ಸಂದರ್ಶನಗಳು

[ಅನುಸಂಧಾನ] ಮೊದಲ ಬಾರಿ ವಾದ ಮಂಡಿಸುವಾಗ ಬೆವೆತಿದ್ದೆ, ನನ್ನ ಧ್ವನಿ ನನಗೇ ಕೇಳುತ್ತಿರಲಿಲ್ಲ: ಅಂಜಲಿ ರಾಮಣ್ಣ

ಕಾನೂನು ಶಿಕ್ಷಣ ಮತ್ತು ವಕೀಲಿಕೆಯ ಹಿನ್ನೆಲೆಯಿಂದ ಬಂದು ಸಮಾಜದ ವಿವಿಧ ವಲಯಗಳಲ್ಲಿ ಗುರುತರ ಸಾಧನೆ ಮಾಡಿದ ಸಾಧಕರೊಂದಿಗಿನ ಮಾತುಕತೆಯೇ ಈ 'ಅನುಸಂಧಾನ'.

Ramesh DK

ಬೆಂಗಳೂರು ನಗರ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಅಂಜಲಿ ರಾಮಣ್ಣ ಬಹುಮುಖ ಪ್ರತಿಭೆ. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಇಂಗ್ಲಿಷ್‌ ಸಾಹಿತ್ಯದಲ್ಲಿ ಡಿಪ್ಲೊಮಾ, ಕಾನೂನು ಪದವಿಯ ಜೊತೆಗೆ ಜಿನಿವಾ, ಕೇಂಬ್ರಿಜ್‌, ಮಿಷಿಗನ್‌ ವಿಶ್ವವಿದ್ಯಾಲಯಗಳಿಂದ ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಪಡೆದಿದ್ದಾರೆ. ʼಗ್ರೀಫ್‌ ಕೌನ್ಸಿಲಿಂಗ್ʼ‌ ಕುರಿತೂ ಅಪಾರ ಜ್ಞಾನ ಹೊಂದಿದ್ದಾರೆ. ವಕೀಲಿಕೆಯ ಜೊತೆಗೆ ಸಮಾಜ ಸೇವೆಗೆಂದು ಅಂಜಲಿ ಹುಟ್ಟುಹಾಕಿರುವ ಸಂಸ್ಥೆ ʼಅಸ್ತಿತ್ವ ಲೀಗಲ್‌ ಟ್ರಸ್ಟ್‌ʼ. ವಿಶ್ವಸಂಸ್ಥೆಯಿಂದ ಹಿಡಿದು, ವಿವಿಧ ವಿಶ್ವವಿದ್ಯಾಲಯಗಳು, ಆಯೋಗಗಳಿಗಾಗಿ ಮಂಡಿಸಿರುವ ಪ್ರಬಂಧಗಳು ಅವರಿಗೆ ಮಕ್ಕಳು ಮತ್ತು ಮಹಿಳೆಯರ ಬಗೆಗೆ ಇರುವ ಕಾಳಜಿಯನ್ನು ಧ್ವನಿಸುತ್ತವೆ.

ಕವನ ಸಂಕಲನ ʼಕಾಯುವೆಯಾ ಕಾಲʼ, ಪ್ರಬಂಧ ಸಂಕಲನ ʼರಷೀತಿಗಳುʼ, ಮಹಿಳೆ ಮತ್ತು ಮಕ್ಕಳ ಕುರಿತ ʼಚೌಕಟ್ಟುಗಳುʼ, ಹೆಣ್ಣು ಭ್ರೂಣ ಹತ್ಯೆ ಕುರಿತ ʼಹೂವಿನ ಹಾಡುʼ ಅರುಣಾಚಲ ಪ್ರದೇಶ ಪ್ರವಾಸ ಕಥನ ʼಬೆಳಕಿನ ಸೆರಗುʼ ಅವರ ಪ್ರಮುಖ ಕೃತಿಗಳು. ʼಗುಲಾಬಿ ಗ್ಯಾಂಗ್‌ʼ, ʼಕಥೆ ಹೇಳುತ್ತಿದೆ ಇಸ್ರೇಲ್‌ʼ, ʼಕಂಡಷ್ಟೂ ಪ್ರಪಂಚʼ ಪ್ರಕಟವಾಗಬೇಕಾದ ಪುಸ್ತಕಗಳು. ʼಗಗನಸಖಿʼ, ʼಜೀನ್ಸ್‌ ಟಾಕ್‌ʼ, ʼತಂತಾನೇʼ ಇವು ಕನ್ನಡದಲ್ಲಿ ಬರೆದ ಅಂಕಣ ಬರಹಗಳಾದರೆ ʼಲೀಗಲಿ ಯುವರ್ಸ್‌ʼ ಕಾನೂನು ಜಾಗೃತಿಗಾಗಿ ಇಂಗ್ಲಿಷ್‌ನಲ್ಲಿ ಮೂಡಿಬಂದ ಕೃತಿ. ಹಲವು ಸಾಕ್ಷ್ಯಚಿತ್ರಗಳನ್ನೂ, ಮಾಧ್ಯಮಗಳಿಗಾಗಿ ಕಾರ್ಯಕ್ರಮಗಳನ್ನೂ ಇವರು ರೂಪಿಸಿದ್ದಾರೆ. ಇಂದಿರಾ ಪ್ರಿಯದರ್ಶಿನಿ ಮಹಿಳಾ ಸಾಧಕಿ, ಕಮಲಾ ರಾಮಸ್ವಾಮಿ ದತ್ತಿ ಪ್ರಶಸ್ತಿ, ಮಾತೆ ರಮಾಬಾಯಿ ಅಂಬೇಡ್ಕರ್‌ ಪ್ರಶಸ್ತಿ ಇತ್ಯಾದಿ ಗೌರವಗಳಿಗೆ ಭಾಜನರಾಗಿದ್ದಾರೆ. ತಮ್ಮ ಪ್ರತಿಭೆಯ ಹಲವು ಮುಖಗಳನ್ನು ʼಬಾರ್‌ ಅಂಡ್‌ ಬೆಂಚ್‌ʼ ಎದುರು ಅವರು ತೆರೆದಿಟ್ಟಾಗ…

ಸಾಹಿತ್ಯದ ಬಗ್ಗೆ ಒಲವಿದ್ದ ನೀವು ಕಾನೂನು ಲೋಕ ಪ್ರವೇಶಿಸಿದ್ದು ಹೇಗೆ?

ಸಹಜವಾಗಿ ಎಲ್ಲ ಕ್ಷೇತ್ರದಲ್ಲೂ ಆಸಕ್ತಿ ಇರಬೇಕು ಎಂಬಂತೆ ನಮ್ಮನ್ನು ಮನೆಯಲ್ಲಿ ಬೆಳೆಸಿದ್ದರು. ಈ ಬಗೆಯ ವಾತಾವರಣ ಇದ್ದಿದ್ದರಿಂದ ನನಗೆ ಸಾಹಿತ್ಯ ಬೇರೆ, ಕಾನೂನು ಬೇರೆ ಎಂಬ ಭಾವನೆಯೇ ಬರಲಿಲ್ಲ. ಇಡೀ ಕರ್ನಾಟಕದ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯ ಪತ್ರಿಕೆಗಳು ನಮ್ಮ ಮನೆಗೆ ಬರುತ್ತಾ ಇದ್ದವು. ಮಸಾಲ ದೋಸೆಗೆ ಕಟ್ಟಿಕೊಟ್ಟಿರೋ ಪೇಪರ್‌ ತುಂಡಿನಿಂದ ಹಿಡಿದು ದೊಡ್ಡ ದೊಡ್ಡ ಪುಸ್ತಕಗಳನ್ನೂ ಓದುವುದು ನಮ್ಮ ಮನೆಯಲ್ಲಿದ್ದ ರೂಢಿ.

ಚಿಕ್ಕವಯಸ್ಸಿನಲ್ಲಿ ಮಕ್ಕಳು ʼಅಮ್ಮನ ಆಟʼ ಆಡ್ತಾ ಇದ್ದರೆ ನಾನು ಲಾಯರ್‌ ಎಂದು ಬಿಂಬಿಸಿಕೊಳ್ಳುತ್ತಿದ್ದೆ. ಮೊದಲ ಸಲ ಲಾಯರ್‌ ಆಗ್ತೀನಿ ಅಂತ ನಾನು ಹೇಳಿದ್ದು ನಾಲ್ಕನೇ ಕ್ಲಾಸಲ್ಲಿ ಇರೋವಾಗ. ಹಾಗೆಂದು ಈಗಿನ ಹಾಗೆ ʼನೀನು ಐಐಟಿ ಓದು, ಡಾಕ್ಟರ್‌, ಇಂಜಿನಿಯರ್‌ ಆಗುʼ ಎಂದು ಸಣ್ಣ ವಯಸ್ಸಿನಿಂದಲೇ ಕ್ಲಾಸುಗಳಿಗೆ ಹಾಕುತ್ತಿರಲಿಲ್ಲ. ನಮ್ಮದು ತುಂಬಾ ಪ್ರಸಿದ್ಧ ಕುಟುಂಬ ಆದರೂ ಸಹ ಸಾಮಾನ್ಯ ರೀತಿಯಲ್ಲಿ ಬೆಳೆದು ಬಂದಿದ್ದೆವು.

ಕಾನೂನು ಅಧ್ಯಯನದ ವೇಳೆ ನಿಮ್ಮ ಮೇಲೆ ಗಾಢವಾಗಿ ಪ್ರಭಾವ ಬೀರಿದ ಸಂಗತಿಗಳು ಯಾವುವು?

ನಾನು ಹುಟ್ಟಿದಾಗಿನಿಂದ ಈ ಘಳಿಗೆಯವರೆಗೂ ನಮ್ಮ ತಂದೆ (ಖ್ಯಾತ ಪತ್ರಕರ್ತ ಕೆ ರಾಮಣ್ಣ), ತಾಯಿ ಬಿಟ್ಟು ಮತ್ತೇನೂ ನನ್ನ ಮೇಲೆ ಗಾಢವಾದ ಪ್ರಭಾವ ಬೀರಿಲ್ಲ. ಯಾಕೆ ಅಂದ್ರೆ ಅವರಿಬ್ಬರೂ ಈ ನಿಜದ ಜಗತ್ತಿನ ಬದುಕಿನ ಭಗವದ್ಗೀತೆ ಇದ್ದಂತೆ. ಕಾನೂನು ಅಧ್ಯಯನದ ವೇಳೆ ಯಾವ ಪುಸ್ತಕ, ಘಟನೆ, ಪ್ರೊಫೆಸರ್‌ಗಳಿಂದ ಪ್ರಭಾವಿತರಾದಿರಿ ಎಂದೇನಾದರೂ ಕೇಳಿದರೆ ಜೀವನದಲ್ಲಿ ಎಲ್ಲವೂ ಪ್ರಭಾವ ಬೀರಿವೆ ಎಂದು ಹೇಳಬಲ್ಲೆ. ಆದರೆ ಇದಕ್ಕೆಲ್ಲಾ ಭದ್ರ ಬುನಾದಿ ಹಾಕಿದ್ದು ನನ್ನ ತಂದೆ ತಾಯಿ.

ವಕೀಲರಾಗಿ ವೃತ್ತಿ ಜೀವನದ ಆರಂಭದ ದಿನಗಳ ಬಗ್ಗೆ ಹೇಳಿ. ಯಾವ ಹಿರಿಯ ವಕೀಲರ ಕೈ ಕೆಳಗೆ ಪ್ರಾಕ್ಟೀಸ್‌ ಮಾಡಿದಿರಿ?

ಕಾನೂನಿಗೆ ಸಂಬಂಧಿಸಿದ ಐದು ವರ್ಷದ ಕೋರ್ಸ್‌ ನಾನು ಮಾಡಿರೋದು. ಅಂತಿಮ ವರ್ಷದ ಅಧ್ಯಯನದ ವೇಳೆ ನಮಗೆ ಹಿರಿಯ ವಕೀಲರ ಬಳಿ ಇಂಟರ್ನ್‌ಶಿಪ್‌ ಮಾಡಬೇಕಾಗಿರುತ್ತೆ. ಮೈಸೂರಿನ ಬಿ ವಿ ರಾಮನ್‌ ರೀತಿಯ ಅತ್ಯಂತ ಪ್ರಸಿದ್ಧ ಹಿರಿಯ ವಕೀಲರ ಬಳಿ ನಾನು ಇಂಟರ್ನ್‌ಶಿಪ್‌ ಮಾಡಿದೆ.

ಎನ್‌ರೋಲ್‌ಮೆಂಟ್‌ ಆದ ಬಳಿಕ ಸಿಂಘಾನಿಯಾ ಅಂಡ್‌ ಸಿಂಘಾನಿಯಾ ಕಾನೂನು ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ಎಂಟು- ಹತ್ತು ತಿಂಗಳು ಅಲ್ಲಿ ಕೆಲಸ ಮಾಡಿದ ನಂತರ ನಾನು ನನ್ನದೇ ಕಚೇರಿ ಆರಂಭಿಸಿದೆ.

ಬೌದ್ಧರ ಪರಮೋಚ್ಛ ಗುರು ದಲೈಲಾಮಾ ಅವರೊಂದಿಗೆ.

ನೀವು ವಾದ ಮಂಡಿಸಿದ ಮೊದಲ ಕೇಸ್‌ ಯಾವುದು ? ಮೆಲಕು ಹಾಕುವಂತಹ ಪ್ರಸಂಗಗಳನ್ನು ಹಂಚಿಕೊಳ್ಳಬಹುದೇ?

ಎನ್‌ರೋಲ್‌ ಆದ ತಕ್ಷಣ ಮೈಸೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ನಮ್ಮ ತಂದೆಯ ಖಾಸಾ ಗೆಳೆಯರ ಹೆಂಡತಿಯ ಹೆಸರು ಬದಲಾವಣೆಗೆ ಸಂಬಂಧಿಸಿದ ಅಫಿಡವಿಟ್‌ ಪ್ರಕರಣವನ್ನು ಮೊದಲ ಬಾರಿಗೆ ನಿಭಾಯಿಸಿದೆ. ವಿಶ್ವವಿದ್ಯಾಲಯದಲ್ಲೇ ಅತಿ ಹೆಚ್ಚು ಅಂಕ ಪಡೆದಿದ್ದ; ಅನೇಕ ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ; ರಾಷ್ಟ್ರಮಟ್ಟದಲ್ಲೂ ಮಿಂಚಿದ್ದ ನಾನು ಯಕಶ್ಚಿತ್‌ ಒಂದು ಅಫಿಡವಿಟ್‌ ಕೇಸ್‌ ಮಂಡಿಸಿ ಎವಿಡೆನ್ಸ್‌ ಮಾಡುವಾಗ ತುಂಬಾ ಬೆವೆತಿದ್ದೆ. ನನ್ನ ಧ್ವನಿ ನನಗೇ ಕೇಳಿಸ್ತಾ ಇರಲಿಲ್ಲ. ಈಗಲೂ ನೆನೆದರೆ ನಗು ಬರುತ್ತೆ. ಆದರೆ ಆ ರೀತಿಯ ಭಯ, ಆತಂಕ, ಗಾಬರಿ, ಹೆದರಿಕೆ ನನ್ನನ್ನು ನಾನು ಮತ್ತಷ್ಟು ಅರ್ಥಮಾಡಿಕೊಳ್ಳಲು ಮತ್ತು ವಾಸ್ತವದಲ್ಲಿ ಯೌವನದ ಪೊಗರನ್ನು ಹೇಗೆ ಹದಗೊಳಿಸಿಕೊಂಡು ಮುಂದುವರೆಯಬಹುದು ಎಂದು ಅರಿಯಲು ಬಹಳ ಹೆಲ್ಪ್‌ ಆಯಿತು.

ಅದು ನನ್ನ ಮೊದಲು ಪ್ರಕರಣ. ಇತ್ತೀಚಿನ ಪ್ರಕರಣವೊಂದನ್ನು ಇಲ್ಲಿ ಹೇಳುತ್ತೇನೆ. ಕೊಲೆಗೆ ಸಂಬಂಧಿಸಿದ್ದ ಕೇಸ್‌ ಅದು. ಆದರೆ ಅಚಾನಕ್ಕಾಗಿ ಕೊಲೆ ನಡೆದಿತ್ತು. ಆತ್ಮರಕ್ಷಣೆಗಾಗಿ ಮಾಡಿದ ಕೊಲೆ. ಆಕೆ ಕಡು ಬಡವಿ. ಯಾರೂ ಕೈ ಹಿಡಿಯದ ಸಂದರ್ಭದಲ್ಲಿ ಆಕೆಗೆ ಜಾಮೀನು ದೊರಕಿಸಿಕೊಟ್ಟೆ.

ಕಾನೂನು ಶಿಕ್ಷಣ, ವಕೀಲಿಕೆಯ ಹಿನ್ನೆಲೆ ನಿಮ್ಮೊಳಗಿನ ಬರಹಗಾರ್ತಿಯ ಮೇಲೆ ಹೇಗೆ ಪರಿಣಾಮ ಬೀರಿತು?

ಐದನೆ ತರಗತಿಯಲ್ಲಿ ಗೀತಾ ಎಂಬ ಗೆಳತಿ ನನಗೆ ನೂರು ಪುಟದ ʼಲೇಖಕ್‌ʼ ಪುಸ್ತಕವನ್ನ ಕೊಟ್ಟಿದ್ದಳು. ಅದರಲ್ಲಿ ʼಕವನʼ ಎನ್ನುವ ಹೆಸರಿನಲ್ಲಿ ಏನೇನೋ ಗೀಚುತ್ತಿದ್ದೆ. ಆ ಪುಸ್ತಕ ಈಗಲೂ ನನ್ನ ಬಳಿ ಇದೆ. ಶಾಲಾದಿನಗಳಲ್ಲಿ ಪ್ರಬಂಧಗಳನ್ನು ಚೆನ್ನಾಗಿ ಬರೆಯುತ್ತಿದ್ದೆ. ನನ್ನ ತಾಯಿ ಅತ್ಯುತ್ತಮ ಬರಹಗಾರ್ತಿ. ನಮ್ಮ ತಂದೆ ಸುಪ್ರಸಿದ್ಧ ಪತ್ರಿಕೋದ್ಯಮಿಗಳು, ಸ್ವಾತಂತ್ರ್ಯ ಹೋರಾಟಗಾರರು. ಅವರೂ ಸಹ ಲೇಖಕರು.

ನಾನು ಲೇಖಕಿ ಎಂದು ಈ ಘಳಿಗೆಯಲ್ಲೂ ಅನ್ನಿಸ್ತಾ ಇಲ್ಲ. ಬರಹಗಾರ್ತಿಗೆ ಜೀವನದ ಪ್ರತಿ ಘಟನೆ, ಪ್ರತಿಯೊಂದು ವಸ್ತು, ಪ್ರತಿ ವಿಷಯವೂ ಬರಹಕ್ಕೆ ಒಂದು ವಸ್ತುವಾಗಿ ದಕ್ಕುತ್ತಾ ಹೋಗುತ್ತೆ. ಹಾಗಾಗಿ ಕಾನೂನು ಶಿಕ್ಷಣವೇ ನನ್ನನ್ನು ಬರಹಗಾರ್ತಿಯನ್ನಾಗಿ ರೂಪಿಸಿತೆ ಎಂಬುದು ಗೊತ್ತಿಲ್ಲ. ಆದರೆ ಒಂದಂತೂ ನಿಜ. ಕಾನೂನು ಬಿಟ್ಟು ಇನ್ನಾವುದೇ ವೃತ್ತಿಯನ್ನೂ ನಾನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಕಸ್ಮಾತ್‌ ನನ್ನ ತಂದೆ- ತಾಯಿ ನನಗೆ ಕಾನೂನು ಶಿಕ್ಷಣ ಕೊಡಿಸದೇ ಇದ್ದಿದ್ದರೆ ನನ್ನ ಜೀವನ ಎಷ್ಟು ವ್ಯರ್ಥವಾಗುತ್ತಿತ್ತು ಅಂತ ಆಗಾಗ ಅಂದುಕೊಳ್ಳುತ್ತೇನೆ. ನನಗೇನಾದೂ ಇನ್ನೊಂದು ಜನ್ಮ ಸಿಕ್ಕರೆ ಆಗಲೂ ಕಾನೂನು ಓದಿ ವಕೀಲೆ ಆಗುತ್ತೇನೆ ಅಂತ ಒಂದು ಸಂದರ್ಭದಲ್ಲಿ ಹೇಳಿದ್ದೆ. ಯಾಕೆ ಅಂದ್ರೆ ಅದು ಕೊಟ್ಟಿರುವಷ್ಟು ಆತ್ಮವಿಶ್ವಾಸ ಬೇರೇನೂ ಕೊಡುವುದಿಲ್ಲ.

ಅಸ್ತಿತ್ವ ಲೀಗಲ್‌ ಟ್ರಸ್ಟ್‌ ಹುಟ್ಟಿದ್ದು ಹೇಗೆ? ಅದರ ಮಹತ್ವವೇನು?

2002ನೇ ಇಸವಿಯ ಜೂನ್‌ ಅಥವಾ ಜುಲೈ ತಿಂಗಳು. ಏನಾದರೂ ಮಾಡಬೇಕೆಂಬ ತುಡಿತ ಇತ್ತು. ʼಅಸ್ತಿತ್ವʼ ಎಂಬ ಪದ ಬಹಳ ಆಕರ್ಷಣೀಯ ಅನ್ನಿಸಿತು. ಮಹಿಳೆಯರು ಮತ್ತು ಮಕ್ಕಳಲ್ಲಿ ಕಾನೂನು ಜಾಗೃತಿ ಮೂಡಿಸುವ ಉದ್ದೇಶದಿಂದ ಟ್ರಸ್ಟ್‌ ಶುರು ಮಾಡಿದೆ. ಸರ್ಕಾರೇತರ ಸಂಸ್ಥೆಗಳ ಸಂಪರ್ಕ ಉಂಟಾಗಿ ಕಾನೂನು ಜಾಗೃತಿ ಮಾತ್ರವಲ್ಲದೇ ಮಹಿಳೆಯರಿಗೆ ಶಿಕ್ಷಣ, ಪೌಷ್ಠಿಕ ಆಹಾರ, ಆರೋಗ್ಯದ ಬಗ್ಗೆ ಜಾಗೃತಿ ಮತ್ತು ನೆರವು ನೀಡುವುದಕ್ಕಾಗಿ ಸಂಸ್ಥೆ ಮುಂದಡಿ ಇರಿಸಿತು. ನನ್ನ ಸ್ನೇಹವಲಯದಲ್ಲಿರುವವರೇ ಮುಂದೆ ಬಂದು ಸಂಸ್ಥೆಗೆ ಹಣ ನೀಡಿದರು. ಆ ಮೂಲಕ ಹನ್ನೆರಡು ಹೆಣ್ಣು ಮಕ್ಕಳನ್ನು ಶಿಕ್ಷಣ ವಿಷಯಕ್ಕೆ ದತ್ತು ಪಡೆದೆ. ಎರಡು ಕೊಳೆಗೇರಿಗಳನ್ನು ಕೂಡ ದತ್ತು ಪಡೆದು ಅಲ್ಲಿನ ಜನರ ಬದುಕಿನ ಮಟ್ಟ ಹೆಚ್ಚಿಸಲು ಕೆಲಸ ಮಾಡಿದೆ. ಇಡೀ ದೇಶದ ಶಾಲಾ ಕಾಲೇಜುಗಳ ಬೋಧಕರಿಗೆ ತರಬೇತಿ, ವೈದ್ಯಕೀಯ ಶಿಬಿರಗಳ ಆಯೋಜನೆ, ಉಚಿತ ಸೇವೆ, ಎಚ್‌ಐವಿ ದೃಢಪಟ್ಟ ಮಹಿಳೆಯರಿಗಾಗಿ ಪೌಷ್ಠಿಕ ಆಹಾರದ ಜಾಗೃತಿ ಮತ್ತು ಪೂರೈಕೆ, ವೃದ್ಧರಿಗಾಗಿ ಐದಾರು ಭಾಷೆಗಳಲ್ಲಿ ಆಡಿಯೊ ಲೈಬ್ರರಿ ಆರಂಭ ಇವು ನಮ್ಮ ಸಂಸ್ಥೆಯ ಕಾರ್ಯಗಳು.

ಕೇರಳ ಮಾನವ ಹಕ್ಕು ಆಯೋಗದ ತೀರ್ಪೊಂದರಿಂದ ಸ್ಫೂರ್ತಿ ಪಡೆದು ವಿಧವೆ ಎನ್ನುವ ಪದವನ್ನು ಸರ್ಕಾರಿ ದಾಖಲೆಗಳಿಂದ ತೆಗೆಸಲು 2012- 13ರಲ್ಲಿ ಹೋರಾಟ ಆರಂಭಿಸಿದೆ. ನಟಿ ಉಮಾಶ್ರೀ ಅವರು ಸಚಿವೆಯಾಗಿದ್ದಾಗ ಈ ಸಂಬಂಧ ಮನವಿ ಸಲ್ಲಿಸಿದ್ದೆವು. ಅಂತೆಯೇ ನೃತ್ಯ ಕ್ಷೇತ್ರದ ಮೂಲಕ ಆಸಿಡ್‌ ದಾಳಿಗೊಳಗಾದ ಸಂತ್ರಸ್ತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಯತ್ನಿಸಿದ್ದೇವೆ. ವ್ಯಕ್ತಿತ್ವ ನಿರ್ಮಾಣದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದೇವೆ.

ಲಂಡನ್‌ನ ಥೇಮ್ಸ್‌ ನದಿಯ ತೀರದಲ್ಲಿ ಬಸವಣ್ಣನ ಪ್ರತಿಮೆಯೊಂದಿಗೆ...

ಮಾನವ ಹಕ್ಕುಗಳು ಅದರಲ್ಲಿಯೂ ಮಕ್ಕಳ ಹಕ್ಕುಗಳು ನಿಮ್ಮ ಆಸಕ್ತಿಯ ಕ್ಷೇತ್ರವಾದುದರ ಹಿನ್ನೆಲೆ ಏನು?

ನನಗೆ ಕಾನೂನು ಎಂದರೆ ಮಾನವ ಹಕ್ಕು. ಸಮಾಜ ಅಥವಾ ನಾಗರಿಕತೆ ಎಂಬುದು ನಿಜಾರ್ಥ ಸಾಧಿಸುವುದೇ, ಮಹಿಳೆಯರು ಮತ್ತು ಮಕ್ಕಳ ಧ್ವನಿಯನ್ನ ಈ ಸಮಾಜ ಕೇಳಿಸಿಕೊಳ್ಳುವ ಹಾಗೆ ಆದಾಗ. ಮಹಿಳೆ, ಮಕ್ಕಳು, ಪುರುಷ ಪ್ರಕೃತಿ ಎಲ್ಲವೂ ಸಹ ಸಮಾಜವನ್ನು ಪರಿಪೂರ್ಣತೆಯೆಡೆಗೆ ಕೊಂಡೊಯ್ಯುವ ಸಾಮಗ್ರಿಗಳು. ಇದರಲ್ಲಿ ಒಂದನ್ನು ಬಿಟ್ಟರೂ ನಮ್ಮ ಉದ್ದೇಶ ಸಾಫಲ್ಯ ಆಗದು.

ಮಹಿಳೆಯರು, ಮಕ್ಕಳ ಕ್ಷೇತ್ರಕ್ಕೇ ನಾನು ದುಡಿಯಬೇಕು. ಪುರುಷರನ್ನು ದ್ವೇಷಿಸಬೇಕು ಎನ್ನುವುದು ಇದರ ಅರ್ಥವಲ್ಲ. ಎಲ್ಲದರಲ್ಲೂ ಇರುವಂತೆ ಇದರಲ್ಲಿಯೂ ಆಸಕ್ತಿ ಇದೆ. ಜನಗಳು ತಾವಾಗಿ ತಾವೇ ಮಹಿಳೆ ಮತ್ತು ಮಕ್ಕಳ ಕ್ಷೇತ್ರದಲ್ಲಿ ತುಂಬಾ ಕೆಲಸ ಮಾಡಿದ್ದೀರಿ ಎಂದು ಹೇಳುತ್ತಿರುವುದರಿಂದ ಅದು ಮುಂದುವರೆದುಕೊಂಡು ಹೋಗುತ್ತಿದೆ.

ವಕೀಲಿಕೆಯಂತಹ ಒತ್ತಡದ ವೃತ್ತಿ ಆಯ್ದುಕೊಂಡಿದ್ದರೂ ನೀವು ಪ್ರವಾಸ ಕಥನ ಪ್ರಕಾರದಲ್ಲಿ ಕೂಡ ಕೈಯಾಡಿಸಿದ್ದೀರಿ. ಈ ಎರಡೂ ಕೊಂಡಿಗಳನ್ನು ಹೊಂದಿಸಿಕೊಳ್ಳುವುದು ಹೇಗೆ ಸಾಧ್ಯವಾಯಿತು?

ಪ್ರವಾಸ ಎಂದರೆ ನನಗೆ ಶಕ್ತಿ ತರಂಗ ಇದ್ದ ಹಾಗೆ. ನನ್ನ ಪಾಲಿಗೆ ಯಾವುದೇ ಘಳಿಗೆಯಲ್ಲಿ, ಹೇಗೇ ಇದ್ದರೂ ಗೊಣಗದೆ ಥಟ್ಟಕ್ಕಂತ ಎದ್ದು ಹೊರಡುವ ಜೀವನ ಕ್ರಮವಾಗಿದೆ ಪ್ರವಾಸ. ಆದ್ದರಿಂದ ಈ ಎರಡೂ ಕೊಂಡಿಗಳನ್ನು ಹೊಂದಿಸುವುದು ಕಷ್ಟ ಆಗಲಿಲ್ಲ. ಹಾಗಂತ ಪ್ರವಾಸ ಅಂದ್ರೆ ಯಾವುದೋ ರೆಸಾರ್ಟ್‌ನಲ್ಲಿದ್ದು ರೆಸ್ಟ್‌ ಮಾಡುವುದಲ್ಲ. ಇಪ್ಪತ್ನಾಲ್ಕು ಗಂಟೆಗಳ ಕಾಲವೂ ಭರಭರ ಓಡಾಡುತ್ತಾ ಅಲ್ಲಿನ ಜನರ ಸಂಸ್ಕೃತಿ, ಆಹಾರ, ಆಲೋಚನೆ, ಸಾಹಿತ್ಯ ಎಂತಹುದು, ಅಲ್ಲಿ ಮಹಿಳೆಯರ ಸ್ಥಾನ ಹೇಗಿದೆ ಎಂದು ಅರಿಯುವುದು, ಅಲ್ಲಿನ ಪೊಲೀಸ್‌ ಠಾಣೆಗಳಿಗೆ ಭೇಟಿ ಕೊಟ್ಟು ಪೊಲೀಸರೊಂದಿಗೆ ಮಾತುಕತೆ ನಡೆಸುವುದು. ಆ ಪ್ರದೇಶದ ಸುಪ್ರಸಿದ್ಧ ವ್ಯಕ್ತಿಗಳನ್ನು ಮಾತನಾಡಿಸುವುದು ಇದೆಲ್ಲವನ್ನೂ ಪ್ರವಾಸ ಅಂದುಕೊಂಡಿದ್ದೇನೆ.

ಡಾರ್ಜಿಲಿಂಗ್‌ಗೆ ಹೋದಾಗ (ಪರ್ವತಾರೋಹಿ) ತೇನ್‌ಸಿಂಗ್‌ ಮನೆಯವರು ಯಾರಾದರೂ ಇರಬಹುದೇ ಎಂದು ಕೇಳಿದೆ. ಅಲ್ಲಿಯ ಜನಕ್ಕೇ ಆ ವ್ಯಕ್ತಿಯ‌ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ತೇನ್‌ಸಿಂಗ್‌ ಮಗ ಮತ್ತು ಸೊಸೆಯರನ್ನು ಭೇಟಿ ಮಾಡಿ ಬಂದೆ. ಅದೇ ರೀತಿ ರವೀಂದ್ರನಾಥ ಟ್ಯಾಗೋರರು ʼಗೀತಾಂಜಲಿʼಯನ್ನು ಬರೆದ ಜಾಗಕ್ಕೆ ಹೋಗಿ ಬಂದೆ. ಅದು ನೋಡಿದರೆ ಪಾಳು ಬಿದ್ದಿತ್ತು. ಈ ರೀತಿ ಸಾಹಸಮಯ ಪ್ರವಾಸ ನನಗೆ ತುಂಬಾ ಇಷ್ಟ. ಕಾನೂನು ಶಿಕ್ಷಣ ಕೊಟ್ಟ ಆತ್ಮವಿಶ್ವಾಸದಿಂದಾಗಿ ನಾನೂ ಎಲ್ಲಿಗೆ ಕೂಡ ಹೋಗಿ ದಕ್ಕಿಸಿಕೊಳ್ಳುಬಲ್ಲವಳಾಗಿದ್ದೇನೆ.

ಇದೆಲ್ಲದರ ನಡುವೆ ವೀಣೆ ಕೂಡ ನುಡಿಸುತ್ತೀರಿ. ಸಂಗೀತದ ಗುಂಗು ಹತ್ತಿದ್ದು ಹೇಗೆ?

ನಮ್ಮ ತಾಯಿ ವೀಣಾವಾದನದಲ್ಲಿ ʼವಿದ್ವತ್‌ʼ ಮಾಡಿದ್ದಾರೆ. ಅಮ್ಮನ ಬಳುವಳಿಯಾಗಿ ಆ ವೀಣೆ ನನ್ನ ಬಳಿ ಇದೆ. ಮೈಸೂರಿನ ವಿದ್ವಾನ್‌ ಮರಿಯಪ್ಪನವರ ಸೊಸೆ ಚಂದ್ರಕಾಂತಾ ಅವರ ಬಳಿ ನಾನು ವೀಣೆ ಕಲಿತದ್ದು. ವೀಣೆ ಹಿಡಿದ ಕ್ಷಣ ಮೈಸೂರಿನ ರಸ್ತೆಗಳಿಗೆ ನನ್ನ ಮನಸ್ಸು ಹೋಗಿ ಬಿಡುತ್ತದೆ. ಕರ್ನಾಟಕ ವೋಕಲ್‌ನಲ್ಲಿ ಕೂಡ ಸೀನಿಯರ್‌ ಪೋರ್ಷನ್ಸ್‌ ಅಭ್ಯಸಿಸಿದ್ದೇನೆ (ಪರೀಕ್ಷೆ ಬರೆದಿಲ್ಲ). ಅದನ್ನು ಕಲಿತದ್ದು ಮೈಸೂರಿನ ವಿದ್ವಾನ್‌ ಮರಿಯಪ್ಪನವರು ಮತ್ತು ಮೈಸೂರು ಬ್ರದರ್ಸ್‌ನ ಶ್ರೀವತ್ಸ ಅವರ ಬಳಿ. ಪಾಶ್ಚಾತ್ಯವೇ ಇರಲಿ ಭಾರತೀಯ ಸಂಗೀತವೇ ಇರಲಿ ನನ್ನ ಮನಸ್ಸಿಗೆ ಹಿತ ಕೊಡುವಂತಹ ಎಲ್ಲಾ ಬಗೆಯ ಸಂಗೀತದಲ್ಲಿ ಆಸಕ್ತಿ ಇದೆ.

ಐರೋಪ್ಯ ದೇಶಗಳ ಸಂವಿಧಾನಗಳು ರೂಪುಗೊಳ್ಳಲು ಸ್ಫೂರ್ತಿ ಒದಗಿಸಿದ ʼಮ್ಯಾಗ್ನಾಕಾರ್ಟಾʼ ಕಣ್ತೆರೆದ ತಾಣದಲ್ಲಿ (ಇಂಗ್ಲೆಂಡ್‌).

ನಿಮ್ಮ ಮೊದಲ ಕೃತಿ ʼಕಾಯುವೆಯಾ ಕಾಲʼದಿಂದ ಈವರೆಗಿನ ಸಾಹಿತ್ಯಕ ಯಾನದ ಬಗ್ಗೆ ಮಾತನಾಡಬಹುದೇ?

ನಾನು ʼಕವನʼ ಎಂಬ ಹೆಸರಿನಲ್ಲಿ ಬರೆದಿದ್ದ ಕವಿತೆಗಳ ಗುಚ್ಛ ʼಕಾಯುವೆಯಾ ಕಾಲʼ. ಸಾಹಿತಿಗಳ ಗುಂಪಿನಲ್ಲಿ ನಾನೆಂದೂ ಗುರುತಿಸಿಕೊಂಡಿಲ್ಲ. ನಿಜಾರ್ಥದಲ್ಲಿ ನಾನು ಸಾಹಿತಿಯಲ್ಲ. ಸುಮ್ಮನೆ ಕೆಲ ಪುಸ್ತಕಗಳನ್ನು ಬರೆದಿದ್ದೇನೆ. “ಪುಸ್ತಕಗಳನ್ನು ಓದಿ ಪುಸ್ತಕ ಬರೆಯವುದು ಸಾಹಿತ್ಯ ಅಲ್ಲ. ಮನುಷ್ಯರನ್ನು ಭೇಟಿ ಮಾಡಿ ಸಾಹಿತ್ಯ ರಚಿಸಬೇಕು. ಪ್ರತಿ ಮನುಷ್ಯನ ಒಳಗೊಂದು ಗ್ರಂಥ ಭಂಡಾರ ಇದೆ. ಅದನ್ನು ಹೊರತೆಗೆದು ನೀನು ಬರೆದರೆ ಅದು ಸಾಹಿತ್ಯ” ಎಂದು ನಮ್ಮ ತಂದೆ ಹೇಳುತ್ತಿದ್ದರು.

ಜನಗಳನ್ನು ಮಾತನಾಡಿಸಿ, ಜಾಗಗಳನ್ನು ಭೇಟಿ ಮಾಡಿ ಮನುಷ್ಯನ ಒಳಗೆ ಇರುವ ಮಿಡಿತವನ್ನು ಬರಹಗಳಿಗೆ ಇಳಿಸುವುದು ಇದೆಯಲ್ಲಾ ಅದು ನನ್ನ ಅಚ್ಚುಮೆಚ್ಚಿನ ಕೆಲಸ. ಈಗ ಒಂದು ಹೊಸ ಕೃತಿ ಬರೆಯಲು ಹೊರಟಿದ್ದೇನೆ. ಅದು ಮಹಿಳಾ ಕೈದಿಗಳ ಬದುಕನ್ನು ಕುರಿತಾದದ್ದು.

ರಂಗಭೂಮಿ ಕೂಡ ನಿಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಒಂದು ಅಲ್ಲವೇ?

ಖಂಡಿತ. ಎರಡನೇ ವಯಸ್ಸಿನಲ್ಲಿದ್ದಾಗ ನಮ್ಮ ತಂದೆ ನನ್ನನ್ನು ವೇದಿಕೆಗೆ ಹತ್ತಿಸಿದರು. ಅವರು ʼಮಾತಾ ಅಸೋಸಿಯೇಷನ್‌ʼ ಎಂಬ ಹವ್ಯಾಸಿ ರಂಗತಂಡವನ್ನ ಮೈಸೂರಿನಲ್ಲಿ ನಡೆಸುತ್ತಾ ಇದ್ದರು. ನಮ್ಮ ದೊಡ್ಡಪ್ಪ ಡಾ. ಕೆ ಸುಬ್ಬಣ್ಣ, ಅವರಣ್ಣ ಎಚ್‌ ಕೆ ಕುಮಾರಸ್ವಾಮಿಗಳು, ನಮ್ಮ ತಂದೆಯ ಅಕ್ಕ- ತಂಗಿಯರು ಎಲ್ಲರೂ ಡ್ರಾಮಾ ಮಾಡುತ್ತಿದ್ದವರು. ನಾನು ಕೂಡ ಮೈಸೂರಿನಲ್ಲಿರುವ ʼಅಮರ ಕಲಾ ಸಂಘʼದ ವಾಸು ಅವರ ಮೂಲಕ ಬಣ್ಣ ಹಚ್ಚಿದೆ. 175- 180 ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಆಕಾಶವಾಣಿಯ ಸಾಕಷ್ಟು ನಾಟಕಗಳಲ್ಲಿ ಪಾತ್ರವಹಿಸಿದ್ದೇನೆ. ಅಲ್ಲದೆ ನಾಟಕಗಳನ್ನು ಬರೆದು ನಿರ್ದೇಶಿಸಿರುವೆ. ಹಾಗಾಗಿಯೇ ʼನೃತ್ಯ ನಾಟಕʼಗಳನ್ನು ಮಾಡಿಸುವ ಆಸಕ್ತಿ ಹುಟ್ಟಿದೆ. ಸಾಕ್ಷ್ಯಚಿತ್ರಗಳನ್ನು ಕೂಡ ನಿರ್ಮಿಸಿದ್ದೇನೆ.

ನಿಮ್ಮ ಮುಂದಿನ ಹೆಜ್ಜೆಗಳ ಬಗ್ಗೆ ತಿಳಿಸಿ.

ತುಂಬಾ ಪುಸ್ತಕಗಳನ್ನು ಬರೆಯಬೇಕು, ಪ್ರವಾಸ ಮಾಡಬೇಕು ಎಂಬ ಆಸೆ ಇದೆ. ಹೇಗೆ ಕರೆದುಕೊಂಡು ಹೋಗುತ್ತೋ ಹಾಗೆ ಜೀವನದಲ್ಲಿ ಸಾಗುವುದು ಎಂದುಕೊಂಡಿದ್ದೇನೆ. ತುಂಬಾ ಯೋಜನಾಬದ್ಧವಾಗಿ ನಡೆಯುವಂತಹ ಹಠವಾದಿ ಛಲವಾದಿ ಯಶಸ್ವಿ ಮಹಿಳೆ ಅಲ್ಲ ನಾನು. ಏನು ಬರುತ್ತೋ ಅದರಲ್ಲಿ, ನನ್ನ ದೃಷ್ಟಿಕೋನಕ್ಕೆ ದಕ್ಕಿದ್ದನ್ನ ಹಂಚಿಕೊಳ್ಳಬೇಕು ಎಂದುಕೊಂಡಿರುವವಳು ನಾನು.