R V Devaraj President, Ramanagar District Bar Association
ಸಂದರ್ಶನಗಳು

ಕೋವಿಡ್‌ ಸಾಂಕ್ರಾಮಿಕತೆಯು ವಕೀಲರ ಸಮುದಾಯವನ್ನು ಕಂಗೆಡಿಸಿದೆ: ಆರ್‌ ವಿ ದೇವರಾಜ್‌

"ಇಡೀ ರಾಮನಗರ ಜಿಲ್ಲೆಯ ಪ್ರತಿಯೊಬ್ಬ ವಕೀಲರೂ ವಾರ್ಷಿಕವಾಗಿ 2,000 ರೂಪಾಯಿ ಹಾಕಿ ನಮ್ಮದೇ ನಿಧಿ ಸೃಷ್ಟಿಸಿ, ಅದನ್ನು ಠೇವಣಿಯಲ್ಲಿಟ್ಟು ಸಂಕಷ್ಟದಲ್ಲಿ ಬಳಸುವ ನಿರ್ಧಾರ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಅದಕ್ಕೆ ಸ್ಪಷ್ಟ ರೂಪ ನೀಡಲಿದ್ದೇವೆ."

Siddesh M S

ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕೋವಿಡ್‌ ಕಾರಣದಿಂದಾಗಿ ಹೈರಾಣಾಗಿದ್ದ ವಕೀಲ ಸಮುದಾಯಕ್ಕೆ ಈಗ ನಿಧಾನವಾಗಿ ಭರವಸೆಯ ರೇಖೆಗಳು ಗೋಚರಿಸುತ್ತಿವೆ. ಸುಮಾರು ಒಂದು ವರ್ಷದ ಬಳಿಕ ಅಧೀನ ನ್ಯಾಯಾಲಯಗಳಲ್ಲಿ ಚಟುವಟಿಕೆಗಳು ಆರಂಭವಾಗಿದ್ದು, ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಗೋಚರಿಸಲಾರಂಭಿಸಿವೆ. ಈ ಮಧ್ಯೆ, ವಕೀಲರ ಸಮುದಾಯವು ಪೂರ್ಣ ಪ್ರಮಾಣದಲ್ಲಿ ನ್ಯಾಯಾಲಯದ ಚಟುವಟಿಕೆಗಳು ಆರಂಭವಾದರೆ ಮಾತ್ರ ಕೋವಿಡ್‌ ಸಂದರ್ಭದಲ್ಲಿ ಎದುರಿಸಿದ ಸಂಕೋಲೆಗಳಿಂದ ಬಿಡುಗಡೆ ಹೊಂದಲು ಸಾಧ್ಯ ಎನ್ನುವ ಮಾತುಗಳನ್ನು ಆಡುತ್ತಿದೆ.

ವರ್ಷದ ಹಿಂದೆ ಆರಂಭವಾದ ಬಿಗಿ ಲಾಕ್‌ಡೌನ್‌ ಮತ್ತು ಮಾರ್ಗಸೂಚಿ ನಿಯಮಗಳು ಇಡೀ ವಕೀಲರ ಸಮುದಾಯವನ್ನು ತಲ್ಲಣಗೊಳಿಸಿದ್ದು ನಿಜ. ಅಲ್ಲಿಂದ ಇಲ್ಲಿಯವರೆಗೆ ರಾಮನಗರ ಜಿಲ್ಲಾ ವಕೀಲರ ಸಂಘದ ಸದಸ್ಯರು ಅನುಭವಿಸಿದ ಸಂಕಷ್ಟಗಳು, ಸಿಕ್ಕ ನೆರವು ಮುಂತಾದ ವಿಚಾರಗಳ ಕುರಿತು ರಾಮನಗರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್‌ ವಿ ದೇವರಾಜ್‌ ಅವರು “ಬಾರ್‌ ಅಂಡ್‌ ಬೆಂಚ್‌” ಜೊತೆ ಮಾತನಾಡಿದ್ದಾರೆ.

ಕೋವಿಡ್‌ನಿಂದಾಗಿ ವಕೀಲರ ಸಮುದಾಯ ನಿಮ್ಮ ಜಿಲ್ಲೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಏನು?

ನ್ಯಾಯಾಲಯದ ಚಟುವಟಿಕೆಗಳು ಸ್ತಬ್ಧವಾಗಿದ್ದರಿಂದ ಇಡೀ ವಕೀಲ ಸಮುದಾಯಕ್ಕೆ ತೀವ್ರ ಸಮಸ್ಯೆಯಾಗಿದೆ. ಯುವ ವಕೀಲರ ಪರಿಸ್ಥಿತಿ ಹೇಳ ತೀರದಾಗಿದೆ. ನ್ಯಾಯಾಲಯದ ಚಟುವಟಿಕೆಗಳು ನಡೆದರಲ್ಲವೇ ಕಕ್ಷಿದಾರರು ಬರುವುದು? ಅವರು ಬಂದರಲ್ಲವೇ ವಕೀಲರಿಗೆ ಶುಲ್ಕ ಸಿಗುವುದು? ಲಾಕ್‌ಡೌನ್‌ ಮತ್ತು ಆನಂತರ ಬೆಳವಣಿಗೆಗಳಿಂದ ಎಲ್ಲದಕ್ಕೂ ಹೊಡೆತ ಬಿದ್ದಿದೆ. ವಕೀಲ ಸಮುದಾಯಕ್ಕೆ ಉದ್ಯೋಗ ಭದ್ರತೆಯೇ ಇಲ್ಲ. ಆಕಸ್ಮಿಕವಾಗಿ ವಕೀಲರು ತೀರಿಕೊಂಡರೆ ರಾಜ್ಯ ವಕೀಲರ ಪರಿಷತ್ತಿನಿಂದ ನಿರ್ದಿಷ್ಟ ಹಣ ಬರುತ್ತದೆ. ಅದನ್ನು ಬಿಟ್ಟರೆ ಏನೇನೂ ಇಲ್ಲ. ಕೋವಿಡ್‌ ಸಾಂಕ್ರಾಮಿಕತೆಯು ಸಮುದಾಯವನ್ನು ಕಂಗೆಡಿಸಿದೆ.

ಕೋವಿಡ್‌ನಿಂದ ಜಿಲ್ಲೆಯ ವಕೀಲ ಸಮುದಾಯದಲ್ಲಿ ಉಂಟಾದ ಸಾವುನೋವಿನ ಬಗ್ಗೆ ಮಾಹಿತಿ ನೀಡಬಹುದೇ?

ನಮ್ಮ ಸಂಘದ 10-12 ಮಂದಿ ಕೊರೊನಾ ಸೋಂಕು ತಗುಲಿ, ಗುಣಮುಖರಾಗಿದ್ದಾರೆ. ಆದರೆ, ಅವರಿಗೆ ಇದುವರೆವಿಗೂ ಯಾವುದೇ ತೆರನಾದ ಪರಿಹಾರ ಸಿಕ್ಕಿಲ್ಲ. ಇಲ್ಲಿನ ವಕೀಲ ಸಮುದಾಯದಲ್ಲಿ ಕೋವಿಡ್‌ನಿಂದ ಸಾವು ಸಂಭವಿಸಲಿಲ್ಲ.

ಕೋವಿಡ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ನಿಮ್ಮ ಸಂಘ ಯಾವ ತೆರನಾದ ನೆರವು ನೀಡಿದೆ?

ರಾಜ್ಯ ವಕೀಲರ ಪರಿಷತ್ತಿನಿಂದ ಸುಮಾರು 20 ಮಂದಿ ಯುವ ವಕೀಲರಿಗೆ ತಲಾ ಐದು ಸಾವಿರ ರೂಪಾಯಿ ದೊರೆತಿದೆ. ನಮ್ಮ ಸಂಘದ ಸದಸ್ಯರು ವೈಯಕ್ತಿಕ ಮಟ್ಟದಲ್ಲಿ ಕಿರಿಯ ವಕೀಲರಿಗೆ ತಮ್ಮ ಮಿತಿಯಲ್ಲಿ ಸಹಾಯ ಮಾಡಿದ್ದಾರೆ.

ಕೋವಿಡ್‌ ಸಂದರ್ಭದಲ್ಲಿ ನಮ್ಮ ವಕೀಲ ಸಮುದಾಯಕ್ಕೆ ನೆರವಾಗುವಂತೆ ಪ್ರಧಾನ ಮಂತ್ರಿಗಳಿಗೆ ನಮ್ಮ ಸಂಘದ ವತಿಯಿಂದ ಪತ್ರ ಬರೆದಿದ್ದೆವು. ಪ್ರಧಾನ ಮಂತ್ರಿ ಕಾರ್ಯಾಲಯವು ಆ ಪತ್ರವನ್ನು ರಾಜ್ಯ ಸರ್ಕಾರಕ್ಕೆ ವರ್ಗಾಯಿಸಿ ನೆರವಾಗುವಂತೆ ನಿರ್ದೇಶನ ನೀಡಿತ್ತು. ಪ್ರಧಾನಿಗೆ ಪತ್ರ ಬರೆದ ಎರಡೇ ದಿನಗಳಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕರೆ ಮಾಡಿ ನಮ್ಮ ಸಮಸ್ಯೆ ಆಲಿಸಿ, ವಿಧಾನಸಭೆಯಲ್ಲಿ ಪ್ರಸ್ತಾಪಿ, ಮುಖ್ಯಮಂತ್ರಿ ಗಮನಕ್ಕೆ ತಂದು ಹಣಕಾಸು ಇಲಾಖೆಯ ಜೊತೆ ಮಾತನಾಡುವುದಾಗಿ ಹೇಳಿದರು. ಆದರೆ, ಇದರಿಂದ ಏನೇನು ಆಗಲಿಲ್ಲ.

ವರ್ಚುವಲ್ ಕಲಾಪಗಳಿಂದ ನಿಮಗೆ ಏನಾದರೂ ಅನುಕೂಲವಾಗಿತ್ತೇ/ಆಗುತ್ತಿದೆಯೇ?

ವರ್ಚುವಲ್‌ ಕಲಾಪಕ್ಕೆ ಇಂಟರ್ನೆಟ್‌ ವ್ಯವಸ್ಥೆ ಅತ್ಯಗತ್ಯ. ಇದೇ ಅತಿದೊಡ್ಡ ಸಮಸ್ಯೆಯಾಗಿದೆ. ಕೆಲವು ವಕೀಲರ ಬಳಿ ಸ್ಮಾರ್ಟ್‌ಫೋನ್‌ಗಳಿಲ್ಲ. ಅದು ಇಲ್ಲವಾದರೆ ವರ್ಚುವಲ್‌ ಕಲಾಪದಲ್ಲಿ ಭಾಗವಹಿಸುವುದು ಹೇಗೆ? ವರ್ಚುವಲ್‌ ಕಲಾಪದಲ್ಲಿ ನ್ಯಾಯಾಲಯದ ಪಾವಿತ್ರ್ಯ ಕಾಪಾಡುವುದು ಕಷ್ಟ. ನಮ್ಮ ದೇಶದಲ್ಲಿ ಇನ್ನೂ ಸಾಕಷ್ಟು ಅವಿದ್ಯಾವಂತರಿದ್ದಾರೆ. ಇದು ನ್ಯಾಯದಾನಕ್ಕೆ ಸೂಕ್ತ ಎನಿಸುವುದಿಲ್ಲ.

ಭೌತಿಕ ನ್ಯಾಯಾಲಯದ ಚಟುವಟಿಕೆಗಳು ಆರಂಭವಾಗಿರುವುದರಿಂದ ಸಮಸ್ಯೆ ಕಡಿಮೆಯಾಗಿದೆ ಎನಿಸುತ್ತದೆಯೇ?

ಭೌತಿಕ ಚಟುವಟಿಕೆಗಳು ಆರಂಭವಾಗಿರುವುದರಿಂದ ಉಸಿರಾಡುವ ಸ್ಥಿತಿ ನಿರ್ಮಾಣವಾಗಿದೆ ಎನ್ನಬಹುದು. ಕೋವಿಡ್‌ ಉಲ್ಭಣಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಪ್ರಕರಣಗಳ ವಿಚಾರಣೆಯ ಸಂಖ್ಯೆಯನ್ನು ನಿರ್ದಿಷ್ಟಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ನಿಯಮಗಳನ್ನು ಇನ್ನಷ್ಟು ಸರಳಗೊಳಿಸಬಹುದು. ಆಗ ಪರಿಸ್ಥಿತಿ ಮತ್ತಷ್ಟು ಸುಧಾರಿಸುವ ಭರವಸೆ ಇದೆ.

ಕೋವಿಡ್‌ ವ್ಯಾಪಿಸಿದ್ದ ಸಂದರ್ಭದಲ್ಲಿ ಹಾಗೂ ಆ ಬಳಿಕ ವಕೀಲರ ಸಮುದಾಯದಲ್ಲಿ ಯಾವ ತೆರನಾದ ಚರ್ಚೆ ಇದೆ?

ಕೋವಿಡ್‌ ಸಂದರ್ಭದಲ್ಲಿ ಎಲ್ಲವೂ ನಿಶ್ಚಲವಾಗಿತ್ತು. ಬದುಕಿನ ಬಗ್ಗೆ ಎಲ್ಲರಿಗೂ ನಿರಾಸೆ, ಆತಂಕಗಳಿದ್ದವು. ನ್ಯಾಯಾಲಯದ ಚಟುವಟಿಕೆಗಳು ಪುನಾರಂಭವಾಗಿರುವುದರಿಂದ ಪರಿಸ್ಥಿತಿ ಸುಧಾರಿಸುವ ಭರವಸೆ ಇದೆ.

ರಾಜ್ಯ ಸರ್ಕಾರ ಅಥವಾ ಕೆಎಸ್‌ಬಿಸಿಯಿಂದ ಸಂಕಷ್ಟದಲ್ಲಿ ದೊರೆತಿರುವ ನೆರವಿನ ಬಗ್ಗೆ ಏನು ಹೇಳಬಯಸುತ್ತೀರಿ?

ಕೋವಿಡ್‌ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ನಡೆದುಕೊಂಡಿರುವ ರೀತಿಯ ಕುರಿತು ತೀವ್ರ ಬೇಸರವಿದೆ. ರಾಜ್ಯ ಸರ್ಕಾರ ನೀಡಿರುವ ನೆರವು ಸಾಕಾಗಲಿಲ್ಲ. ವಕೀಲರು ಆಕಸ್ಮಿಕ ಅಥವಾ ವಯೋಸಹಜವಾಗಿ ಮರಣವನ್ನಪ್ಪಿದ ಸಂದರ್ಭದಲ್ಲಿ ನೀಡುವ ಹಣದಲ್ಲಿ ಕನಿಷ್ಠ 50 ಸಾವಿರ ರೂಪಾಯಿಗಳನ್ನು ಕೆಎಸ್‌ಬಿಸಿಯು ಕೊರೊನಾ ಸಂದರ್ಭದಲ್ಲಿ ನೀಡಬೇಕಿತ್ತು. ಮುಂದೆ ಹಣವನ್ನು ಕಡಿತ ಮಾಡಿ ಉಳಿದ ಮೊತ್ತವನ್ನು ನೀಡಬಹುದಿತ್ತು. ಆದರೆ, ಆ ಕೆಲಸವನ್ನು ಕೆಎಸ್‌ಬಿಸಿ ಮಾಡಲಿಲ್ಲ.

ನಮ್ಮ ಇಡೀ ಜಿಲ್ಲೆಯ ಎಲ್ಲಾ ವಕೀಲರು ಸೇರಿಕೊಂಡು ಪ್ರತಿಯೊಬ್ಬ ಸದಸ್ಯನೂ ವಾರ್ಷಿಕವಾಗಿ 2,000 ರೂಪಾಯಿ ಹಾಕಿ ನಮ್ಮದೇ ನಿಧಿ ಸೃಷ್ಟಿಸಿ, ಅದನ್ನು ಠೇವಣಿಯಲ್ಲಿಟ್ಟುಕೊಂಡು ಸಂಕಷ್ಟದಲ್ಲಿ ಬಳಸುವ ನಿರ್ಧಾರ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಅದಕ್ಕೆ ಸ್ಪಷ್ಟ ರೂಪು ನೀಡಲಿದ್ದೇವೆ.