ಸಂದರ್ಶನಗಳು

ಜನಸಾಮಾನ್ಯರಲ್ಲಿ ಜಾಲ ಕಲಾಪ, ಇ- ಫೈಲಿಂಗ್‌ ಪ್ರಯೋಜನಗಳ ಕುರಿತು ಜಾಗೃತಿ ಮೂಡಿಸಬೇಕಿದೆ: ನ್ಯಾ. ಶ್ರೀಮತಿ ಕಾವೇರಿ

ಮುಂದಿನ ಪೀಳಿಗೆ, ತಂತ್ರಜ್ಞಾನದ ಜೊತೆಗೆ ಅಥವಾ ಅದನ್ನು ಆಧರಿಸಿಯೇ ಬದುಕಲಿದೆ. ಹೀಗಾಗಿ ಜಾಲ ಕಲಾಪಗಳು ಶಾಶ್ವತವಾಗಬಹುದು ಎನ್ನುತ್ತಾರೆ ಹಿರಿಯ ನ್ಯಾಯಾಧೀಶೆ.

Ramesh DK

ನ್ಯಾ. ಶ್ರೀಮತಿ ಕಾವೇರಿ ಅವರು ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ನಂತರ ಜಮಖಂಡಿಯ ಬಿಎಲ್‌ಡಿಇಎ ಕಲಾ ಕಾಲೇಜಿನಿಂದ ಬಿಎ ಪದವಿ ಪಡೆದರು. ಎಲ್‌ಎಲ್‌ಬಿ ಅಧ್ಯಯನ ಮಾಡಿದ್ದು ಬಾಗಲಕೋಟೆಯ ಎಸ್‌ ಸಿ ನಂದಿಮಠ ಕಾನೂನು ಕಾಲೇಜಿನಲ್ಲಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಎಂ ಪದವಿ ಪಡೆದಿರುವ ಅವರು 2008ರಲ್ಲಿ ನ್ಯಾಯಾಂಗ ಸೇವೆ ಆರಂಭಿಸಿದರು. ಗದಗ, ಕೊಪ್ಪಳ ಹಾಗೂ ರೋಣದಲ್ಲಿ ಸಿವಿಲ್‌ ನ್ಯಾಯಾಧೀಶೆ ಮತ್ತು ಜೆಎಂಎಫ್‌ಸಿ ಆಗಿ ಸೇವೆ ಸಲ್ಲಿಸಿದರು. 2015ರಲ್ಲಿ ಪದೋನ್ನತಿ ಪಡೆದ ಅವರು ಮುದ್ದೆಬಿಹಾಳದ ಹಿರಿಯ ಸಿವಿಲ್‌ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಉಡುಪಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

ಕೊರೊನಾ ಸಾಂಕ್ರಾಮಿಕ ರೋಗ ಉಲ್ಬಣಗೊಂಡಿರುವ ಸಂದರ್ಭದಲ್ಲಿ ಉಡುಪಿ, ದಕ್ಷಿಣ ಕನ್ನಡದಂತಹ ನಗರಗಳಲ್ಲಿ ಇ- ಫೈಲಿಂಗ್‌, ವರ್ಚುವಲ್‌ ಕಲಾಪಗಳ ಮಹತ್ವ ಏನು ಎಂಬುದರ ಬಗ್ಗೆ ಕಾನೂನು ಜಾಗೃತಿ ಮೂಡಿಸುವ ಉದ್ದೇಶದಿಂದ ʼಬಾರ್‌ ಅಂಡ್‌ ಬೆಂಚ್‌ʼ ಜೊತೆ ಅವರು ಮಾತನಾಡಿದ್ದಾರೆ. ಇ- ಕಲಿಕೆಗೆ ನ್ಯಾಯಾಂಗ ಲೋಕದ ಸ್ಪಂದನೆ. ನ್ಯಾಯಾಂಗ ಡಿಜಿಟಲ್‌ ಯುಗಕ್ಕೆ ಒಗ್ಗಿಕೊಂಡ ರೀತಿ, ಪ್ರಕರಣಗಳ ಡಿಜಿಟಲೀಕರಣ, ಇ- ಅದಾಲತ್‌, ಜಾಲ ಕಲಾಪಗಳ ಭವಿಷ್ಯ ಮುಂತಾದ ವಿಚಾರಗಳ ಕುರಿತಂತೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಕೋವಿಡ್‌ ಸಂದರ್ಭದಲ್ಲಿ ಇ- ಫೈಲಿಂಗ್‌ ಜನಸಾಮಾನ್ಯರಿಗೆ ಹೇಗೆ ವರದಾನವಾಗಿದೆ?

ಸಾಂಕ್ರಾಮಿಕ ರೋಗ ಹರಡಿರುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಜನ ಗುಂಪುಗೂಡುವುದನ್ನು ತಡೆಯುವುದು ತಕ್ಷಣದ ಅಗತ್ಯ. ಇ- ಫೈಲಿಂಗ್‌ ಸೌಲಭ್ಯದಿಂದಾಗಿ ವಕೀಲರು ಮತ್ತು ಕಕ್ಷೀದಾರರು ಭೌತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕಿಲ್ಲ. ಇದರಿಂದ ಹಣ ಮತ್ತು ಸಮಯ ಎರಡೂ ಉಳಿತಾಯವಾಗುತ್ತದೆ.

ಇ- ಫೈಲಿಂಗ್‌ ನ್ಯಾಯಾಂಗ ಆಡಳಿತಕ್ಕೆ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ?

ನ್ಯಾಯಾಂಗ ಆಡಳಿತದ ದಕ್ಷತೆ ಹೆಚ್ಚಿದೆ. ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಪ್ರಮಾಣ ವೃದ್ಧಿಸಿದೆ. ಇ- ಫೈಲಿಂಗ್ ಕಾರಣಕ್ಕೆ ಮಾಹಿತಿ ಸುಲಭವಾಗಿ ಲಭಿಸುತ್ತಿದೆ.

ಪ್ರಕರಣಗಳ ದಾಖಲೆ ಸಂಗ್ರಹ ಕಾರ್ಯ ಕೂಡ ಡಿಜಿಟಲ್‌ ಸ್ವರೂಪದಲ್ಲಿ ನಡೆಯುತ್ತಿದೆಯೇ?

ಹೌದು. ಇ- ಫೈಲಿಂಗ್ ವೇಳೆ ಪಿಡಿಎಫ್‌ನಲ್ಲಿ ದಾಖಲೆಗಳನ್ನು ಸಲ್ಲಿಸುವುದು ಕೂಡ ಇದರಲ್ಲಿ ಸೇರಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ನ್ಯಾಯಾಂಗ ಹೆಚ್ಚು- ಹೆಚ್ಚು ಡಿಜಿಟಲ್‌ ಲೋಕದ ಕಡೆಗೆ ವಾಲಿದೆ. ತಾವು ಗಮನಿಸಿದಂತೆ ಏನೆಲ್ಲಾ ಬದಲಾವಣೆಗಳಾಗಿವೆ?

ನ್ಯಾಯಾಂಗ ಕೇವಲ ತಂತ್ರಜ್ಞಾನವನ್ನಷ್ಟೇ ಅಳವಡಿಸಿಕೊಂಡಿಲ್ಲ, ಬದಲಿಗೆ ವರ್ಚುವಲ್ ಕೋರ್ಟ್‌ಗಳು, ಇ ಕೋರ್ಟ್‌ಗಳಂತಹ ತನ್ನದೇ ಆದ ತಾಂತ್ರಿಕ ಮಾದರಿಗಳ ಕಾರಣಕ್ಕೆ ಇಂದು ಆದೇಶಗಳು ಮತ್ತು ತೀರ್ಪುಗಳು ಆನ್‌ಲೈನ್‌ನಲ್ಲಿ ಲಭಿಸುವಂತಾಗಿದೆ.

ವರ್ಚುವಲ್‌ ಕಲಾಪ ನಡೆಸಲು ಜಿಲ್ಲಾಮಟ್ಟದಲ್ಲಿ ಹೇಗೆ ತರಬೇತಿ ನೀಡಲಾಗುತ್ತಿದೆ?

ನ್ಯಾಯಾಧೀಶರು, ಸಿಬ್ಬಂದಿ ಮತ್ತು ವಕೀಲರಿಗೆ ಕರ್ನಾಟಕದ ಗೌರವಾನ್ವಿತ ಹೈಕೋರ್ಟ್ ತನ್ನ ಮಾಸ್ಟರ್‌ ತರಬೇತುದಾರರು ಮತ್ತು ಜಿಲ್ಲಾ ನ್ಯಾಯಾಲಯದ ಕಂಪ್ಯೂಟರ್ ತಂತ್ರಜ್ಞರ ಮೂಲಕ ನಿಯಮಿತವಾಗಿ ತರಬೇತಿ ನೀಡುತ್ತಿದೆ. ಇ- ಫೈಲಿಂಗ್‌ಗೆ ಅವಕಾಶ ನೀಡಲು ಮತ್ತು ವೀಡಿಯೊ ಕಲಾಪ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಗೌರವಾನ್ವಿತ ಉಚ್ಚ ನ್ಯಾಯಾಲಯ ವೀಡಿಯೊ ಕಾನ್ಫರೆನ್ಸಿಂಗ್‌ ನಿಯಮಾವಳಿಗಳನ್ನು ರೂಪಿಸಿ, ಸರ್ಕಾರದ ಗೆಜೆಟ್‌ನಲ್ಲಿ ಪ್ರಕಟಿಸಿದೆ.

ಎಷ್ಟು ಮಂದಿ ಇದುವರೆಗೆ ತರಬೇತಿ ಪಡೆದಿದ್ದಾರೆ. ಇನ್ನೂ ಎಷ್ಟು ಮಂದಿ ತರಬೇತಿ ಪಡೆಯಬೇಕಿದೆ?

ಎಲ್ಲಾ ನ್ಯಾಯಾಧೀಶರು ಮತ್ತು ನ್ಯಾಯಾಲಯದ ಸಿಬ್ಬಂದಿ ಇ- ಫೈಲಿಂಗ್‌ಗಾಗಿ ತರಬೇತಿ ಪಡೆದಿದ್ದಾರೆ. ಉಡುಪಿಯಲ್ಲಿ ಈವರೆಗೆ 60 ವಕೀಲರಿಗೆ ತರಬೇತಿ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ ಇ- ತರಬೇತಿಗೆ ಚಾಲನೆ ನೀಡಲಾಗಿದೆ.

ಉಡುಪಿಯಂತಹ ಪುಟ್ಟ ನಗರಗಳಲ್ಲಿ ಜಾಲ ಕಲಾಪ (ವರ್ಚುವಲ್‌ ಹಿಯರಿಂಗ್‌) ನಡೆಸಲು ಇರುವ ಸವಾಲುಗಳು ಏನು?

ವರ್ಚುವಲ್ ಹಿಯರಿಂಗ್ ಇದೆ ಎಂಬ ಬಗ್ಗೆ ಸಾರ್ವಜನಿಕರಿಗೆ ಅರಿವು ಇಲ್ಲ. ವರ್ಚುವಲ್ ಹಿಯರಿಂಗ್ / ಇ- ಫೈಲಿಂಗ್‌ ಪ್ರಯೋಜನಗಳನ್ನು ಸಾಮಾನ್ಯ ಜನರಿಗೆ ತಿಳಿಸಬೇಕಿದೆ.

ವರ್ಚುವಲ್‌ ಕಲಾಪ ಕುರಿತಂತೆ ಪ್ರತಿಕ್ರಿಯೆ ಹೇಗಿದೆ?

ಚೆನ್ನಾಗಿದೆ. ಕರ್ನಾಟಕದಾದ್ಯಂತ ಕಳೆದ ಸೆ. 19ರಂದು ಇ- ಲೋಕ್ ಅದಾಲತ್ ಕೂಡ ನಡೆಯಿತು, ಅಲ್ಲಿ ಒಟ್ಟು 1,14,277 ವಿವಿಧ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಉಡುಪಿ ವಿಭಾಗದಲ್ಲಿ ಒಟ್ಟು 1,784 ಪ್ರಕರಣಗಳು ಇತ್ಯರ್ಥಗೊಂಡಿವೆ.

ತಾಂತ್ರಿಕ ಸಮಸ್ಯೆಗಳು ದೊಡ್ಡ ಸವಾಲೇ ಅಥವಾ ನ್ಯಾಯಾಂಗ ವಲಯಕ್ಕೆ ಇ- ಶಿಕ್ಷಣ ನೀಡುವುದು ದೊಡ್ಡ ಸವಾಲೇ?

ಎರಡೂ ಸವಾಲುಗಳಲ್ಲ, ಆದರೆ ಅವೆರಡೂ ಮೈಲಿಗಲ್ಲುಗಳು. ಜಾಲ- ಸಂಪರ್ಕ ಎಂಬುದು ಪರಿಹರಿಸಬಹುದಾದ ಸಮಸ್ಯೆ. ನ್ಯಾಯಾಧೀಶರು ಮತ್ತು ಸಿಬ್ಬಂದಿಗೆ ಇ- ಫೈಲಿಂಗ್ ಬಗ್ಗೆ ಅರಿವು ಮತ್ತು ತರಬೇತಿ ನೀಡುವುದು ಕಡ್ಡಾಯವಾಗಿದೆ. ವಕೀಲರು ಸಹ ಇ- ಫೈಲಿಂಗ್ ಬಗ್ಗೆ ಕಲಿಯಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.

ಇ- ಶಿಕ್ಷಣ ಒದಗಿಸಲು ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟಿನ ಇ- ಸಮಿತಿಗಳು ಏನೆಲ್ಲಾ ಕ್ರಮ ಕೈಗೊಂಡಿವೆ?

ಮಾನ್ಯ ಸುಪ್ರೀಂ ಕೋರ್ಟ್ ಮತ್ತು ಮಾನ್ಯ ಹೈಕೋರ್ಟ್‌ಗಳಲ್ಲಿ ಇ- ಸಮಿತಿ ರಚಿಸಲಾಗಿದೆ. ನ್ಯಾಯಾಧೀಶರು, ಸಿಬ್ಬಂದಿ ಮತ್ತು ವಕೀಲರಿಗೆ ತರಬೇತಿ ನಿಗದಿಪಡಿಸಲಾಗಿದೆ. ಜಾಲತಾಣದಲ್ಲಿ ಮಾಹಿತಿ ಸಾಮಗ್ರಿಗಳು, ವಿಡಿಯೋ ಮಾಹಿತಿ ಲಭ್ಯವಿದೆ. ಕೆಲವು ಜಿಲ್ಲೆ / ತಾಲ್ಲೂಕುಗಳಲ್ಲಿ ಇ- ಫೈಲಿಂಗ್‌ಗೆ ಅನುಕೂಲವಾಗುವಂತೆ ಇ- ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ e-courts.gov.in ಸಂಪರ್ಕಿಸಬಹುದು.

ಭವಿಷ್ಯದಲ್ಲಿ ಜಾಲ ಕಲಾಪಗಳು ಶಾಶ್ವತವಾಗಲಿವೆಯೇ?

ಹೌದು. ಏಕೆಂದರೆ ಮುಂದಿನ ಪೀಳಿಗೆ ತಂತ್ರಜ್ಞಾನದ ಜೊತೆಗೆ ಅಥವಾ ಅದನ್ನು ಆಧರಿಸಿಯೇ ಬದುಕಲಿದೆ.