ಸಂದರ್ಶನಗಳು

[ನ್ಯಾ. ಅಶೋಕ್ ಭೂಷಣ್‌ ವಿಶೇಷ ಸಂದರ್ಶನ] ʼಅಯೋಧ್ಯೆʼ ಅಂತರ್-ಧರ್ಮೀಯ ವ್ಯಾಜ್ಯವಾಗಿರಲಿಲ್ಲ, ಅದೊಂದು ಭೂ ವಿವಾದವಾಗಿತ್ತು

Bar & Bench

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರು ಇದೇ ಜುಲೈ 4ರಂದು ನಿವೃತ್ತರಾದರು. ಐತಿಹಾಸಿಕ ಅಯೋಧ್ಯೆ ತೀರ್ಪು ನೀಡಿದ ಸಂವಿಧಾನಿಕ ಪೀಠದ ಐವರು ಸದಸ್ಯರಲ್ಲಿ ಒಬ್ಬರಾಗಿದ್ದ ನ್ಯಾ. ಭೂಷಣ್ ಅವರು ʼಬಾರ್ ಮತ್ತು ಬೆಂಚ್‌ʼನ ದೇಬಯಾನ್ ರಾಯ್ ಅವರೊಂದಿಗೆ ವಿವಿಧ ಸಕಾಲಿಕ ಕಾನೂನಾತ್ಮಕ ವಿಷಯಗಳ ವಿಚಾರವಾಗಿ ಮಾತನಾಡಿದ್ದಾರೆ. ತೀರ್ಪಿನ ಅನುಭವಗಳ ಆಚೆಗೆ ಅನೇಕ ಕಾನೂನು ಸಂಗತಿಗಳನ್ನು ಅವರು ಹಂಚಿಕೊಂಡಿದ್ದಾರೆ. ಅವರೊಂದಿಗಿನ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಸುಪ್ರೀಂ ಕೋರ್ಟ್‌ನ ಐತಿಹಾಸಿಕ ಅಯೋಧ್ಯಾ ತೀರ್ಪಿನ ಒಂದು ಭಾಗ ನೀವು. ಅಂತಹ ಅಂತರ್-ಧರ್ಮೀಯ ವಿವಾದಗಳನ್ನು ನಿರ್ಧರಿಸಲು ನ್ಯಾಯಾಲಯಗಳು ಎಷ್ಟು ಸೂಕ್ತ ಎಂದು ಭಾವಿಸುತ್ತೀರಿ?

ಇದು ಅಂತರ್‌ಧರ್ಮೀಯ ವಿವಾದವಾಗಿರಲಿಲ್ಲ ಮತ್ತು ಹಾಗೆ ಕರೆಯುವುದು ತಪ್ಪು ಕಲ್ಪನೆ. ಇದು ಮೂಲತಃ ಎರಡು ಸಮುದಾಯಗಳ ನಡುವಿನ ಭೂ ವಿವಾದವಾಗಿದ್ದು ಒಬ್ಬರು ಅಲ್ಲಿ ಪೂಜೆ ಸಲ್ಲಿಸುತ್ತಿರುವುದಾಗಿ ಹೇಳುತ್ತಿದ್ದರೆ ಮತ್ತೊಬ್ಬರು ಕೂಡ ಅಲ್ಲಿ ಪೂಜಿಸುತ್ತಿರುವುದಾಗಿ ಹೇಳಿದ್ದಾರೆ. ನಂಬಿಕೆಗೆ ಸಂಬಂಧಿಸಿದಂತೆ ಯಾವುದೇ ವಿವಾದಗಳಿಲ್ಲ.

ಹಿಂದೂ ನಂಬಿಕೆ ಬೇರೆ ಮತ್ತು ಮುಸ್ಲಿಂ ನಂಬಿಕೆ ಬೇರೆ. ಎರಡೂ ಭಿನ್ನ ಅನುಯಾಯಿಗಳನ್ನು ಹೊಂದಿವೆ. ಅದು ನಂಬಿಕೆಯ ವಿವಾದವಲ್ಲ. ನಂಬಿಕೆ ಬಹಳ ವೈಯಕ್ತಿಕ ವಿಷಯವಾಗಿದ್ದು ಪ್ರತಿಯೊಬ್ಬರಿಗೂ ಅದರ ಹಕ್ಕಿದೆ ಮತ್ತು ನಾನು ಅದನ್ನು ದೃಢವಾಗಿ ನಂಬುತ್ತೇನೆ. ಇದು ಒಂದು ತುಂಡು ಭೂಮಿಗೆ ಸಂಬಂಧಿಸಿದ ವಿವಾದ ಮಾತ್ರ ಮತ್ತು ಅದನ್ನು ಪುರಾವೆಗಳ ಆಧಾರದ ಮೇಲೆ ನಿರ್ಧರಿಸಬೇಕಾಗಿತ್ತು.

ಹಿಂದೂಗಳು ಇದು ರಾಮನ ಜನ್ಮಸ್ಥಳ ಎಂದು ಹೇಳಿದರು ಮತ್ತು ಮುಸ್ಲಿಮರು ಇದು ಬಾಬರ್ ನಿರ್ಮಿಸಿದ ಮಸೀದಿಯ ಸ್ಥಳವೆಂದು ಹೇಳಿದರು. ಇವೆಲ್ಲವೂ 500 ವರ್ಷಗಳ ಹಿಂದಿನ ಐತಿಹಾಸಿಕ ಸಂಗತಿಗಳು ಮತ್ತು ವಿವಾದಗಳಾಗಿದ್ದು ಕೆಲವು ಪುರಾವೆಗಳು ಲಭ್ಯ ಇದ್ದರೆ ಕೆಲವು ಪುರಾವೆಗಳು ಲಭ್ಯ ಇಲ್ಲ.

ಅಯೋಧ್ಯೆ ವಿವಾದ ಅಂತರ್-ಧರ್ಮೀಯ ವಿವಾದವಾಗಿರಲಿಲ್ಲ. ಇದು ಭೂ ವಿವಾದವಾಗಿತ್ತು.
ನ್ಯಾ. ಅಶೋಕ್ ಭೂಷಣ್

ಹಿಂದೂ ದೇವಾಲಯವನ್ನು ನೆಲಸಮಗೊಳಿಸಿದ ನಂತರ ಮಸೀದಿಯನ್ನು ನಿರ್ಮಿಸಲಾಗಿದೆಯೇ ಎಂಬ ಪ್ರಶ್ನೆ ಇತ್ತು. ಇದನ್ನು ಹಿಂದೂ ನಿರ್ಮಿತಿಯ ಮೇಲೆ ನಿರ್ಮಿಸಲಾಗಿದೆ ಎಂದಿಟ್ಟುಕೊಳ್ಳೋಣ ಆಗ ಮಸೀದಿಯ ಕಾನೂನುಬದ್ಧತೆ ಸಂಶಯಾಸ್ಪದವಾಗಿರುತ್ತಿತ್ತು. ಏಕೆಂದರೆ ಕೆಲವು (ಇಸ್ಲಾಮಿಕ್) ವಿದ್ವಾಂಸರು ವಿವಾದಿತ ಸ್ಥಳದಲ್ಲಿ ಮಸೀದಿಗಳನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.

ಅಯೋಧ್ಯೆಯ ತೀರ್ಪಿಗೆ ಅನುಬಂಧವನ್ನು ಬರೆಯುವ ಅಗತ್ಯವಿತ್ತು ಎಂದು ನೀವು ಏಕೆ ಭಾವಿಸುತ್ತೀರಿ?

ಆರಂಭದಲ್ಲಿ, ಸುಪ್ರೀಂಕೋರ್ಟ್‌ ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಭವಿಷ್ಯದ ಎಲ್ಲ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಪೀಠವನ್ನು ರಚಿಸಲು ಚಿಂತಿಸಿದ್ದರು. ಹಾಗಾಗಿ ನಾನು ಮತ್ತು ನ್ಯಾ. ಅಬ್ದುಲ್ ನಜೀರ್ ಅವರು ಹೊರಗುಳಿದೆವು. ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು (ಈಗಿನ ಮುಖ್ಯ ನ್ಯಾಯಮೂರ್ತಿ) ಎನ್.ವಿ.ರಮಣ ಅವರು ಪ್ರಕರಣದಿಂದ ತಮ್ಮಷ್ಟಕ್ಕೆ ತಾವು ಹಿಂದೆ ಸರಿದರು. ಆದ್ದರಿಂದ ನಾವು ನ್ಯಾಯಪೀಠದ ಭಾಗವಾದೆವು.

ನಾನು ಅಯೋಧ್ಯೆ ತೀರ್ಪಿನ ಅನುಬಂಧವನ್ನು ಬರೆದೆ.

ಅದು ನನ್ನ ದೃಷ್ಟಿಕೋನವಾಗಿತ್ತು, ಆದರೆ ಕೆಲವು ನ್ಯಾಯಮೂರ್ತಿಗಳು ಇದು ಮುಖ್ಯ ತೀರ್ಪಿನ ಭಾಗವಾಗಿರಬಾರದು ಎಂಬ ಅಭಿಪ್ರಾಯದಲ್ಲಿದ್ದರು. ಆದರೆ ನಾನು ಅದನ್ನು ಬರೆಯುವುದು ಮುಖ್ಯ ಎಂದು ಹೇಳಿದ್ದೆ, ಏಕೆಂದರೆ ಭೂಮಿ ಹೇಗೆ ರಾಮನ ಜನ್ಮಸ್ಥಳ ಎಂಬುದು ಅದರಲ್ಲಿತ್ತು. ಆದರೆ ನಾನು ಧಾರ್ಮಿಕ ಗ್ರಂಥಗಳನ್ನು ಉಲ್ಲೇಖಿಸಿದ್ದರಿಂದ ಇದು ಮುಖ್ಯ ತೀರ್ಪಿನ ಒಂದು ಭಾಗವಾಗಿರಬೇಕೆ ಎಂಬ ಬಗ್ಗೆ ಕೆಲವು ವಿವಾದಗಳೆದ್ದವು ಮತ್ತು ಕೆಲವು ನ್ಯಾಯಮೂರ್ತಿಗಳು ಇದು ಮುಖ್ಯ ತೀರ್ಪಿನ ಭಾಗವಾಗಿರಬಾರದು ಎಂಬ ಅಭಿಪ್ರಾಯದಲ್ಲಿದ್ದರು.

ಹೀಗಾಗಿ, ಅನುಬಂಧ ಸಿದ್ಧವಾಯಿತು. ತೀರ್ಪನ್ನುಎಲ್ಲರೂ ನೀಡಬೇಕು ಎಂಬುದು ಮುಖ್ಯನ್ಯಾಯಮೂರ್ತಿಗಳ ನಿರ್ಧಾರವಾಗಿತ್ತು ಮತ್ತು ಅದನ್ನು ಸರ್ವಾನುಮತದಿಂದ ಅಂಗೀಕರಿಸಿದ್ದರಿಂದ ಅದು ಸೂಕ್ತವಾಗಿತ್ತು.

ನಾನು ಅಯೋಧ್ಯೆಯ ತೀರ್ಪಿನ ಅನುಬಂಧವನ್ನು ಬರೆದೆ. ಕೆಲವು ನ್ಯಾಯಮೂರ್ತಿಗಳು ಇದು ಮುಖ್ಯ ತೀರ್ಪಿನ ಭಾಗವಾಗಿರಬಾರದು ಎಂಬ ಅಭಿಪ್ರಾಯದಲ್ಲಿದ್ದರು.
ನ್ಯಾಯಮೂರ್ತಿ ಅಶೋಕ್ ಭೂಷಣ್

ತೀರ್ಪು ಕವಲುದಾರಿಗೆ ಎಡೆಮಾಡಿಕೊಡುವುದರಿಂದ ಪ್ರಕರಣ ನಿರ್ಧರಿಸುವುದು ಕಠಿಣ ಕಾರ್ಯವಾಗಿತ್ತೆ?

ನಮಗೆ ಜನರ ಬಗ್ಗೆ ನಂಬಿಕೆ ಇತ್ತು. ವಾಸ್ತವದಲ್ಲಿ, ಧಾರ್ಮಿಕ ಮುಖಂಡರು ಸೇರಿದಂತೆ ಎಲ್ಲರೂ ನಮ್ಮ ತೀರ್ಪನ್ನು ಅನುಸರಿಸುತ್ತೇವೆ ಎಂದು ಹೇಳಿದ್ದರು. ಇಸ್ಮಾಯಿಲ್ ಫಾರೂಕಿ ಪ್ರಕರಣದಲ್ಲಿ ನಮ್ಮ ತೀರ್ಪನ್ನು ಜನರು ಒಪ್ಪಿಕೊಂಡರು. ನಮ್ಮ ತೀರ್ಪನ್ನು ಯಾರೂ ಧಿಕ್ಕರಿಸಲಿಲ್ಲ.

ಸುಪ್ರೀಂಕೋರ್ಟ್‌ ಯಾವುದೇ ತೀರ್ಪು ನೀಡಿದರೂ ಜನರು ಅದನ್ನು ಸ್ವೀಕರಿಸುತ್ತಾರೆ ಎಂಬುದರಲ್ಲಿ ನಮಗೆ ಸಂದೇಹವಿಲ್ಲ. ಭಾರತೀಯ ಜನರು ಭಾರೀ ಸಹಿಷ್ಣುಗಳು. ಹೀಗಾಗಿ, ನಮಗೆ ವಿಶ್ವಾಸವಿತ್ತು ಮತ್ತು ಅದು ನಿಜವೆಂದು ಸಾಬೀತಾಯಿತು.

ಸಂದರ್ಶನದ ಇತರ ಪ್ರಮುಖ ಅಂಶಗಳು

ಕೋವಿಡ್‌ ಪ್ರಕರಣಗಳನ್ನು ಸುಪ್ರೀಂಕೋರ್ಟ್‌ ನಿರ್ವಹಿಸಿದ ಬಗೆ, ಕಾರ್ಯಾಂಗ, ಪ್ರಕರಣಗಳ ಬಾಕಿ ಉಳಿಯುವಿಕೆ, ದೇಶದ್ರೋಹ ಕಾಯಿದೆ, ಯುಎಪಿಎ ಕಾಯಿದೆ ಸಿಂಧುತ್ವ, ಸುಪ್ರೀಂಕೋರ್ಟ್‌ ಶುದ್ಧ ಸಾಂವಿಧಾನಿಕ ನ್ಯಾಯಲಯವಾಗಿರಬೇಕೆ ಎಂಬ ವಿಚಾರ, ಸಾಂವಿಧಾನಿಕ ಸಂಸ್ಥೆಗಳ ಆತ್ಮಾವಲೋಕನ, ವಕೀಲರನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವುದು, ತಮ್ಮ ಮುಂದಿನ ಹೆಜ್ಜೆಗಳ ಕುರಿತಂತೆ ಅನೇಕ ವಿಚಾರಗಳನ್ನು ನ್ಯಾ. ಅಶೋಕ್‌ಭೂಷಣ್‌ ಹಂಚಿಕೊಂಡಿದ್ದಾರೆ. ಅವರ ಅಭಿಪ್ರಾಯಗಳ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ:

  • (ಕೋವಿಡ್‌) ವಲಸೆ ಕಂಡಾಗ ಸರ್ಕಾರ ಕೆಲ ಪರಿಹಾರ ಕ್ರಮ ಕೈಗೊಳ್ಳುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ ಸ್ವಲ್ಪ ಮುಂಚಿತವಾಗಿಯೇ ಯಾರಾದರೂ ನಮ್ಮನ್ನು ಎಚ್ಚರಿಸಿದ್ದರೆ ಬಹುಶಃ ಮೊದಲೇ ಗಣನೆಗೆ ತೆಗೆದುಕೊಳ್ಳಬಹುದಿತ್ತು. ನ್ಯಾಯಾಲಯಗಳು ಮಧ್ಯಪ್ರವೇಶಿಸಬೇಕು ಎಂದು ತಿಳಿದ ಕೂಡಲೇ ನಾವದನ್ನು ಮಾಡಿದ್ದೇವೆ.

  • ಕಾನೂನಿನ ಪ್ರಕಾರ ಕಾರ್ಯಂಗ ತನ್ನ ಕರ್ತವ್ಯ ಅಥವಾ ಕಡ್ಡಾಯ ಕರ್ತವವನ್ನು ಮಾಡದಿದ್ದಾಗ ನ್ಯಾಯಾಲಯಗಳು ಮಧ್ಯ ಪ್ರವೇಶಿಸಬೇಕಾಗುತ್ತದೆ. ಜನರಿಗಾಗಿ ಮತ್ತು ಅವರ ಹಕ್ಕುಗಳ ರಕ್ಷಣೆಗಾಗಿ ನ್ಯಾಯಾಲಯಗಳಿವೆ. ಕಾರ್ಯಾಂಗ ತನ್ನ ಪಾತ್ರ ನಿರ್ವಹಿಸದಿದ್ದಾಗ ಮಾತ್ರ (ನ್ಯಾಯಾಂಗ) ಮಧ್ಯ ಪ್ರವೇಶಿಸಬೇಕಾಗುತ್ತದೆ.

  • ನ್ಯಾಯಾಂಗದ ಯಾವುದೇ ಕ್ರಮ ಉದ್ದೇಶ ಪೂರ್ವಕ ಎನ್ನಲಾಗದು. ನ್ಯಾಯಾಂಗ ತನ್ನದೇ ಆದ ನಿಯಮ, ರೋಸ್ಟರ್‌ ಹಾಗೂ ಸ್ವಂತ ಸಮಸ್ಯೆಗಳನ್ನು ಹೊಂದಿದೆ. ಒಂದೇ ಪ್ರಕರಣಕ್ಕೆ ಐದು ನ್ಯಾಯಮೂರ್ತಿಗಳನ್ನು ಗಂಟುಹಾಕಲು ಸಾಧ್ಯವಿಲ್ಲದ ಕಾರಣ ವಿಸೃತ ಪೀಠಗಳನ್ನು ಸುಲಭವಾಗಿ ರಚಿಸಲಾಗದು. ಆದ್ದರಿಂದ ಯಾವುದೇ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸುವ ಯತ್ನ ನಡೆಯುತ್ತಿದೆ ಎಂದು ನಾನು ಹೇಳುವುದಿಲ್ಲ. ನ್ಯಾಯಾಲಯಗಳು ತಮ್ಮ ಅನೂಕೂಲಕ್ಕೆ ಅನುಗುಣವಾಗಿ ಮತ್ತು ಮುಖ್ಯ ನ್ಯಾಯಮೂರ್ತಿಗಳ ನಿರ್ಣಯದ ಪ್ರಕಾರ ಪ್ರಕರಣಗಳನ್ನು ಕೈಗೆತ್ತಿಕೊಳ್ಳುತ್ತವೆ. ಬಹಳಷ್ಟು ಪ್ರಕರಣಗಳು ಬಾಕಿ ಉಳಿದಿದ್ದು ಪ್ರಕರಣಗಳನ್ನು ಹೇಗೆ ಪಟ್ಟಿಮಾಡಬೇಕೆಂಬುದು ಅವರ ನಿರ್ಧಾರವಾಗಿದೆ.

  • (ದೇಶದ್ರೋಹ ನಿಬಂಧನೆ ಕುರಿತಂತೆ ಮಾತನಾಡುತ್ತಾ) ಸುಪ್ರೀಂಕೋರ್ಟ್‌ ಈಗಾಗಲೇ ಇದನ್ನು ಪರಿಗಣಿಸಿರುವುದರಿಂದ ನನ್ನ ಅಭಿಪ್ರಾಯ ನೀಡಲು ಇಚ್ಛಿಸುವುದಿಲ್ಲ. ಪ್ರಕರಣ ನ್ಯಾಯಾಲಯದಲ್ಲಿದ್ದು ನ್ಯಾಯಾಲಯ ನಿರ್ಧಾರ ಕೈಗೊಳ್ಳುತ್ತದೆ. ಇದು ಶಾಸನಾತ್ಮಕ ನೀತಿಯಿಂದಾದ ಕಾನೂನಿನ ನಿಬಂಧನೆ. ಕ್ರಿಮಿನಲ್‌ ಕಾನೂನು ಮತ್ತು ಕ್ರಿಮಿನಲ್‌ ನ್ಯಾಯಶಾಸ್ತ್ರ ತನ್ನದೇ ಆದ ನೀತಿಯನ್ನು ಒಳಗೊಂಡಿದೆ. ಇಂದು ತಪ್ಪು ಅನ್ನಿಸುವಂತಹುದು ನಾಳೆ ತಪ್ಪಾಗಿ ಇರದೇ ಇರಬಹುದು. ನ್ಯಾಯಾಲಯ ಈ ನೀತಿಯನ್ನು ಪರಿಶೀಲಿಸುತ್ತದೆ.

  • (ಯುಎಪಿಎ ಕಾಯಿದೆಯಡಿ ಜಾಮೀನು ನೀಡುವ ಕುರಿತು ಕೇಳಲಾದ ಪ್ರಶ್ನೆಗೆ) ಜಾಮೀನು ಪರಿಗಣಿಸುವುದು ಸಂಪೂರ್ಣ ಭಿನ್ನ ವಿಚಾರ ಮತ್ತು ಜಾಮೀನು ನೀಡಬೇಕೆ ಅಥವಾ ಬೇಡವೇ ಎಂದು ಪರಿಗಣಿಸುವಾಗ ನ್ಯಾಯಾಲಯ ಕಾಯಿದೆಯ ನಿಖರತೆಗೆ ಕಟ್ಟುಬೀಳಬಾರದು. ಏಕೆಂದರೆ ಅದು ಇಲ್ಲಿ ಸಬ್ಜೆಕ್ಟ್‌ ಮ್ಯಾಟರ್‌ ಆಗಿರುವುದಿಲ್ಲ.

  • ಸಂವಿಧಾನ ಶಿಲ್ಪಿಗಳು ಬಯಸಿದಂತೆ 1950ರಿಂದಲೂ ಸುಪ್ರೀಂಕೋರ್ಟ್‌ ಸಿವಿಲ್‌, ಕ್ರಿಮಿನಲ್‌ ಹಾಗೂ ಸಾಂವಿಧಾನಿಕ ನ್ಯಾಯವ್ಯಾಪ್ತಿಯನ್ನು ಹೊಂದಿದ್ದು ಅದು ಕೇವಲ ಸಾಂವಿಧಾನಿಕ ನ್ಯಾಯಾಲಯವಾಗಿರಬೇಕು ಎಂದು ಹೇಳುವುದು ಸರಿಯಲ್ಲ.

  • ನ್ಯಾಯಾಧೀಶರು ಆತ್ಮಾವಲೋಕನ ಮಾಡಿಕೊಳ್ಳುವುದಿಲ್ಲ ಎಂಬುದು ತಪ್ಪು ಕಲ್ಪನೆ. ದೃಗ್ಗೋಚರವಾಗದಿದ್ದರೂ ಅವರು ತಮ್ಮನ್ನು ತಾವು ಸುಧಾರಿಸಿಕೊಳ್ಳಲು ಯತ್ನಿಸುತ್ತಾರೆ. ಆತ್ಮಾವಲೋಕನದೊಂದಿಗೆ ನೋಟ ಬದಲಾಗುತ್ತದೆ ಮತ್ತು ಕೆಲ ತೀರ್ಪುಗಳನ್ನು ರದ್ದುಗೊಳಿಸಲಾಗುತ್ತದೆ.

  • ಅಯೋಧ್ಯೆ ಪ್ರಕರಣದ ವಿಚಾರಣೆಯು ನನ್ನ ಇಡೀ ವೃತ್ತಿಜೀವನದಲ್ಲೇ ಅಮೂಲ್ಯವಾದದ್ದು. ಮಂಡಿಸಲಾದ ವಾದ ಸರಣಿ ನಾನು ಭಾಗವಾಗಿದ್ದ ವಿಚಾರಣೆಯಲ್ಲಿಯೇ ಅತ್ಯುತ್ತಮವಾಗಿತ್ತು. ಇದು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದುದಾಗಿದೆ.

  • ಸಾರ್ವಜನಿಕ ಅಭಿಪ್ರಾಯಕ್ಕೆ ನ್ಯಾಯಾಧೀಶ ಈಡಾದರೆ ಆತ ದುರ್ಬಲ ನ್ಯಾಯಾಧೀಶ. ಮಾಧ್ಯಮ ಅಭಿಪ್ರಾಯ ನ್ಯಾಯಾಧೀಶನನ್ನು ಪ್ರಭಾವಿಸಬಾರದು.

  • ನ್ಯಾಯಾಧೀಶರ ಯಾವುದೇ ಗ್ರಹಿಕೆ ಸಾರ್ವಜನಿಕ ಬಳಕೆಗಾಗಿ ಇರುತ್ತದೆ ಏಕೆಂದರೆ ಇದು ಸಾರ್ವಜನಿಕ ವಿಚಾರಣೆಯಾಗಿದೆ…. ಇದನ್ನು ವರದಿ ಮಾಡುವುದರಲ್ಲಿ ಯಾವುದೇ ತಪ್ಪು ಇಲ್ಲ.

  • ಕಾನೂನು ವಿದ್ಯಾರ್ಥಿಗಳು ಕೇವಲ ಆರಂಭಿಕ ಘಟ್ಡದಲಿದ್ದು ಕಾನೂನು ಕಲಿಯುತ್ತಿರುತ್ತಾರೆ. ಪಿಐಎಲ್ ಸಲ್ಲಿಸುವಾಗ ಅವರು ಅಷ್ಟೊಂದು ತಾಳ್ಮೆ ಕಳೆದುಕೊಳ್ಳಬಾರದು. ಇದನ್ನು ನಾನು ಖುದ್ದು ನೋಡಿದ್ದೇನೆ. ಅವರು ಪತ್ರಿಕೆಗಳನ್ನು ಓದುತ್ತಾರೆ ಮತ್ತು ಪಿಐಎಲ್ ನ್ಯಾಯವ್ಯಾಪ್ತಿಯ ಬಗ್ಗೆ ಅವರಿಗೆ ತಿಳಿದಿಲ್ಲದ ಕಾರಣ ಇದು ನಡೆಯುತ್ತಿದೆ.

  • ರಾವಿ- ಬಿಯಾಸ್‌ ಜಲ ನ್ಯಾಯಾಧಿಕರಣದ ಅಧ್ಯಕ್ಷನಾಗಿ ಕಳೆದ ವರ್ಷ ನಾನು ನೇಮಕವಾಗಿದ್ದೇನೆ. ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳು ಅದರ ಅಧ್ಯಕ್ಷರಾಗಿರಬೇಕಿರುವುದರಿಂದ ಆ ಪಾತ್ರ ನಿಭಾಯಿಸುತ್ತೇನೆ.

ಆಂಗ್ಲ ಸಂದರ್ಶನದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ಕಿಸಿ: