Anil Benake Belagavi North MLA
ಸಂದರ್ಶನಗಳು

[ಅನುಸಂಧಾನ] 'ಇಂವ ಜಡ್ಜ್ ಆಗ್ತಾನಾ? ಇಲ್ಲ ವಕೀಲ ಆಗ್ತಾನಾ?' ಎನ್ನುತ್ತಿದ್ದಳು ಅಜ್ಜಿ: ಶಾಸಕ ಅನಿಲ್ ಬೆನಕೆ

ಕಾನೂನು ಶಿಕ್ಷಣ ಮತ್ತು ವಕೀಲಿಕೆಯ ಹಿನ್ನೆಲೆಯಿಂದ ಬಂದು ಸಮಾಜದ ವಿವಿಧ ವಲಯಗಳಲ್ಲಿ ಗುರುತರ ಸಾಧನೆ ಮಾಡಿದ ಸಾಧಕರೊಂದಿಗಿನ ಮಾತುಕತೆಯೇ ಈ 'ಅನುಸಂಧಾನ'.

Siddesh M S

ಬಡತನವನ್ನೇ ಹಾಸಿ ಹೊದೆದಿದ್ದ ಐವರು ಸಹೋದರರು ಮತ್ತು ಓರ್ವ ಸಹೋದರಿಯನ್ನು ಒಳಗೊಂಡ ದೊಡ್ಡ ಕುಟುಂಬದಲ್ಲಿ ಜನಿಸಿದವರು ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್‌ ಬೆನಕೆ. ಊಟ, ಬಟ್ಟೆಯೇ ದುರ್ಲಭ ಎನ್ನುವಂತಿದ್ದಾಗ ಶಿಕ್ಷಣ ಪಡೆಯಬೇಕೆಂಬ ಬೆನಕೆಯವರ ಹಠವು ಅಜ್ಜಿಯ ಜೊತೆ ವಾಗ್ವಾದಕ್ಕೆ ಕಾರಣವಾಗುತ್ತಿತ್ತಂತೆ. ಬದುಕಿನ ಬವಣೆ ಅಜ್ಜಿಯನ್ನು ಕೆಂಡಾಮಂಡಲವಾಗುವಂತೆ ಮಾಡುತ್ತಿದ್ದರೂ ಶಿಕ್ಷಣ ಪಡೆಯುವ ವಿಚಾರದಿಂದ ಬೆನಕೆ ಅಥವಾ ಅವರ ಸಹೋದರ-ಸಹೋದರಿಯರು ಹಿಂದೆ ಸರಿಯಲಿಲ್ಲ. ಅಜ್ಜಿಯ ಮೂದಲಿಕೆಯೇ ಒಂದು ರೀತಿಯಲ್ಲಿ ಕಾನೂನು ಶಿಕ್ಷಣ ಪಡೆದು, ವಕೀಲಿಕೆ ಮಾಡುವುದರ ಜೊತೆಗೆ ಇಂದು ಶಾಸಕನಾಗಲು ಕಾರಣವಾಗಿರಬಹುದು ಎನ್ನುತ್ತಾರೆ ಬೆನಕೆ.

ಕಾನೂನು ವಿದ್ಯಾರ್ಥಿಯಾಗಿದ್ದಾಗ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಭಾರತದ ಚರಿತ್ರೆಯಲ್ಲಿ ಮಹತ್ವದ ಸ್ಥಾನ ಗಳಿಸಿರುವ ಮಂಡಲ್‌ ಹೋರಾಟದ ಪ್ರಭಾವಕ್ಕೆ ಒಳಗಾದ ಬೆನಕೆ ಅವರು 17 ವರ್ಷಗಳ ವಕೀಲಿಕೆಯ ಮೂಲಕ ಜನ ಸಂಪರ್ಕ ಬೆಳೆಸಿಕೊಂಡವರು. ಕೇಂದ್ರದ ಮಾಜಿ ಸಚಿವ ದಿವಂಗತ ಸುರೇಶ್‌ ಅಂಗಡಿ ಅವರ ಜೊತೆಗಿನ ವ್ಯಾವಹಾರಿಕ ನಂಟು ರಾಜಕೀಯ ಬದುಕಿನ ಹಾದಿಯನ್ನು ಸುಗಮಗೊಳಿಸಿತು ಎನ್ನುವ ಬೆನಕೆ ಎಲ್ಲಾ ಅಡೆತಡೆಗಳನ್ನು ಮೀರಿ ಮಹತ್ವದ ಸ್ಥಾನ ತಲುಪಿದ್ದರೂ ಕ್ರಮಿಸುವ ಹಾದಿ ಸಾಕಷ್ಟಿದೆ ಎಂದು ಹೇಳುವುದನ್ನು ಮರೆಯುವುದಿಲ್ಲ. ಬಡ ಕುಟುಂಬದಲ್ಲಿ ಹುಟ್ಟಿ ವಿಧಾನಸಭೆ ಪ್ರವೇಶಿಸುವವರೆಗಿನ ಅವರ ಯಾನದ ಕುರಿತು “ಬಾರ್‌ ಅಂಡ್‌ ಬೆಂಚ್”ಗೆ ನೀಡಿದ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ವಿದ್ಯಾರ್ಥಿ ಜೀವನದಲ್ಲಿ ಕಾನೂನು ಶಿಕ್ಷಣದ ಅಧ್ಯಯನ ಮಾಡಬೇಕು ಎಂದು ನಿಮಗೆ ಅನಿಸಲು ಕಾರಣವೇನು?

ನಮ್ಮದು ಬಡ ಕುಟುಂಬ. ಶಿಕ್ಷಣ ಪಡೆಯುವ ವಿಚಾರದಲ್ಲಿ ತಂದೆ-ತಾಯಿ ಮತ್ತು ನಮ್ಮ ಅಜ್ಜಿಯ ಜೊತೆ ಮೇಲಿಂದ ಮೇಲೆ ಜಗಳವಾಗುತ್ತಿತ್ತು. ಪ್ರತಿ ಬಾರಿ ಮನೆಯಲ್ಲಿ ಜಗಳವಾದಾಗ 'ನಮ್ಮಜ್ಜಿ ಇಂವ ಜಡ್ಜ್‌ ಆಗ್ತಾನಾ? ಇಲ್ಲ ವಕೀಲ ಆಗ್ತಾನಾ?' ಎಂದು ಕೋಪದಿಂದ ಹೇಳುತ್ತಿದ್ದಳು. ಎಲ್ಲೋ ಇದು ನನ್ನನ್ನು ಅತ್ತ ಸೆಳೆದಿತು ಎನಿಸುತ್ತದೆ. ಉದ್ಯಮಿಯಾಗಲು ಬೇಕಾದಷ್ಟು ಹಣ ನಮ್ಮ ಬಳಿ ಇರಲಿಲ್ಲ. ಬಂಡವಾಳದ ಇಲ್ಲದ ಉದ್ಯಮ ವಕೀಲಿಕೆ. ಹೀಗಾಗಿ ಇತ್ತ ಮುಖ ಮಾಡಿದೆ. ಇದನ್ನು ಬಿಟ್ಟು ನನಗೆ ವಕೀಲನಾಗುವ ಯಾವುದೇ ಉದ್ದೇಶ ಅಥವಾ ಗುರಿ ಇರಲಿಲ್ಲ. ಬಿ.ಕಾಂ ಮುಗಿದ ಬಳಿಕ 1990-92ರಲ್ಲಿ ಬೆಳಗಾವಿಯ ಪ್ರತಿಷ್ಠಿತ ರಾಜ ಲಕ್ಕಮ್ಮಗೌಡ ಕಾನೂನು ಕಾಲೇಜಿನಲ್ಲಿ (ಆರ್‌ ಎಲ್‌ ಕಾಲೇಜು) ಕಾನೂನು ಪದವಿ ಪೂರೈಸಿದೆ.

ಮೊದಲ ವರ್ಷದ ಕಾನೂನು ಪದವಿಯ ಸಂದರ್ಭದಲ್ಲಿ ಇಡೀ ಧಾರವಾಡ ವಿಶ್ವವಿದ್ಯಾಲಯಕ್ಕೆ ನಾನು ಎರಡನೇ ರ್ಯಾಂಕ್‌ ಪಡೆದಿದ್ದೆ. ಎರಡನೇ ವರ್ಷದಲ್ಲಿ ಕಾಲೇಜಿಗೆ ಮೊದಲಿಗನಾಗಿ ಪಾಸಾಗಿದ್ದೆ.

ಕಾನೂನು ಶಿಕ್ಷಣದ ವೇಳೆ ನಿಮ್ಮ ಮೇಲೆ ಗಾಢವಾಗಿ ಪ್ರಭಾವ ಬೀರಿದ ಸಂಗತಿಗಳು ಯಾವುವು?

ಕಾನೂನು ಪದವಿ ಅಭ್ಯಾಸ ಮಾಡುವಾಗ 1991-92ರಲ್ಲಿ ದೇಶಾದ್ಯಂತ ಮಂಡಲ್‌ ವರದಿ ಹೋರಾಟ ಜೋರಿತ್ತು. ನನ್ನ ಸ್ನೇಹಿತನ ತಂದೆ ನರಸಿಂಗರಾವ್‌ ಪಾಟೀಲ್‌ ಅವರು ಮಹಾರಾಷ್ಟ್ರದ ಚಂದಗಡದ ಪಕ್ಷೇತರ ಶಾಸಕ ಮತ್ತು ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿದ್ದರು. ಇನ್ನೊಬ್ಬರು ರಾಷ್ಟ್ರಮಟ್ಟದ ಕಮ್ಯುನಿಸ್ಟ್‌ ನಾಯಕರಾದ ಕೃಷ್ಣ ಮೆಣಸಿ ಅವರ ಪುತ್ರ ಸಂಜಯ್‌ ಮೆಣಸಿ ಅವರು ನನ್ನ ಸ್ನೇಹಿತರಾಗಿದ್ದರು. 1992ರಲ್ಲಿ ನಾನು ಕಾನೂನು ಶಿಕ್ಷಣ ಪಡೆಯುತ್ತಿದ್ದ ಆರ್‌ ಎಲ್‌ ಕಾನೂನು ಕಾಲೇಜಿನ ಸ್ವರ್ಣ ಮಹೋತ್ಸವ ನಡೆದಿತ್ತು. ಈ ಸಂದರ್ಭದಲ್ಲಿ ನಾನು ಕಾಲೇಜಿನ ಪ್ರಧಾನ ಕಾರ್ಯದರ್ಶಿಯಾಗಿದ್ದೆ. ಮಂಡಲ್‌ ಹೋರಾಟದಲ್ಲಿ ತೊಡಗಿಸಿಕೊಳ್ಳುವ ಆಗ್ರಹ ಕೇಳಿಬಂದಿತ್ತು. ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಪ್ರದೇಶದ ಯುವ ಜನತೆಯ ಪರವಾಗಿ ಹೋರಾಟ ಮಾಡಿದೆವು. ಇದು ರಾಜಕಾರಣ ಪ್ರವೇಶಕ್ಕೆ ನಾಂದಿಯಾಯಿತು.

ಯಾವ ಹಿರಿಯ ವಕೀಲರ ಕೈಕೆಳಗೆ ಪ್ರಾಕ್ಟೀಸ್‌ ಮಾಡಿದ್ದೀರಿ? ವಕೀಲರಾಗಿ ವೃತ್ತಿ ಜೀವನದ ಆರಂಭದ ದಿನಗಳು ಹೇಗಿದ್ದವು?

ಕಾನೂನು ಪ್ರೊಫೆಸರ್‌ ಆಗಿದ್ದ ಎಂ ಜಿ ನಾಗನೂರಿ ಅವರ ಬಳಿ ಜೂನಿಯರ್‌ ಆಗಿ ಒಂಭತ್ತು ತಿಂಗಳು ಪ್ರಾಕ್ಟೀಸ್‌ ಮಾಡಿದ್ದೆ. ಬಳಿಕ ಪ್ರತ್ಯೇಕವಾಗಿ ಕೇಸುಗಳನ್ನು ನಡೆಸಲಾರಂಭಿಸಿದೆ. ನಮ್ಮದು ಐವರು ಸಹೋದರರು ಮತ್ತು ಒಬ್ಬ ಸಹೋದರಿಯನ್ನು ಒಳಗೊಂಡ ದೊಡ್ಡ ಕುಟುಂಬ. ಬಡತನದ ಹಿನ್ನೆಲೆಯಲ್ಲಿ ಎಲ್ಲರೂ ಕಷ್ಟಪಟ್ಟು ಶಿಕ್ಷಣ ಪಡೆದಿದ್ದೇವೆ. ಆ ಸಂದರ್ಭದಲ್ಲಿ ಪಡಿತರ ಚೀಟಿ ಪಡೆಯುವುದು ಅತ್ಯಂತ ದೊಡ್ಡ‌ ಸಮಸ್ಯೆಯಾಗಿತ್ತು. ಜನರು ರೇಷನ್‌ ಕಾರ್ಡ್‌ ಕೊಡಿಸುವಂತೆ ನನ್ನ ಬಳಿ ಬರುತ್ತಿದ್ದರು. ಕನಿಷ್ಠ ಮೂರು ವರ್ಷ ನಾನು ಇದೇ ಕೆಲಸ ಮಾಡಿದ್ದೇನೆ. ಇದು ಇನ್ನೊಂದು ರೀತಿಯಲ್ಲಿ ಜನರ ಸಂಪರ್ಕ ಬೆಳೆಸಿಕೊಳ್ಳಲು ನೆರವಾಯಿತು.

ನೀವು ವಾದ ಮಂಡಿಸಿದ ಮೊದಲ ಕೇಸ್‌ ಯಾವುದು? ಮೆಲುಕು ಹಾಕುವಂತಹ ಪ್ರಸಂಗಗಳನ್ನು ಹಂಚಿಕೊಳ್ಳಬಹುದೇ?

1991-92ರಲ್ಲಿ ಬೆಳಗಾವಿಯಲ್ಲಿ ಕೋಮು ಗಲಭೆಯಾಗಿತ್ತು. ಹಿಂದೂ-ಮುಸ್ಲಿಂ ಸಮುದಾಯಗಳ ನಡುವಿನ ಗಲಾಟೆ ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಹಲವು ಮಂದಿಯನ್ನು ಬಂಧಿಸಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ ೩೦೭ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದರು. ಇದರಲ್ಲಿ ನಮ್ಮ ಕೆಲವು ಸಹಪಾಠಿಗಳ ವಿರುದ್ಧವೂ ದಾವೆ ಹೂಡಲಾಗಿತ್ತು. ಅವರೆಲ್ಲರೂ ವಿಶ್ವಾಸವಿಟ್ಟು ನನಗೆ ಪ್ರಕರಣ ನಡೆಸಲು ನೀಡಿದ್ದರು. ಕ್ರಿಮಿನಲ್‌-ಸಿವಿಲ್‌ ನ್ಯಾಯಾಧೀಶರ ಬಳಿ ಪ್ರಕರಣ ವಿಚಾರಣೆ ನಿಗದಿಯಾಗಿತ್ತು. ಜಾಮೀನುರಹಿತ ಆರೋಪಗಳಿದ್ದರೂ ನನ್ನ ವಾದದ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದರು. ಪ್ರಕರಣವು ಸದರಿ ನ್ಯಾಯಾಲಯದ ವ್ಯಾಪ್ತಿಗೆ ಒಳಪಡದೇ ಇದ್ದರೂ ವಾದವನ್ನು ಮೆಚ್ಚಿದ್ದ ನ್ಯಾಯಾಧೀಶರು 12 ಮಂದಿಯನ್ನು ಬಿಡುಗಡೆ ಮಾಡಿದ್ದರು.

ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ ತೀವ್ರವಾಗಿ ಅವರನ್ನು ಗಾಯಗೊಳಿಸಿದ್ದ ಇನ್ನೊಂದು ಪ್ರಕರಣವನ್ನು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಸಿದ್ದೆ. ಈ ಸಂದರ್ಭದಲ್ಲಿ ನ್ಯಾಯಾಧೀಶರು “ಅಪರಾಧಿ ಎಂದು ಘೋಷಿತನಾದವರನ್ನು ಖುಲಾಸೆಗೊಳಿಸುವ ರೀತಿಯಲ್ಲಿ ಕಿರಿಯ ವಕೀಲರ ಪೈಕಿ ಅತ್ಯಂತ ಪ್ರಖರವಾಗಿ ವಾದ ಮಂಡಿಸಬಲ್ಲವರು ಬೆನಕೆ” ಎಂದು ಮೆಚ್ಚುಗೆ ಸೂಚಿಸಿದ್ದರು.

ವಕೀಲಿಕೆಯ ಆರಂಭದ ದಿನಗಳು ಹೇಗಿದ್ದವು? ವಕೀಲ ವೃತ್ತಿಯಿಂದ ರಾಜಕಾರಣದೆಡೆಗೆ ಹೇಗೆ ಬಂದಿರಿ?

ಮೊದಲೇ ಹೇಳಿದಂತೆ ಗೆಳೆಯರ ತಂದೆ ರಾಜಕೀಯ ಹಿನ್ನೆಲೆ ಹೊಂದಿದ್ದರು. ಮಂಡಲ್‌ ವರದಿಯ ಸಂದರ್ಭದಲ್ಲಿನ ಹೋರಾಟ ಹಾಗೂ ವಕೀಲಿಕೆಯ ಜೊತೆಗೆ ಜನ ಸಂಪರ್ಕ, ಆ ಬಳಿಕ ದಿವಂಗತ ಕೇಂದ್ರ ಸಚಿವರಾಗಿದ್ದ ಸುರೇಶ್‌ ಅಂಗಡಿ ಅವರ ಜೊತೆ ಸಂಪರ್ಕವಾಯಿತು. ಅಂಗಡಿ ಅವರು ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿದ್ದರು. ನಾನು ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದೆ. ಸುರೇಶ್‌ ಅಂಗಡಿ ಅಂದರೆ ಬೆನಕೆ, ಬೆನಕೆ ಎಂದರೆ ಸುರೇಶ್‌ ಅಂಗಡಿ ಎನ್ನುವಷ್ಟರ ಮಟ್ಟಿಗೆ ನಮ್ಮ ಸಂಬಂಧ ಬೆಳೆಯಿತು. ಅಂಗಡಿಯವರ ನಾಲ್ಕೂ ಚುನಾವಣೆಯ ಸೂಚಕ ನಾನೇ. ನನ್ನನ್ನು ಬಿಟ್ಟು ಅವರು ನಾಮಪತ್ರ ಸಲ್ಲಿಸಿದ್ದೇ ಇಲ್ಲ. ಎಲ್ಲಾ ಚುನಾವಣೆಗಳಲ್ಲಿ ಅವರ ಪರವಾಗಿ ಕೆಲಸ ಮಾಡಿದ್ದೇನೆ. 2010ರಲ್ಲಿ ಬಿಜೆಪಿ ಸದಸ್ಯತ್ವ ಪಡೆದು, 2018ರಲ್ಲಿ ಮೊದಲ ಬಾರಿಗೆ ಬೆಳಗಾವಿ ಉತ್ತರ ಕ್ಷೇತ್ರದಿಂದ ವಿಧಾನಸಭಾ ಸದಸ್ಯನಾಗಿ ಆಯ್ಕೆಯಾಗಿದ್ದೇನೆ.

ವಕೀಲಿಕೆಯ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ, ಜಿಲ್ಲಾ ದಂಡಾಧಿಕಾರಿಗಳೆದುರು ಹಾಗೂ ಕೌಟುಂಬಿಕ ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಹೆಚ್ಚಾಗಿ ನಡೆಸುತ್ತಿದ್ದೆ. ಇವು ಜನರ ಜೊತೆ ನಿಕಟ ಸಂಪರ್ಕ ಹೊಂದಲು ನೆರವಾದವು. ಇದು ರಾಜಕಾರಣದ ಹಾದಿಯನ್ನು ಸುಗಮಗೊಳಿಸಿತು.

ಕಾನೂನು ಶಿಕ್ಷಣ, ವಕೀಲಿಕೆಯ ಹಿನ್ನೆಲೆ ನಿಮ್ಮ ರಾಜಕಾರಣದ ಮೇಲೆ ಹೇಗೆ ಪರಿಣಾಮ ಬೀರಿತು?

ರಾಜಕೀಯ ಕ್ಷೇತ್ರದಲ್ಲಿ ಬೆಳೆಯಲು ಕಾನೂನಿನ ಜ್ಞಾನ ಮತ್ತು ಅರಿವು ಅತ್ಯಗತ್ಯ. ನಾನು ಹದಿನೇಳು ವರ್ಷಗಳ ಕಾಲ ವಕೀಲಿಕೆ ಮಾಡಿದ್ದೇನೆ. ಯಾವುದೇ ನೀತಿ-ನಿರೂಪಣೆಯ ಸಂದರ್ಭದಲ್ಲಿ ಕಾನೂನಿನ ತಿಳಿವಳಿಕೆ ಇಲ್ಲ ಎಂದರೆ ಏನೇನೂ ಅರ್ಥವಾಗುವುದಿಲ್ಲ.

ಕಾನೂನು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಲಹೆ-ಸೂಚನೆ ನೀಡುವುದನ್ನು ಮುಂದುವರೆಸಿದ್ದೀರಾ?

ನನ್ನ ಬಳಿ ಈಗಲೂ ಇಬ್ಬರು ಜೂನಿಯರ್‌ಗಳಿದ್ದಾರೆ. ಸಣ್ಣ-ಪುಟ್ಟ ಪ್ರಕರಣಗಳನ್ನು ನಡೆಸುತ್ತೇವೆ. ಜನರ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೇವೆ.

ರಾಜಕಾರಣಕ್ಕೆ ಬರಬಾರದಿತ್ತು, ವಕೀಲಿಕೆಯಲ್ಲಿಯೇ ಮುಂದುವರಿಯಬೇಕಿತ್ತು ಎಂದಿನಿಸಿದೆಯೇ?

ರಾಜಕೀಯ ಕ್ಷೇತ್ರದ ವ್ಯಾಪ್ತಿ ದೊಡ್ಡದು. ಹಾಗಾಗಿ, ರಾಜಕೀಯಕ್ಕೆ ಬರಬಾರದಿತ್ತು ಎಂದೆನಿಸಿಲ್ಲ. ನಮಗೆ ತಿಳಿವಳಿಕೆ, ಸಾಮರ್ಥ್ಯವಿದ್ದರೂ ವಿಷಯ ಮಂಡನೆಗೆ ಸದನದಲ್ಲಿ ಹೆಚ್ಚಿನ ಅವಕಾಶ ಸಿಗುವುದಿಲ್ಲ ಎಂಬ ಬೇಸರವಿದೆ. ಈಗಷ್ಟೇ ವಿಧಾನಸಭೆ ಪ್ರವೇಶಿಸಿರುವುದರಿಂದ ಮುಂದೆ ಕಾಲಾವಕಾಶ ಸಿಗಬಹುದು ಎಂಬ ನಿರೀಕ್ಷೆ ಹೊಂದಿದ್ದೇನೆ.