ಪರಿಹಾರ ನೀಡುವಾಗ ಹಿರಿಕಿರಿಯ ವಕೀಲರೆಂದು ಬೇಧವೆಣಿಸಬಾರದಿತ್ತು: ಬಳ್ಳಾರಿ ವಕೀಲರ ಸಂಘದ ಅಧ್ಯಕ್ಷ ಹೆಚ್‌ ಎಂ ಅಂಕಲಯ್ಯ

"ವಕೀಲರ ಸಂಘ ಆಹಾರದ ಕಿಟ್‌ಗಳನ್ನು ತೀರಾ ಸಂಕಷ್ಟದಲ್ಲಿದ್ದ ವಕೀಲರಿಗೆ ನೀಡಿತು. ಆದರೆ ಎಷ್ಟೇ ಪ್ರಯತ್ನಪಟ್ಟರೂ ವಕೀಲರಿಗೆ ಕೇವಲ ಒಂದು ತಿಂಗಳ ಅವಧಿಗೆ ಮಾತ್ರ ಆಹಾರ ಒದಗಿಸಲು ನಮ್ಮಿಂದ ಸಾಧ್ಯವಾಯಿತು."
ಪರಿಹಾರ ನೀಡುವಾಗ ಹಿರಿಕಿರಿಯ ವಕೀಲರೆಂದು ಬೇಧವೆಣಿಸಬಾರದಿತ್ತು: ಬಳ್ಳಾರಿ ವಕೀಲರ ಸಂಘದ ಅಧ್ಯಕ್ಷ ಹೆಚ್‌ ಎಂ ಅಂಕಲಯ್ಯ

ಬಳ್ಳಾರಿಯ ಹಿರಿಯ ನ್ಯಾಯವಾದಿಗಳಲ್ಲಿ ಪ್ರಮುಖರು ಹೆಚ್‌ ಎಂ ಅಂಕಲಯ್ಯ. ಅವರೆಂದರೆ ವಕೀಲ ವರ್ಗದಲ್ಲಿ ಅಪಾರ ಗೌರವ. ಎಂಬತ್ತರ ದಶಕದಲ್ಲಿ ನ್ಯಾಯವಾದಿಯಾದ ಅವರು ವಕೀಲಿಕೆಯ ಮೊದಲ ಪಾಠಗಳನ್ನು ಕಲಿತದ್ದು ಎನ್‌ ತಿಪ್ಪಣ್ಣ ಅವರ ಬಳಿ. 1987ರಿಂದ 2000ದವರೆಗೆ ಅವರ ಬಳಿ ಕಾರ್ಯನಿರ್ವಹಿಸಿದ ಅಂಕಲಯ್ಯ ಬಳಿಕ ಸ್ವತಂತ್ರವಾಗಿ ಪ್ರಾಕ್ಟೀಸ್‌ ಮಾಡತೊಡಗಿದರು. ಕ್ರಿಮಿನಲ್‌, ಸಿವಿಲ್‌, ಅರಣ್ಯ, ಕಂದಾಯ ಹೀಗೆ ಅನೇಕ ಪ್ರಕರಣಗಳಲ್ಲಿ ಕೈಯಾಡಿಸಿದ ದೊಡ್ಡ ಅನುಭವ ಅವರಿಗಿದೆ. ವಕೀಲ ಸಂಘದ ಅಧ್ಯಕ್ಷರಾಗಿ ಇ-ಲೈಬ್ರರಿ ಸ್ಥಾಪನೆಯಂತಹ ಉತ್ತಮ ಕಾರ್ಯಗಳ ಮೂಲಕವೂ ಅವರು ಗಮನ ಸೆಳೆದಿದ್ದಾರೆ.

ಕೋವಿಡ್‌ ಎರಗಿ ಬಂದ ರೀತಿಯನ್ನು ʼಪ್ರವಾಹʼಕ್ಕೆ ಹೋಲಿಸುವ ಅವರು ಜಿಲ್ಲೆಯ ವಕೀಲರ ಮೇಲೆ ಅದರ ಕರಿನೆರಳು ಹೇಗೆಲ್ಲಾ ಚಾಚಿಕೊಂಡಿತು ಎಂಬುದನ್ನು ವಿವರಿಸಿದ್ದಾರೆ. ಇತರೆ ವಕೀಲರ ಅನುಭವಗಳಷ್ಟೇ ಅಲ್ಲದೆ ಸ್ವತಃ ಅನುಭವಿಸಿದ ಸಂಕಷ್ಟಗಳೂ ಅವರ ಮಾತುಗಳಲ್ಲಿ ವ್ಯಕ್ತವಾಗಿವೆ. ಲಾಕ್‌ಡೌನ್‌ ನಂತರದ ಕಾಲಘಟ್ಟವನ್ನು ʼಬಾರ್‌ ಅಂಡ್‌ ಬೆಂಚ್‌ʼ ಜೊತೆ ಅವರು ಹಂಚಿಕೊಂಡಿದ್ದು ಹೀಗೆ:

Q

ಬಳ್ಳಾರಿ ವಕೀಲರ ಸಮುದಾಯ ಹೇಗೆ ಕೋವಿಡ್‌ ಸಂಕಷ್ಟ ಎದುರಿಸಿತು?

A

ನಮ್ಮಲ್ಲಿ1200 ಮಂದಿ ವಕೀಲರಿದ್ದಾರೆ. ಅವರಲ್ಲಿ ಪ್ರಾಕ್ಟೀಸ್‌ ಮಾಡುತ್ತಿರುವವರ ಸಂಖ್ಯೆ ಸುಮಾರು 900ರಷ್ಟಿದೆ. ಕಳೆದ ವರ್ಷ ಮಾರ್ಚ್‌ 24ರಂದು ಆರಂಭವಾದ ಲಾಕ್‌ಡೌನ್‌ ಏಳು ತಿಂಗಳಿಗೂ ಅಧಿಕ ಕಾಲ ಅಂದರೆ ಅಕ್ಟೋಬರ್‌ 31ರವರೆಗೆ ವಿವಿಧ ಹಂತಗಳಲ್ಲಿ ಜಾರಿಯಲ್ಲಿತ್ತು. ನ್ಯಾಯಾಲಯಗಳಂತೂ ಮೇ ಅಂತ್ಯದವರೆಗೆ ಮುಚ್ಚಿದ್ದವು. ಕ್ರಿಮಿನಲ್‌ ಜಾಮೀನು, ತುರ್ತು ಪ್ರಕರಣಗಳನ್ನು ವರ್ಚುವಲ್‌ ವಿಧಾನದಲ್ಲಿ ನಡೆಸಲಾಗುತ್ತಿತ್ತು.

ಸುಮಾರು ಎರಡರಿಂದ ಮೂರು ತಿಂಗಳ ಕಾಲ ಹಿರಿಯ - ಕಿರಿಯ ವಕೀಲರೆನ್ನದೆ ಎಲ್ಲರೂ ತೊಂದರೆ ಅನುಭವಿಸಿದರು. ಕೋವಿಡ್‌ ಎಂಬುದು ಹೇಳದೇ ಕೇಳದೇ ಬಂದ ಪ್ರವಾಹದಂತಿತ್ತು. ಹಿರಿಯ ವಕೀಲರು ಹೇಗೋ ಬಚಾವಾದರು. ಆದರೆ ತಿಂಗಳಿಗೆ ಹದಿನೈದು ಇಪ್ಪತ್ತು ಸಾವಿರ ದುಡಿಯುತ್ತಿದ್ದ ಕಿರಿಯ ವಕೀಲರು ಹಾಗೂ ಹಿರಿಯ ವಕೀಲರ ಕಚೇರಿಗಳಲ್ಲಿ ಕೆಲಸ ಮಾಡದ, ಕಾಯಂ ಕಕ್ಷೀದಾರರು ಇಲ್ಲದ ವಕೀಲರು ತೊಂದರೆ ಅನುಭವಿಸಿದರು. ಹೊಸ ವಕೀಲರ ಪ್ರಾಕ್ಟೀಸ್‌ಗೆ ತೊಂದರೆ ಆಯಿತು. ನನ್ನ ವಿಷಯವನ್ನೇ ಹೇಳುವುದಾದರೆ ಕೋವಿಡ್‌ ಅವಧಿಯ ಒಂದು ತಿಂಗಳ ಕಾಲ ನಾನು ಮತ್ತು ಕುಟುಂಬದವರು ಕೇವಲ 9000 ರೂಪಾಯಿಯಲ್ಲಿ ಜೀವನ ನಡೆಸಿದ್ದೇವೆ.

Q

ಬಳ್ಳಾರಿ ವಕೀಲರ ಸಂಘ ನ್ಯಾಯವಾದಿ ಸಮುದಾಯಕ್ಕೆ ನೆರವಾದದ್ದು ಹೇಗೆ?

A

ತೀರಾ ಸಂಕಷ್ಟದಲ್ಲಿದ್ದ ವಕೀಲರಿಗೆ, ಸಂಘ ಆಹಾರದ ಕಿಟ್‌ಗಳನ್ನು ನೀಡಿತು. ಆದರೆ ಎಷ್ಟೇ ಪ್ರಯತ್ನಪಟ್ಟರೂ ವಕೀಲರಿಗೆ ಕೇವಲ ಒಂದು ತಿಂಗಳ ಅವಧಿಗೆ ಮಾತ್ರ ಆಹಾರ ಒದಗಿಸಲು ನಮ್ಮಿಂದ ಸಾಧ್ಯವಾಯಿತು. ನಮ್ಮಲ್ಲಿ ಹೆಚ್ಚಿಗೆ ಹಣ ಸಂಗ್ರಹವಾಗದೇ ಇರುವುದು ಕೂಡ ಇದಕ್ಕೆ ಕಾರಣ. ಸರ್ಕಾರ ರಾಜ್ಯದ ವಕೀಲರಿಗೆ ಐದು ಕೋಟಿ ರೂಪಾಯಿ ನೆರವು ನೀಡಿತ್ತು. ಅದರಂತೆ ಕೆಲ ವಕೀಲರಿಗೆ ಐದು ಸಾವಿರ ರೂಪಾಯಿ ಸಹಾಯಧನ ದೊರೆಯಿತು. ಕೋವಿಡ್‌ ರೋಗದಿಂದ ಬಳಲುತ್ತಿರುವವರಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ರೂ 50,000 ಧನಸಹಾಯ ಒದಗಿಸಿತು. ವಿಮಾ ಸೌಲಭ್ಯ ಒದಗಿಸಿತ್ತು. ಅಲ್ಲದೆ ಎನ್‌ರೋಲ್‌ ಆದ ಕಿರಿಯ ವಕೀಲರಿಗೆ ಸರ್ಕಾರ ಮಾಸಿಕ ರೂ 5000 ಸ್ಟೈಪೆಂಡ್‌‌ ಮುಂದುವರೆಸಿ ನೆರವಾಯಿತು.

Q

ಸರ್ಕಾರದಿಂದ ದೊರೆತ ಸಹಾಯ ವಕೀಲರ ಸಮಸ್ಯೆಗಳನ್ನು ಕಡಿಮೆ ಮಾಡಲಿಲ್ಲ ಎಂಬ ಮಾತುಗಳಿವೆಯಲ್ಲಾ?

A

ಹಿರಿಯ- ಕಿರಿಯ ವಕೀಲರೆಂದು ವಿಭಾಗಿಸಿ ಪರಿಹಾರ ನೀಡಲಾಯಿತು. ಆದರೆ ಕಷ್ಟ ಎನ್ನುವುದು ಎಲ್ಲರಿಗೂ ಇರುತ್ತದೆ. ಸೂಕ್ತ ರೀತಿಯಲ್ಲಿ ಕಕ್ಷೀದಾರರು ದೊರೆಯದೆ ಪರದಾಡುವ ಇಪ್ಪತ್ತು ವರ್ಷಗಳಷ್ಟು ಅನುಭವವಿರುವ ವಕೀಲರೂ ಇದ್ದಾರೆ. ಪ್ರಾಕ್ಟೀಸ್‌ ಮಾಡಿ ಕೆಲವೇ ವರ್ಷಗಳಲ್ಲಿ ಖ್ಯಾತಿ ಪಡೆದ ಕಿರಿಯ ವಕೀಲರೂ ಇದ್ದಾರೆ. ಹೀಗಾಗಿ ವಕೀಲರ ಅನುಭವ ಪರಿಗಣಿಸದೇ ಅವರ ಆದಾಯವನ್ನು ಪರಿಗಣಿಸಿ ಪರಿಹಾರಧನ ಒದಗಿಸಿದ್ದರೆ ಸೂಕ್ತವಾಗಿರುತ್ತಿತ್ತು.

ಬೇರೆ ರಾಜ್ಯಗಳಲ್ಲಿ ಅಧಿಕ ಪರಿಹಾರಧನ ದೊರೆತಿದೆ ಎಂದು ಹೇಳುವವರಿದ್ದಾರೆ. ಆದರೆ ಸರ್ಕಾರ 8 ಲಕ್ಷ ರೂಪಾಯಿಗಳಷ್ಟು ವಿಮೆ ರೂಪದ ಸಹಾಯ ಒದಗಿಸಿದೆ. ಇದು ಬೇರಾವುದೇ ರಾಜ್ಯಗಳಿಗೆ ಹೋಲಿಸಿದರೆ ಅಧಿಕ. ಸ್ಟೈಪೆಂಡ್‌ಗಳು ಅಬಾಧಿತವಾಗಿ ದೊರೆತಿವೆ. ಕೆಎಸ್‌ಬಿಸಿ ಮುಖ್ಯಮಂತ್ರಿಗಳ ಬಳಿ ಸಂಕಷ್ಟ ಹೇಳಿಕೊಂಡಾಗ ಅವರು ತಕ್ಷಣ 5 ಕೋಟಿ ಬಿಡುಗಡೆ ಮಾಡಿದ್ದಾರೆ.

Also Read
ಕೋವಿಡ್‌ ಕಾರ್ಮೋಡದ ನಡುವೆ ಸರ್ಕಾರ ಮತ್ತಷ್ಟು ನೆರವು ನೀಡಬಹುದಿತ್ತು: ನ್ಯಾಯವಾದಿ ಅನೀಸ್‌ ಪಾಷಾ
Q

ಭವಿಷ್ಯದಲ್ಲಿ ಇಂತಹ ಸಂದರ್ಭ ಒದಗಿಬಂದರೆ ಅದನ್ನು ಎದುರಿಸಲು ಸ್ಥಳೀಯ ವಕೀಲ ಸಂಘಗಳು ಅಣಿಯಾಗಿವೆಯೇ?

A

ಪರಿಹಾರ ಕಂಡುಕೊಳ್ಳಲು ನಾವೆಲ್ಲಾ ಯತ್ನಿಸುತ್ತಿದ್ದೇವೆ. ವಕೀಲರು ಸಾವನ್ನಪ್ಪಿದರೆ ಸಂಘದಿಂದ ರೂ 10,000 ದಿಂದ 20,000 ವರೆಗೆ ನೆರವಿನ ಹಸ್ತ ಚಾಚುತ್ತಿದ್ದೇವೆ. ಸ್ಟಾಂಪ್‌ ಹಣದಲ್ಲಿ ಅಲ್ಪಮೊತ್ತವನ್ನು ಸಂಗ್ರಹಿಸಿ ಹೀಗೆ ಮಾಡುತ್ತಿದ್ದೇವೆ. ಅದನ್ನು ರೂ 50,000ಕ್ಕೆ ಹೆಚ್ಚಿಸಬೇಕಿದೆ.

Q

ನ್ಯಾಯಾಲಯಗಳಲ್ಲಿ ಪರಿಸ್ಥಿತಿ ಈಗ ಹೇಗಿದೆ?

A

ಜೂನ್‌ ನಂತರ ನ್ಯಾಯಾಲಯಗಳು ಶೇ 50ರಷ್ಟು ಕಾರ್ಯಾರಂಭ ಮಾಡಿದವು. ಕೋವಿಡ್‌ ಅವಧಿಯಲ್ಲಿ ಒಬ್ಬ ನ್ಯಾಯಾಂಗ ಅಧಿಕಾರಿ ಹೋಂ ಕ್ವಾರಂಟೈನ್‌ನಲ್ಲಿದ್ದರು. ಅದನ್ನು ಹೊರತುಪಡಿಸಿದರೆ ಕೋವಿಡ್‌ಗೆ ಸಂಬಂಧಿಸಿದಂತೆ ಇನ್ನಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಈಗ ಭೌತಿಕ ಕಾರ್ಯನಿರ್ವಹಣೆಗೆ ನ್ಯಾಯಾಲಯಗಳು ಮರಳುತ್ತಿವೆ. ವಕೀಲರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಕೆಲವರು ಮಾಸ್ಕ್‌ ಹಾಕಿ ಸುರಕ್ಷತೆ ಕಾಯ್ದುಕೊಳ್ಳುತ್ತಿದ್ದಾರೆ.

Q

ವರ್ಚುವಲ್‌ ಕಲಾಪ ಶಾಶ್ವತವಾಗಬಹುದು ಎಂದು ನಿಮಗೆ ಅನ್ನಿಸುತ್ತಿದೆಯೇ?

A

ಹಂತ ಹಂತವಾಗಿ ಖಂಡಿತ ಬರುತ್ತದೆ. ಇದರಿಂದ ಅನುಕೂಲಗಳಾಗಿವೆ. ಆರೋಪಿಗಳು ಜೈಲಿನಲ್ಲಿದ್ದೇ ವಿಚಾರಣೆಯಲ್ಲಿ ಭಾಗಿಯಾಗಬಹುದು. ಇದರಿಂದ ಪೊಲೀಸರು ನ್ಯಾಯಾಲಯಕ್ಕೆ ವಿಚಾರಣೆಯಿದ್ದಾಗಲೆಲ್ಲಾ ಅವರನ್ನು ಕರೆತರುವುದು ತಪ್ಪುತ್ತದೆ. ವಿಳಂಬ ನ್ಯಾಯದಾನ ತಪ್ಪುತ್ತದೆ.

Related Stories

No stories found.
Kannada Bar & Bench
kannada.barandbench.com