ಸಂದರ್ಶನಗಳು

[ಅನುಸಂಧಾನ] ಪ್ರೊ. ಎಂಡಿಎನ್ ಬೋಧನೆ, ಪುಟ್ಟಣ್ಣಯ್ಯ ನಾಯಕತ್ವ, ದೇವನೂರರ ಅಂತಃಕರಣ ನನಗೆ ಸ್ಫೂರ್ತಿ: ಬಡಗಲಪುರ ನಾಗೇಂದ್ರ

ಕಾನೂನು ಶಿಕ್ಷಣ ಮತ್ತು ವಕೀಲಿಕೆಯ ಹಿನ್ನೆಲೆಯಿಂದ ಬಂದು ಸಮಾಜದ ವಿವಿಧ ವಲಯಗಳಲ್ಲಿ ಗುರುತರ ಸಾಧನೆ ಮಾಡಿದ ಸಾಧಕರೊಂದಿಗಿನ ಮಾತುಕತೆಯೇ ಈ 'ಅನುಸಂಧಾನ'.

Ramesh DK

ರೈತ ಹೋರಾಟದ ಪ್ರಶ್ನೆ ಎದುರಾದಾಗಲೆಲ್ಲಾ ಕೇಳಿ ಬರುವ ಪ್ರಮುಖ ಹೆಸರು ಬಡಗಲಪುರ ನಾಗೇಂದ್ರ. ಪರಿಚಯ ಅಗತ್ಯವಿಲ್ಲ ಎನ್ನುವಷ್ಟು ಅವರ ಹೆಸರು ಜನಜನಿತ. ಕೃಷಿಕರ ಹೋರಾಟಗಳಿಗೆ ಹೊರಗಿನಿಂದ ಪೆಟ್ಟು ಬೀಳಲಿ ಅಥವಾ ಒಳಗಿನಿಂದಲೇ ಗಾಯವಾಗಲಿ, ಆಗೆಲ್ಲಾ ಅವರು ಅನೇಕ ಬಾರಿ ಸಿಡಿದೆದ್ದಿದ್ದಾರೆ. ಆ ಗಾಯಕ್ಕೆ ಮದ್ದು ಅರೆಯುವ ಯತ್ನ ಮಾಡಿದ್ದಾರೆ. ʼರೈತರು ಜಾಗೃತರಾಗಿರಬೇಕು ರೈತ ನಾಯಕರು ಪ್ರಾಮಾಣಿಕರಾಗಿರಬೇಕುʼ ಎಂಬ ಕಳಕಳಿಯೊಡನೆ ಕೆಲಸ ಮಾಡುತ್ತಿರುವ ಅವರದು ಹೋರಾಟದ ಹಾದಿಯಲ್ಲಿ ಸುದೀರ್ಘ ಪಯಣ.

ವಕೀಲರೂ ಆಗಿರುವ ನಾಗೇಂದ್ರ, ಕಾನೂನು ಅಧ್ಯಯನ ಪೂರ್ಣಗೊಳಿಸಿದ್ದು ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ. 80ರ ದಶಕದಲ್ಲಿ ನ್ಯಾಯಿಕ ಲೋಕ ಪ್ರವೇಶಿಸಿದ ಅವರಿಗೆ ನ್ಯಾಯವಾದಿಯಾಗಿದ್ದ ಅವರ ಚಿಕ್ಕಪ್ಪನವರಿಂದ ಮಾರ್ಗದರ್ಶನ. ನಂತರ ಸ್ವತಂತ್ರ ವಕೀಲರಾಗಿ ಸೇವೆ. ರೈತ ಸಂಘದ ಅನುಭವ, ಅವರ ವೃತ್ತಿಗೆ ಪ್ರೇರಣೆಯಾಗಿದ್ದು ಒಂದೆಡೆಯಾದರೆ, ಮತ್ತೊಂದೆಡೆ ವಕೀಲ ವೃತ್ತಿ ಅವರ ಸಂಘಟನಾ ಕೌಶಲ್ಯವನ್ನು ಹೆಚ್ಚಿಸಿದೆ.

ʼಬಾರ್‌ ಅಂಡ್‌ ಬೆಂಚ್‌ʼ ಬೊಗಸೆಯಲ್ಲಿ ಅವರ ಹೋರಾಟದ ಬದುಕು…

ಹೋರಾಟಗಾರ ಎಸ್‌ ಆರ್‌ ಹಿರೇಮಠ, ಲೇಖಕ ದೇವನೂರ ಮಹಾದೇವ ಮತ್ತಿತರರ ಜೊತೆ...

ವಿದ್ಯಾರ್ಥಿ ಜೀವನದಲ್ಲಿ ಕಾನೂನು ಶಿಕ್ಷಣದ ಅಧ್ಯಯನ ಮಾಡಬೇಕು ಎಂದು ನಿಮಗೆ ಅನಿಸಲು ಕಾರಣವೇನು?

ನಮ್ಮ ತಾತ ಬಿ ಎನ್‌ ಚಿಕ್ಕಲಿಂಗೇಗೌಡರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ನಮ್ಮ ತಂದೆ ಬಿ ಸಿ ಶಿವಲಿಂಗೇಗೌಡ ಕೂಡ ಹಳೇ ಕಾಂಗ್ರೆಸ್‌ನ ಅನುಯಾಯಿ ಆಗಿದ್ದವರು. ಅವರಿಗೆ ನಾನು ವಕೀಲನಾಗಬೇಕು ಎಂಬ ಕನಸಿತ್ತು. ನನ್ನ ಮುಂದೆ ಮೂರು ಆಯ್ಕೆಗಳಿದ್ದವು. ಮೊದಲನೆಯದು ವಕೀಲನಾಗುವುದು, ಎರಡನೆಯದು ಸರ್ಕಾರಿ ಅಧಿಕಾರಿಯಾಗುವುದು ಮೂರನೆಯದು ಬೋಧಕನಾಗುವುದು. ಇದರ ಜೊತೆಗೆ ಪತ್ರಕರ್ತನಾಗಬೇಕೆಂಬ ತುಡಿತವೂ ಬಹಳ ಇತ್ತು. ಹದಿನೈದು ದಿನಗಳ ಕಾಲ ಪತ್ರಿಕೋದ್ಯಮ ಕೋರ್ಸ್‌ಗೆ ಕೂಡ ಸೇರಿಕೊಂಡಿದ್ದೆ! ಕೆಎಎಸ್‌ ಕೂಡ ಪಾಸ್‌ ಮಾಡಿಕೊಂಡಿದ್ದೆ. ಆದರೆ ಕಾನೂನು ಓದಲೇಬೇಕು ಎಂದೆನ್ನಿಸಿತ್ತು. ಲಾಯರ್‌ ಆದ್ರೆ ಸ್ವಾಭಿಮಾನಿಯಾಗಿ ಬದುಕಬಹುದು, ನೊಂದವರಿಗೆ ನ್ಯಾಯ ದೊರಕಿಸಿಕೊಡಬಹುದು ಎಂದು ಅನ್ನಿಸಿತ್ತು.

ಕಾನೂನು ಶಿಕ್ಷಣದ ವೇಳೆ ನಿಮ್ಮ ಮೇಲೆ ಗಾಢವಾಗಿ ಪ್ರಭಾವ ಬೀರಿದ ಸಂಗತಿಗಳು ಯಾವುವು?

ಸಂವಿಧಾನದ ಮೂಲಭೂತ ಹಕ್ಕುಗಳು ನನ್ನ ಮೇಲೆ ಭಾರಿ ಪರಿಣಾಮ ಬೀರಿದ್ದವು. ಜಗತ್ತಿನ ಬೇರೆ ಬೇರೆ ನ್ಯಾಯತತ್ವಶಾಸ್ತ್ರಗಳು ಶಾಸನಾತ್ಮಕವಾಗಿ ಮನುಷ್ಯನ ಬದುಕನ್ನು ಹೇಗೆ ಕಟ್ಟಿಕೊಡಬಹುದು ಎಂಬುದನ್ನು ಕಲಿಸಿದವು.

ಗಾಢ ಪ್ರಭಾವ ಬೀರಿದ ವ್ಯಕ್ತಿಗಳು?

ಪ್ರೊ. ಎಂ ಡಿ ನಂಜುಂಡಸ್ವಾಮಿ ಅವರು. ಅವರು ನನ್ನ ತಂದೆಯ ವಯಸ್ಸಿನವರಾಗಿದ್ದರು. ಅವರು ನನ್ನ ಹೋರಾಟದ ಗುರುಗಳು. ಮೇಲಾಗಿ ಕಾನೂನು ಬೋಧಿಸುತ್ತಿದ್ದ ಪ್ರೊಫೆಸರ್‌ ಬೇರೆ! ಸಂವಿಧಾನದ ಬಗ್ಗೆ,ಅಂತರರಾಷ್ಟ್ರೀಯ ಕಾನೂನುಗಳ ಬಗ್ಗೆ ಅಥೆಂಟಿಕ್‌ ಆಗಿ ಅವರು ಮಾತನಾಡುತ್ತಿದ್ದರು. ಕಾಲೇಜಿನಲ್ಲಿ ನಮಗೆ ಐಪಿಸಿ ಕುರಿತು ಪಾಠ ಮಾಡುತ್ತಿದ್ದ ರಾಮಕೃಷ್ಣ, ಸಂವಿಧಾನವನ್ನು ಹೇಳಿಕೊಡುತ್ತಿದ್ದ ನಾಗರತ್ನಮ್ಮ ಮುಂತಾದವರನ್ನು ಮರೆಯಲಾರೆ.

ನಂಜುಂಡಸ್ವಾಮಿ ಅವರ ಬೋಧನೆ, ಕೆ ಎಸ್‌ ಪುಟ್ಟಣ್ಣಯ್ಯನವರ ನಾಯಕತ್ವ, ದೇವನೂರ ಮಹಾದೇವರ ಒಳಗಣ್ಣು, ಅಂತಃಕರಣ ನನ್ನನ್ನು ಪ್ರಭಾವಿಸಿವೆ.
- ಬಡಗಲಪುರ ನಾಗೇಂದ್ರ

ವಕೀಲರಾಗಿ ವೃತ್ತಿ ಜೀವನದ ಆರಂಭದ ದಿನಗಳು ಹೇಗಿದ್ದವು?

ನಮ್ಮ ಚಿಕ್ಕಪ್ಪ ವಕೀಲರಾಗಿದ್ದರು. ಅವರಿಗೆ ಮಧುಮೇಹ ಇದ್ದ ಕಾರಣಕ್ಕಾಗಿ ಮಧ್ಯಾಹ್ನದ ನಂತರ ಕಚೇರಿಯಲ್ಲಿ ಇರುತ್ತಿರಲಿಲ್ಲ. ಅವರ ಕಚೇರಿಯ ಜವಾಬ್ದಾರಿಯನ್ನು ನಾನೇ ನಿರ್ವಹಿಸುತ್ತಿದ್ದೆ. ವಕೀಲ ವೃತ್ತಿ ಆರಂಭಿಸಿ ಏಳೇ ತಿಂಗಳಿಗೆ ನ್ಯಾಯಾಲಯದಲ್ಲಿ ಮೊದಲನೇ ಬಾರಿಗೆ ಪಾಟಿ ಸವಾಲು ಎದುರಿಸಿದ್ದೆ! ಹೊಸಬರು ಮೂರು ನಾಲ್ಕು ವರ್ಷಗಳಾದರೂ ತಡಬಡಾಯಿಸುತ್ತಾರೆ. ಆದರೆ ರೈತ ಸಂಘದ ಸಹವಾಸ, ಅಧಿಕಾರಯುತವಾಗಿ ಮಾತನಾಡುವುದನ್ನು ನನಗೆ ಕಲಿಸಿತ್ತು. ಒಂಬತ್ತನೇ ತಿಂಗಳಲ್ಲಿ ಮತ್ತೊಮ್ಮೆ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದೆ. ನ್ಯಾಯಾಧೀಶರು ವಾದ ಮಂಡನೆಗಾಗಿ ನನಗೆ ನೀಡಿದ ಪ್ರೋತ್ಸಾಹವೂ ಚೆನ್ನಾಗಿತ್ತು.

ಮೆಲುಕು ಹಾಕುವಂತಹ ಪ್ರಸಂಗಗಳನ್ನು ಹಂಚಿಕೊಳ್ಳಬಹುದೇ?

ಒಮ್ಮೆ ತುಂಬಾ ಗಂಭೀರವಾದ ವಿಚಾರಣೆಯೊಂದು ನಡೆಯುತ್ತಿತ್ತು. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ್ದಾದ್ದರಿಂದ ಗೌಪ್ಯ ವಿಚಾರಣೆಗೆ ನ್ಯಾಯಾಧೀಶರು ಆದೇಶಿಸಿದ್ದರು, ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದ ವ್ಯಕ್ತಿ ಅದಾಗಲೇ ಆಕೆಯನ್ನು ಮದುವೆಯಾಗಿದ್ದ. ಇಬ್ಬರೂ ಒಟ್ಟಿಗೆ ನ್ಯಾಯಾಲಯಕ್ಕೆ ಬರುತ್ತಿದ್ದರು. ಆದರೂ ಅತ್ಯಾಚಾರ ಎಸಗಿದ್ದಾನೆ ಎಂಬುದು ಆಕೆಯ ವಾದವಾಗಿತ್ತು. ನಾನು ಪ್ರಶ್ನೆ ಕೇಳಲು ಶುರು ಮಾಡುತ್ತಿದ್ದಂತೆ ಅವಳು ನನಗೆ ಬೈಯೋಕೆ, ಉಗಿಯೋಕೆ ಶುರು ಮಾಡೋಳು. ಕೈಗೆ ಸಿಕ್ಕಿದ್ದ ವಸ್ತುಗಳನ್ನೆಲ್ಲಾ ನನ್ನ ಮೇಲೆ ಎಸೆಯುತ್ತಿದ್ದಳು. ಆಕೆಯ ನಡವಳಿಕೆಯೇ ಪರೋಕ್ಷವಾಗಿ ನಾನು ಕೇಸ್‌ ಗೆಲ್ಲಲು ಸಹಕಾರಿಯಾಯಿತು. ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೂರೂವರೆ ಗಂಟೆಯಷ್ಟು ದೀರ್ಘಕಾಲ ವಾದ ಮಂಡಿಸಿದ್ದೆ. ಇಂತಹ ಅನೇಕ ಪ್ರಸಂಗಗಳು ಇವೆ.

ಈಗಲೂ ಕಾನೂನು ಸಲಹೆ, ವಕೀಲಿಕೆ ಮುಂದುವರೆಸಿದ್ದೀರಾ?

ಹೌದು. ಈಗಲೂ ಮೈಸೂರಿನಲ್ಲಿ ಕಚೇರಿ ಇದೆ. ಏಳು ಜನ ಕಿರಿಯ ವಕೀಲರು ನನ್ನೊಟ್ಟಿಗೆ ಕೆಲಸ ಮಾಡುತ್ತಾರೆ. ಬಹಳಷ್ಟು ಜನಕ್ಕೆ ನಾನು ವಕೀಲ ಎಂಬುದು ಗೊತ್ತಿಲ್ಲ. ರೈತ ಹೋರಾಟಗಾರ ಎಂದೇ ಅನೇಕರು ಭಾವಿಸಿದ್ದಾರೆ. ನಮ್ಮ ಕಚೇರಿಯಲ್ಲಿ ಕಕ್ಷೀದಾರರೂ ಇರುತ್ತಾರೆ. ರೈತಸಂಘದವರೂ ಇರುತ್ತಾರೆ. ಸುಮಾರು ಹದಿನೈದು ವರ್ಷಗಳ ಕಾಲ ಗಂಭಿರವಾಗಿ ವಕೀಲಿಕೆಯಲ್ಲಿ ತೊಡಗಿದ್ದೆ. ಈಗ ನನ್ನ ಜ್ಯೂನಿಯರ್‌ಗಳು ಆ ಕೆಲಸ ನೋಡಿಕೊಳ್ಳುತ್ತಿದ್ದಾರೆ.

ರೈತ ಹೋರಾಟದ ಒಂದು ಝಲಕ್‌

ರೈತಸಂಘ ನಿಮ್ಮನ್ನು ಸೆಳೆದದ್ದು ಹೇಗೆ?

ನಮ್ಮ ತಾತ “ಭಾರತ ಬಿಟ್ಟು ತೊಲಗಿ” ಚಳವಳಿಯಲ್ಲಿ ತೊಡಗಿಕೊಂಡಿದ್ದವರು. ನಮ್ಮ ತಂದೆ ಯಶೋಧರಮ್ಮ ದಾಸಪ್ಪನಂತಹ ವ್ಯಕ್ತಿತ್ವಗಳಿಂದ ಪ್ರಭಾವಿತರಾಗಿದ್ದರು. ಮನೆಯಲ್ಲಿ ಮೊದಲಿನಿಂದಲೂ ಜಾತ್ಯತೀತತೆಯ ವಾತಾವರಣವಿತ್ತು. ಯಾವ ಜಾತಿಯವರೇ ಇರಲಿ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದೆವು. ಇಂದಿರಾಗಾಂಧಿ ಅವರು ʼಉಳುವವನೇ ಭೂಮಿಯ ಒಡೆಯʼ ಕಾನೂನು ಜಾರಿಗೆ ತಂದಾಗ ನಮ್ಮ ತಂದೆಯವರು ಸ್ವಯಂಪ್ರೇರಿತವಾಗಿ ಭೂ ಹಂಚಿಕೆ ಮಾಡಿದರು. ಇದೆಲ್ಲದರಿಂದ ಪ್ರಭಾವಿತನಾಗಿದ್ದೆ. ಸಮಾಜವಾದ, ರೈತ ಹೋರಾಟದ ಬಗ್ಗೆ ಚಿಕ್ಕಂದಿನಲ್ಲಿಯೇ ಸಾಕಷ್ಟು ತಿಳಿವಳಿಕೆ ಬಂದಿತ್ತು. ವಕೀಲನಾಗುವ ಹೊತ್ತಿಗೆ ರೈತ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೆ.

ಕಾನೂನು ಶಿಕ್ಷಣ, ವಕೀಲಿಕೆಯ ಹಿನ್ನೆಲೆ ನಿಮ್ಮ ಸಂಘಟನಾ ಸಾಮರ್ಥ್ಯದ ಮೇಲೆ ಹೇಗೆ ಪರಿಣಾಮ ಬೀರಿದೆ?

ಕಾನೂನು ಅಧ್ಯಯನ ಮಾಡಿದ್ದರಿಂದಲೇ ಭೂಸುಧಾರಣೆ ಕಾಯಿದೆ, ಭೂಕಂದಾಯ, ರೈತರ ಹಕ್ಕುಗಳು ಮುಂತಾದವನ್ನು ಆಳವಾಗಿ ಅರಿಯಲು ಸಹಾಯವಾಯಿತು. ರೈತರಿಗೆ ಕಾನೂನು ಅರಿವು ಮೂಡಿಸಲು ಕೂಡ ಇದು ನೆರವಾಗಿದೆ. ಕಾನೂನು ಜಾಗೃತಿ ಶಿಬಿರಗಳನ್ನು ನಾವು ಹಮ್ಮಿಕೊಂಡಿದ್ದೇವೆ.

ಇಲ್ಲಿ ಇನ್ನೊಂದು ವಿಷಯ ಹೇಳಬೇಕು. ರೈತ ಸಂಘದ ಅನುಭವ ಕೂಡ ನನ್ನ ವೃತ್ತಿ ಜೀವನಕ್ಕೆ ಸಹಾಯ ಮಾಡಿದೆ. ನಾನು ಕಾನೂನು ಅಧ್ಯಯನ ಮಾಡಲೆಂದು ಕಾಲೇಜಿಗೆ ಹೋಗಿದ್ದು ಕೇವಲ ಒಂದು ವರ್ಷ ! ಆಗೆಲ್ಲಾ ಅಟೆಂಡೆನ್ಸ್‌ ಕೊಡೋರು. ರೈತ ಸಂಘದಲ್ಲಿ ನಂಜುಂಡಸ್ವಾಮಿ, ಪ್ರೊ. ರವಿವರ್ಮ ಕುಮಾರ್‌ ರೀತಿಯ ಹಿರಿಯರು ಏನೇನು ಮಾತನಾಡಿರುತ್ತಿದ್ದರೋ ಅವು ಕೂಡ ಪರೀಕ್ಷೆಯಲ್ಲಿ ಪ್ರಶ್ನೆಗಳಾಗಿ ಬಂದಿರೋವು. ರೈತಸಂಘ ಸಭೆಗಳಲ್ಲಿ ಕೇಳಿದ್ದನ್ನೇ ಬರೆದು ಪರೀಕ್ಷೆ ಪಾಸಾಗಿದ್ದೆ.

ಕರ್ನಾಟಕದ ಮಟ್ಟಿಗೆ ಚಳವಳಿಗಳೇ ಇಲ್ಲದ ಕಾಲ ಇದು ಎಂದು ನಿಮಗೆ ಎಂದಾದರೂ ಅನ್ನಿಸಿದ್ದು ಇದೆಯೇ?

ಚಳವಳಿಗಳು ಇಲ್ಲ ಎಂದು ಹೇಳುವುದಿಲ್ಲ. ಆದರೆ ಫೋಕಸಿಂಗ್‌ ಕಡಿಮೆ ಆಗಿದೆ. ಎಪ್ಪತ್ತರ ದಶಕದಲ್ಲಿ ನಾವು ಮುಖಾಮುಖಿಯಾಗುತ್ತಿದ್ದ ವಿಚಾರಗಳೇ ಬೇರೆ. ಈಗಿನ ಸಮಸ್ಯೆಗಳೇ ಬೇರೆ. ಬೂಸಾ ಚಳವಳಿ, ದಲಿತರ ಸಮಸ್ಯೆಗಳು ಆಗಿನ ಹೋರಾಟಕ್ಕೆ ಪ್ರೇರಣೆಯಾಗಿದ್ದವು. ಕುವೆಂಪು, ಜಿ ಎಸ್‌ ಶಿವರುದ್ರಪ್ಪ, ಪಿ ಲಂಕೇಶ್‌, ಪೂರ್ಣಚಂದ್ರ ತೇಜಸ್ವಿ, ದೇವನೂರ ಮಹಾದೇವ ಸಾಹಿತ್ಯ ರಚನೆಯ ಮೂಲಕ ಸಾಹಿತ್ಯದ ಮೂಲಕ ಜಾಗೃತಿ ಮೂಡಿಸಿದರು.

ಆದರೆ ಜಾಗತೀಕರಣ ಪ್ರತಿಭಟನೆಯ ಧ್ವನಿಗಳನ್ನು ಹತ್ತಿಕ್ಕುತ್ತಾ ಬಂದಿತು. ಮೇಷ್ಟ್ರುಗಳನ್ನು, ವಿದ್ಯಾರ್ಥಿಗಳನ್ನು ಹೊಟ್ಟೆಪಾಡು ನೋಡಿಕೊಳ್ಳುವಂತೆ ಮಾಡಿತು. ನಮ್ಮ ನಡುವೆಯೇ ವಸಾಹತುಶಾಹಿ ವ್ಯವಸ್ಥೆ ಬೇರೂರತೊಡಗಿತು. ಪ್ರಸ್ತುತ ವಿದ್ಯಮಾನಗಳನ್ನೇ ಗಮನಿಸಿ. ಎಪಿಎಂಸಿ ಕಾಯಿದೆ, ಕಾರ್ಮಿಕ ವಿರೋಧಿ ನೀತಿಗಳು, ಗೋಹತ್ಯೆ ನಿಷೇಧ ಕಾಯಿದೆ, ಕೃಷಿ ಕಾಯಿದೆಗಳಿಂದಾಗಿ ಜನರು ದಾಸ್ಯದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ನಿರುದ್ಯೋಗದ ಸಮಸ್ಯೆ ಇದೆ. ಅನಕ್ಷರಸ್ಥರಿಗೂ ಉದ್ಯೋಗ ಎಂಬುದು ಕನಸಿನ ಮಾತಾಗಿದೆ.

ಇದೆಲ್ಲದರಿಂದಾಗಿ ಚಳವಳಿಗಳು ನಾಶವಾದಂತೆ ಕಂಡುಬರುತ್ತಿವೆ. ಆದರೆ ಹೋರಾಟದ ಮರ ಒಣಗಿದಂತಿದ್ದರೂ ಅದರ ಬೇರು ಸಜೀವವಾಗಿದೆ. ಕರ್ನಾಟಕ ಯಾವತ್ತಿಗೂ ಸಮಾಜವಾದಿ ನೆಲ. ಭಾಷಾ ಚಳವಳಿ, ಸಾಹಿತ್ಯಿಕ ಜಾಗೃತಿ, ಸಾಮಾಜಿಕ ಹೋರಾಟಗಳಿಂದ ಗುರುತಿಸಿಕೊಂಡ ನಾಡು ಎಂಬುದನ್ನು ಮರೆಯುವಂತಿಲ್ಲ.

ನಿಮ್ಮ ಓದಿನ ಒಡನಾಟದ ಬಗ್ಗೆ ಹೇಳಿ…

ನಂಜುಂಡಸ್ವಾಮಿ ಅವರ ಬೋಧನೆ, ಕೆ ಎಸ್‌ ಪುಟ್ಟಣ್ಣಯ್ಯನವರ ನಾಯಕತ್ವ, ದೇವನೂರ ಮಹಾದೇವರ ಒಳಗಣ್ಣು, ಅಂತಃಕರಣ ನನ್ನನ್ನು ಪ್ರಭಾವಿಸಿವೆ. ರಾಮಮನೋಹರ ಲೋಹಿಯಾರ ಚಿಂತನೆಗಳು ಸಮಾಜವನ್ನು ನೋಡುವ ಬಗೆ ಕಲಿಸಿದರೆ, ಕುವೆಂಪು ಹಳ್ಳಿಗರನ್ನು ನೋಡುವುದನ್ನು ಹೇಳಿಕೊಟ್ಟರು. ಲಂಕೇಶ್ ಬರೆಯುತ್ತಿದ್ದ ʼಮರೆಯುವ ಮುನ್ನʼ ಸೃಜನಶೀಲತೆಯ ಹೊಳಹುಗಳನ್ನು ನೀಡುತ್ತಿತ್ತು. ಸಾಹಿತ್ಯದ ಓದು ಮತ್ತು ವಕೀಲಿಕೆಯ ಧ್ವನಿ ನನ್ನ ಸಂಘಟನಾ ಹುರುಪನ್ನು ಹೆಚ್ಚಿಸಿವೆ.

ರೈತ ಸಂಘ ಹೇಗಿರಬೇಕಿತ್ತು ಮತ್ತು ಈಗ ಹೇಗಿದೆ?

ಸಾಹಿತಿ ತೇಜಸ್ವಿಯವರು ಒಂದು ಕಡೆ ಹೇಳಿರುವಂತೆ ಸ್ವಾತಂತ್ರ್ಯ ಸಂಗ್ರಾಮದ ನಂತರ ಹೋರಾಟದ ಅನುಭವವನ್ನು ಹಳ್ಳಿಗಳಲ್ಲಿ ಮೂಡಿಸಿದ್ದೇ ರೈತ ಚಳವಳಿ. ಹೋರಾಟ ರೈತರಿಗೆ ಸ್ವಾಭಿಮಾನವನ್ನು ಕಲಿಸಿಕೊಟ್ಟಿತು. ಸರಳವಿವಾಹ, ʼತಿಥಿ ಬಿಡಿ ಗಿಡ ನೆಡಿʼ, ʼಕೆರೆಕಟ್ಟೆ ಉಳಿಸಿʼ, ʼವಿಷಯುಕ್ತ ಆಹಾರ ಬೇಡʼ ಎಂಬಂತಹವು ಬಹಿರಂಗ ಜಾಗೃತಿ ಮೂಡಿಸಿದರೆ, ಸರಳವಾಗಿ ಪ್ರಾಮಾಣಿಕವಾಗಿ ಬದುಕಿ ಎಂಬ ಅಂತರಂಗದ ಎಚ್ಚರಿಕೆಗಳನ್ನೂ ರೈತ ಹೋರಾಟ ನೀಡಿದೆ.

ಆದರೆ ಈಗೀಗ ಹಸಿರು ಟವೆಲ್‌ ಹಾಕಿಕೊಂಡು ದಂಧೆ ಮಾಡುವವರು ಹೆಚ್ಚಿದ್ದಾರೆ. ಬೆರಳೆಣಿಕೆಯ ಅಂತಹವರಿಂದಾಗಿ ಸಂಘಕ್ಕೆ ಕೆಟ್ಟ ಹೆಸರು ಬಂದಿದೆ. ಇದು ಒಂದು ರೀತಿಯ ಅಪಾಯವಾದರೆ, ರೈತ ಸಂಘವನ್ನು ಬಳಸಿಕೊಂಡು ಎನ್‌ಜಿಒಗಳನ್ನು ಕಟ್ಟಿಕೊಳ್ಳುವ ಮಂದಿಯೂ ಇದ್ದಾರೆ. ಇವರಿಬ್ಬರಿಂದಲೂ ದೂರವಾಗಿ ಹೊಸ ಬಗೆಯ ರೈತ ಸಂಘಟನೆ ರೂಪಿಸುವುದು ಇಂದಿನ ತುರ್ತು.

ರೈತ ಸಂಘದ ಸದಸ್ಯರು ಇಡಿಯಾಗಿ ರಾಜಕಾರಣ ಪ್ರವೇಶಿಸಿದರೆ ಸಮಸ್ಯೆಗಳು ಬಗೆಹರಿಯಬಹುದೇ?

ಗಾಂಧೀಜಿಯವರು ನೇರವಾಗಿ ರಾಜಕೀಯಕ್ಕೆ ಧುಮುಕಿರಲಿಲ್ಲ. ಆದರೆ ಅವರು ಮಾಡುತ್ತಿದ್ದದ್ದು ಕೂಡ ವಿಶಾಲಾರ್ಥದಲ್ಲಿ ರಾಜಕಾರಣವೇ.‌ ಆ ನೆಲೆಯಲ್ಲಿ ರೈತ ಹೋರಾಟಗಳು ರಾಜಕಾರಣದ ಭಾಗವೇ ಆಗಿವೆ. ಆದರೆ ಈಗಿನ ಅನಿಷ್ಟ ಪರಿಸ್ಥಿತಿಯಲ್ಲಿ ʼಪಾರ್ಟಿಸಿಪೇಟರಿ ಪಾಲಿಟಿಕ್ಸ್‌ʼ ಬೇಕು ಎಂದು ಅನೇಕರಿಗೆ ಅನ್ನಿಸಿರಬಹುದು.

ಚಿಕ್ಕಂದಿನಿಂದಲೂ ಹೋರಾಟಗಳಲ್ಲಿ ತೊಡಗಿಕೊಂಡ ನಿಮ್ಮದು ಬಹುದೀರ್ಘ ಯಾನ. ಇಲ್ಲಿ ನಿಂತು ಭವಿಷ್ಯವನ್ನು ಎದುರುಗೊಳ್ಳುವಾಗ ಏನನ್ನಿಸುತ್ತದೆ?

ಹೋರಾಟಗಾರರ ಆಯಸ್ಸು ಕಡಿಮೆ ಇರುತ್ತದೆ. ಅವರಿಗೆ ವೈಯಕ್ತಿಕ ಜೀವನ ಎಂಬುದು ಇರುವುದಿಲ್ಲ. ಅನೇಕ ಹೋರಾಟಗಾರರು ಚಿಕ್ಕವಯಸ್ಸಿನಲ್ಲಿಯೇ ತೀರಿ ಹೋಗಿದ್ದಾರೆ. ನನಗೀಗ 58 ವರ್ಷ. ರೈತರ ಆತ್ಮಹತ್ಯೆಗಳು ನಿಂತಿಲ್ಲ. ಪ್ರಸ್ತುತ ಹೋರಾಟಗಳ ಮೇಲೆ ನಡೆಯುತ್ತಿರುವ ದಾಳಿ ನೋಡಿದರೆ ಎರಡನೇ ಸ್ವಾತಂತ್ರ್ಯ ಹೋರಾಟ ರೂಪುಗೊಳ್ಳುವುದು ಒಳಿತೇನೋ ಅನ್ನಿಸುತ್ತಿದೆ. ಅಂತಹ ಹೋರಾಟದಲ್ಲಿ ಎಲ್ಲರೂ ತೊಡಗಿಕೊಳ್ಳುವುದಾದರೆ ನಾನು ಜೈಲಿಗೆ ಹೋಗಲು ಕೂಡ ಸಿದ್ಧ.