ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕು ಕರ್ನಾಟಕದ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಒಂದು. ಶಾಶ್ವತ ಶಾಪವಾಗಿರುವ ಬರ ಒಂದೆಡೆಯಾದರೆ ಕೋವಿಡ್ ದಾಳಿ ಮತ್ತೊಂದೆಡೆ. ಮೊದಲೇ ಸಂಕಷ್ಟದಲ್ಲಿದ್ದ ಜನತೆ ಬಾಣಲೆಯಿಂದ ಬೆಂಕಿಗೆ ಬಿದ್ದಿದ್ದಾರೆ. ಇದರ ನೇರ ಪರಿಣಾಮ ವಕೀಲರನ್ನೂ ತಟ್ಟಿದೆ. ಕೇಸು, ಕಕ್ಷೀದಾರರಿಲ್ಲದ ಸಂಕಷ್ಟ ಒಂದೆಡೆಯಾದರೆ ಕೋವಿಡ್ ಎರಡನೇ ಅಲೆಯ ಭೀತಿ ಇನ್ನೊಂದೆಡೆ.
ಮೊಳಕಾಲ್ಮೂರು ವಕೀಲ ಸಂಘದ ಪ್ರಭಾರ ಅಧ್ಯಕ್ಷ ಪಿ ಪಾಪಯ್ಯ ಅವರು ನ್ಯಾಯವಾದಿಗಳು ಎದುರಿಸುತ್ತಿರುವ ಸವಾಲುಗಳನ್ನುಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ದಾವಣಗೆರೆಯ ಆರ್ ಎಲ್ ಕಾನೂನು ಕಾಲೇಜಿನಲ್ಲಿ ಬಿ ಎ, ಎಲ್‌ಎಲ್‌ಬಿ ಪದವಿ ಪಡೆದ ಅವರು ಕಳೆದ ಹದಿನೈದು ವರ್ಷಗಳಿಂದ ಮೊಳಕಾಲ್ಮೂರಿನಲ್ಲಿ ವಕೀಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎರಡು ವರ್ಷಗಳಿಂದ ವಕೀಲರ ಸಂಘದ ಪ್ರಭಾರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೊಳಕಾಲ್ಮೂರು ತಾಲೂಕಿನ ವಕೀಲರ ಮೇಲೆ ಕೋವಿಡ್ ಬೀರಿದ ಪರಿಣಾಮಗಳು ಎಂತಹವು?
ಬೆಂಗಳೂರು, ಮಂಗಳೂರು ಮುಂತಾದ ಪ್ರದೇಶಗಳಲ್ಲಿ ಪಡೆಯುವುದಕ್ಕಿಂತ ಅತಿ ಕಡಿಮೆ ಸಂಭಾವನೆಯನ್ನು ಮೊಳಕಾಲ್ಮೂರು ರೀತಿಯ ತಾಲೂಕಿನ ವಕೀಲರು ಮೊದಲಿನಿಂದಲೂ ಪಡೆಯುತ್ತಿದ್ದಾರೆ. ಕಾರಣ ಸರಳ. ಇದೊಂದು ಬರಪೀಡಿತ ಪ್ರದೇಶ. ಇಲ್ಲಿ ಹೆಚ್ಚಿನ ಫೀಸ್ ನಿರೀಕ್ಷಿಸಲು ಸಾಧ್ಯವೇ ಇಲ್ಲ. ಇಂತಹ ಹೊತ್ತಿನಲ್ಲಿ ಕೋವಿಡ್ ಸಾಕಷ್ಟು ತೊಂದರೆಗಳನ್ನು ನೀಡಿತು. ಕಕ್ಷೀದಾರರು ನ್ಯಾಯಾಲಯಗಳಿಗೆ ಬರುವುದು ಕಡಿಮೆಯಾಯಿತು. ಸಿವಿಲ್ ಕೇಸುಗಳಂತೂ ನಗಣ್ಯ ಎಂಬಷ್ಟು ಇಳಿಮುಖವಾದವು. ಈಗ ಕೇವಲ 20 ಪ್ರಕರಣಗಳ ವಿಚಾರಣೆ ಮಾತ್ರ ನಡೆಯುತ್ತಿದೆ. ಕೋವಿಡ್ ಭೀತಿಯಿಂದಾಗಿ ಕಕ್ಷೀದಾರರು ನ್ಯಾಯಾಲಯಗಳಿಗೆ ಬರಲು ಹೆದರುತ್ತಿದ್ದಾರೆ. ಆದಾಯ ಇಲ್ಲದಿರುವುದು ಕೂಡ ಕಕ್ಷೀದಾರರು ನ್ಯಾಯಾಲಯಗಳಿಂದ ದೂರ ಉಳಿಯಲು ಕಾರಣ. ಕೇಸುಗಳ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಸಹಜವಾಗಿಯೇ ವಕೀಲರಿಗೆ ಸಂಕಷ್ಟ ತಂದೊಡ್ಡಿದೆ. ಕೆಲವು ವಕೀಲರಂತೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ್ದರೂ ನಿಗದಿತ ಮೊತ್ತ ಬ್ಯಾಂಕ್ ಖಾತೆಗೆ ಬರುತ್ತಿತ್ತು ಎಂದು ಹೇಳಿಕೊಂಡದ್ದಿದೆ.
ವಕೀಲರಿಗೂ, ಬೇರೆ ವೃತ್ತಿಯವರಿಗೂ ಇರುವ ವ್ಯತ್ಯಾಸ ಕೋವಿಡ್ ಸಂದರ್ಭದಲ್ಲಿ ಹೇಗೆ ಪರಿಣಾಮ ಬೀರಿತು?
ಬೇರೆ ಉದ್ಯೋಗಗಳಲ್ಲಿರುವವರಿಗೆ ನಿಗದಿತ ಆದಾಯ ಇರುತ್ತದೆ. ವಕೀಲರದ್ದು ಹಾಗಲ್ಲ. ಕಕ್ಷೀದಾರ ಪ್ರೀತಿ- ವಿಶ್ವಾಸದಿಂದ ಕೊಟ್ಟ ಹಣವಷ್ಟೇ ನಮಗೆ ಆಧಾರವಾಗಿರುತ್ತದೆ. ಅವರನ್ನು ಹೆಚ್ಚು ಒತ್ತಾಯಪಡಿಸಲಾಗದು. ಬೇರೆ ವೃತ್ತಿಯಲ್ಲಿರುವವರಿಗೆ ಇರುವ ಆರ್ಥಿಕ ಭದ್ರತೆಯನ್ನು ಇಲ್ಲಿ ಕೂಡಲೇ ನಿರೀಕ್ಷಿಸಲಾಗದು. ಎಂತಹ ಪ್ರಚಂಡ ಬುದ್ಧಿವಂತ ವಕೀಲನಾದರೂ ಆತ ಸಂಪೂರ್ಣವಾಗಿ ಪ್ರಕರಣ ನಿಭಾಯಿಸಲು ಕನಿಷ್ಠ ಹತ್ತು ವರ್ಷಗಳಾದರೂ ಅಗತ್ಯವಿದೆ. ಕೋವಿಡ್ ಪರಿಸ್ಥಿತಿಯಿಂದಾಗಿ ಅನೇಕರಿಗೆ ಜೀವನ ನಡೆಸುವುದೇ ಕಷ್ಟವಾಗಿದೆ. ರೈತರ ಬದುಕು ಹಾಗೂ ನಮ್ಮ ವಕೀಲರ ಬದುಕು ಒಂದೇ ರೀತಿಯಾಗಿದೆ. ಪ್ರತಿದಿನ ದುಡಿದರಷ್ಟೇ ಆದಾಯ. ನ್ಯಾಯಾಲಯಗಳಿಗೆ ರಜೆ ಇದ್ದಾಗ ಹೆಚ್ಚು ಕಷ್ಟ ಇರುತ್ತದೆ.
ವಕೀಲರ ನೆರವಿಗಾಗಿ ಸಂಘ ಹೇಗೆ ಹೋರಾಡಿತು?
ಹಿರಿಯ ವಕೀಲರ ಬಳಿ ಹಣ ಮತ್ತು ಆಹಾರದ ಕಿಟ್ ಸಂಗ್ರಹಿಸಿ ವಿತರಿಸಿದೆವು. ಮೊಳಕಾಲ್ಮೂರು ವ್ಯಾಪ್ತಿಯಲ್ಲಿ ಸುಮಾರು 80 ಮಂದಿ ವಕೀಲರಿದ್ದಾರೆ. ಅವರಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಹಿರಿಯ ವಕೀಲರಿದ್ದಾರೆ. ಉಳಿದ 60ರಿಂದ 70 ಮಂದಿ ಕಿರಿಯ ವಕೀಲರು. ನೆರವು ಒದಗಿಸುವುದು ನಿಜಕ್ಕೂ ಸವಾಲಿನ ಸಂಗತಿಯಾಗಿತ್ತು. ಆದರೂ ನಿಭಾಯಿಸಿದೆವು. ಜಿಲ್ಲೆಯಲ್ಲೇ ಸಂಘದ ಶ್ರಮ ಗಮನ ಸೆಳೆದಿದೆ.
ಕೋವಿಡ್ ಹೊಸ ಅಲೆಯ ಭೀತಿ ಎಂತಹ ಪರಿಣಾಮ ಬೀರಿದೆ?
ಕೋವಿಡ್ ಎರಡು ಮತ್ತು ಮೂರನೇ ಅಲೆ ಅಪ್ಪಳಿಸಬಹುದು ಎಂಬುದು ವಕೀಲ ಸಮುದಾಯವನ್ನು ಕೊಂಚಮಟ್ಟಿಗೆ ಕಂಗೆಡಿಸಿದೆ. ಪ್ರತಿವರ್ಷ 300ರಿಂದ 400 ಪ್ರಕರಣಗಳು ಮೊಳಕಾಲ್ಮೂರು ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ನ್ಯಾಯಾಲಯದಲ್ಲಿ ವಿಲೇವಾರಿಯಾಗುತ್ತಿದ್ದವು. ಈ ವರ್ಷ ಅರ್ಧದಷ್ಟು ಕೂಡ ವಿಲೇವಾರಿಯಾಗಿಲ್ಲ. ಕೈಯಲ್ಲಿದ್ದ ಕೆಲವು ಪ್ರಕರಣಗಳು ಇತ್ಯರ್ಥವಾಗಿವೆ. ಹೊಸ ಪ್ರಕರಣಗಳು ಬರುತ್ತಿಲ್ಲ ಎಂಬ ಚಿಂತೆಯ ನಡುವೆ ಕೋವಿಡ್ ಹೊಸ ಅಲೆ ಆತಂಕ ಸೃಷ್ಟಿಸಿದೆ. ಎಷ್ಟೋ ವಕೀಲರಿಗೆ ನ್ಯಾಯಾಲಯದ ಆದಾಯ ಬಿಟ್ಟರೆ ಬೇರೆ ಆದಾಯದ ಮೂಲವಿಲ್ಲ. ಒಮ್ಮೆ ವಕೀಲಿಕೆ ಮಾಡಿದವರು ಬೇರೆ ಉದ್ಯೋಗ ಮಾಡಲು ಇಚ್ಛಿಸುವುದಿಲ್ಲ. ಬೇರೆ ವೃತ್ತಿ ಆಯ್ದುಕೊಳ್ಳುವಂತಿಲ್ಲ ಎಂಬ ನಿರ್ಬಂಧಗಳು ಕೂಡ ಇವೆ. ವಕೀಲರ ಕಲ್ಯಾಣ ನಿಧಿಗೆ ಹಣ ಕಟ್ಟಲು ಕೂಡ ಹಿಂದೆ- ಮುಂದೆ ನೋಡುವಂತಹ ಸ್ಥಿತಿ ಅನೇಕರಿಗೆ ಇದೆ.
ಸರ್ಕಾರದ ಧನಸಹಾಯ ದೊರೆಯಿತೆ?
ಸರ್ಕಾರದಿಂದ ರೂ 5000 ಧನಸಹಾಯ ದೊರೆಯಬಹುದೆಂಬ ನಿಟ್ಟಿನಲ್ಲಿ ಆನ್‌ಲೈನ್ ಮೂಲಕ ಕೋವಿಡ್ 19 ಸುರಕ್ಷಾ ವಿಮೆ ಯೋಜನೆಗೆ ನಮ್ಮಲ್ಲಿ ಬಹುತೇಕರು ನೋಂದಾಯಿಸಿಕೊಂಡಿದ್ದೆವು. ಆದರೆ ಕೆಲವೇ ಕೆಲವು ಮಂದಿಗೆ ಮಾತ್ರ ಧನಸಹಾಯ ದೊರೆಯಿತು. ವಕೀಲರ ಪರಿಷತ್ತಿಗೆ ಕರೆ ಮಾಡಿದಾಗ ಪ್ರಕರಣ ನ್ಯಾಯಾಲಯದಲ್ಲಿ ಇದೆ ಎಂದು ತಿಳಿದುಬಂತು. ಹಾಗಾಗಿ ಹೆಚ್ಚಿನ ಧನಸಹಾಯ ನಿರೀಕ್ಷಿಸಲು ಆಗಲಿಲ್ಲ.
ಕೋವಿಡ್ ಸಂದರ್ಭದಲ್ಲಿ ಮೊಳಕಾಲ್ಮೂರು ವಕೀಲರ ಸಂಘದ ಪ್ರಮುಖ ಬೇಡಿಕೆಗಳು ಏನಿವೆ?
ಮೊಳಕಾಲ್ಮೂರು ತಾಲ್ಲೂಕಿಗೆ ಒಂದು ಸಮಸ್ಯೆ ಇದೆ. ಎಲ್ಲಾ ತಾಲ್ಲೂಕುಗಳಲ್ಲಿ ಇರುವ ಹಿರಿಯ ಶ್ರೇಣಿ ನ್ಯಾಯಾಲಯ ಇಲ್ಲಿಲ್ಲ. ಇದರಿಂದಾಗಿ ವಕೀಲರು ಪ್ರತಿ ಬಾರಿ ಚಳ್ಳಕೆರೆ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ಇಂತಹ ಓಡಾಟ ಅಪಾಯಕಾರಿ ಎಂಬ ಮಾತಿದೆ. ಹಿರಿಯ ಶ್ರೇಣಿಯ ನ್ಯಾಯಾಲಯ ಅಸ್ತಿತ್ವಕ್ಕೆ ಬಂದರೆ ವಕೀಲರ ಆದಾಯದಲ್ಲಿಯೂ ಏರಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಗಮನಹರಿಸಬೇಕು ಎಂಬುದು ಮುಖ್ಯ ಬೇಡಿಕೆ.