ಸಂದರ್ಶನಗಳು

ಕೋವಿಡ್‌ ಕಾರ್ಮೋಡದ ನಡುವೆ ಸರ್ಕಾರ ಮತ್ತಷ್ಟು ನೆರವು ನೀಡಬಹುದಿತ್ತು: ನ್ಯಾಯವಾದಿ ಅನೀಸ್‌ ಪಾಷಾ

"ಕೆಳ ಹಂತದ ನ್ಯಾಯಾಲಯಗಳಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟವರು ಹಾಜರಾಗಲೇಬೇಕು. ಆದರೆ ಕೋವಿಡ್ ನಂತರ ಆರೋಪಿಗಳು, ಸಾಕ್ಷಿಗಳು, ಅರ್ಜಿದಾರರು ಹೀಗೆ ಅನೇಕರು ನ್ಯಾಯಾಲಯಗಳಿಗೆ ಹಾಜರಾಗಲು ಹಿಂಜರಿಯುತ್ತಿದ್ದಾರೆ" ಎನ್ನುತ್ತಾರೆ ಪಾಷಾ.

Ramesh DK

ದಾವಣಗೆರೆಯ ನ್ಯಾಯವಾದಿ ಅನೀಸ್‌ ಪಾಷಾ ಅನೇಕ ಜನಮುಖಿ ಹೋರಾಟಗಳಲ್ಲಿ ತೊಡಗಿಕೊಂಡವರು. ಜಿಲ್ಲೆಯ ರಾಜಕಾರಣ ವಲಯದಲ್ಲಿಯೂ ಸದ್ದು ಮಾಡಿದವರು. ಧ್ವನಿ ಇಲ್ಲದವರ ಪರವಾಗಿ ರೂಪುಗೊಂಡ ʼಪೀಪಲ್ಸ್‌ ಲಾಯರ್ಸ್‌ ಗಿಲ್ಡ್ʼನ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ, ಜಿಲ್ಲಾ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ರೈತರ ಆತ್ಮಹತ್ಯೆಗಳನ್ನು ತಡೆಯಲು ಶ್ರಮಿಸಿದ ಸಂಘಟನೆ ಮಾನವಹಕ್ಕುಗಳ ಕುರಿತಾಗಿ ಹೆಚ್ಚು ಕಾನೂನಾತ್ಮಕ ಸಮರಗಳಲ್ಲಿ ತೊಡಗಿಕೊಂಡಿದೆ. ದಾವಣಗೆರೆಯ ಜಿಲ್ಲಾ ನ್ಯಾಯಾಲಯದಲ್ಲಿ ಸಿವಿಲ್‌ ಮತ್ತು ಸೆಷನ್ಸ್‌ ಪ್ರಕರಣಗಳನ್ನು ಅವರು ನಿಭಾಯಿಸುತ್ತಾರೆ.

ಕೋವಿಡ್‌ ನಂತರದ ಕಾಲಘಟ್ಟದಲ್ಲಿ ದಾವಣಗೆರೆ ಸುತ್ತಮುತ್ತಲಿನ ವಕೀಲರ ಸಮಸ್ಯೆಗಳ ಕುರಿತು ʼಬಾರ್‌ ಅಂಡ್‌ ಬೆಂಚ್‌ʼ ಜೊತೆಗೆ ಅನೀಸ್‌ ಪಾಷಾ ಮಾತನಾಡಿದರು. ಕೊರೊನಾ ತಂದೊಡ್ಡಿದ್ದ ಕಷ್ಟಗಳ ವಿರುದ್ಧ ವಕೀಲರು ಸೆಣಸುತ್ತಿರುವ ರೀತಿ, ವಕೀಲರ ಸಂಘದ ಶ್ರಮ, ಸರ್ಕಾರ ವಹಿಸಬೇಕಾದ ಆಸ್ಥೆ, ನ್ಯಾಯಾಲಯಗಳು ಸಹಜ ಸ್ಥಿತಿಗೆ ಬರಲು ಬೇಕಾಗುವ ಕಾಲಾವಧಿ ಇತ್ಯಾದಿ ವಿಚಾರಗಳ ಬಗ್ಗೆ ಅವರು ಚರ್ಚಿಸಿದ್ದಾರೆ.

ದಾವಣಗೆರೆಯ ವಕೀಲ ಸಮುದಾಯಕ್ಕೆ ಎದುರಾದ ಕೋವಿಡ್‌ ಸಂಕಷ್ಟ ಎಂತಹುದು?

ದಾವಣಗೆರೆಯಲ್ಲಿ ಇದುವರೆಗೆ ನಾಲ್ಕು ವಕೀಲರು ಹಾಗೂ ಮೂವರು ನ್ಯಾಯಾಂಗ ಸಿಬ್ಬಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಹರಪನಹಳ್ಳಿಯಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದವರೊಬ್ಬರು ಇತ್ತೀಚೆಗೆ ತೀರಿಕೊಂಡರು. ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ಅವರ ವೈದ್ಯಕೀಯ ವೆಚ್ಚ ಸುಮಾರು 3 ಲಕ್ಷ ರೂಪಾಯಿಯಷ್ಟಾಗಿತ್ತು. ಆದರೆ ಇನ್ನೂ ಹೆಚ್ಚು ವೆಚ್ಚ ಭರಿಸಲಾಗದ ಕಾರಣಕ್ಕೆ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದರು. ಬಂದ ಎರಡೇ ದಿನದಲ್ಲಿ ಪ್ರಾಣ ತೊರೆದರು. ಅವರಿಗೆ ಕೇವಲ 35 ವಯಸ್ಸು. ಇಂತಹ ವಿಚಾರಗಳನ್ನು ಕೇಳಿದಾಗ ಮನಸ್ಸಿಗೆ ಬಹಳ ನೋವಾಗುತ್ತದೆ. ಇಂತಹ ಘಟನೆಗಳು ಜೀವಕ್ಕೆ ಸಂಬಂಧಿಸಿದ್ದಾದರೆ ವಕೀಲರ ಜೀವನಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳಿವೆ.

ಜೀವನಕ್ಕೆ ಸಂಬಂಧಿಸಿದಂತೆ ಎಂತಹ ಸಮಸ್ಯೆಗಳು ವಕೀಲರಿಗೆ ಎದುರಾದವು ಎಂದು ವಿವರಿಸಬಹುದೇ?

ಹಿರಿಯ ವಕೀಲರು ಒಂದು ರೀತಿಯ ಸಮಸ್ಯೆಗಳನ್ನು ಎದುರಿಸಿದರೆ ಕಿರಿಯ ವಕೀಲರು ಮತ್ತೊಂದು ರೀತಿಯ ಸಂಕಷ್ಟ ಅನುಭವಿಸಿದರು. ಹಿರಿಯ ವಕೀಲರು ಸಾಲ-ಸೋಲ ಮಾಡಿಕೊಂಡಿದ್ದರು. ಅವುಗಳನ್ನು ತೀರಿಸುವುದು ಹೇಗೆ ಎಂಬ ಸವಾಲು ಎದುರಾಯಿತು. ಅಲ್ಲದೆ ಅವರಿಗಾಗಿ ಶ್ರಮಿಸುತ್ತಿದ್ದ ಕಿರಿಯ ವಕೀಲರ ಖರ್ಚು ವೆಚ್ಚಗಳನ್ನು ನಿಭಾಯಿಸಬೇಕಿತ್ತು. ಇನ್ನು ಕಿರಿಯ ವಕೀಲರಂತೂ ಸಾಲಗಳಲ್ಲೇ ಮುಳುಗಿದ್ದರು. ಅವರಿಗೆ ಕೋವಿಡ್‌ ಕಡುಕಷ್ಟಗಳನ್ನು ತಂದೊಡ್ಡಿದೆ. ನಿಷ್ಕ್ರಿಯರನ್ನಾಗಿ ಮಾಡಿ ಮೂಲೆಗುಂಪಾಗಿಸಿದೆ. ಬೇರೆಯವರು ತಮ್ಮ ಸಂಕಷ್ಟಗಳನ್ನು ಸುಲಭವಾಗಿ ಹೇಳಿಕೊಳ್ಳಬಲ್ಲರು. ಆದರೆ ಘನತೆ ಕಾಪಾಡಿಕೊಂಡುಬಂದ ಅನೇಕ ವಕೀಲರು ತಮ್ಮ ತೊಂದರೆಗಳನ್ನು ಹೇಳಿಕೊಳ್ಳಲಾರದೆ ಒಳಗೊಳಗೆ ಕೊರಗುತ್ತಿದ್ದಾರೆ. ಕೆಲವರು ಮುಜಗರಪಟ್ಟುಕೊಂಡು ಕದ್ದುಮುಚ್ಚಿ ಆಹಾರದ ಕಿಟ್‌ಗಳನ್ನು ಪಡೆದರು. ಅನೇಕರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿಗೆ ಬಂದರು.

ಕೆಳ ಹಂತದ ನ್ಯಾಯಾಲಯಗಳು ಹೇಗೆ ನಡೆಯುತ್ತಿವೆ?

ವರ್ಚುವಲ್‌ ಕಲಾಪ ಸುಪ್ರೀಂಕೋರ್ಟ್,‌ ಹೈಕೋರ್ಟ್‌ಗಳಿಗೆ ಒಪ್ಪುತ್ತದೆ. ಅಲ್ಲಿ ವಾದಿ- ಪ್ರತಿವಾದಿಗಳು ಹಾಗೂ ಸಾಕ್ಷಿಗಳ ನೇರ ಉಪಸ್ಥಿತಿ ಅಗತ್ಯ ಇರುವುದಿಲ್ಲ. ಆದರೆ ನಿಜವಾದ ʼಅಡುಗೆ ತಯಾರಿಯಾಗುವುದುʼ ಕೆಳ ಹಂತದ ನ್ಯಾಯಾಲಯಗಳಲ್ಲಿ. ಇಲ್ಲಿ ಪ್ರಕರಣಕ್ಕೆ ಸಂಬಂಧಿಸಿದವರಲ್ಲಿ ಬಹುತೇಕರು ಹಾಜರಾಗಲೇಬೇಕು. ಆದರೆ ಕೋವಿಡ್‌ ಬಂದ ನಂತರ ಆರೋಪಿಗಳು, ಸಾಕ್ಷಿಗಳು, ಅರ್ಜಿದಾರರು ನ್ಯಾಯಾಲಯಗಳಿಗೆ ಹಾಜರಾಗಲು ಹಿಂಜರಿಯುತ್ತಿದ್ದಾರೆ. ನ್ಯಾಯಾಲಯಗಳೂ ಸಾಕ್ಷಿಗಳ ವಿಚಾರಣೆಗೆ ಮಿತಿ ಹೇರಿವೆ. ಇದರಿಂದಾಗಿ ಇಡೀ ವಿಚಾರಣಾ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದೆ.

ಕೆಲ ಮುಖ್ಯ ಪ್ರಕರಣಗಳಲ್ಲಿ ಪೊಲೀಸರ ಒತ್ತಾಯದಿಂದಾಗಿ ಸಾಕ್ಷಿಗಳು ಹಾಜರಾಗುತ್ತಿದ್ದಾರೆ ಬಿಟ್ಟರೆ, ಸ್ವಯಂಪ್ರೇರಿತರಾಗಿ ನ್ಯಾಯಾಲಯಗಳಿಗೆ ಬರಲು ಯಾರೂ ಇಚ್ಛಿಸುತ್ತಿಲ್ಲ. ನ್ಯಾಯಾಂಗಣದಲ್ಲಿ ವಕೀಲರು, ಕಕ್ಷೀದಾರರು ಮತ್ತು ನ್ಯಾಯಾಧೀಶರು ಕೂರುವ ಸ್ಥಳಗಳ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳಲಾಗಿದೆ. ಸೋಂಕು ಹರಡದಂತೆ ಪಾರದರ್ಶಕ ಪ್ಲಾಸ್ಟಿಕ್‌ ಪರದೆ ಹಾಕಿ ವಿಚಾರಣೆ ನಡೆಸಲಾಗುತ್ತಿದೆ. ಹೀಗೆ ಸುರಕ್ಷತಾ ಕ್ರಮ ಕೈಗೊಂಡಿರುವುದರಿಂದ ಇನ್ನಾದರೂ ನ್ಯಾಯಾಲಯಗಳು ಸುದೀರ್ಘ ಸಮಯ ಬೇಡುವ ಸಾಕ್ಷಿಗಳ ವಿಚಾರಣೆ ಪ್ರಕ್ರಿಯೆಗೆ ಎಂದಿನಂತೆ ಅವಕಾಶ ಕಲ್ಪಿಸಬೇಕು.

ವಕೀಲರ ಸಮುದಾಯದ ಬಗ್ಗೆ ಸರ್ಕಾರದ ತೋರಿದ ಕಾಳಜಿ ಹೇಗಿದೆ?

ಪೊಲೀಸರಿಗೆ, ವಕೀಲರಿಗೆ ಸಾಲ ನೀಡಲು ಬ್ಯಾಂಕುಗಳು ಹಿಂದೆ ಮುಂದೆ ನೋಡುತ್ತವೆ. ಹೀಗಾಗಿ ಸುಲಭವಾಗಿ ಸಾಲ ಪಡೆಯುವುದು ಕಷ್ಟ. ರಾಜ್ಯ ಸರ್ಕಾರ ರೂ 5 ಕೋಟಿ, ರಾಜ್ಯ ವಕೀಲರ ಪರಿಷತ್ತು ರೂ 2 ಕೋಟಿ, ಭಾರತೀಯ ವಕೀಲರ ಪರಿಷತ್ತು 1 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಸುಮಾರು ಒಂದು ಲಕ್ಷದಷ್ಟು ಇರುವ ವಕೀಲ ಸಮುದಾಯಕ್ಕೆ ಈ ಹಣ ಏನೇನೂ ಸಾಲದು. ಕೆಲವರಿಗೆ ಐದು ಸಾವಿರ ರೂಪಾಯಿ ನೆರವು ದೊರೆತಿದೆ. ಆದರೆ ಅನೇಕರಿಗೆ ಅಷ್ಟು ಹಣವೂ ದೊರೆತಿಲ್ಲ.

ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ವಕೀಲ ಸಂಘಗಳ ಪಾತ್ರ ಎಂತಹುದು?

ದಾವಣಗೆರೆ ವಕೀಲರ ಸಂಘ ಸಮಸ್ಯೆಗಳಿಗೆ ಸ್ಪಂದಿಸಿತು. ಆಹಾರ ಕಿಟ್‌ಗಳನ್ನು ಒದಗಿಸಿತು. ಕೆಲ ಹಿರಿಯ ವಕೀಲರು ಯಾವುದೇ ಮುಜಗರಪಟ್ಟುಕೊಳ್ಳದೇ ಅಗತ್ಯ ಸಹಾಯ ಕೇಳಿ ಎಂದರು. ರಾಜ್ಯಮಟ್ಟದಲ್ಲಿ ವಕೀಲರ ಪರಿಷತ್ತಿನ ಬಳಿ ವಕೀಲರ ಕಲ್ಯಾಣ ನಿಧಿಯೇನೋ ಇತ್ತು. ಆದರೆ ಅದನ್ನು ಕೋವಿಡ್‌ ಪರಿಹಾರವಾಗಿ ಬಳಸಿಕೊಳ್ಳುವಂತಿರಲಿಲ್ಲ. ಅದಕ್ಕೆಂದು ನಿಯಮಗಳಿಗೆ ತಿದ್ದುಪಡಿ ತರುವ ಕಾನೂನಾತ್ಮಕ ಹೋರಾಟವೂ ನಡೆಯಿತು. ಆದರೆ ನ್ಯಾಯಾಲಯ ವ್ಯತಿರಿಕ್ತವಾಗಿ ತೀರ್ಪು ನೀಡಿದ್ದರಿಂದ ಆ ಹಣ ಬಳಕೆಯಾಗಲಿಲ್ಲ. ಸರ್ಕಾರಕ್ಕೆ ವಕೀಲರ ಪರಿಸ್ಥಿತಿ ಏನೆಂಬುದು ಗೊತ್ತಿರುತ್ತದೆ. ಅದು ಈ ಹಂತದಲ್ಲಿ ದೊಡ್ಡಮಟ್ಟದ ನೆರವಿಗೆ ಬರಬಹುದಿತ್ತು.

ನ್ಯಾಯಾಂಗ ಪ್ರಕ್ರಿಯೆ ಸಹಜ ಸ್ಥಿತಿಗೆ ಬರಲು ಎಷ್ಟು ಸಮಯ ಹಿಡಿಯಬಹುದು?

ಕನಿಷ್ಠ ಎರಡು ವರ್ಷಗಳಾದರೂ ಬೇಕಾಗುತ್ತದೆ. ಅರ್ಜಿದಾರರೇ ಮುಂದೆ ಬಾರದಿದ್ದಾಗ ಕೇಸ್‌ ನಡೆಸುವುದಾದರೂ ಹೇಗೆ? ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕೆಂಬ ಭೀತಿಯಿಂದಾಗಿಯೇ ಕಕ್ಷೀದಾರರು ನ್ಯಾಯಾಲಯದ ಕಡೆ ಮುಖ ಹಾಕುತ್ತಿಲ್ಲ. ನ್ಯಾಯಾಂಗ ಅಧಿಕಾರಿಗಳಿಗೆ ವೇತನದ ವಿಚಾರದಲ್ಲಿ ಭದ್ರತೆ ಇರುತ್ತದೆ. ಆದರೆ ಎಲ್ಲಾ ವಕೀಲರು ಆರ್ಥಿಕವಾಗಿ ಸದೃಢರಾಗಿರುವುದಿಲ್ಲ. ಕಿರಿಯ ವಕೀಲ ಉತ್ತಮ ಸಂಭಾವನೆ ಪಡೆಯಲು ಕನಿಷ್ಠ ಹತ್ತು ವರ್ಷವಾದರೂ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ. ಅವರಿಗೆ ಆರ್ಥಿಕ ಇತಿಮಿತಿಗಳು ಅನೇಕ. ಕೋವಿಡ್‌ ಅಂತಹವರ ನೋವನ್ನು ದುಪ್ಪಟ್ಟು ಮಾಡಿದೆ.