ಸಂದರ್ಶನಗಳು

[ಅನುಸಂಧಾನ] ಒಂದೆಡೆ ವಿಧಾನಸೌಧ, ಮತ್ತೊಂದೆಡೆ ಹೈಕೋರ್ಟ್‌! ಬದುಕಿನ ಆಯ್ಕೆ ನನ್ನ ಮುಂದಿತ್ತು: ಮಾಜಿ ಸಚಿವ ಯು ಟಿ ಖಾದರ್

Ramesh DK

ನಾಡಿನ ಸಮಕಾಲೀನ ರಾಜಕಾರಣದ ಭರವಸೆಯ ನಾಯಕರಲ್ಲಿ ಯು ಟಿ ಖಾದರ್‌ ಒಬ್ಬರು. ಚಿಕ್ಕ ವಯಸ್ಸಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ನಗರಾಭಿವೃದ್ಧಿ ಮತ್ತು ವಸತಿಯಂತಹ ಮಹತ್ವದ ಖಾತೆಗಳನ್ನು ನಿರ್ವಹಿಸಿದ ಅವರು ಸಚಿವರಾಗಿದ್ದಾಗ ತೋರಿದ ಕಾರ್ಯಕ್ಷಮತೆಯಿಂದಾಗಿ ನಾಡಿನ ಗಮನ ಸೆಳೆದವರು. ಅಂತೆಯೇ ರಾಜಕಾರಣಿಯಾಗಿ ಖಾದರ್‌ ಎದುರಿಸಿದ ಸವಾಲುಗಳು ಕೂಡ ಅನೇಕ. ಶಾಸಕರಾಗಿದ್ದ ತಂದೆ ಯು ಟಿ ಫರೀದ್‌ ಅವರ ವರ್ಚಸ್ಸು ಜೊತೆಗಿದ್ದರೂ ತಮ್ಮದೇ ವ್ಯಕ್ತಿತ್ವ ರೂಪಿಸಿಕೊಳ್ಳಲು ಅವರು‌ ತುಳಿದದ್ದು ಅನನ್ಯ ಹಾದಿ. ವಿವಾದದ ಬಂಡೆಗಲ್ಲುಗಳು ಬಿದ್ದರೂ ಅವುಗಳನ್ನು ಪಕ್ಕಕ್ಕೆ ಸರಿಸಿ ನಡೆವ ಜಾಣ್ಮೆಯಿಂದಾಗಿ ನಾಡು ಅವರನ್ನು ವಿಶಿಷ್ಟ ರಾಜಕಾರಣಿಯಾಗಿ ಗುರುತಿಸುತ್ತದೆ.

ವೈದ್ಯನಾಗಬೇಕಿದ್ದ ಅವರು ವಕೀಲರಾದದ್ದು, ವಿದ್ಯಾರ್ಥಿಯಾಗಿದ್ದಾಗಲೇ ರಾಜಕಾರಣದ ಕನಸು ಕಂಡದ್ದು, ಸಾರ್ವಜನಿಕ ಬದುಕಿನ ಅನನ್ಯತೆ ಇತ್ಯಾದಿ ವಿಚಾರಗಳನ್ನು ʼಬಾರ್‌ ಅಂಡ್‌ ಬೆಂಚ್‌ʼ ಜೊತೆಗೆ ಖಾದರ್ ಅವರು ಹಂಚಿಕೊಂಡಿದ್ದಾರೆ. ಅವರ ಮಾತುಗಳಲ್ಲಿ ಸಾರ್ವಜನಿಕ ಬದುಕು- ವೈಯಕ್ತಿಕ ಜೀವನದ ತಾಕಲಾಟ, ತಾವು ಕಂಡ ವಿಶಿಷ್ಟ ವ್ಯಕ್ತಿಗಳು, ಕರಾವಳಿಯ ಚಕಮಕಿ ರಾಜಕಾರಣದ ಸೊಬಗು ಇಣುಕುವುದುಂಟು.

ಕಾನೂನು ಅಧ್ಯಯನ ಮಾಡಬೇಕೆಂದು ನಿಮಗೆ ಅನಿಸಲು ಪ್ರಮುಖ ಕಾರಣಗಳು ಏನು?

ನನ್ನನ್ನು ವೈದ್ಯನನ್ನಾಗಿ ಮಾಡುವ ಆಸೆ ಕುಟುಂಬದವರಿಗಿತ್ತು. ಹಾಗಾಗಿಯೇ ಸೈನ್ಸ್‌ ಕೊಡಿಸಿದ್ದರು. ಆದರೆ ಮಂಗಳೂರಿನ ಸೇಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಓದುವಾಗ ಗೊತ್ತಾಯಿತು- ವಿಜ್ಞಾನ ನನ್ನ ಹಾದಿ‌ ಅಲ್ಲ ಎಂದು. ಆಮೇಲೆ ಕಲಾ ವಿಭಾಗಕ್ಕೆ ಸೇರಿಕೊಂಡು ಕಾನೂನು ಅಧ್ಯಯನದಲ್ಲಿ ತೊಡಗಿದೆ. ಮೊದಲಿನಿಂದಲೂ ಮನೆಯಲ್ಲಿ ಇದ್ದ ರಾಜಕೀಯದ ವಾತಾವರಣವೂ ಕಾನೂನು ಅಧ್ಯಯನ ಮಾಡಲು ಒಂದು ಕಾರಣ. ಕಾನೂನು ಅಧ್ಯಯನ ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ. ಸಮಸ್ಯೆಗಳನ್ನು ಬಗಹರಿಸುವುದನ್ನು ತಿಳಿಸುತ್ತದೆ.

ಕಾನೂನು ಅಧ್ಯಯನ ಮಾಡುತ್ತಿದ್ದಾಗ ಯಾವ ಸಂಗತಿಗಳು ನಿಮ್ಮನ್ನು ಗಾಢವಾಗಿ ಪ್ರಭಾವಿಸಿದವು?

ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದಾಗ ಇದ್ದ ನನ್ನ ಗುರುಗಳಾದ ಪ್ರೊ ಉದಯಕುಮಾರ್‌, ರಾಜೇಂದ್ರ ಕುಮಾರ್‌ ಹಾಗೂ ಬಿ ಕೆ ರವೀಂದ್ರ ಅವರು ಮಾಡುತ್ತಿದ್ದ ಪಾಠಗಳು ನನ್ನ ಮೇಲೆ ಉತ್ತಮ ಪರಿಣಾಮ ಬೀರಿದವು, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಅನೇಕ ಪುಸ್ತಕಗಳು ನನ್ನನ್ನು ರೂಪಿಸಿವೆ. ಅನೇಕ ಸಮಸ್ಯೆಗಳನ್ನು - ಅವು ನನ್ನವಾಗಿರಬಹುದು ಅಥವಾ ಬೇರೆಯವರದ್ದಾಗಿರಬಹುದು - ಬಗೆಹರಿಸಲು ಆ ಪುಸ್ತಕಗಳು ಸಾಧನಗಳಾಗಿವೆ.

ಚರ್ಚೆಯಲ್ಲಿ ಮಗ್ನ.

ರಾಜಕಾರಣಕ್ಕೆ ಬರಲೆಂದೇ ಕಾನೂನು ಅಧ್ಯಯನದಲ್ಲಿ ತೊಡಗಿದಿರಾ?

ಹೌದು. ಚಿಕ್ಕಂದಿನಿಂದಲೂ ನನಗೆ ರಾಜಕೀಯದ ಬಗ್ಗೆ ವಿಶೇಷ ಆಸಕ್ತಿ ಇತ್ತು. ಶಾಲೆ ಕಾಲೇಜುಗಳಲ್ಲಿ ನಡೆಯುತ್ತಿದ್ದ ಚುನಾವಣೆಗಳಲ್ಲಿ ಯಾರನ್ನು ನಿಲ್ಲಿಸಬೇಕು, ಯಾರನ್ನು ಗೆಲ್ಲಿಸಬೇಕು ಎಂಬ ಬಗ್ಗೆ ಗೆಳೆಯರೊಡಗೂಡಿ ನಿರ್ಧರಿಸುತ್ತಿದ್ದೆ. ವಿದ್ಯಾರ್ಥಿ ದೆಸೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಸೆನೆಟ್‌ ಸದಸ್ಯನಾಗಿದ್ದೆ. ಆಗ ಆ ಹುದ್ದೆಗೆ ಭಾರಿ ಪೈಪೋಟಿ ಇತ್ತು.

ಬೆಂಗಳೂರಿನಲ್ಲಿ ಈಗಿನ ವಿಕಾಸ ಸೌಧದ ಎದುರು ಒಂದು ಸರ್ಕಲ್‌ ಇತ್ತು. ಆ ವೃತ್ತದ ಹೆಸರು ಈಗ ಮರೆತಿರುವೆ. ಅಲ್ಲಿಂದ ಎಡಕ್ಕೆ ವಿಧಾನಸೌಧ, ಬಲಕ್ಕೆ ಹೈಕೋರ್ಟ್‌ ಕಾಣುತ್ತದೆ. ಅಲ್ಲಿ ನಿಂತು ನನ್ನ ಬದುಕು, ಎಡಕ್ಕಿರುವ ವಿಧಾನಸೌಧದತ್ತ ಹೊರಳಬೇಕು ಇಲ್ಲವೇ ಬಲಕ್ಕಿರುವ ಹೈಕೋರ್ಟ್‌ನತ್ತಾದರೂ ಹೊರಳಬೇಕು ಎಂದುಕೊಳ್ಳುತ್ತಿದ್ದೆ.

ನಿಮ್ಮ ಮೇಲೆ ಗಾಢ ಪ್ರಭಾವ ಬೀರಿದ ನ್ಯಾಯಿಕ ಲೋಕದ ಪ್ರಮುಖರು ಯಾರು?

ನಾನು ಕಾಲೇಜು ಕಲಿಯುತ್ತಿದ್ದಾಗ ರಾಂ ಜೇಠ್ಮಲಾನಿ ಮತ್ತು ಕಪಿಲ್‌ ಸಿಬಲ್‌ ಅವರ ಹೆಸರು ಸಾಕಷ್ಟು ಕೇಳಿ ಬರುತ್ತಿತ್ತು. ಆದರೆ ಅವರಂತೆ ವಕೀಲನಾಗಬೇಕು ಎಂದು ಕನಸು ಕಂಡದ್ದಿದೆ. ಹಾಗೆಯೇ ನಾನು ವಕೀಲಿಕೆ ಅಭ್ಯಾಸ ಮಾಡಿದ ನ್ಯಾಯವಾದಿ ಸೀತಾರಾಂ ಶೆಟ್ಟಿ ಅವರ ಪ್ರಭಾವವೂ ನನ್ನ ಮೇಲಿದೆ.

ಸಭೆಯ ಬಳಿಕ.

ಕಾನೂನು ಕಲಿತವರಲ್ಲೇ ಹೆಚ್ಚಾಗಿ ರಾಜಕಾರಣಿಯಾಗುವ ಕನಸು ಮೊಳೆಯುತ್ತದೆ ಏಕೆ?

ಕಾನೂನು ಅಧ್ಯಯನ ಮಾಡಲು ಬರುವ ವ್ಯಕ್ತಿಗಳಲ್ಲಿ ಒಂದು ವಿಶೇಷ ಇರುತ್ತದೆ. ಅದು ಸಮಾಜಸೇವೆ ಮಾಡಬೇಕೆಂಬುದು. ಆತ ಬಡವನೇ ಇರಲಿ ಶ್ರೀಮಂತನೇ ಇರಲಿ, ಪರೋಪಕಾರ ಮಾಡಬೇಕೆಂಬ ಮನೋಭಾವ ಅವರದ್ದಾಗಿರುತ್ತದೆ. ಸಹಜವಾಗಿಯೇ ಸಮಾಜಸೇವೆಗೆ ಸೂಕ್ತ ತಾಣ ರಾಜಕಾರಣ. ಅನೇಕರಿಗೆ ಕಾನೂನು ಕಲಿತು ರಾಜಕಾರಣಕ್ಕೆ ಬರಬೇಕೆಂಬ ಹುಕ್ಕಿಗಿಂತಲೂ ಸಮಾಜ ಸೇವೆಯ ಹುಮ್ಮಸ್ಸು ಇರುತ್ತದೆ. ವಿದ್ಯಾರ್ಥಿದೆಸೆಯಿಂದಲೇ ಅಂತಹವರು ಸಮಾಜಕ್ಕಾಗಿ ಏನನ್ನಾದರೂ ಕೊಡುಗೆ ನೀಡುವ ಕನಸು ಕಂಡಿರುತ್ತಾರೆ.

ರಾಜಕಾರಣದ ಆರಂಭದ ದಿನಗಳ ಬಗ್ಗೆ ಹೇಳಿ.

ನನ್ನ ತಂದೆ ಯು ಟಿ ಫರೀದ್‌ ಅವರ ನಿಧನಾನಂತರ ನಾನು ಉಳ್ಳಾಲ ಕ್ಷೇತ್ರದಿಂದ (ಈಗಿನ ಮಂಗಳೂರು ವಿಧಾನಸಭಾ ಕ್ಷೇತ್ರ) ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದೆ. ಅದಕ್ಕೂ ಮೊದಲಿನಿಂದ ಅಂದರೆ ಕಾಲೇಜು ದಿನಗಳಿಂದ ಕರಾವಳಿಯ ಹಿರಿಯ ರಾಜಕಾರಣಿಗಳಾದ ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ, ಆಸ್ಕರ್‌ ಫರ್ನಾಂಡಿಸ್‌ ಅವರ ಒಡನಾಟವಿತ್ತು.

ಎಂದಾದರೂ ತಮಗೆ ರಾಜಕಾರಣ ಬೇಡ, ವಕೀಲಿಕೆಯೇ ಚೆನ್ನಾಗಿರುತ್ತಿತ್ತು ಅನ್ನಿಸಿದ್ದಿದೆಯೇ?

ಇಲ್ಲ. ಜನರ ಕಣ್ಣೀರನ್ನು ಒರೆಸುವ ಕೆಲಸ ರಾಜಕಾರಣದಿಂದ ಸಾಧ್ಯ. ವೈದ್ಯರು, ಚಾರ್ಟಡ್‌ ಅಕೌಂಟೆಂಟ್‌ ಅಥವಾ ವಕೀಲರಿಗೆ ದಿನಕ್ಕೆ ಕೆಲ ಪ್ರಕರಣಗಳು ಸಿಗಬಹುದು. ಆದರೆ ರಾಜಕಾರಣಿ ದಿನಕ್ಕೆ ಸಾವಿರಾರು ಪ್ರಕರಣಗಳನ್ನು ಬಗೆಹರಿಸಬೇಕಾಗುತ್ತದೆ. ಅದೊಂದು ರೀತಿಯಲ್ಲಿ ವರ.
ದೀರ್ಘ ರಾಜಕಾರಣದ ಬಳಿಕ ನಮ್ಮ ತಂದೆ ಸಾವನ್ನಪ್ಪಿದರು. ಬೇರೆ ರಾಜಕಾರಣಿಗಳು ಅಕಾಲಿಕವಾಗಿ ಸಾವನ್ನಪ್ಪುವುದನ್ನು ನೋಡಿದಾಗ ರಾಜಕಾರಣ ಸಾಕು ಅನ್ನಿಸಿದ್ದಿದೆ. ಆದರೆ ಅದರ ಬಗ್ಗೆ ದ್ವೇಷ ಇಲ್ಲ. ಕೆಲವು ವಕೀಲರು ಕರೆದರೂ ರಾಜಕಾರಣಕ್ಕೆ ಬರುವುದಿಲ್ಲ. ಕೆಲವು ರಾಜಕಾರಣಿಗಳಿಗೆ ವಕೀಲಿಕೆಯ ತುಡಿತ ದಟ್ಟವಾಗಿ ಇರುವುದಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯ ಮತ್ತೊಬ್ಬ ರಾಜಕಾರಣಿ ಬಾವಾ ಮತ್ತಿತರರೊಂದಿಗೆ.

ನಿಮ್ಮ ತಂದೆಯವರ ಪ್ರಭಾವ ನಿಮ್ಮ ಮೇಲೆ ದಟ್ಟವಾಗಿದೆ. ಆ ಪ್ರಭಾವವನ್ನೂ ಬಿಡಿಸಿಕೊಂಡು ನಿಮ್ಮದೇ ಒಂದು ವರ್ಚಸ್ಸನ್ನು ಬೆಳೆಸಿಕೊಳ್ಳುವುದು ಹೇಗೆ ಸಾಧ್ಯವಾಯಿತು?

ಅವರ ಮಗ ಎಂಬ ಕಾರಣಕ್ಕೆ ನಾನು ಅವರ ಹೆಸರು ಹೇಳಿಕೊಂಡು ಓಡಾಡಲಿಲ್ಲ. ನನ್ನದೇ ಆದ ರೀತಿಯಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಮೊದಲಿನಿಂದಲೂ ತೊಡಗಿಕೊಂಡಿದ್ದೆ. ಸಮಸ್ಯೆಗಳನ್ನು ಇತ್ಯರ್ಥಪಡಿಸುವುದನ್ನು ಕಲಿತಿದ್ದೆ. ಹಾಗಾಗಿ ಅವರ ನೆರಳಿನಿಂದ ಹೊರಬರುವುದು ಕಷ್ಟವಾಗಲಿಲ್ಲ.

ಒಬ್ಬ ರಾಜಕಾರಣಿಯಾಗಿ ನಿಮ್ಮ ತಂದೆ ನಿಮಗೆ ಹೇಳುತ್ತಿದ್ದ ಮಾತುಗಳು ಯಾವುವು?

ʼಕೆಲಸ ಆಗುತ್ತದೆ ಅಂದರೆ ಆಗುತ್ತದೆ ಎಂದು ಹೇಳು. ಇಲ್ಲ ಅಂದರೆ ಇಲ್ಲ ಎಂದು ಹೇಳು. ಆದರೆ ಕೊಟ್ಟಮಾತಿಗೆ ಯಾವತ್ತೂ ತಪ್ಪಬೇಡ. ನಿರ್ಧಾರಗಳನ್ನು ಪ್ರಕಟಿಸುವಾಗ ಅದೆಷ್ಟೇ ಕಠೋರವಾಗಿದ್ದರೂ ಪ್ರಕಟಿಸಿಬಿಡಬೇಕುʼ ಎನ್ನುತ್ತಿದ್ದರು. ತಪ್ಪು ಮಾಡಿ ಯಾರೇ ಬಂದಿದ್ದರೂ ಅವರನ್ನು ಹತ್ತಿರ ಸೇರಿಸುತ್ತಿರಲಿಲ್ಲ. ಬೈದು ಕಳಿಸುತ್ತಿದ್ದರು.

ದಕ್ಷಿಣ ಕನ್ನಡದ ಅಷ್ಟೇ ಏಕೆ ಕರ್ನಾಟಕದ ರಾಜಕೀಯ ಭೂಪಟದಲ್ಲಿ ಕಲ್ಲಡ್ಕ ಮತ್ತು ಉಳ್ಳಾಲ ಬಹಳ ಮುಖ್ಯವಾದ ನೆಲೆಗಳು ಅನ್ನಿಸುತ್ತದೆಯೇ?

(ನಗುತ್ತಾ) ಉಳ್ಳಾಲಕ್ಕೆ ತನ್ನದೇ ಆದ ಸಂಸ್ಕೃತಿ ಇದೆ. ಕಲ್ಲಡ್ಕಕ್ಕೂ ಅದರದ್ದೇ ಆದ ಸಂಸ್ಕೃತಿ ಇದೆ. ಕಲ್ಲಡ್ಕದ ಪ್ರಕೃತಿ, ಸಂಸ್ಕೃತಿ ಕೂಡ ದೊಡ್ಡದು. ಯಾರೋ ಒಂದಿಬ್ಬರ ಕಾರಣಕ್ಕಾಗಿ ಇಡೀ ಊರು ಸರಿ ಇಲ್ಲ ಎನ್ನಲಾಗದು. ಪ್ರೀತಿ, ಸೌಹಾರ್ದ, ಅಭಿವೃದ್ಧಿ ನಮ್ಮ ಮಂತ್ರ.

ತಮ್ಮ ನೆಚ್ಚಿನ ರಾಜಕಾರಣಿ ಸಿದ್ದರಾಮಯ್ಯ ಅವರೊಟ್ಟಿಗೆ

ನೀವು ತುಂಬಾ ಇಷ್ಟಪಡುವ ರಾಜಕಾರಣಿ ಯಾರು ಮತ್ತು ಯಾಕೆ?

ಇಬ್ಬರು ರಾಜಕಾರಣಿಗಳನ್ನು ನಾನು ತುಂಬಾ ಇಷ್ಟಪಡುತ್ತೇನೆ. ಇಂದಿರಾಗಾಂಧಿ ನಾಯಕತ್ವ ನನಗಿಷ್ಟ. ಬಾಂಗ್ಲಾದೇಶ ವಿಮೋಚನೆಯ ಸುವರ್ಣ ಸಂಭ್ರಮಾಚರಣೆ ಈಗ ನಡೆಯುತ್ತಿದೆ. ಅದಕ್ಕೆ ಕಾರಣ ಇಂದಿರಾಗಾಂಧಿ. ಬಡವರು ಶೋಷಿತರಿಗೆ ಅವರು ಒದಗಿಸಿದ ನ್ಯಾಯವನ್ನು ಮರೆಯುವಂತಿಲ್ಲ. ರಷ್ಯಾವೇ ಇರಲಿ ಅಮೆರಿಕವೇ ಇರಲಿ ದಿಟ್ಟತನದಿಂದ ಎರಡೂ ದೇಶಗಳ ಜೊತೆ ನಡೆದುಕೊಳ್ಳುತ್ತಿದ್ದರು. ಯುವ ರಾಜಕಾರಣಿಗಳು ಇಂದಿರಾಗಾಂಧಿ ಅವರಿಂದ ಕಲಿಯಬೇಕಾದ ಪಾಠ ಬಹಳಷ್ಟಿದೆ. ಪಕ್ಷ ಮತ್ತು ಆಡಳಿತ ಎರಡರ ಜೊತೆ ಅವರು ನಡೆದುಕೊಳ್ಳುತ್ತಿದ್ದ ರೀತಿ ಮಾದರಿಯದ್ದು.

ಮತ್ತೊಬ್ಬ ರಾಜಕಾರಣಿ ಸಿದ್ದರಾಮಯ್ಯ. ಅವರ ಸಚಿವ ಸಂಪುಟದಲ್ಲಿ ಕಾರ್ಯ ನಿರ್ವಹಿಸಿದ್ದು ಅನೇಕ ವಿಚಾರಗಳನ್ನು ನನಗೆ ಕಲಿಸಿಕೊಟ್ಟಿತು. ಅವರು ಜನರಿಗಾಗಿ ಹಮ್ಮಿಕೊಳ್ಳುತ್ತಿದ್ದ ಕಾರ್ಯಕ್ರಮಗಳು ಸ್ಫೂರ್ತಿಯೊದಗಿಸುತ್ತಿದವು. ಗುತ್ತಿಗೆ ಕಾರ್ಮಿಕರನ್ನು ಏನಾದರೂ ಮಾಡಿ ಕಾಯಂಗೊಳಿಸಬೇಕು ಎಂದು ಅವರು ಕನಸು ಕಂಡಿದ್ದರು. ಪೌರಕಾರ್ಮಿಕರ ಕುರಿತಾದ ಅವರ ಕಾಳಜಿಯನ್ನು ಮರೆಯುವಂತಿಲ್ಲ.

ತಾವು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವುದು ಒಂದು ಸವಾಲೇ?

ಖಂಡಿತವಾಗಿಯೂ ಇಲ್ಲ. ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವುದೇ ರಾಜಕಾರಣ. ನಮ್ಮ ಮೇಲೆ ವಿಶ್ವಾಸ ಇಲ್ಲದವರು ನಾವೇನೆಂದು ಅರಿತ ಮೇಲೆ ಸರಿ ಹೋಗುತ್ತಾರೆ. ನಮ್ಮ ಮೇಲೆ ವಿಶ್ವಾಸ ಮೂಡಿದ ಮೇಲೆ ತಾವು ಗ್ರಹಿಸಿದ್ದು ತಪ್ಪು ಎಂಬುದು ಅರಿವಿಗೆ ಬರುತ್ತದೆ. ಹಾಗಾಗಿ ಅದೆಲ್ಲಾ ಸವಾಲು ಅಲ್ಲ.