ನು ಅಡ್ಡಿಪಡಿಸಿದ ಸಂದರ್ಭವಿದೆಯೇ?
ನ್ಯಾ. ಬ್ಯಾನರ್ಜಿ: ಹೌದು, ಅಂತಹದ್ದೇನಾದರೂ ಆದಾಗ ಸಾಮಾನ್ಯವಾಗಿ ನೀವು ಅನುಮಾನದ ಲಾಭವನ್ನು (ಹಾಗೆ ಮಾಡಿದವರಿಗೆ) ನೀಡುತ್ತೀರಿ. ಆದರೆ, ಅದು ಇನ್ನಾರೋ ಹಿರಿಯ ನ್ಯಾಯಮೂರ್ತಿಗಳ ವಿಚಾರದಲ್ಲಿ ಆಗದೆ ಹೋಗಬಹುದಿತ್ತು.
ನಾನು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ಕಿರಿಯ ನ್ಯಾಯಮೂರ್ತಿಯೊಬ್ಬರನ್ನು ನನ್ನ ಪೀಠಕ್ಕೆ ಹಾಕಿದರು. ಯಾರನ್ನೂ ಗುರಿಯಾಗಿಸಿಕೊಂಡು ಹಿಂದೆ ಬೀಳುವ ಸ್ವಭಾವ ನನ್ನದಲ್ಲ ಎನ್ನುವ ಕಾರಣಕ್ಕೆ ನನ್ನ ಪೀಠಕ್ಕೆ ಹಾಕಲಾಯಿತೇ ಎಂಬುದು ನನಗೆ ತಿಳಿದಿಲ್ಲ.
ಗಂಭೀರವಾದ ಸಂಗತಿಗಳು ನಡೆದಿವೆ. ರಾತ್ರಿಯಿಡೀ ನಿದ್ದೆಗೆಟ್ಟು ಕೆಲಸ ಮಾಡಿ ನಾನು ಐದು ತೀರ್ಪುಗಳನ್ನು ಬರೆದೆ. ನಾನಷ್ಟೇ ಅಲ್ಲ, ಕೋರ್ಟ್ ಮಾಸ್ಟರ್‌ಗಳೂ ರಾತ್ರಿಯಿಡೀ ನನ್ನ ಮನೆಯಲ್ಲಿ ಕಳೆದು ತೀರ್ಪುಗಳನ್ನು ಸಿದ್ಧಪಡಿಸಿದರು.
ಮರುದಿನ ಬೆಳಗ್ಗೆ, ತೀರ್ಪುಗಳನ್ನು ಓದಲು ಸಮಯ ಸಿಗದ ಕಾರಣ ವಿಷಯವನ್ನು ಪಟ್ಟಿ ಮಾಡದಂತೆ ನನ್ನ ಕಚೇರಿಗೆ ಕಿರಿಯ ನ್ಯಾಯಮೂರ್ತಿಯ ಕಚೇರಿಯಿಂದ ಸಂದೇಶ ಬಂದಿತು. ಶುಕ್ರವಾರದ ಬ್ರೀಫ್‌ಗಳನ್ನು ಓದುವುದೇ ಮುಖ್ಯವಾಗಿದ್ದರೆ, 10 ದಿನಗಳಿಂದ ವಿಚಾರಣೆ ನಡೆದ ಪ್ರಕರಣಗಳಲ್ಲಿ ನೀಡಲಾಗುವ ತೀರ್ಪುಗಳನ್ನು ಓದುವುದು ನಿಮಗೆ ಮುಖ್ಯವಾಗುವುದಿಲ್ಲವೇ? ನೀವು ತೀರ್ಪನ್ನು ಓಪ್ಪುವಿರಾ ಅಥವಾ ಇಲ್ಲವೇ ಎಂಬುದನ್ನು ಹೇಳಿ. ತೀರ್ಪು ಸಿದ್ಧವಾಗಿತ್ತು ಎಂದು ಮುಂಬರುವವರಿಗೆ ತಿಳಿದಿರುವುದಿಲ್ಲ.
ತೀರ್ಪನ್ನು ಬರೆದದ್ದು ನಾನೆಂದೋ ಅಥವಾ ನಾನು ಮಹಿಳಾ ನ್ಯಾಯಮೂರ್ತಿ ಎಂದೋ ಹೀಗೆ ಮಾಡಲಾಯಿತೇ? ನಾನಲ್ಲದೆ ಹಿರಿಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರಾಗಿದ್ದರೆ ಈ ರೀತಿ ಮಾಡಲು ಧೈರ್ಯವಿರುತ್ತಿತ್ತೇ ಎಂಬುದು ನನಗೆ ತಿಳಿದಿಲ್ಲ.
ಒಂದು ತೀರ್ಪು ಮಾತ್ರ ದೊಡ್ಡದಾಗಿತ್ತು. ಉಳಿದ ನಾಲ್ಕು ಕೇವಲ ಐದು ಪುಟಗಳಿದ್ದವು. ಈಗ ಎಲ್ಲಾ ಪ್ರಕರಣಗಳನ್ನು ಸಂಪೂರ್ಣವಾಗಿ ಮರು-ವಿಚಾರಣೆ ಮಾಡಬೇಕಾಗಿದೆ, ಏಕೆಂದರೆ ನಾನೀಗ ನಿವೃತ್ತಳಾಗಿದ್ದು ಮುಕ್ತ ನ್ಯಾಯಾಲಯದಲ್ಲಿ ತೀರ್ಪು ಪ್ರಕಟಿಸಿಲ್ಲ. ಉಳಿದ ಪ್ರತಿಯೊಬ್ಬ ನ್ಯಾಯಮೂರ್ತಿಗಳೂ ಸಹಕರಿಸಿದ್ದಾರೆ.
ನನ್ನ ಮನಸ್ಸಿನಲ್ಲಿ ನ್ಯಾಯಾಂಗದ ಹಿತಾಸಕ್ತಿಯೇ ಸದಾ ಅಗ್ರಗಣ್ಯವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಆ ನ್ಯಾಯಮೂರ್ತಿ ಮೂರು ತೀರ್ಪುಗಳನ್ನು ಅನುಮತಿಸಿ ಒಂದನ್ನು ಓದಲು ಸಾಧ್ಯವಾಗಿಲ್ಲವೆಂದೋ ಅಥವಾ ತಾನು ಆ ತೀರ್ಪನ್ನು ಒಪ್ಪುವುದಿಲ್ಲವೆಂದೋ ಹೇಳಬಹುದಿತ್ತು.
ಕುಟುಂಬದ ಸದಸ್ಯರನ್ನು ಕಳೆದುಕೊಂಡ ಕಾರಣಕ್ಕಾಗಿ, ಬೆರಳು ಸುಟ್ಟಿದ್ದ ಕಾರಣಕ್ಕಾಗಿ ಕೊನೆಯ ಕ್ಷಣದಲ್ಲಿ ತೀರ್ಪು ನೀಡಿದ್ದರಲ್ಲಿ ನನ್ನದೂ ಪಾಲಿದೆ.
ಸಂದರ್ಶನದ ಪೂರ್ಣ ವಿವರಗಳಿಗಾಗಿ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ಜಾಲತಾಣದ ಲಿಂಕ್ ಕ್ಲಿಕ್ಕಿಸಿ.