JP Shankar, President, Hassan District Bar Association
JP Shankar, President, Hassan District Bar Association 
ಸಂದರ್ಶನಗಳು

ಭೌತಿಕ ನ್ಯಾಯಾಲಯ ಆರಂಭವಾಗಿದ್ದರೂ ಡೋಲಾಯಮಾನ ಸ್ಥಿತಿ ಮುಂದುವರೆದಿದೆ: ಜೆ ಪಿ ಶೇಖರ್‌

Siddesh M S

ಜಗತ್ತಿನಾದ್ಯಂತ ಕೋವಿಡ್‌ ಸೃಷ್ಟಿಸಿರುವ ತಲ್ಲಣಗಳು ಒಂದೆರಡಲ್ಲ. ಎಲ್ಲಾ ಕ್ಷೇತ್ರಗಳಿಗೂ ಹೊಡೆತ ನೀಡಿರುವ ಕೊರೊನಾ ಸೋಂಕಿನಿಂದ ವಕೀಲರ ಸಮುದಾಯವೂ ಹೊರತಾಗಿಲ್ಲ. ಬದುಕು ಅರಸಿ, ನಾನಾ ಉದ್ದೇಶಗಳನ್ನು ಇಟ್ಟುಕೊಂಡು ಪಟ್ಟಣ ಸೇರಿ, ವಕೀಲಿಕೆ ವೃತ್ತಿಗೆ ಪದಾರ್ಪಣೆ ಮಾಡಿದ್ದ ಹಲವರು ಜೀವನ ಸಾಗಿಸುವುದು ಕಷ್ಟವಾಗಿ ನಗರದ ಬದುಕು ತೊರೆದು ಹಳ್ಳಿಯತ್ತ ಮುಖ ಮಾಡಿದ ಉದಾಹರಣೆಗಳು ಹೇರಳವಾಗಿವೆ. ಇಂಥ ಹಲವು ಘಟನೆಗಳಿಗೆ ರಾಜಕೀಯವಾಗಿ ಪ್ರಭಾವಿ ಜಿಲ್ಲೆಯಾದ ಹಾಸನವೂ ಸೇರ್ಪಡೆಗೊಂಡಿದೆ.

ಒಟ್ಟು 2,100 ನೋಂದಾಯಿತ ವಕೀಲರನ್ನು ಹೊಂದಿರುವ ಹಾಸನ ಜಿಲ್ಲಾ ವಕೀಲರ ಸಂಘದಲ್ಲಿ 1,500 ಸಕ್ರಿಯ ವಕೀಲರಿದ್ದಾರೆ. ಈ ಪೈಕಿ 300ಕ್ಕೂ ಹೆಚ್ಚು ವಕೀಲೆಯರು ಇದ್ದಾರೆ. ಇವರಲ್ಲಿ ಮೂವರು ವಕೀಲರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಸುಮಾರು 20 ವಕೀಲರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದ ಸುಮಾರು 100 ಮಂದಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು (ಕೆಎಸ್‌ಬಿಸಿ) ತಲಾ 5 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಿರುವುದು ಸೇರಿದಂತೆ ಅಲ್ಲಿನ ವಕೀಲರ ಸ್ಥಿತಿಗತಿಯ ಕುರಿತು ಹಾಸನ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜೆ ಪಿ ಶೇಖರ್‌ ಅವರು ʼಬಾರ್‌ ಅಂಡ್‌ ಬೆಂಚ್‌ʼ ಜೊತೆ ಮಾತನಾಡಿದ್ದು, ವಿವರ ಹೀಗಿದೆ.

ಕೋವಿಡ್‌ನಿಂದಾಗಿ ವಕೀಲರ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು ಏನು?

ಗ್ರಾಮೀಣ ಭಾಗದಿಂದ ಬಂದು ನಗರದಲ್ಲಿ ಮನೆ ಮಾಡಿಕೊಂಡಿದ್ದ ಹಲವು ವಕೀಲರು ಇಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಕೆಲವೇ ಕೆಲವರು ಊರಿನಿಂದ ಓಡಾಡುತ್ತಿದ್ದಾರೆ. ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ನ್ಯಾಯಾಲಯಕ್ಕೆ ಕಕ್ಷಿದಾರರು ಬರುತ್ತಿಲ್ಲ. ಇದರಿಂದ ಯಾರೂ ಶುಲ್ಕ ಪಾವತಿಸುತ್ತಿಲ್ಲ. ಇದರಿಂದ ತೀವ್ರ ರೀತಿಯ ಹಣಕಾಸಿನ ಸಮಸ್ಯೆಗಳನ್ನು ನಮ್ಮ ವಕೀಲರ ಸಮುದಾಯ ಎದುರಿಸುತ್ತಿದೆ. ಕೆಲವೊಂದನ್ನು ಬಾಯಿ ಬಿಟ್ಟು ಹೇಳುವ ಸ್ಥಿತಿಯಲ್ಲಿ ನಾವಿಲ್ಲವಾಗಿದ್ದೇವೆ. ಬಹುತೇಕ ಒಂದು ವರ್ಷದಿಂದ ಎಲ್ಲವೂ ಸ್ತಬ್ಧವಾಗಿರುವುದರಿಂದ ಪ್ರಾಕ್ಟೀಸ್‌ ಮರೆತು ಹೋಗಿದೆ ಎಂದು ಯುವ ವಕೀಲರು ಹೇಳುತ್ತಿದ್ದಾರೆ.

ಕೋವಿಡ್‌ನಿಂದ ಸಾವನ್ನಪ್ಪಿದ ವಕೀಲರ ಬಗ್ಗೆ ವಿವರಣೆ ನೀಡಬಹುದೇ?

ಮೂವರು ವಕೀಲರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ಅವೆಲ್ಲರೂ 45-62 ವರ್ಷಗಳ ಆಸುಪಾಸಿನಲ್ಲಿದ್ದರು. ಕೆಲವು ವಕೀಲರ ಆಸ್ಪತ್ರೆ ಶುಲ್ಕವು 7 ಲಕ್ಷ ರೂಪಾಯಿ ಮೀರಿದೆ. ಕೆಲವರಿಗೆ ನಮ್ಮ ಮಿತಿಯಲ್ಲಿ ಸಹಾಯ ಮಾಡಿದ್ದೇವೆ.

ಕೋವಿಡ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ನಿಮ್ಮ ಸಂಘ ಯಾವ ತೆರನಾದ ನೆರವು ನೀಡಿದೆ?

ಮೊದಲಿನಿಂದಲೂ ನಮ್ಮ ಸಂಘದಲ್ಲಿ ಪ್ರತಿಯೊಬ್ಬ ವಕೀಲರಿಂದ ಪ್ರತೀ ತಿಂಗಳು ತಲಾ 150 ರೂಪಾಯಿ ಸಂಗ್ರಹಿಸಲಾಗುತ್ತಿತ್ತು. ಇದರಿಂದ ಪ್ರತಿ ತಿಂಗಳು 1.5 ಲಕ್ಷ ರೂಪಾಯಿ ನಮ್ಮ ಕೈಸೇರುತ್ತಿತ್ತು. ಸಾವನ್ನಪ್ಪಿದ ವಕೀಲರ ಕುಟುಂಬಕ್ಕೆ ತಕ್ಷಣಕ್ಕೆ 2 ಲಕ್ಷ ರೂಪಾಯಿ ಪರಿಹಾರ ತಕ್ಷಣ ನೀಡುತ್ತಿದ್ದೆವು. ಇದು ಕೆಎಸ್‌ಬಿಎಸ್‌ಯಿಂದ ನೀಡಲಾಗುವ 8 ಲಕ್ಷ ರೂಪಾಯಿಯಿಂದ ಹೊರತಾದದ್ದು. ಕೋವಿಡ್‌ ಬಳಿಕದ ಬೆಳವಣಿಗೆಯ ಹಿನ್ನೆಲೆಯಲ್ಲಿ ವಕೀಲರಿಂದ ಸಂಗ್ರಹಿಸುತ್ತಿದ್ದ 150 ರೂಪಾಯಿ ವಂತಿಗೆ ಸಂಗ್ರಹ ನಿಲ್ಲಿಸಿದ್ದೇವೆ. ಇದರ ಹೊರತಾಗಿ ಆಹಾರದ ಕಿಟ್‌ ಮತ್ತಿತರ ಸೇವೆಗಳನ್ನು ಕಲ್ಪಿಸುವ ಮೂಲಕ ನಮ್ಮ ವಕೀಲರ ಸಮುದಾಯಕ್ಕೆ ನೆರವಾಗುವ ಪ್ರಯತ್ನ ಮಾಡಿದ್ದೇವೆ. ಆದರೆ, ಅದು ಸಾಲದು ಎಂಬುದು ನನ್ನ ನಂಬುಗೆ.

ವರ್ಚುವಲ್ ಕಲಾಪಗಳಿಂದ ನಿಮಗೆ ಏನಾದರೂ ಅನುಕೂಲವಾಗಿತ್ತೇ/ಆಗುತ್ತಿದೆಯೇ?

ಹೈಕೋರ್ಟ್‌ ಅಥವಾ ಉನ್ನತ ಮಟ್ಟದ ನ್ಯಾಯಾಲಯಗಳಲ್ಲಿ ನಡೆಯುವ ಪ್ರಕರಣದ ವಿಚಾರಣೆಗೂ ಅಧೀನ ನ್ಯಾಯಾಲಯಗಳಲ್ಲಿನ ಕಲಾಪಕ್ಕೂ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ತಾಂತ್ರಿಕ ಸಮಸ್ಯೆ, ಮೂಲಸೌಕರ್ಯ, ಸಂಪನ್ಮೂಲದ ಕೊರತೆಯಿಂದಾಗಿ ವಿಚಾರಣಾಧೀನ ನ್ಯಾಯಾಲಯಗಳಲ್ಲಿ ವರ್ಚುವಲ್‌ ಕಲಾಪ ಪರಿಣಾಮಕಾರಿಯಲ್ಲ. ಸಾಕ್ಷ್ಯ ಪ್ರಸ್ತುತಪಡಿಸುವುದು, ಮನಮುಟ್ಟುವ ರೀತಿಯಲ್ಲಿ ವಾದಿಸುವುದು ವರ್ಚುವಲ್‌ ಕಲಾಪದಲ್ಲಿ ಸಾಧ್ಯವಿರುವುದಿಲ್ಲ. ಆಗಾಗ್ಗೆ ಇಂಟರ್‌ನೆಟ್‌ ಸಮಸ್ಯೆ ಉದ್ಭವಿಸುತ್ತದೆ. ಎಷ್ಟೋ ಸಂದರ್ಭದಲ್ಲಿ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದೇ ಅರ್ಥವಾಗುವುದಿಲ್ಲ. ಇದರಿಂದ ವಾದ ಸರಣಿಗೆ ತೀವ್ರ ರೀತಿಯ ಹಿನ್ನಡೆಯಾಗುತ್ತದೆ. ಇದರಿಂದ ಪ್ರಕರಣ ಕೈ ತಪ್ಪುವ ಸಾಧ್ಯತೆ ಇರುತ್ತದೆ. ನ್ಯಾಯದಾನದ ಉದ್ದೇಶವೂ ಈಡೇರುವುದಿಲ್ಲ. ಇನ್ನು ಬಹುತೇಕ ವಕೀಲರು ಆರ್ಥಿಕವಾಗಿ ಸುಸ್ಥಿತಿಯಲ್ಲಿ ಇರದೇ ಇರುವುದರಿಂದ ವರ್ಚುವಲ್‌ ಕಲಾಪಕ್ಕೆ ಅಗತ್ಯವಾದ ಸ್ಮಾರ್ಟ್‌ಫೋನ್‌ ಖರೀದಿಸುವಷ್ಟು ಸಶಕ್ತರಾಗಿಲ್ಲ.

ಭೌತಿಕ ನ್ಯಾಯಾಲಯದ ಚಟುವಟಿಕೆಗಳು ಆರಂಭವಾಗಿರುವುದರಿಂದ ಸಮಸ್ಯೆ ಕಡಿಮೆಯಾಗಿದೆ ಎನಿಸುತ್ತದೆಯೇ?

ಭೌತಿಕ ಕಲಾಪಗಳು ಆರಂಭವಾಗಿದ್ದರೂ ಕೋವಿಡ್‌ಗೂ ಪೂರ್ವದಲ್ಲಿದ್ದ ಸ್ಥಿತಿ ಇಲ್ಲ. ನಿರ್ದಿಷ್ಟ ಪ್ರಕರಣಗಳ ವಿಚಾರಣೆ ನಡೆಸುವ ನಿಯಮ ಜಾರಿಯಲ್ಲಿರುವುದರಿಂದ ಹಾಗೂ ಪ್ರಕರಣದಲ್ಲಿ ಭಾಗಿಯಾಗುವ ಎಲ್ಲರೂ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕಿರುವುದರಿಂದ ಬಹುತೇಕ ಕಕ್ಷಿದಾರರು ಆಸಕ್ತಿ ತೋರುತ್ತಿಲ್ಲ. ಪ್ರಕರಣವನ್ನು ಮುಂದೂಡಲು ನ್ಯಾಯಾಲಯದ ಅನುಮತಿ ಕೋರುವಂತೆ ಕಕ್ಷಿದಾರರು ವಕೀಲರಿಗೆ ಕೋರಿಕೆ ಸಲ್ಲಿಸುತ್ತಿದ್ದಾರೆ. ಇದರಿಂದ ಶುಲ್ಕ ಬರುವುದಿಲ್ಲ. ವಕೀಲರ ಡೋಲಾಯಮಾನ ಸ್ಥಿತಿ ಮುಂದುವರೆದಿದೆ. ಕೋವಿಡ್‌ ಎರಡನೇ ಅಲೆ ಒಂದೆಡೆಯಾದರೆ, ಕೊರೊನಾ ಸೋಂಕು ಹದ್ದುಬಸ್ತಿಗೆ ಬರಲು ಇನ್ನೂ ಸಾಕಷ್ಟು ಸಮಯಬೇಕಿದೆ ಎಂದು ವೈದ್ಯರು ಹೇಳುತ್ತಿರುವುದು ಆತಂಕ ಹೆಚ್ಚುವಂತೆ ಮಾಡಿದೆ.

ಕೋವಿಡ್‌ ವ್ಯಾಪಿಸಿರುವ ಈ ಸಂದರ್ಭದಲ್ಲಿ ವಕೀಲರ ಸಮುದಾಯದಲ್ಲಿ ಯಾವ ತೆರನಾದ ಚರ್ಚೆ ಇದೆ?

ಬಹುತೇಕರು ಪ್ರಾಕ್ಟೀಸ್‌ ಮರೆತು ಹೋಗಿದ್ದು, ಜೀವನ ಮಾಡುವುದೇ ಕಷ್ಟವಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಬದುಕಿಗೆ ಅನ್ಯ ಮಾರ್ಗಗಳ ಹುಡುಕಾಟ ನಡೆಸುತ್ತಿದ್ದಾರೆ.

ರಾಜ್ಯ ಸರ್ಕಾರ ಅಥವಾ ಕೆಎಸ್‌ಬಿಸಿಯಿಂದ ಸಂಕಷ್ಟದಲ್ಲಿ ದೊರೆತಿರುವ ನೆರವಿನ ಬಗ್ಗೆ ಏನು ಹೇಳಬಯಸುತ್ತೀರಿ?

2010ರ ನಂತರ ನೋಂದಾವಣೆ ಮಾಡಿಸಿಕೊಂಡಿರುವ ಸುಮಾರು 100 ಮಂದಿಗೆ ತಲಾ ಐದು ಸಾವಿರ ರೂಪಾಯಿ ಆರ್ಥಿಕ ನೆರವನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು (ಕೆಎಸ್‌ಬಿಸಿ) ನೀಡಿದೆ. ಉಳಿದವರಿಗೆ ಕೆಎಸ್‌ಬಿಎಸ್‌ಯಿಂದ ಯಾವುದೇ ನೆರವು ದೊರೆತಿಲ್ಲ. ರಾಜ್ಯ ಸರ್ಕಾರವು 5 ಕೋಟಿ ರೂಪಾಯಿ ನೀಡಿದೆ ಎಂದು ಹೇಳಿದರೂ ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ವಕೀಲರು ಇದ್ದಾರೆ. ಅಷ್ಟೂ ಮಂದಿಗೆ ನೆರವು ನೀಡಲು ಸರ್ಕಾರ ನೀಡಿರುವ ಆರ್ಥಿಕ ನೆರವು ಸಾಲದು. ಇದನ್ನು ನೋಡಿದರೆ ಕೆಎಸ್‌ಬಿಸಿಯನ್ನು ದೂರಿ ಫಲವಿಲ್ಲ. ದೆಹಲಿ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳು ಅಲ್ಲಿನ ವಕೀಲರ ಪರಿಷತ್‌ಗೆ ಉದಾರವಾಗಿ ಆರ್ಥಿಕ ನೆರವು ನೀಡಿವೆ. ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ಹೆಚ್ಚಿನ ನೆರವು ಪಡೆಯಲು ಕೆಎಸ್‌ಬಿಸಿ ಪ್ರಯತ್ನಿಸಿಲ್ಲ. ಇದಕ್ಕೆ ಬೇಸರವಿದೆ.

ತೀರಿಕೊಂಡವರು ಮತ್ತು ಕೊರೊನಾ ಸೋಂಕಿನಿಂದ ಗುಣಮುಖರಾದ ವಕೀಲರಿಗೆ ಕೆಎಸ್‌ಬಿಸಿಯಿಂದ ಘೋಷಿಸಲ್ಪಟ್ಟಿರುವ ನೆರವು ಸಿಕ್ಕಿದೆಯೇ?

ತೀರಿಕೊಂಡ ಮೂವರು ವಕೀಲರ ಪೈಕಿ ಒಬ್ಬರಿಗೆ 7.2 ಲಕ್ಷ ರೂಪಾಯಿ ಪರಿಹಾರ ಪಾವತಿಯಾಗಿದೆ. ಉಳಿದ ಇಬ್ಬರ ಕುಟುಂಬಕ್ಕೆ ಇನ್ನಷ್ಟೇ ನೆರವಿನ ಹಣ ಪಾವತಿಯಾಗಬೇಕಿದೆ. ಸುಮಾರು 20ಕ್ಕೂ ಹೆಚ್ಚು ವಕೀಲರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ಪೈಕಿ ಯಾರೊಬ್ಬರಿಗೂ ಘೋಷಿಸಲ್ಪಟ್ಟ 50 ಸಾವಿರ ರೂಪಾಯಿ ಸಂದಾಯವಾಗಿಲ್ಲ. ಇವರಲ್ಲಿ ಹಲವರ ಆಸ್ಪತ್ರೆ ವೆಚ್ಚವು ಲಕ್ಷಾಂತರ ರೂಪಾಯಿ ದಾಟಿದೆ ಎಂಬುದು ಗಮನಾರ್ಹ.