ಸಂದರ್ಶನಗಳು

ಕೋವಿಡ್ ಎರಡನೇ ಅಲೆ ಎದುರಿಸಲು ಕೊಪ್ಪಳ ಜಿಲ್ಲಾ ವಕೀಲರ ಸಂಘ ಪೂರ್ವತಯಾರಿ ಮಾಡಿಕೊಂಡಿದೆ: ಹೆಚ್ ಹೆಚ್ ಮುರಡಿ

"ಎರಡನೇ ಅಲೆ ಮೊದಲನೆಯದರಂತೆ ಇಲ್ಲ. ಇದು ತುಂಬಾ ಅಪಾಯಕಾರಿ. ಈ ಹಂತದಲ್ಲಿ ಎಸ್ಒಪಿಯನ್ನು ಪಾಲಿಸುವುದು ವಕೀಲ ಸಮುದಾಯದ ಆದ್ಯ ಕರ್ತವ್ಯ. ಹಾಗಾಗಿ ಸುಪ್ರೀಂಕೋರ್ಟ್, ಹೈಕೋರ್ಟ್ ಕಾಲಕಾಲಕ್ಕೆ ನೀಡುವ ಎಸ್ಒಪಿಯನ್ನು ಪಾಲಿಸುವಂತೆ ಮನವಿ ಮಾಡುತ್ತೇನೆ."

Ramesh DK

ಕೊಪ್ಪಳ ಜಿಲ್ಲೆ ಕನಕಗಿರಿಯ ಕನಕಾಪುರದಲ್ಲಿ ಆರಂಭಿಕ ಶಿಕ್ಷಣ ಪೂರೈಸಿದ ಹನುಮೇಶ ಹೆಚ್‌ ಮುರಡಿ ಅವರು ಎಂ ಕಾಂ ಮಾಡಿದ್ದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ. ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಲೇ ಅವರು ಧಾರವಾಡದ ಹುರಕಡ್ಲಿ ಅಜ್ಜ ಸಂಜೆ ಕಾನೂನು ಕಾಲೇಜಿನಲ್ಲಿ ಅಧ್ಯಯನ ಮುಂದುವರೆಸಿದರು. ಕೊಪ್ಪಳ ಜಿಲ್ಲೆಯಾಗಿ ರೂಪುಗೊಂಡ ಬಳಿಕ ಅಲ್ಲಿಗೆ ಮರಳಿದ ಅವರು ಕಳೆದ ಇಪ್ಪತ್ನಾಲ್ಕು ವರ್ಷಗಳಿಂದ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭೂಸ್ವಾಧೀನ ಪ್ರಕರಣಗಳಲ್ಲಿ ರೈತರ ಪರ ಹೋರಾಟ ಮಾಡಿ ನ್ಯಾಯ ದೊರಕಿಸಿಕೊಟ್ಟ ಹೆಗ್ಗಳಿಕೆ ಅವರದು. ಕಳೆದ ಎರಡು ವರ್ಷಗಳಿಂದ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜಿಲ್ಲೆಯ ವಕೀಲರು ಕೋವಿಡ್‌ ಸಂದರ್ಭದಲ್ಲಿ ಎದುರಿಸಿದ ಸಂಕಷ್ಟಗಳ ಕುರಿತು ʼಬಾರ್‌ ಅಂಡ್‌ ಬೆಂಚ್ʼ ಜೊತೆ ಮಾತನಾಡಿದ ಮುರಡಿ ಅವರು ಕೋವಿಡ್‌ ಎರಡನೇ ಅಲೆ ಎದುರಿಸುವ ಕುರಿತಂತೆ ವಿವಿಧ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸರ್ಕಾರಗಳನ್ನಷ್ಟೇ ದೂಷಿಸದೆ ಕೋವಿಡ್‌ ಪರಿಸ್ಥಿತಿ ಎದುರಿಸಲು ವಕೀಲ ಸಮುದಾಯವೂ ಶ್ರಮಿಸಬೇಕು ಎಂಬ ನಿಲುವು ಅವರದು. ಕಳೆದ ವರ್ಷ ನೆರವಿಗೆ ಬಂದಂತೆ ಈ ವರ್ಷವೂ ವಕೀಲ ಸಮುದಾಯಕ್ಕೆ ಅಗತ್ಯ ನೆರವು ದೊರೆಯಲಿದೆ ಎಂಬ ಆಶಾವಾದ ಅವರ ಮಾತುಗಳಲ್ಲಿ ವ್ಯಕ್ತವಾಗಿದೆ.

ಕೋವಿಡ್‌ ಎರಡನೇ ಅಲೆ ಕೊಪ್ಪಳ ಜಿಲ್ಲೆಯ ವಕೀಲ ಸಮುದಾಯದ ಮೇಲೆ ಯಾವ ರೀತಿಯ ಪ್ರಭಾವ ಬೀರಿದೆ?

ಕಳೆದ ವರ್ಷ ಕೋವಿಡ್‌ ಅಪ್ಪಳಿಸಿದಾಗ ಎಲ್ಲರೂ ಕೈಕಟ್ಟಿ ಮನೆಯಲ್ಲಿ ಕುಳಿತಿದ್ದೆವು. ಆಗ ಅಷ್ಟಾಗಿ ಜೀವ ಭಯ ಇರಲಿಲ್ಲ. ಆಗ ವಕೀಲ ಸಮುದಾಯಕ್ಕೆ ಜೀವನ ಮಾಡುವುದು ಹೇಗೆ ಎಂಬುದು ದೊಡ್ಡ ಸಮಸ್ಯೆಯಾಗಿತ್ತು. ಕೋವಿಡ್‌ ಎರಡನೇ ಅಲೆಯ ಈ ಸಂದರ್ಭದಲ್ಲಿ ಜೀವ ಭಯ ಹೆಚ್ಚಿದೆ. ರೋಗ ಈ ಬಾರಿ ಹೆಚ್ಚು ಮಾರಣಾಂತಿಕವಾಗಿದೆ. ಜನರ ಸಾವಿನ ಸಂಖ್ಯೆ ಹೆಚ್ಚಿದೆ. ಶವಗಳನ್ನು ಹೂಳಲು ಕೂಡ ಜನ ಸಿಗುತ್ತಿಲ್ಲ. ಒಂಬತ್ತು ಜಿಲ್ಲೆಗಳಲ್ಲಿ ಈಗಾಗಲೇ ಕಕ್ಷೀದಾರರ ಖುದ್ದು ಹಾಜರಾತಿಯನ್ನು ಮಾನ್ಯ ಹೈಕೋರ್ಟ್‌ ನಿರ್ಬಂಧಿಸಿದೆ. ಆತಂಕದ ವಾತಾವರಣದಲ್ಲಿ ಕೊಪ್ಪಳ ಜಿಲ್ಲೆಯ ವಕೀಲ ಸಮುದಾಯವೂ ಇದೆ. ಆದರೆ ನ್ಯಾಯಾಲಯದ ಕೆಲಸ ಕಾರ್ಯಗಳಿಗೆ ಇದುವರೆಗೆ ದೊಡ್ಡಮಟ್ಟದ ತೊಂದರೆ ಆಗಿಲ್ಲ.

ವರ್ಷದ ಹಿಂದೆ ಕೊಪ್ಪಳ ಜಿಲ್ಲಾ ವಕೀಲರ ಸಂಘ ಹೇಗೆ ಕೋವಿಡ್‌ ದಾಳಿಯನ್ನು ಎದುರಿಸಿತು?

ಕಳೆದ ವರ್ಷ 100- 120 ಮಂದಿ ಕೋವಿಡ್‌ ಸೋಂಕಿಗೆ ತುತ್ತಾದರು. ಅದರಲ್ಲಿ ಸಂಘದ ಒಬ್ಬ ಸದಸ್ಯ ಅಸುನೀಗಿದರು. ಜೀವನ ನಡೆಸಲು ಆಗ ಸಾಕಷ್ಟು ತೊಂದರೆ ಅನುಭವಿಸಿದ್ದ ಯುವ ವಕೀಲರಿಗೆ ಆಹಾರದ ಕಿಟ್‌ ಒದಗಿಸಿದೆವು. ಅಲ್ಲದೆ ತೀವ್ರ ತೊಂದರೆಯಲ್ಲಿದ್ದವರಿಗೆ ಸಂಘದ ವತಿಯಿಂದ ಒಟ್ಟು 1.5 ಲಕ್ಷ ಧನ ಸಹಾಯ ಮಾಡಿದೆವು. ಜಿಲ್ಲೆಯಲ್ಲಿ ಸುಮಾರು ಐನೂರು ವಕೀಲರಿದ್ದಾರೆ. ಅವರೆಲ್ಲರಿಗೂ ಸಹಾಯ ಹಸ್ತ ಚಾಚಿದ್ದೇವೆ. ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳಿಂದ ದೊರೆಯುವ ಸಹಾಯಧನವನ್ನು ಕೂಡ ಸಂಘ, ವಕೀಲ ಸಮುದಾಯಕ್ಕೆ ಹಂಚಿದೆ. ವಕೀಲರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯ ಮಾಡಲಾಗಿದೆ.

ಎರಡನೇ ಅಲೆಯನ್ನು ಎದುರಿಸಲು ಸಂಘ ಹೇಗೆ ಅಣಿಯಾಗಿದೆ?

ಅಗತ್ಯ ಪೂರ್ವತಯಾರಿಯನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ. ಸುಮಾರು ಆರು ತಿಂಗಳ ಕಾಲ ವಕೀಲ ಸಮುದಾಯ ತೊಂದರೆ ಎದುರಿಸದಂತೆ ಸಂಘ ನೋಡಿಕೊಳ್ಳಲಿದೆ. ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ ನೆರವು ನೀಡುವಲ್ಲಿ ನಾವು ಹಿಂದೆ ಬೀಳುವುದಿಲ್ಲ. ಜಿಲ್ಲಾ ವೈದ್ಯಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದೇವೆ. ವಕೀಲರಿಗೆ ಲಸಿಕೆ ಒದಗಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

ಮತ್ತೆ ಕಠಿಣ ರೂಪದ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ಜಾರಿಯಾದರೆ ಏನು ಮಾಡುವಿರಿ?

ಎರಡನೇ ಅಲೆ ಮೊದಲನೆಯದರಂತೆ ಇಲ್ಲ. ಇದು ತುಂಬಾ ಅಪಾಯಕಾರಿ. ಈ ಹಂತದಲ್ಲಿ ಎಸ್‌ಒಪಿಯನ್ನು ಪಾಲಿಸುವುದು ವಕೀಲ ಸಮುದಾಯದ ಆದ್ಯ ಕರ್ತವ್ಯ. ಹಾಗಾಗಿ ಸುಪ್ರೀಂಕೋರ್ಟ್‌, ಹೈಕೋರ್ಟ್‌ ಕಾಲಕಾಲಕ್ಕೆ ನೀಡುವ ಎಸ್‌ಒಪಿಯನ್ನು ಪಾಲಿಸುವಂತೆ ಆ ಮೂಲಕ ವಕೀಲ ಸಂಘಗಳ ಘನತೆ ಗೌರವವನ್ನು ಎತ್ತಿ ಹಿಡಿಯುವಂತೆ ಸಂಘದ ಅಧ್ಯಕ್ಷನಾಗಿ ಮತ್ತು ವೈಯಕ್ತಿಕವಾಗಿ ನಾನು ಮನವಿ ಮಾಡುತ್ತೇನೆ.

ಎರಡನೇ ಅಲೆ ಎದುರಿಸಲು ಸರ್ಕಾರ ಯಾವ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ?

ಸರ್ಕಾರ ಲಸಿಕೆಗಳನ್ನು ಪೂರೈಸಲು, ಅಗತ್ಯ ಅನುದಾನ ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದೆ. ಮುಖ್ಯಮಂತ್ರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಸಚಿವರು ಕೂಡ ಶ್ರಮಿಸುತ್ತಿದ್ದಾರೆ. ಸರ್ಕಾರ ಏನು ಮಾಡುತ್ತಿದೆ ಎಂಬುದಕ್ಕಿಂತಲೂ ವಕೀಲ ಸಮುದಾಯ ಕೋವಿಡ್‌ ನಿಯಂತ್ರಣಕ್ಕೆ ಹೇಗೆ ಮುಂದಾಗುತ್ತಿದೆ ಎಂಬುದು ಮುಖ್ಯ. ಕಳೆದ ಬಾರಿ ಜನಪ್ರತಿನಿಧಿಗಳು ನೀಡಿದ ಸಹಾಯವನ್ನು ಈ ಬಾರಿಯೂ ವಕೀಲರಿಗೆ ಒದಗಿಸಲಿದ್ದಾರೆ ಎಂದು ನಾನು ನಂಬಿದ್ದೇನೆ.

ಕೋವಿಡ್‌ ಮೊದಲ ಆಕ್ರಮಣದ ಸಮಯದಲ್ಲಿ ರಾಜ್ಯ ವಕೀಲರ ಪರಿಷತ್ತು (ಕೆಎಸ್‌ಬಿಸಿ) ಹೇಗೆ ಸ್ಪಂದಿಸಿತು?

ರಾಜ್ಯ ಸರ್ಕಾರ ನೀಡಿದ್ದ ರೂ ಐದು ಕೋಟಿ ಹಣವನ್ನು ಕೆಎಸ್‌ಬಿಸಿ ವಕೀಲರಿಗೆ ಹಂಚುವ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಸರ್ಕಾರ ನೀಡಿದ ಧನಸಹಾಯ ಲಕ್ಷಾಂತರ ವಕೀಲರಿಗೆ ಸಾಲುವುದಿಲ್ಲ ಎಂಬುದು ನಿಜ. ಆದರೆ ಅದನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಕೆಎಸ್‌ಬಿಸಿಯಿಂದ ಆಗಿದೆ.

ವಕೀಲರು ನೀಡಿದ ಹಣ ಪರಿಷತ್ತಿನಲ್ಲಿರುವುದು ನಿಜ. ಆದರೆ ಅದನ್ನು ವಕೀಲರ ನಿವೃತ್ತಿ ಸಂದರ್ಭದಲ್ಲಿ ವಿನಿಯೋಗಿಸಲು ಕೂಡಿಸಿಡಲಾಗಿದೆ. ಆ ಹಣವನ್ನು ಕೋವಿಡ್‌ ರೀತಿಯ ಸಂದರ್ಭಗಳಿಗೆ ಬಳಸಲು ಕಾನೂನಿನಡಿ ಅವಕಾಶವಿಲ್ಲ. ಅದು ವಕೀಲರ ಕಷ್ಟಕಾಲಕ್ಕೆ ಅವರ ಮಕ್ಕಳ ಭವಿಷ್ಯಕ್ಕೆ ನೆರವಾಗಲು ಮೀಸಲಿರಿಸಿದ ಶಾಶ್ವತ ನಿಧಿ.

ಎರಡನೇ ಅಲೆ ಎದುರಿಸಲು ಕೆಎಸ್‌ಬಿಸಿ ಅಣಿಯಾಗಿದೆಯೇ?

ಕೆಎಸ್‌ಬಿಸಿಯಲ್ಲಿ ಆ ಬಗ್ಗೆ ಚರ್ಚೆ ನಡೆದಿರುವ ಕುರಿತಾದ ಮಾಹಿತಿ ಇಲ್ಲ. ಆದರೆ ಅದು ಶೇಕಡಾ ನೂರರಷ್ಟು ಸಹಾಯ ಮಾಡುತ್ತದೆ ಎಂಬ ಭರವಸೆ ಇದೆ.