A P Ranganath, President, Bengaluru Bar Association 
ಸಂದರ್ಶನಗಳು

ವಕೀಲರಿಗಷ್ಟೇ ಅಲ್ಲ, ವಕೀಲರ ಗುಮಾಸ್ತರಿಗೂ ಆರ್ಥಿಕ ನೆರವು ನೀಡಿದೆವು: ಎ ಪಿ ರಂಗನಾಥ್‌

"ಹಿರಿಯ ವಕೀಲರಿಂದ 60 ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಿ 1,100 ಮಂದಿಗೆ ತಲಾ ಐದು ಸಾವಿರ ರೂಪಾಯಿ ಹಂಚಿಕೆ ಮಾಡಿದ್ದೇವೆ. ಇಷ್ಟುಮಾತ್ರವಲ್ಲದೇ ವಕೀಲರ ಗುಮಾಸ್ತರಿಗೂ ಒಟ್ಟಾರೆ 11 ಲಕ್ಷ ರೂಪಾಯಿ ನೆರವು ವಿತರಿಸಿದ್ದೇವೆ."

Siddesh M S

“ವಿಭಿನ್ನ ಕನಸು-ಕನವರಿಕೆಗಳನ್ನು ಇಟ್ಟುಕೊಂಡು ಬೆಂಗಳೂರಿನಂಥ ಕಾಸ್ಮೊಪಾಲಿಟನ್‌ ನಗರಕ್ಕೆ ಕಾಲಿಟ್ಟಿದ್ದ ಹಲವು ಯುವ ವಕೀಲರು ಕೊರೊನಾ ಪರಿಸ್ಥಿತಿಯಿಂದಾಗಿ ತಮ್ಮ ಊರುಗಳಿಗೆ ತೆರಳಿದ್ದಾರೆ. ಅವರನ್ನು ಮತ್ತೆ ವೃತ್ತಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕಿದೆ. ಇದಕ್ಕಾಗಿ ಕನಿಷ್ಠ ಉದ್ಯೋಗ ಭದ್ರತೆ ಕಲ್ಪಿಸಬೇಕಿದೆ. ಈ ನಿಟ್ಟಿನಲ್ಲಿ ಕಾನೂನು ಸಚಿವರಿಗೆ ಬಜೆಟ್‌ನಲ್ಲಿ ವಿಶೇಷ ಅನುದಾನ ಕೊಡಿಸುವಂತೆ ಕೋರಿಕೆ ಸಲ್ಲಿಸಿದ್ದೇವೆ,” ಎಂಬುದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ ಪಿ ರಂಗನಾಥ್‌ ಅವರ ನುಡಿಗಳು.

ಲಾಕ್‌ಡೌನ್‌ ಸಂದರ್ಭದಲ್ಲಿನ ವಕೀಲರ ಸಂಕಟಗಳು, ಅದಕ್ಕೆ ತಮ್ಮ ನೇತೃತ್ವದ ಸಂಘ ಮಿಡಿದ ರೀತಿ, ರಾಜ್ಯ ಸರ್ಕಾರದಿಂದ ನೆರವು ಪಡೆಯಲು ತಾವು ನಡೆಸಿದ ಹೋರಾಟ ಮತ್ತಿತರ ವಿಚಾರಗಳ ಕುರಿತು ಎ ಪಿ ರಂಗನಾಥ್‌ ಅವರು “ಬಾರ್‌ ಅಂಡ್‌ ಬೆಂಚ್‌” ಜೊತೆ ಮಾತನಾಡಿದ್ದಾರೆ.

ಕೋವಿಡ್‌ನಿಂದಾಗಿ ವಕೀಲರ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು ಏನು?

ಬೆಂಗಳೂರು ಕಾಸ್ಮೊಪಾಲಿಟನ್‌ ನಗರವಾಗಿದ್ದು,‌ ಗ್ರಾಮೀಣ ಪ್ರದೇಶದ ಸಾಕಷ್ಟು ಮಂದಿ ತಮ್ಮ ಕನಸು-ಕನವರಿಕೆ ಈಡೇರಿಸಿಕೊಳ್ಳಲು ಇಲ್ಲಿಗೆ ಬಂದು ವಕೀಲಿಕೆ ಆರಂಭಿಸಿದ್ದರು. ಕೆಲವರು ಕಡಿಮೆ ಅವಧಿಯಲ್ಲಿ ಪ್ರತ್ಯೇಕವಾಗಿ ಪ್ರಾಕ್ಟೀಸ್‌ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಕೊರೊನಾ ಸೋಂಕು ವ್ಯಾಪಿಸಿದ್ದರಿಂದ ಅವರಿಗೆಲ್ಲರಿಗೂ ತೀವ್ರ ಥರದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಕೌಟುಂಬಿಕ ಸಮಸ್ಯೆಗಳಾಗಿವೆ. ಅಂದು ದುಡಿದಿದ್ದನ್ನು ಅವಲಂಬಿಸಿ ಬದುಕುವವರಿಗೆ ಸಾಕಷ್ಟು ಸಮಸ್ಯೆಯಾಯಿತು. ಕೊರೊನಾ ಸಂದರ್ಭದಲ್ಲಿ ಲಾಕ್‌ಡೌನ್‌ ಘೋಷಿಸಿದ್ದರಿಂದ ಊರಿನತ್ತ ಮುಖ ಮಾಡಿದ ಸಾಕಷ್ಟು ಯುವ ವಕೀಲರು ಇನ್ನೂ ನಗರಕ್ಕೆ ವಾಪಸಾಗಿಲ್ಲ.

ಕೋವಿಡ್‌ನಿಂದ ಸಾವನ್ನಪ್ಪಿದ ವಕೀಲರ ಬಗ್ಗೆ ಮಾಹಿತಿ ನೀಡಬಹುದೇ?

ಬೆಂಗಳೂರು ವಕೀಲರ ಸಂಘದಲ್ಲಿ ಒಟ್ಟಾರೆ 19 ಸಾವಿರ ವಕೀಲರು ನೋಂದಾಯಿಸಿ ಕೊಂಡಿದ್ದಾರೆ. ಕಳೆದ ಒಂದು ವರ್ಷದಲ್ಲಿ 67 ಮಂದಿ ವಕೀಲರು ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕು ತಗುಲಿ ಸತ್ತವರ ಕುರಿತಾದ ಸ್ಪಷ್ಟ ಮಾಹಿತಿ ನಮ್ಮಲ್ಲಿ ಇಲ್ಲ. ಕಳೆದ ಒಂದು ವರ್ಷದಲ್ಲಿ ಸಾವನ್ನಪ್ಪಿದವರ ಪೈಕಿ 35 ಮಂದಿಗೆ ತಲಾ 25 ಸಾವಿರ ರೂಪಾಯಿ ಪರಿಹಾರ ನೀಡಿದ್ದೇವೆ.

ಕೋವಿಡ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ನಿಮ್ಮ ಸಂಘ ಯಾವ ತೆರನಾದ ನೆರವು ನೀಡಿದೆ?

ಈ ವಿಚಾರದಲ್ಲಿ ನಾವು ನಮ್ಮ ಸಂಘಕ್ಕೆ ಮಾತ್ರ ಸೀಮಿತವಾಗಿ ಕೆಲಸ ಮಾಡಿಲ್ಲ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ವಕೀಲರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎಂದು ಒತ್ತಾಯಿಸಿ ಸಾಂಕೇತಿಕ ಹೋರಾಟ ಮಾಡಿದ್ದೆವು. ಇದರಿಂದ ರಾಜ್ಯ ಸರ್ಕಾರವು ಐದು ಕೋಟಿ ರೂಪಾಯಿಯನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್‌ಗೆ (ಕೆಎಸ್‌ಬಿಸಿ) ನೀಡಿತ್ತು. ಈ ಹಣವನ್ನೇ ಬಳಸಿ ಹಲವು ಯುವ ವಕೀಲರಿಗೆ ಕೆಎಸ್‌ಬಿಸಿ ತಲಾ ಐದು ಸಾವಿರ ರೂಪಾಯಿ ನೀಡಿದೆ. ಇದಕ್ಕಾಗಿ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟವನ್ನೂ ಮಾಡಿದ್ದೇವೆ.

ಇದನ್ನು ಹೊರತುಪಡಿಸಿ ಬೆಂಗಳೂರು ವಕೀಲರ ಸಂಘವು ಹಿರಿಯ ವಕೀಲರಿಂದ 60 ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಿ 1,100 ಮಂದಿಗೆ ತಲಾ ಐದು ಸಾವಿರ ರೂಪಾಯಿ ಹಂಚಿಕೆ ಮಾಡಿದೆ. ಇಷ್ಟು ಮಾತ್ರವಲ್ಲದೇ ವಕೀಲರ ಗುಮಾಸ್ತರಿಗೂ ಒಟ್ಟಾರೆ 11 ಲಕ್ಷ ರೂಪಾಯಿ ನೆರವು ವಿತರಿಸಿದ್ದೇವೆ. ಬೇರೆಲ್ಲೂ ಈ ಕೆಲಸವಾಗಿಲ್ಲ ಎಂಬುದು ಬಹುಮುಖ್ಯ. ಇದಕ್ಕಾಗಿ ವಕೀಲರಾದ ಡಿ ಎಲ್‌ ಎನ್‌ ರಾವ್‌, ಎ ಎಸ್‌ ಪೊನ್ನಣ್ಣ, ಸತ್ಯನಾರಾಯಣ ಗುಪ್ತಾ ಮತ್ತು ದಿವಾಕರ್‌ ಅವರನ್ನೊಳಗೊಂಡ ಸಮಿತಿ ರಚಿಸಲಾಗಿತ್ತು. 15 ವರ್ಷ ವೃತ್ತಿ ಮಾಡಿರಬೇಕು, 40 ವಯೋಮಾನದ ಒಳಗಿರಬೇಕು ಮತ್ತು ಹಿರಿಯ ವಕೀಲರಿಂದ ಯಾವುದೇ ರೀತಿಯ ನೆರವು ಪಡೆದಿರಬಾರದು ಎಂಬ ಮಾನದಂಡಗಳನ್ನು ರೂಪಿಸಲಾಗಿತ್ತು. ಈ ವ್ಯಾಪ್ತಿಯಲ್ಲಿ ಇದ್ದ ವಕೀಲರಿಗೆ ಆರ್ಥಿಕ ಸಹಾಯ ಮಾಡಿದ್ದೇವೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಅಗತ್ಯವಿರುವ ಹಲವು ಮಂದಿಗೆ ಕೆಲವು ವಕೀಲರು ತಮ್ಮ ಮಿತಿಯಲ್ಲಿ ಆಹಾರದ ಕಿಟ್‌ ವಿತರಿಸಿದ್ದಾರೆ. ಯುವ ವಕೀಲರಿಗೆ ವೇತನ ನೀಡಬೇಕು ಎಂದು ಮನವಿ ಮಾಡಿದ್ದಕ್ಕೆ ಸಾಕಷ್ಟು ಮಂದಿ ಪೂರಕವಾಗಿ ಸ್ಪಂದಿಸಿದ್ದಾರೆ. ಕೊರೊನಾ ಸೋಂಕು ತಗುಲಿದ ಕೆಲವು ವಕೀಲರ ಆಸ್ಪತ್ರೆ ಶುಲ್ಕವು ದುಬಾರಿಯಾಗಿದ್ದನ್ನು ಕಡಿತಗೊಳಿಸಲು ನಮ್ಮ ಸೀಮಿತ ಸಂಪರ್ಕದಲ್ಲಿ ಆಸ್ಪತ್ರೆಯ ಆಡಳಿತ ವರ್ಗದವರ ಜೊತೆ ಮಾತನಾಡಿ, ಶುಲ್ಕ ವಿನಾಯಿತಿ ಕೊಡಿಸಿದ್ದೇವೆ.

ಎಲ್ಲಾ ವಕೀಲರಿಗೆ ಆರೋಗ್ಯ ವಿಮೆ ಕಲ್ಪಿಸಬೇಕು ಎಂದು ಹಿಂದೆ ಕೇಂದ್ರ ಸರ್ಕಾರ ಹೇಳಿತ್ತು. ಈ ಸಂಬಂಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಿದ್ದು, ಈ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ. ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಅವರ ಜೊತೆ ಚರ್ಚಿಸಿ, ನಿರಂತರ ಪ್ರಯತ್ನದ ಮೂಲಕ ಭೌತಿಕ ನ್ಯಾಯಾಲಯ ಆರಂಭಿಸಲು ಶ್ರಮಿಸಿದ್ದೇವೆ. ಸುಪ್ರೀಂ ಕೋರ್ಟ್‌ ಸೇರಿದಂತೆ ಹಲವು ಹೈಕೋರ್ಟ್‌ಗಳು ಇನ್ನೂ ಭೌತಿಕ ನ್ಯಾಯಾಲಯದ ಕಲಾಪಗಳನ್ನು ಆರಂಭಿಸಿಲ್ಲ. ಆದರೆ, ಕರ್ನಾಟಕದಲ್ಲಿ ನ್ಯಾಯಾಲಯದ ಕಾರ್ಯ-ಕಲಾಪಗಳು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿವೆ. ವಕೀಲರ ಸಮುದಾಯಕ್ಕೆ ನೆರವಾಗುವ ದೃಷ್ಟಿಯಿಂದ ಇದೆಲ್ಲವನ್ನೂ ಮಾಡಲಾಗಿದೆ.

ಕಾನೂನಿನ ವ್ಯಾಪ್ತಿಗೆ ಒಳಪಟ್ಟು ಸಮಾಜದ ಎಲ್ಲಾ ಸ್ತರದ ತಜ್ಞರ ಮೂಲಕ 150ಕ್ಕೂ ಹೆಚ್ಚು ವೆಬಿನಾರ್‌ಗಳನ್ನು ನಡೆಸಿದ್ದೇವೆ. ಉದ್ಯೋಗ, ಮನೆ ಬಾಡಿಗೆ ಪಾವತಿ ವಿಚಾರಗಳ ಕುರಿತು ಕಾನೂನಿನ ಲಾಭ-ನಷ್ಟಗಳ ಕುರಿತು ವೆಬಿನಾರ್‌ಗಳ ಮೂಲಕ ಚರ್ಚಿಸಲಾಗಿದೆ.

ವರ್ಚುವಲ್ ಕಲಾಪಗಳಿಂದ ನಿಮಗೆ ಅನುಕೂಲವಾಗಿತ್ತೇ/ಆಗುತ್ತಿದೆಯೇ?

ಲಾಕ್‌ಡೌನ್‌ ಸಂದರ್ಭದಲ್ಲಿ ವರ್ಚುವಲ್‌ ವ್ಯವಸ್ಥೆ ಅನಿವಾರ್ಯವಾಗಿತ್ತು. ಆದರೆ, ಬೆಂಗಳೂರಿನ ಸಾಕಷ್ಟು ಕಡೆ ಇಂಟರ್‌ನೆಟ್‌ ಸಮಸ್ಯೆ ಇದೆ. ಸಾಕಷ್ಟು ವಕೀಲರ ಬಳಿ ಸುಧಾರಿತ ಮೊಬೈಲ್‌ಗಳು ಇಲ್ಲ ಎಂಬುದು ವಾಸ್ತವ. ಹೀಗಾಗಿ ಇಂದಿನ ಪರಿಸ್ಥಿತಿಯಲ್ಲಿ ವರ್ಚುವಲ್‌ ಕಲಾಪಕ್ಕೆ ಹೊಂದಿಕೊಳ್ಳುವ ಮಟ್ಟಕ್ಕೆ ನಮ್ಮಲ್ಲಿ ವ್ಯವಸ್ಥೆ ಇಲ್ಲ. ಭೌತಿಕ ಮತ್ತು ಮುಕ್ತ ನ್ಯಾಯಾಲಯ ನಡೆಸುವುದರಿಂದ ನ್ಯಾಯಾಲಯದ ಘನತೆ ಹೆಚ್ಚುತ್ತದೆ. ಭೌತಿಕ ನ್ಯಾಯದಾನ ವ್ಯವಸ್ಥೆಯೇ ಅಂತಿಮ.

ಭೌತಿಕ ನ್ಯಾಯಾಲಯದ ಚಟುವಟಿಕೆಗಳು ಆರಂಭವಾಗಿರುವುದರಿಂದ ಸಮಸ್ಯೆ ಕಡಿಮೆಯಾಗಿದೆ ಎನಿಸುತ್ತದೆಯೇ?

ಕಕ್ಷಿದಾರರಲ್ಲಿ ಇನ್ನೂ ಭಯವಿದೆ. ಸುಮಾರು ಶೇ. 90ರಷ್ಟು ಪರಿಸ್ಥಿತಿ ಸುಧಾರಣೆಯಾಗಿದೆ. ಆರಂಭದಲ್ಲಿ ಸಾಕಷ್ಟು ನಿರ್ಬಂಧಗಳಿದ್ದವು. ಈಗ ಪ್ರಕರಣಗಳ ವಿಚಾರಣೆಗೆ ನಿಗದಿಪಡಿಸಿದ್ದ ಮಿತಿಯನ್ನು ತೆಗೆದು ಹಾಕಲಾಗಿದೆ. ಚಟುವಟಿಕೆಗಳು ಯಥಾಸ್ಥಿತಿಗೆ ಬರುತ್ತಿರುವುದರಿಂದ ಸಮಸ್ಯೆಗಳು ಕಡಿಮೆಯಾಗುವ ಸಾಧ್ಯತೆ ಇದೆ.

ಕೋವಿಡ್‌ ವ್ಯಾಪಿಸಿದ್ದ ಸಂದರ್ಭದಲ್ಲಿ ಹಾಗೂ ಆ ಬಳಿಕ ವಕೀಲರ ಸಮುದಾಯದಲ್ಲಿ ಯಾವ ತೆರನಾದ ಚರ್ಚೆ ಇದೆ?

ವಕೀಲ ಸಮುದಾಯಕ್ಕೆ ಸಾಮಾಜಿಕ ಜವಾಬ್ದಾರಿ ಇದೆ. ಆದರೆ, ಆರ್ಥಿಕ ಭದ್ರತೆ ಇಲ್ಲ. ಭವಿಷ್ಯದ ಬಗ್ಗೆ ಅನಿಶ್ಚಿತತೆ ಉಂಟಾಗಿ ಸಾಕಷ್ಟು ಮಂದಿ ತಮ್ಮ ತಮ್ಮ ಸ್ಥಳಗಳಿಗೆ ತೆರಳಿದ್ದಾರೆ. ಹಲವು ಮಂದಿ ಇನ್ನಷ್ಟೇ ವೃತ್ತಿಗೆ ಮರಳಬೇಕಿದೆ. ಈ ಮಂದಿ ವಾಪಸ್‌ ವೃತ್ತಿಗೆ ಮರಳದೇ ಇದ್ದರೆ ಮುಂದಿನ ದಿನಗಳಲ್ಲಿ ವಿಭಿನ್ನ ಸಮಸ್ಯೆಗಳು ಸೃಷ್ಟಿಯಾಗಲಿವೆ. ಇದರಿಂದ ಕಕ್ಷಿದಾರರಿಗೆ ಸಮಸ್ಯೆಗಳಾಗಲಿವೆ. ಈ ಕಾರಣಕ್ಕಾಗಿ ಕಾನೂನು ಸಚಿವರಾದ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ವಕೀಲರ ಕಲ್ಯಾಣಕ್ಕಾಗಿ ಬಜೆಟ್‌ನಲ್ಲಿ 100 ಕೋಟಿ ರೂಪಾಯಿ ಮೀಸಲಿಡಲು ಸಹಕರಿಸುವಂತೆ ಕೋರಿದ್ದೇವೆ.

ರಾಜ್ಯ ಸರ್ಕಾರ ಅಥವಾ ಕೆಎಸ್‌ಬಿಸಿಯಿಂದ ಸಂಕಷ್ಟದಲ್ಲಿ ದೊರೆತಿರುವ ನೆರವಿನ ಬಗ್ಗೆ ಏನು ಹೇಳಬಯಸುತ್ತೀರಿ?

ನೆರವಿನ ವಿಚಾರದಲ್ಲಿ ನಮಗೆ ತೃಪ್ತಿಯಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಕೀಲರ ಅನುಕೂಲಕ್ಕಾಗಿ ಕನಿಷ್ಠ 50 ಕೋಟಿ ರೂಪಾಯಿ ನೀಡಬೇಕಿತ್ತು. ಆದರೆ, ಅದ್ಯಾವುದೂ ಆಗಲಿಲ್ಲ. ಬೆಳಗಾವಿ ಮತ್ತು ಕೊಡಗಿನ ಪ್ರವಾಹ ಪರಿಸ್ಥಿತಿ ತಲೆದೋರಿದಾಗ ನಾವು ದೇಣಿಗೆ ಸಂಗ್ರಹಿಸಿ ಎಲ್ಲರಿಗೂ ನೆರವು ಕಲ್ಪಿಸುವ ಪ್ರಯತ್ನ ಮಾಡಿದ್ದೇವೆ. ಆದರೆ, ಕೊರೊನಾ ಸಂದರ್ಭದಲ್ಲಿ ನಮ್ಮ ವಕೀಲರ ಸಮುದಾಯಕ್ಕೆ ನಿರೀಕ್ಷಿತ ಸಹಕಾರ ಸಿಗಲಿಲ್ಲ.