ಸಂದರ್ಶನಗಳು

[ಅನುಸಂಧಾನ] ಕಾನೂನು ಹಾಗೂ ಸಾಹಿತ್ಯ ಲೋಕದ ಗುರಿ ಒಂದೇ, ಅದು ಸಮಾಜ ಸುಧಾರಣೆ: ಹಿರಿಯ ವಿಮರ್ಶಕ ಡಾ. ಸಿ ಎನ್ ರಾಮಚಂದ್ರನ್

Ramesh DK

ಕನ್ನಡದ ಹಿರಿಯ ವಿಮರ್ಶಕ ಡಾ. ಸಿ ಎನ್‌ ರಾಮಚಂದ್ರನ್‌ ಅವರನ್ನು ಕುರಿತು ಪ್ರಸಿದ್ಧ ನ್ಯಾಯವಾದಿ ಮತ್ತು ಲೇಖಕಿ ಹೇಮಲತಾ ಮಹಿಷಿ ಅವರು ಹೇಳಿದ ಮಾತೊಂದು ಹೀಗಿದೆ: “ಕಾನೂನಿಗೂ ಸಾಹಿತ್ಯ ವಿಮರ್ಶೆಗೂ ಎತ್ತಣಿಂದೆತ್ತಣ ಸಂಬಂಧವಯ್ಯ ಎಂದು ವಿಸ್ಮಯವಾಗಿದ್ದು ನಿಜ… ಅವರಿಗೆ ಕಾನೂನಿನ ಡಿಗ್ರಿಯೂ ಇರುವುದು ತಿಳಿಯಿತು…”

ಡಾ. ಸಿ ಎನ್‌ ಆರ್‌ ಎಂದರೆ ಹಾಗೆ. ಹಲವು ಜ್ಞಾನಶಾಖೆಗಳ ಹೆಮ್ಮರ. ಇಂಗ್ಲಿಷ್‌, ಕನ್ನಡ, ಸಂಸ್ಕೃತ, ಸೃಜನಶೀಲ ಬರಹ, ಅಧ್ಯಾಪನ, ವಿಮರ್ಶೆ, ಕಾನೂನು ಹೀಗೆ ಅವರು ಚಾಚಿಕೊಂಡ ಬಗೆ ಅಚ್ಚರಿ ಹುಟ್ಟಿಸುವಂತಹುದು. ವೃತ್ತಿಯ ಕಾರಣಕ್ಕೆ ಬದುಕಿನ ಬಹುಕಾಲವನ್ನು ವಿದೇಶದಲ್ಲಿ ಕಳೆದ ಅವರ ಧ್ಯಾನವೆಲ್ಲಾ ಕನ್ನಡದತ್ತ. ಹೆಚ್ಚಾಗಿ ವಿಮರ್ಶಾ ಕೃತಿಗಳನ್ನು ಹೊರತಂದಿರುವ ಅವರು ಸೃಜನಶೀಲ ಕ್ಷೇತ್ರಗಳಲ್ಲೂ ಪ್ರಯೋಗಗಳನ್ನು ಮಾಡಿದ್ದಾರೆ. ʼಆಖ್ಯಾನ- ವ್ಯಾಖ್ಯಾನʼ ʼಹೊಸಮಡಿಯ ಮೇಲೆ ಚದುರಂಗʼ , ʼಭಾಷಾಂತರ: ಸೈದ್ಧಾಂತಿಕ ಹಾಗೂ ಆನ್ವಯಿಕ ನೆಲೆಗಳುʼ, ಇಂಗ್ಲಿಷ್‌ ಹಾಗೂ ಕನ್ನಡ ಎರಡರಲ್ಲೂ ಬರೆದ ʼಮಹಾತ್ಮ ಗಾಂಧಿ ಮತ್ತು ಕನ್ನಡ ಸಾಹಿತ್ಯʼ, ಲೇಖಕಿ ತ್ರಿವೇಣಿ ಅವರನ್ನು ಕುರಿತು ಬರೆದ ಗ್ರಂಥ ʼತ್ರಿವೇಣಿʼ, ʼಎಡ್ವರ್ಡ್‌ ಸೈದ್‌ʼ, ʼಗಿರೀಶ ಕಾರ್ನಾಡರ ಚಾರಿತ್ರಿಕ ನಾಟಕಗಳುʼ, ʼಮಹಿಳೆ ಮತ್ತು ಭಾರತೀಯ ಕಾನೂನುʼ ʼಪರಂಪರೆ ಪ್ರತಿರೋಧʼ, ಡಾ. ಬಿ ಎ ವಿವೇಕ ರೈ ಅವರೊಡಗೂಡಿ ರಚಿಸಿದ ‘Classical Kannada Poetry and Prose: A reader’, ಇವು ಅವರ ಪ್ರಮುಖ ಕೃತಿಗಳು. ಆತ್ಮಕಥಾನಕ ʼನೆರಳುಗಳ ಬೆನ್ನು ಹತ್ತಿʼ . ʼಆಖ್ಯಾನ- ವ್ಯಾಖ್ಯಾನʼ ಕೃತಿಗೆ 2013ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ. ಅಲ್ಲದೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೌರೀಶ ಕಾಯ್ಕಿಣಿ ಪ್ರಶಸ್ತಿ, ಇನಾಂದಾರ್‌ ಪ್ರಶಸ್ತಿ ವರ್ಧಮಾನ ಪುರಸ್ಕಾರಗಳಿಗೂ ಅವರು ಭಾಜನರಾಗಿದ್ದಾರೆ.

“ತುಂಬಾ ಪ್ರಭಾವ ಬೀರಿದೆ ಎಂದುಕೊಂಡ ಸಂಗತಿಯೊಂದು ಬದುಕಿನಲ್ಲಿ ಏನೇನೂ ಪ್ರಭಾವ ಬೀರದೇ ಇರಬಹುದು. ಹಾಗೆಯೇ ಪ್ರಭಾವ ಬೀರಿಲ್ಲ ಎಂದುಕೊಂಡ ವಿಚಾರ ಸಾಕಷ್ಟು ಪ್ರಭಾವಿಸಿರಬಹುದು” ಎನ್ನುವ ಡಾ. ಸಿ ಎನ್‌ ಆರ್‌ ತಾವು ಕಂಡ ಕಾನೂನು ಲೋಕ ಕುರಿತಂತೆ ʼಬಾರ್‌ ಅಂಡ್‌ ಬೆಂಚ್‌ʼ ಜೊತೆ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಕಾನೂನು ಶಿಕ್ಷಣ ಅಧ್ಯಯನ ಮಾಡಬೇಕು ಎಂದು ನಿಮಗೆ ಅನಿಸಲು ಕಾರಣವೇನು?

ಕಾಲೇಜು ಓದುತ್ತಿದ್ದ ದಿನಗಳಿಂದಲೇ ನಾನು ವಕೀಲರು, ನ್ಯಾಯಾಧೀಶರ ಆತ್ಮಕತೆಗಳನ್ನು ಓದುತ್ತಿದ್ದೆ. ಶೆರಿಡನ್‌, ಕಾಂಗ್ರೀವ್‌, ವಾರನ್‌ ಹೇಸ್ಟೀಂಗ್ಸ್‌, ಎಂ ಸಿ ಚಾವ್ಲಾ ಅವರ ಬದುಕಿನ ಕತೆಗಳು ಕುತೂಹಲ ಹುಟ್ಟಿಸುತ್ತಿದ್ದವು. ಬಹುದೀರ್ಘ ಕಾಲ ನಡೆದಿದ್ದ ವಾರನ್‌ ಹೇಸ್ಟಿಂಗ್ಸ್‌ ವಿಚಾರಣೆಯನ್ನು ಆಸಕ್ತಿಯಿಂದ ಓದಿದ್ದೆ.

ಆದರೆ ಇಂಗ್ಲಿಷ್‌ ಅಧ್ಯಾಪಕನಾಗಿ ಹತ್ತರಿಂದ ಹದಿನೈದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರವಷ್ಟೇ ಕಾನೂನು ಅಧ್ಯಯನ ಮಾಡಲು ನನಗೆ ಸಾಧ್ಯವಾಯಿತು. ಆ ವಯಸ್ಸಿನಲ್ಲಿ ವಕೀಲ ವೃತ್ತಿಯಲ್ಲಿ ತೊಡಗುವುದು ಸರಿಯಲ್ಲ ಎನಿಸಿತು. ಆದರೆ ಕಾನೂನು ಅಧ್ಯಯನ, ನ್ಯಾಯಿಕ ಲೋಕವನ್ನು ಇನ್ನಷ್ಟು ಹತ್ತಿರಕ್ಕೆ ತಂದಿತು. ಈಗಲೂ ಸುಪ್ರೀಂಕೋರ್ಟ್‌ನ ಮಹತ್ವದ ತೀರ್ಪುಗಳು ಬಂದರೆ ಅದನ್ನು ಕೂಲಂಕಷವಾಗಿ ಅಧ್ಯಯನ ಮಾಡುತ್ತೇನೆ. ಅದರ ಸಾಧಕ- ಬಾಧಕಗಳ ಕುರಿತು ನನ್ನದೇ ಆದ ಟಿಪ್ಪಣಿ ಬರೆದಿಟ್ಟುಕೊಳ್ಳುತ್ತೇನೆ.

ಕಾನೂನು ಅಧ್ಯಯನದ ವೇಳೆ ನಿಮ್ಮ ಮೇಲೆ ಗಾಢವಾಗಿ ಪ್ರಭಾವ ಬೀರಿದ ಸಂಗತಿಗಳು ಯಾವುವು?

ನನ್ನ ಗುರುಗಳಾಗಿದ್ದ ಪ್ರೊ. ಸಿ ಡಿ ನರಸಿಂಹಯ್ಯ, ಹಿರಿಯರಾದ ಡಾ. ಯು ಆರ್‌ ಅನಂತಮೂರ್ತಿ ಹಾಗೂ ನಮ್ಮ ತಂದೆಯವರು ನನ್ನ ಮೇಲೆ ಗಾಢ ಪ್ರಭಾವ ಬೀರಿದ್ದರು. ನರಸಿಂಹಯ್ಯನವರು ʼಸಾಹಿತ್ಯವನ್ನು ಹೇಗೆ ಬದುಕಬೇಕುʼ ಎಂದು ಕಲಿಸಿದರು. ಮೇಷ್ಟರಲ್ಲದವರಲ್ಲಿ ಅನಂತಮೂರ್ತಿಯವರ ವಿಗ್ರಹ ಭಂಜಕತನ ನನ್ನನ್ನು ಸೆಳೆದಿತ್ತು. ನಾನು ಹೇಳಿದ್ದು ಐವತ್ತರ ದಶಕದ ಮಾತು, ನಂತರ ಅವರು ಬದಲಾದರು ಬಿಡಿ. ಅಲ್ಲದೆ ನನ್ನ ತಂದೆಯವರು ಸಂಸ್ಕೃತ ಮತ್ತು ಕನ್ನಡದ ದೊಡ್ಡ ವಿದ್ವಾಂಸರಾಗಿದ್ದರು.

ಇನ್ನು ಕಾನೂನು ವಿಷಯಕ್ಕೆ ಬಂದರೆ ಸಂವಿಧಾನ ಕಾನೂನು ನನ್ನನ್ನು ಅಪಾರವಾಗಿ ಪ್ರಭಾವಿಸಿದೆ. ಪರೀಕ್ಷೆಗಾಗಿ ಕಾನೂನು ಅಧ್ಯಯನ ಮಾಡಲಿಲ್ಲವಾದ್ದರಿಂದ ನನಗೆ ಹಲವು ಸಂಗತಿಗಳನ್ನು ತಿಳಿದುಕೊಳ್ಳಲು ಅನುಕೂಲವಾಯಿತು. ಭಾರತೀಯ ಸಂವಿಧಾನಕ್ಕೂ ಪ್ರಪಂಚದ ಉಳಿದ ಸಂವಿಧಾನಕ್ಕೂ ಇರುವ ಗುಣವಿಶೇಷಗಳ ತೌಲನಿಕ ಅಧ್ಯಯನ ಮಾಡಿದ್ದೇನೆ. ವಕೀಲರ ಬಗ್ಗೆ ಹೆಚ್ಚು ಓದಿದಂತೆಲ್ಲಾ ವಕೀಲ ವೃತ್ತಿಗೆ ಸೀಮಿತನಾಗಿಬಿಡುತ್ತೇನೆಂಬ ಕಾರಣಕ್ಕೆ ಆಗ ನನ್ನ ಮನಸ್ಸು ಬಹುಶಃ ವಕೀಲನಾಗದೇ ಅಧ್ಯಾಪಕನಾಗಿಯೇ ಉಳಿಯಲು ಪ್ರೇರೇಪಿಸಿತು ಎಂದು ಈಗ ಅನ್ನಿಸುತ್ತದೆ.

ಮೈಸೂರು ವಿಶ್ವವಿದ್ಯಾಲಯದಿಂದ ಮಯಾಮಿ ವಿಶ್ವವಿದ್ಯಾಲಯದವರೆಗಿನ ನಿಮ್ಮ ಯಾನದ ಬಗ್ಗೆ ತಿಳಿಸಿ…

ನಾನು ಎಂ ಎ ಓದಿದ್ದು 1957-58ನೇ ಇಸವಿಯಲ್ಲಿ. ಮಹಾರಾಜಾ ಕಾಲೇಜಿನಲ್ಲಿ ಒಂದು ಪರಂಪರೆ ಇತ್ತು. ಇಂಗ್ಲಿಷ್‌ ಆನರ್ಸ್‌ ಓದಿದ ವಿದ್ಯಾರ್ಥಿಗಳು ಅಮೆರಿಕ ಇಂಗ್ಲೆಂಡಿಗೆ ತೆರಳಿ ಉನ್ನತ ಅಧ್ಯಯನ ಕೈಗೊಳ್ಳುವುದೇ ಆ ಕಾಲದ ಒಂದು ಪರಂಪರೆ. ಪ್ರೊ. ಸಿ ಡಿ ನರಸಿಂಹಯ್ಯ, ಅಣ್ಣೇಗೌಡ, ಡಾ. ಯು ಆರ್‌ ಅನಂತಮೂರ್ತಿ, ಎ ಕೆ ರಾಮಾನುಜನ್‌ ಅವರೆಲ್ಲಾ ಅದೇ ಹಾದಿ ತುಳಿದಿದ್ದರು.

ಮಯಾಮಿ ವಿಶ್ವವಿದ್ಯಾಲಯದಲ್ಲಿ ಪಿಎಚ್‌ ಡಿ ಅಧ್ಯಯನ ಮಾಡಲೆಂದು ಸೇರಿದೆ. ಆದರೆ ಅವರು ಕೇಳಿದಷ್ಟು ಶುಲ್ಕ ಕಟ್ಟಲು ನನ್ನ ಬಳಿ ಹಣ ಇರಲಿಲ್ಲ. ಅಸಿಸ್ಟೆಂಟ್‌‌ ಗ್ರಾಜ್ಯುಯೇಟ್‌ ಆಗಿ ಸೇರಿಕೊಂಡರೆ ಅಲ್ಲಿ ಅರೆಕಾಲಿಕ ಉಪನ್ಯಾಸಕನಾಗಿ ಕೆಲಸ ಮಾಡುತ್ತಾ ಓದು ಮುಂದುವರೆಸಬಹುದಿತ್ತು. ಮಯಾಮಿ ವಿವಿಯವರು ನನಗೆ ಅಸಿಸ್ಟೆನ್ಸ್‌ಶಿಪ್‌ ಕೊಟ್ಟರು. ನನ್ನ ವ್ಯಾಸಂಗ ಮುಂದುವರೆಯಿತು.

ಅಲ್ಲಿಂದ ಮುಂದೆ ಅಮೆರಿಕ, ಸೌದಿ ಅರೇಬಿಯಾ, ಸೊಮಾಲಿಯಾಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತೀರಿ. ಅಲ್ಲಿನ ಅನುಭವಗಳು ಹೇಗಿದ್ದವು?

ಸೊಮಾಲಿಯಾಕ್ಕೆ ತೆರಳುವ ಉತ್ಸಾಹದಲ್ಲಿ ನಾನಿದ್ದೆ. ಶಿವಾಜಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ನನಗೆ ಬೀಳ್ಕೊಡುಗೆ ಕಾರ್ಯಕ್ರಮ ಇರಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಪೂನಾ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಡಿ ಎಸ್‌ ನಾಗರಾಜನ್‌ ಎಂಬ ಬಹುದೊಡ್ಡ ವಿದ್ವಾಂಸರಲ್ಲಿ ಸೊಮಾಲಿಯಾಕ್ಕೆ ತೆರಳುತ್ತಿರುವ ಬಗ್ಗೆ ಹೇಳಿದೆ. ಅವರು “ಸೊಮಾಲಿಯಾ ಎಲ್ಲಿದೆ? ಅಲ್ಲಿ ಇರುವ ಜನಾಂಗ ಯಾವುದು? ಅವರಾಡುವ ಭಾಷೆ ಯಾವುದು?” ಎಂದೆಲ್ಲಾ ಪ್ರಶ್ನಿಸಿದರು. ನಾನು “ಅದೆಲ್ಲಾ ಗೊತ್ತಿಲ್ಲ” ಎಂದು ಹೆದರಿಕೆಯಿಂದ ಅವರನ್ನೇ ನೋಡುತ್ತಿದ್ದೆ. ಆಗ ಅವರು “ನೀನು ಅಲ್ಲಿಗೆ ಹೋಗುತ್ತಿಲ್ಲ. ಬದಲಿಗೆ ಇಲ್ಲಿಂದ ಓಡಿ ಹೋಗುತ್ತಿದ್ದೀಯಾ” ಎಂದು ಹೇಳಿದರು.

ನನಗೆ ತೃಪ್ತಿಯಿಂದ ಒಂದು ಕಡೆ ಇರಲು ಸಾಧ್ಯವಾಗುತ್ತಿರಲಿಲ್ಲ. “I was running away from one place to another”. ಆದರೆ ಈ ಅಲೆದಾಟ ಒಳ್ಳೆಯ ಅನುಭವಗಳನ್ನು ನೀಡಿತು. ಪ್ರಪಂಚದ ವಿವಿಧ ಜನಾಂಗಗಳ ಜನರ ಜೊತೆ ನೇರವಾಗಿ ಒಡನಾಡುವ, ಅವರ ಸಂಸ್ಕೃತಿಯನ್ನು ಹತ್ತಿರದಿಂದ ತಿಳಿಯುವ ಅವಕಾಶ ದೊರೆಯಿತು. ಅಮೆರಿಕದಲ್ಲಿರುವವರು ಬಿಳಿಯ ಜನಾಂಗದವನಲ್ಲ ಎಂದು ತೆಗಳದೆ ನನ್ನ ಪಾಠಗಳನ್ನು ಕೇಳುತ್ತಿದ್ದರು. ಸೌದಿ ಅರೇಬಿಯಾಆದ ವಿದ್ಯಾರ್ಥಿಗಳು ನನ್ನನ್ನು ಕಾಫಿರನೆಂದು ಪರಿಗಣಿಸದೆ ಗೌರವಿಸುತ್ತಿದ್ದರು. ಅದೆಲ್ಲಾ ಒಂದು ರೀತಿಯಲ್ಲಿ ಅಪೂರ್ವ ಅನುಭವ.

ಇಂಗ್ಲಿಷಿನ ದೊಡ್ಡ ವಿದ್ವತ್ತು ನಿಮಗಿದೆ. ಆದರೂ ಕನ್ನಡದಲ್ಲಿಯೇ ಬರೆಯಬೇಕೆಂಬ ತುಡಿತಕ್ಕೆ ಕಾರಣವೇನು?

ಮೊದಲೇ ತಿಳಿಸಿದಂತೆ ನಮ್ಮ ತಂದೆ ಕನ್ನಡ, ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯ ಪಡೆದಿದ್ದರು. ಇಡೀ ಕುಟುಂಬ ಓದುವಿಕೆ, ಶಿಕ್ಷಣದಲ್ಲಿ ತಲ್ಲೀನವಾಗಿರುತ್ತಿತ್ತು. ನನ್ನೂರು ಚಿಲ್ಕುಂದದಲ್ಲಿ ಪ್ರಾಚೀನ ಕನ್ನಡ ಕಾವ್ಯವನ್ನು ಓದುವ ಪರಿಪಾಠ ಇತ್ತು. ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ರಾಜಶೇಖರ ವಿಳಾಸದಂತಹ ಕೃತಿಗಳನ್ನು ರಾಗವಾಗಿ ಓದುತ್ತಿದ್ದರು. ವಿದ್ವಾಂಸರು ಅರ್ಥಗಳನ್ನು ವಿವರಿಸುತ್ತಿದ್ದರು.

ನಾನು ಕಾಲೇಜಿಗೆ ಬರುವ ಹೊತ್ತಿಗೆ ಕನ್ನಡದಲ್ಲಿ ಕಾದಂಬರಿ ಯುಗ ಆರಂಭವಾಗಿತ್ತು. ಅನಕೃ ಅವರನ್ನು ಓದಿಕೊಳ್ಳುತ್ತಿದ್ದೆ. ಡಾ. ಎಂ ಗೋಪಾಲಕೃಷ್ಣ ಅಡಿಗರು ಹೊಸ ರೀತಿಯಲ್ಲಿ ಕಾವ್ಯ ಪ್ರಯೋಗದಲ್ಲಿ ತೊಡಗಿದ್ದರು. ನಾನು ಓದಿದ್ದೆಲ್ಲಾ ಕನ್ನಡ ಸಾಹಿತ್ಯವೇ. ಹೀಗೆ ಕಾಲದ ಸಾಂಸ್ಕೃತಿಕ ವಾತಾವರಣ ನನ್ನ ಕನ್ನಡ ಸಾಹಿತ್ಯ ತುಡಿತಕ್ಕೆ ಪ್ರೇರಣೆಯಾಗಿತ್ತು.

ಸಾಹಿತ್ಯದಲ್ಲಿ ವಿಮರ್ಶಾ ಕ್ಷೇತ್ರವನ್ನೇ ಆಯ್ದುಕೊಂಡ ಹಿನ್ನೆಲೆ ಏನು?

ವಿಮರ್ಶೆ ಯಾತಕ್ಕೆ ಹಿಡಿಸಿತು ಎಂದು ಹೇಳುವುದು ಕಷ್ಟ. 1983- 84ನೇ ಇಸವಿ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದೆ. ಚದುರಂಗರ ಕೃತಿಯೊಂದರ ಮೇಲೆ ದೀರ್ಘ ವಿಮರ್ಶಾ ಲೇಖನ ಬರೆದಿದ್ದೆ. ಇದನ್ನು ಗಮನಿಸಿದ ಶ್ರೀನಿವಾಸ ಹಾವನೂರರು, ಡಾ. ವಿವೇಕ ರೈ ಅವರು ತುಂಬಾ ಓದಿಕೊಂಡಿದ್ದೀರಿ, ನೀವೇಕೆ ಬರೆಯಬಾರದು ಎಂದು ಒತ್ತಾಯಿಸಿದರು. ಕನ್ನಡದ ಮೊದಲ ಕಾದಂಬರಿಗಳ ಭಿನ್ನ ನಿಲುವಿನ ವಿಶ್ಲೇಷಣೆ ನಿಮ್ಮದು ಎಂದರು. ನಾನು ವಿಮರ್ಶಕನಾಗುತ್ತೇನೆ ಎಂದು ಮಂಗಳೂರು ವಿವಿಗೆ ಬರುವವರೆಗೂ ಅಂದುಕೊಂಡಿರಲಿಲ್ಲ.

ಸಿ ಎನ್‌ ಆರ್‌ ಕುರಿತು ವಿವಿಧ ಲೇಖಕರು ಬರೆದ ಕೃತಿಗಳು

ʼಮಹಿಳೆ ಮತ್ತು ಭಾರತೀಯ ಕಾನೂನುʼ. ಇದು ನ್ಯಾಯಲೋಕಕ್ಕೆ ಸಂಬಂಧಿಸಿದ ನಿಮ್ಮ ಕೃತಿ. ವಿಮರ್ಶಕನೊಬ್ಬ ಸಾಹಿತ್ಯದಾಚೆಗೂ ಹಬ್ಬುವ ಬಗೆ ಎಂತಹುದು?

ಹೆಚ್ಚಿನ ಜನರಲ್ಲಿ ಒಂದು ತಪ್ಪು ಗ್ರಹಿಕೆ ಇದೆ. ಅದು ವಿಮರ್ಶೆ ಇರುವುದು ಸಾಹಿತ್ಯ ಕೃತಿಗಳ ಮೌಲ್ಯ ನಿರ್ಣಯ ಮಾಡಲಿಕ್ಕೆ ಎಂಬುದು. ಪ್ರೊ, ಸಿ ಡಿ ಎನ್‌ ಅವರು ವಿಮರ್ಶೆಯನ್ನು ಒಂದು ಬಗೆಯ ಪ್ರಜ್ಞೆ ಎಂದು ಸದಾ ಹೇಳುತ್ತಿದ್ದರು. ಕಾನೂನು, ಸಮಾಜ, ರಾಜಕೀಯ ಕುರಿತೂ ವಿಮರ್ಶಿಸಲು ಸಾಧ್ಯವಿದೆ. ಏಕೆಂದರೆ ವಿಮರ್ಶೆ ಎಂಬುದು ಒಂದು ದೃಷ್ಟಿಕೋನ.

ವಿಮರ್ಶಾ ಪ್ರಜ್ಞೆಯ ಮೂಲಕ ಯಾವ ಕ್ಷೇತ್ರದ ವಿಶ್ಲೇಷಣೆಯನ್ನೂ ಮಾಡಲು ಸಾಧ್ಯ. ಅಂತಹ ಒಂದು ಯತ್ನ ʼಮಹಿಳೆ ಮತ್ತು ಭಾರತೀಯ ಕಾನೂನುʼ.

ಕಾನೂನಿನ ಜ್ಞಾನ ಮತ್ತು ವಿಮರ್ಶಾ ಪ್ರಜ್ಞೆ ನಿಮ್ಮನ್ನು ಪರಸ್ಪರ ಪ್ರಭಾವಿಸಿದ್ದು ಹೇಗೆ?

ಸಾಹಿತ್ಯ ಹಾಗೂ ಕಾನೂನಿನ ಮಾರ್ಗಗಳು ಬೇರೆ ಬೇರೆ ಇರಬಹುದು. ಆದರೆ ಅವುಗಳ ಗುರಿ ಒಂದೇ; ಸಮಾಜ ಸುಧಾರಣೆ ಅಥವಾ ಶ್ರೇಷ್ಟ ಸಮಾಜವೊಂದರ ನಿರ್ಮಾಣ. ಎರಡೂ ಕ್ಷೇತ್ರಗಳು ಬಳಸುವ ಭಾಷೆಯಲ್ಲಿ ವ್ಯತ್ಯಾಸ ಇದ್ದರೂ ಸಮಾಜವನ್ನು ನೋಡುವ ದೃಷ್ಟಿಕೋನ ಒಂದೇ ರೀತಿಯಾಗಿರುತ್ತದೆ.