[ಅನುಸಂಧಾನ] ಬದುಕಿನ ಕೊನೆಯವರೆಗೂ ಮಹಿಳೆಯರ ಪರ ಧ್ವನಿ ಎತ್ತುವೆ: ವಕೀಲೆ ಎಂ ಎನ್ ಸುಮನಾ

ಕಾನೂನು ಶಿಕ್ಷಣ ಮತ್ತು ವಕೀಲಿಕೆಯ ಹಿನ್ನೆಲೆಯಿಂದ ಬಂದು ಸಮಾಜದ ವಿವಿಧ ವಲಯಗಳಲ್ಲಿ ಗುರುತರ ಸಾಧನೆ ಮಾಡಿದ ಸಾಧಕರೊಂದಿಗಿನ ಮಾತುಕತೆಯೇ ಈ 'ಅನುಸಂಧಾನ'.
[ಅನುಸಂಧಾನ] ಬದುಕಿನ ಕೊನೆಯವರೆಗೂ ಮಹಿಳೆಯರ ಪರ ಧ್ವನಿ ಎತ್ತುವೆ: ವಕೀಲೆ ಎಂ ಎನ್ ಸುಮನಾ
Published on

ವಕೀಲರಾಗಿ ಗುರುತಿಸಿಕೊಳ್ಳುವ ಜೊತೆಗೇ ಸಮುದಾಯಗಳ ಏಳಿಗೆಗೆ ಶ್ರಮಿಸುತ್ತಿರುವವರು ಮೈಸೂರಿನ ಎಂ ಎನ್‌ ಸುಮನಾ. ಮಹಿಳೆಯರ ಪರವಾಗಿ ಅವರದ್ದು ದಶಕಗಳಿಂದ ಸಾಗಿ ಬಂದಿರುವ ಹೋರಾಟ. ಕಳೆದ ಮೂವತ್ತು ವರ್ಷಗಳಿಂದ ಅವರು ಕಾನೂನಾತ್ಮಕವಾಗಿ ಬಗೆಹರಿಸಿರುವ ಕೌಟುಂಬಿಕ ಸಮಸ್ಯೆಗಳು ಅದೆಷ್ಟೋ. ಮಹಿಳಾ ಚಳವಳಿ, ಲಿಂಗಸಮಾನತೆಯಂತಹ ಗುರುತರ ವಿಷಯಗಳೊಂದಿಗೆ ಕೆಲಸ ಮಾಡುತ್ತಿರುವ ಅವರು ಸಮತಾ ಅಧ್ಯಯನ ಕೇಂದ್ರ, ಶಕ್ತಿಧಾಮ, ದೀನಬಂಧು ಕೇಂದ್ರ, ಶಿವಶ್ರೀ ಟ್ರಸ್ಟ್‌ಗಳ ಧರ್ಮದರ್ಶಿ ಕೂಡ. ಸ್ವಾಮಿ ವಿವೇಕಾನಂದ ಯುವ ಆಂದೋಲನ, ಒಡನಾಡಿಯಂತಹ ಸಂಘ ಸಂಸ್ಥೆಗಳಲ್ಲೂ ನಿರಂತರವಾಗಿ ತೊಡಗಿಕೊಂಡಿದ್ದಾರೆ. ಮಹಿಳೆಯರು, ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ ವಿವಿಧ ಸಮಿತಿಗಳ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. ಮಹಿಳೆಯರ ಪರವಾಗಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ. ಹಲವು ಗೌರವ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಎಳವೆಯಲ್ಲೇ ಸಿಕ್ಕ ಸಮಾಜಮುಖಿ ಚಿಮ್ಮು ಹಲಗೆಯೊಂದು ಅವರನ್ನು ಎತ್ತರೆತ್ತರಕ್ಕೆ ಕೊಂಡೊಯ್ದಿತು. ಜನಪರ ಚಳವಳಿಗಳು ರೂಪುಗೊಂಡ ಬಗೆಯನ್ನು ಹತ್ತಿರದಿಂದ ಕಂಡಿದ್ದ ಅವರು ಅವುಗಳನ್ನೇ ಪ್ರಯೋಗಶಾಲೆಯಾಗಿ ಮಾಡಿಕೊಂಡದ್ದು ಕುತೂಹಲಕರ ಸಂಗತಿ. ಮಹಿಳೆಯರ ವಿರುದ್ಧದ ಶೋಷಣೆಗಳು ಎಲ್ಲೇ ನಡೆದರೂ ಗಟ್ಟಿದನಿಯಲ್ಲಿ ಪ್ರತಿಭಟಿಸುವ ಸುಮಾನ ಅವರು ಸ್ತ್ರೀಯರ ಹೋರಾಟಕ್ಕೆ ತುಂಬಿರುವ ಕಾನೂನಿನ ಬಲ, ನೈತಿಕ ಬಲ ಅಪಾರವಾದುದು.

ʼಬಾರ್‌ ಅಂಡ್‌ ಬೆಂಚ್‌ʼ ಕಂಡ ಸುಮನಾ ಅವರ ಹೋರಾಟದ ಬದುಕು ಇಲ್ಲಿದೆ:

Q

ಕಾನೂನು ಶಿಕ್ಷಣವನ್ನೇ ನೀವು ಆಯ್ದುಕೊಳ್ಳಲು ಇದ್ದ ಕಾರಣಗಳು ಏನು?

A

ಒಂಬತ್ತನೇ ತರಗತಿಯಲ್ಲಿ ಚರ್ಚಾಗೋಷ್ಠಿಯೊಂದರಲ್ಲಿ ಪಾಲ್ಗೊಂಡಿದ್ದಾಗಲೇ ನಾನು ವಕೀಲಳಾಗಿ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದೆ. ಇದಕ್ಕೊಂದು ಕಾರಣ ಇತ್ತು. ನಮ್ಮ ತಂದೆ ಟಿ ಎನ್‌ ನಾಗರಾಜ್‌ ವಕೀಲರಾಗಿದ್ದರು, ಅವರು ಸಮಾಜವಾದಿಗಳು. ರಾಮ ಮನೋಹರ್‌ ಲೋಹಿಯಾ, ಜಯಪ್ರಕಾಶ್‌ ನಾರಾಯಣ್‌, ಮಧುಲಿಮಿಯೆ ರೀತಿಯ ಮಹಾನ್‌ ನಾಯಕರು ಮೈಸೂರಿಗೆ ಬಂದಾಗ ನಮ್ಮ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ನಮ್ಮ ತಂದೆ ವಕೀಲರಾಗಿದ್ದರೂ ನ್ಯಾಯಾಲಯಗಳ ಆಚೆಗೂ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು. ಕಚೇರಿ ಕೆಲಸ ಮುಗಿಸಿ ರಾತ್ರಿ ಎಂಟರ ನಂತರ ಹಳ್ಳಿಹಳ್ಳಿಗಳಿಗೆ ಹೋಗಿ ಪಂಚಾಯ್ತಿಗಳನ್ನು ನಡೆಸುತ್ತಿದ್ದರು. ನಾನೂ ಅದರಲ್ಲಿ ಪಾಲ್ಗೊಳ್ಳುತ್ತಿದ್ದೆ. ಮನೆ ಪಾಲು, ಒತ್ತುವರಿಯಂಥ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು. ರಾತ್ರಿ ಹತ್ತು ಗಂಟೆಯ ಹೊತ್ತಿಗೆ ಆರಂಭವಾಗುತ್ತಿದ್ದ ಪಂಚಾಯ್ತಿ ಬೆಳಗಿನ ಜಾವದವರೆಗೂ ನಡೆಯೋದು. ಮನಸ್ಸುಗಳನ್ನು ಒಡೆಯುವ ಬದಲು ಒಂದುಗೂಡಿಸುವ ಕೆಲಸ ಮಾಡುತ್ತಿದ್ದರು. ಪಾಲಿನ ವ್ಯಾಜ್ಯಗಳನ್ನು ಬಗೆಹರಿಸುವಾಗ ʼಒಂದಿಂಚು ಭೂಮಿ ಆ ಕಡೆ ಈ ಕಡೆ ಆಗಿದ್ದರೆ ಯೋಚನೆ ಮಾಡಬೇಡಿ ಅದು ನಿಮ್ಮ ಅಣ್ಣತಮ್ಮಂದಿರಿಗೇ ಹೋಗಿರುತ್ತದೆʼ ಎನ್ನುತ್ತಿದ್ದರು. ʼಗೆದ್ದವನು ಸೋತ ಸೋತವನು ಸತ್ತʼ ಎಂಬಂತಹ ಗಾದೆ ಮಾತುಗಳನ್ನು ಹೇಳಿ ಸಮಾಧಾನಪಡಿಸುತ್ತಿದ್ದರು. ಮಹಾತ್ಮ ಗಾಂಧಿ ಸೇರಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ನಾಯಕರಲ್ಲಿ ಬಹುತೇಕರು ವಕೀಲಿಕೆಯ ಹಿನ್ನೆಲೆ ಉಳ್ಳವರಾಗಿದ್ದರು. ಈ ವಿಚಾರವೂ ವಕೀಲಿಕೆ ಓದಬೇಕೆಂಬ ನನ್ನ ಹಂಬಲಕ್ಕೆ ಪೂರಕವಾಗಿತ್ತು.

Q

ಕಾನೂನು ಅಧ್ಯಯನದ ವೇಳೆ ನಿಮ್ಮನ್ನು ಪ್ರಭಾವಿಸಿದ ಸಂಗತಿಗಳು ಯಾವುವು?

A

ಸಮಾಜವಾದಿಗಳಾಗಿದ್ದ ನಮ್ಮ ತಂದೆ ಕಾನೂನು ಹೋರಾಟ ನಡೆಸುತ್ತಿದ್ದುದೇ ಮಾನವಹಕ್ಕುಗಳ ಪರವಾಗಿ. ಮಾನಸ ಗಂಗೋತ್ರಿ ನೌಕರರ ಸಂಘ, ಐಡಿಯಲ್‌ ಜಾವಾ ಕಾರ್ಖಾನೆ, ಜೈನ್‌ ವೀವಿಂಗ್‌ ಕಂಪೆನಿಯ ಸಿಬ್ಬಂದಿವರ್ಗದ ಪರವಾಗಿ ಸಾಕಷ್ಟು ಕೆಲಸ ಮಾಡಿದರು. ಅವರು ಯಾವತ್ತೂ ಆಡಳಿತ ಮಂಡಳಿ ಪರವಾಗಿ ಕೆಲಸ ಮಾಡಲಿಲ್ಲ ಬದಲಿಗೆ ಬಡವರ ಪರ ಧ್ವನಿ ಎತ್ತುತ್ತಿದ್ದರು. ಇದೆಲ್ಲಾ ಒಂದು ಬಗೆಯಲ್ಲಿ ನನ್ನನ್ನು ಪ್ರಭಾವಿಸಿದರೆ ಮತ್ತೊಂದು ಬಗೆಯಲ್ಲಿ ಸಮತಾ ಕೇಂದ್ರವೂ ನನ್ನನ್ನು ಪ್ರಭಾವಿಸಿತು. ನಮ್ಮ ಮನೆಯ ಹಿಂಭಾಗದಲ್ಲಿಯೇ ಸಮತಾ ಕೇಂದ್ರ ಸ್ಥಾಪನೆಯಾಗಿತ್ತು. ಶ್ರೀವಳ್ಳಿ ಎಂಬುವವರು ಅದನ್ನು ನಡೆಸುತ್ತಿದ್ದರು. ಅದು ನನ್ನ ಹೋರಾಟಗಳಿಗೆ ಸೂಕ್ತ ಚೌಕಟ್ಟನ್ನು ಒದಗಿಸಿತು. ಮಹಿಳಾಪರ ಹೋರಾಟಗಳನ್ನೇ ನಾನು ಆಯ್ದುಕೊಳ್ಳಲು ಸಹಕಾರಿ ಆಯಿತು.

Q

ವಕೀಲರಾಗಿ ವೃತ್ತಿಯ ಆರಂಭದ ದಿನಗಳು ಹೇಗಿದ್ದವು?

A

ನನಗೆ ಹೊಸದಾಗಿ ಕಚೇರಿ ಆರಂಭಿಸುವ ಸವಾಲು ಇರಲಿಲ್ಲ. ನಮ್ಮ ತಂದೆಯವರ ಬಳಿಯೇ ಜ್ಯೂನಿಯರ್‌ ಆಗಿ ಕೆಲಸ ಮಾಡುತ್ತಿದ್ದೆ. ಅವರನ್ನು ವಾಹನದಲ್ಲಿ ಮನೆಯಿಂದ ಕಚೇರಿಗೆ ಕರೆದೊಯ್ಯುವುದು, ಕಕ್ಷೀದಾರರನ್ನು ಭೇಟಿ ಮಾಡಿಸುವಂತಹ ಚಾಲಕ ವೃತ್ತಿಯನ್ನು ನಾನು ಮಾಡುತ್ತಿದ್ದೆ. ನಮ್ಮ ತಂದೆಯವರ ಕಚೇರಿ ಸಾಕಷ್ಟು ಹೆಸರು ಮಾಡಿತ್ತು. 1954ರಲ್ಲಿಯೇ ಆರಂಭವಾದ ಕಚೇರಿ ಅದು. ನಾನು ವಕೀಲಳಾಗಿ ಅಲ್ಲಿ ಕೆಲಸಕ್ಕೆ ಸೇರುವ ಹೊತ್ತಿಗೆ ಅದಕ್ಕೆ ಮೂರು ದಶಕಗಳಿಗೂ ಹೆಚ್ಚಿನ ಇತಿಹಾಸವಿತ್ತು. ಆದರೆ ನನಗೆ ಕಗ್ಗಂಟಾಗಿ ಕಾಡಿದ ವಿಷಯ ಎಂದರೆ ನಾನು ವೃತ್ತಿ ಆರಂಭಿಸಿದ ಮೂರೇ ತಿಂಗಳಲ್ಲಿ ನಮ್ಮ ತಂದೆ ತೀರಿ ಹೋದದ್ದು. ನನಗೆ ವೃತ್ತಿ ಸಮಸ್ಯೆಯಾಗಲಿಲ್ಲ. ಆದರೆ ಅವರ ಸಾವು ಸಮಸ್ಯೆಯಾಯಿತು. ನಾನಿನ್ನೂ ವೃತ್ತಿಗೆ ಹೊಸಬಳಾಗಿದ್ದೆ. ಕಚೇರಿಯ ʼLegacyʼಯನ್ನು ಕಾಪಾಡಿಕೊಂಡು ಹೋಗುವ ಅನಿವಾರ್ಯತೆ ಇತ್ತು. ಕಕ್ಷೀದಾರರು ನಮ್ಮ ಕೈಬಿಟ್ಟುಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇತ್ತು. ಆದರೆ ಅದನ್ನೆಲ್ಲಾ ಈಸಿದೆ. ನಾಲ್ಕೈದು ಕಕ್ಷೀದಾರರನ್ನು ಹೊರತುಪಡಿಸಿ ಉಳಿದವರೆಲ್ಲಾ ನಮ್ಮ ಸಲಹೆಗಳನ್ನೇ ಮುಂದುವರೆಸಿದರು. ಕೆಲ ವರ್ಷಗಳ ಬಳಿಕ ನಮ್ಮಿಂದ ಹೋಗಿದ್ದ ಕಕ್ಷೀದಾರರು ಸಹ ನಮ್ಮನ್ನೇ ಕೇಸ್‌ ನಡೆಸುವಂತೆ ಕೇಳಿಕೊಂಡರು.

Q

ನೀವು ವಾದಿಸಿದ ಮೊದಲ ಕೇಸ್‌ ಯಾವುದು? ಹಂಚಿಕೊಳ್ಳಬಹುದಾದಂತಹ ಪ್ರಸಂಗಗಳನ್ನು ವಿವರಿಸಿ?

A

ನಾನು ಕಚೇರಿಗೆ ಸೇರಿ ಎರಡು ದಿನವೂ ಆಗಿರಲಿಲ್ಲ. ಎಚ್‌ಆರ್‌ಸಿ ಪ್ರಕರಣವೊಂದು ಎದುರಾಯಿತು. ರಂಗಪ್ಪ ಎಂಬ ಬಡ ವ್ಯಕ್ತಿ ಬಾಡಿಗೆ ನೀಡಿಲ್ಲ ಎಂಬ ಕಾರಣಕ್ಕೆ ಮನೆಯ ಮಾಲೀಕ ಆತನ ವಸ್ತುಗಳನ್ನೆಲ್ಲಾ ಆಚೆಗೆ ಎಸೆಯುವುದಾಗಿ ಬೆದರಿಸಿದ್ದ. ನಮ್ಮ ತಂದೆ ನ್ಯಾಯಾಲಯದಲ್ಲಿ ʼMy Colleague will continue the arguementʼ ಎಂದಷ್ಟೇ ಹೇಳಿ ಹೊರಟುಬಿಟ್ಟರು. ನನ್ನ ತಂದೆ ಇದ್ದುದೇ ಹಾಗೆ. ಅವರು ಜ್ಯೂನಿಯರ್‌ಗಳನ್ನು ಕಿರಿಯರಂತೆ ಕಾಣುತ್ತಿರಲಿಲ್ಲ; ಸಹೋದ್ಯೋಗಿ ಎನ್ನುತ್ತಿದ್ದರು.

ಆಗ ಪತ್ರಿ ಬಸನಗೌಡ ಜಿಲ್ಲಾ ನ್ಯಾಯಾಧೀಶರಾಗಿದ್ದರು. ನನಗೆ ಏನು ಮಾಡಬೇಕೋ ತಿಳಿಯುತ್ತಿಲ್ಲ. “ನೀವು ವಾದ ಮಾಡಬಲ್ಲಿರಿ ಸುಮನಾ” ಎಂದು ನ್ಯಾಯಾಧೀಶರು ಹುರಿದುಂಬಿಸಿ ಒಂದು ಗಂಟೆ ಕಾಲಾವಕಾಶವನ್ನೂ ನೀಡಿದರು. ಒಂದು ಗಂಟೆಯೊಳಗೆ ಮುಗಿಯಬೇಕಿದ್ದ ವಾದ ಪ್ರಕ್ರಿಯೆ ಮತ್ತೊಂದು ಗಂಟೆ ಮುಂದಕ್ಕೆ ಹೋಯಿತು. ಚರ್ಚಾಪಟುವಾಗಿದ್ದ ಅನುಭವ ಬೇರೆ ಇತ್ತು. ಸರಿಯೋ ತಪ್ಪೋ ವಾದ ಮಂಡಿಸಿದೆ.

Q

ಮಹಿಳಾ ಕ್ಷೇತ್ರವನ್ನು ತಾವು ಆಯ್ಕೆ ಮಾಡಿಕೊಂಡಿದ್ದರ ಹಿನ್ನೆಲೆ ಏನು?

A

ಜನಪರ ಹೋರಾಟ ಎಂಬುದು ಮಹಾಸಾಗರವಾಗಿತ್ತು. ಒಂದು ನಿರ್ದಿಷ್ಟ ವರ್ಗವನ್ನು ಆಯ್ಕೆ ಮಾಡಿಕೊಂಡು ಕೆಲಸ ಮಾಡುವುದು ಮುಖ್ಯವಾಗಿತ್ತು. ಮಹಿಳಾಪರ ಹೋರಾಟಗಳನ್ನೇ ಮುಂದುವರೆಸಲು ಸಮತಾ ಕೇಂದ್ರ ಸಾಕಷ್ಟು ಸ್ಫೂರ್ತಿ ನೀಡಿತು. ಮಹಿಳೆಯಂತಹ ಶೋಷಿತ ಜೀವಿ ಬೇರೊಬ್ಬರಿಲ್ಲ. ಶ್ರೀಮಂತರಲ್ಲೂ, ಬಡವರಲ್ಲೂ, ಮೇಲ್ಜಾತಿಗಳಲ್ಲೂ ದಲಿತರಲ್ಲೂ ಹೆಚ್ಚು ಶೋಷಣೆಗೊಳಗಾಗುವುದು ಮಹಿಳೆಯೇ. ಆ ಕಾರಣಕ್ಕೆ ಮಹಿಳಾ ಕ್ಷೇತ್ರವನ್ನು ಆಯ್ದುಕೊಂಡೆ. ನಾನು ಕ್ಷೇತ್ರಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಪತ್ರಕರ್ತರೂ ಕೂಡ ಮಹಿಳಾ ವಿಷಯಗಳ ಬಗ್ಗೆ ಅಸಡ್ಡೆ ತೋರುತ್ತಿದ್ದರು. ರಾಜಕೀಯ ವರದಿಗಾರಿಕೆ ಮಾತ್ರ ಅವರಿಗೆ ಮುಖ್ಯವಾಗಿತ್ತು. ಎಷ್ಟೋ ಸಂದರ್ಭದಲ್ಲಿ ಪದವಿಯಲ್ಲಿ ಪತ್ರಿಕೋದ್ಯಮ ಶಿಕ್ಷಣ ಪಡೆದಿರುವ ನಾನೇ ಮಹಿಳಾ ಪರ ವರದಿಗಳನ್ನು ಬರೆದು ಪತ್ರಿಕೆಗಳಿಗೆ ತಲುಪಿಸಿದ್ದು ಇದೆ.

Also Read
[ಅನುಸಂಧಾನ] ಪ್ರೊ. ಎಂಡಿಎನ್ ಬೋಧನೆ, ಪುಟ್ಟಣ್ಣಯ್ಯ ನಾಯಕತ್ವ, ದೇವನೂರರ ಅಂತಃಕರಣ ನನಗೆ ಸ್ಫೂರ್ತಿ: ಬಡಗಲಪುರ ನಾಗೇಂದ್ರ
Q

ಕಾನೂನು ಶಿಕ್ಷಣ, ವಕೀಲಿಕೆಯ ಹಿನ್ನೆಲೆ ನಿಮ್ಮ ಸಂಘಟನಾ ಸಾಮರ್ಥ್ಯದ ಮೇಲೆ ಹೇಗೆ ಪರಿಣಾಮ ಬೀರಿದೆ?

A

ಎರಡೂ ಪರಸ್ಪರ ಪೂರಕ ಪ್ರಭಾವ ಬೀರಿವೆ ಎನ್ನಬಹುದು. ಸಮಸ್ಯೆಗಳನ್ನು ಬಗೆಹರಿಸುವುದು, ಹೇಗೆ ಎದುರಿಸಬಹುದು ಎಂಬುದನ್ನು ವಕೀಲಿಕೆ ಕಲಿಸಿಕೊಟ್ಟಿತು. ಯಾರೋ ʼನಿಮ್ಮ ಹೋರಾಟ ಸಂವಿಧಾನ ಬಾಹಿರʼ ಎಂದಾಗ ʼತಕ್ಷಣ ಸಂವಿಧಾನದಲ್ಲಿ ಹೋರಾಟ ಮಾಡಬಾರದು ಎಂದು ಎಲ್ಲಿದೆ ತಿಳಿಸುʼ ಎಂದು ಪ್ರಶ್ನಿಸಲು ಕಾನೂನು ಅಧ್ಯಯನ ಬಲ ತುಂಬಿತು. ನಮ್ಮ ಸಮಾಜದಲ್ಲಿ ಬಹುಸಂಖ್ಯಾತರಿಗೆ ಮನೋಬಲವೂ ಇಲ್ಲ ದೈಹಿಕ ಬಲವೂ ಇರುವುದಿಲ್ಲ. ಅಂತಹವರ ಪಾಲಿಗೆ ಕಾನೂನಿನ ಅಸ್ತ್ರ ದೊರೆತರೆ ಉತ್ತಮ. ಮತ್ತೊಂದು ನಿಟ್ಟಿನಿಂದ ಹೇಳುವುದಾದರೆ ಸಂಘಟನೆಗಳಿಂದಾಗಿ ಅನೇಕ ಕೇಸುಗಳು ದೊರೆಯುತ್ತಿದ್ದವು ಎನ್ನಬಹುದು.

Q

ವಕೀಲಿಕೆ ಕೂಡ ಕಾನೂನಾತ್ಮಕ ಹೋರಾಟದ ಭಾಗ. ಪ್ರತ್ಯೇಕ ಹೋರಾಟದಲ್ಲಿ ತೊಡಗಿಕೊಳ್ಳಲು ಕಾರಣವೇನು?

A

ವಕೀಲಿಕೆ ಹಲವು ಕೊಂಡಿಗಳನ್ನು ಹೊಂದಿರುವ ಸಂಪರ್ಕ ಜಾಲ. ಇದು ನಮಗೆ ವಿಸ್ತರಿಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಕೇವಲ ವಕೀಲಿಕೆ ನನ್ನನ್ನು ನ್ಯಾಯವಾದಿಯನ್ನಾಗಿಸುತ್ತಿತ್ತು. ಮೊದಲೇ ತಿಳಿಸಿರುವಂತೆ ಸಾಮಾಜಿಕ ಕಾರ್ಯಗಳು ವಕೀಲಿಕೆಗೆ ಬಹು ಆಯಾಮಗಳನ್ನು ತಂದುಕೊಡುತ್ತವೆ.

Q

ನೀವು ನೀಡುವ ಕಾನೂನು ಸಲಹೆಗಳ ಬಗ್ಗೆ ತಿಳಿಸಿ…

A

ಆಪ್ತಸಮಾಲೋಚನೆ, ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸುವುದರತ್ತ ಹೆಚ್ಚು ಒತ್ತು ನೀಡಿದ್ದೇನೆ. ವಯಸ್ಸಾಗುತ್ತಿರುವ ಕಾರಣ ನೋಟರಿಗೆ ಸೀಮಿತವಾಗಿದ್ದೇನೆ. ಕೋವಿಡ್‌ ಕಾರಣದಿಂದಾಗಿ ಕೌಟುಂಬಿಕ ನ್ಯಾಯಾಲಯಗಳು ಸ್ಥಗಿತಗೊಂಡಿದ್ದವು. ಆ ಪ್ರಕರಣಗಳ ಕಡೆ ಹೆಚ್ಚು ಗಮನ ಹರಿಸುತ್ತಿದ್ದೇನೆ. ನನ್ನ ಗಂಡ ಕೂಡ ವಕೀಲರು. ಅವರೊಂದಿಗೆ ಜಂಟಿ ವಕಾಲತ್ತು ಹಾಕುತ್ತೇನೆ.

Q

ಕಾನೂನು ಕಲಿತವರು ಮಹಿಳಾ ಸಬಲೀಕರಣದಲ್ಲಿ ತೊಡಗಿಕೊಂಡರೆ ಆಗುವ ಅನುಕೂಲಗಳೇನು?

A

ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಕಾನೂನು ಕಲಿತವರು ತೊಡಗಿದರೆ ಖಂಡಿತವಾಗಿಯೂ ಧ್ವನಿ ಇಲ್ಲದವರಿಗೆ ಧ್ವನಿ ನೀಡಿದಂತಾಗುತ್ತದೆ. ಸಮಾಜದ ಸಮಸ್ಯೆಗಳನ್ನು ಕಾನೂನಾತ್ಮಕವಾಗಿ ಬಗೆಹರಿಸಿಕೊಳ್ಳಲು ಅನುಕೂಲವಾಗುತ್ತದೆ. ವಕೀಲರಿಗೆ ವೈಯಕ್ತಿಕವಾಗಿಯೂ ಸೇವೆ ಸಲ್ಲಿಸಿದ ದೊಡ್ಡ ತೃಪ್ತಿಯೊಂದು ದೊರೆಯುತ್ತದೆ.

Q

ಮುಂದಿನ ರೂಪುರೇಷೆಗಳೇನು?

A

ನಾನು ಕೂಡ ರೈತ ಮಹಿಳೆ. ನನಗೊಂದಷ್ಟು ಜಮೀನು ಇದೆ. ಮಣ್ಣಿನ ಜೊತೆ ಒಡನಾಡುವ ಅವಕಾಶಗಳಿಗೆ ಕಾಯುತ್ತಿದ್ದೇನೆ. ಉಳಿದಂತೆ ಕೊನೆಯವರೆಗೂ ಯಾವುದೇ ರೀತಿಯಲ್ಲಿಯೂ ಹೊಂದಾಣಿಕೆಗೆ ಆಸ್ಪದ ನೀಡದೆ ಮಹಿಳೆಯರ ಪರ ಧ್ವನಿ ಎತ್ತುತ್ತೇನೆ. ದೀನರ ಪರ ನಿಲ್ಲುತ್ತೇನೆ.

Kannada Bar & Bench
kannada.barandbench.com