CLAT 2025 
ಅಂಕಣಗಳು

ಸಿಎಲ್ಎಟಿ ಪರೀಕ್ಷೆ: ಹೀಗಿರಲಿ ತಯಾರಿ

ಪರೀಕ್ಷೆ ಬರೆಯಲು ಸಹಾಯವಾಗುವಂತಹ ಮಾಹಿತಿ ಹಂಚಿಕೊಂಡಿದ್ದಾರೆ ಸಿಎಲ್ಎಟಿ ಮಾರ್ಗದರ್ಶಕರಾದ ರಜನೀಶ್ ಸಿಂಗ್.

Bar & Bench

ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್‌ಎಟಿ) ರೀತಿಯ ಪರೀಕ್ಷೆಗಳಲ್ಲಿ ಮಹಾನ್‌ ಪ್ರತಿಭಾವಂತರು ಕೂಡ ತತ್ತರಿಸಿ ಹೋಗುವುದನ್ನು ನನ್ನ ಇಪ್ಪತ್ತು ವರ್ಷಗಳ ಅನುಭವದಲ್ಲಿ ಕಂಡಿದ್ದೇನೆ. ಸಾಮಾನ್ಯವಾಗಿ ಇದು ತಯಾರಿಯಲ್ಲಿ ನ್ಯೂನತೆ ಅಥವಾ ಸಾಮರ್ಥ್ಯದ ಕೊರತೆಯಿಂದ ಆಗಿರದೆ ಪರೀಕ್ಷೆಯ ಅಂತಿಮ ದಿನ ಯೋಜಿಸದಂತೆ ನಡೆಯದೆ ಇರವುದರಿಂದ ಸಂಭವಿಸುತ್ತದೆ. ಪರೀಕ್ಷೆಯ ದಿನ ಕಳಪೆ ನಿರ್ವಹಣೆ ಅಥವಾ ಅನಿರೀಕ್ಷಿತ ಗೊಂದಲಗಳು ಅತ್ಯಂತ ಭರವಸೆಯ ಅಭ್ಯರ್ಥಿಯನ್ನೂ ಹಾದಿ ತಪ್ಪಿಸಬಹುದು. ಹೀಗಾಗಿಯೇ ಪರೀಕ್ಷಾ ದಿನ ರಚನಾತ್ಮಕ ಮತ್ತು ಚೆನ್ನಾಗಿ ಆಲೋಚಿಸಿದ ಯೋಜನೆ ರೂಪಿಸಿಕೊಳ್ಳುವುದು ಅತ್ಯಂತ ನಿರ್ಣಾಯಕ.

 ಹೀಗಾಗಿ ಇಲ್ಲಿ ಪ್ರಾಯೋಗಿಕ ಕಾರ್ಯತಂತ್ರಗಳಿಂದ ಮಾನಸಿಕ ಸನ್ನದ್ಧತೆಯವರೆಗೆ, ನಿಮ್ಮ ಸಿಎಲ್‌ಎಟಿ ಪರೀಕ್ಷಾ ದಿನವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂಬುದರ ವಿವರಗಳನ್ನು ಇಲ್ಲಿ ನೀಡುತ್ತಿರುವೆ.

ಸೂಕ್ತ ಮನಸ್ಥಿತಿ

ನೀವು ಎಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತೀರಿ ಎಂಬುದನ್ನು ನಿರ್ಧರಿಸುವಲ್ಲಿ ನಿಮ್ಮ ಮನಸ್ಥಿತಿ ಪ್ರಮುಖ ಪಾತ್ರ ವಹಿಸುತ್ತದೆ. ಎಷ್ಟೋ ವರ್ಷಗಳಿಂದ ಅಭ್ಯಾಸ ಮಾಡಿರುವ ನೀವು ಪರೀಕ್ಷೆಯ ದಿನದಂದು ಸ್ವಯಂ ಅನುಮಾನಕ್ಕೆ  ಅವಕಾಶ ಮಾಡಿಕೊಡಬಾರದು. ಬದಲಿಗೆ ನಿಮ್ಮ ಸಾಮರ್ಥ್ಯ ನೆನೆಯಬೇಕು. ನಿಮ್ಮ ಯೋಜನೆ ಕಾರ್ಯರೂಪಕ್ಕೆ ತರುವತ್ತ ನಿಮ್ಮ ಗಮನ ಇರಲಿ. ಪರೀಕ್ಷಾ ಪೂರ್ವ ಆತಂಕ ಸಹಜ, ಆದರೆ ಅದನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಮುಖ್ಯ.

ಶಾಂತವಾಗಿರುವುದಕ್ಕಾಗಿ ಪರೀಕ್ಷೆಯ ಕೊನೆಯ ಅವಧಿಯಲ್ಲಿ ಅತಿಯಾದ ವಿವರಗಳ ಹೊರೆ ತಪ್ಪಿಸಿ. ಅಧಿಕ ಮಾಹಿತಿಯಲ್ಲಿ ಮುಳುಗಲು ಅಥವಾ ನೀವು ಅನಿಶ್ಚಿತವಾಗಿರುವ ವಿಷಯಗಳ ಬಗ್ಗೆ ಚಿಂತಿಸಲು ಇದು ಸಮಯವಲ್ಲ. ಸರಿಯಾದ ವಿಶ್ರಾಂತಿ ಪಡೆಯುವ ಮೂಲಕ ಮತ್ತು ಹಿಂದಿನ ದಿನ ಸ್ಪಷ್ಟವಾದ ದಿನಚರಿ ನಿರ್ವಹಿಸುವ ಮೂಲಕ ಮಾನಸಿಕವಾಗಿ ಸಿಡಿದು ಹೋಗುವುದನ್ನು ತಪ್ಪಿಸಿ. ದೇಹಕ್ಕೂ ಮನಸ್ಸಿಗೂ ಸಂಬಂಧ ಇರುತ್ತದೆ. ಚೆನ್ನಾಗಿ ನೀರು ಕುಡಿಯಿರಿ. ಲಘುವಾದ ಆದರೆ ಪುಷ್ಟಿದಾಯಕ ಆಹಾರ ಸೇವಿಸಿ. ದೈಹಿಕ ಅಸ್ವಸ್ಥತೆ ಉಂಟುಮಾಡುವ ಎಲ್ಲವನ್ನೂ ತಪ್ಪಿಸಿ.

ಪರೀಕ್ಷೆಯ ಬೆಳಿಗ್ಗೆ

ಶಾಂತ, ರಚನಾತ್ಮಕ ಬೆಳಿಗ್ಗೆ ಎಂಬುದು ಅನಗತ್ಯ ಒತ್ತಡದ ವಿರುದ್ಧ  ನೀವು ಪಡೆಯುವ ಉತ್ತಮ ರಕ್ಷಣೆಯಾಗಿದೆ. ಹಿಂದಿನ ರಾತ್ರಿ ನಿದ್ರೆ ಚೆನ್ನಾಗಿ ಮಾಡಿ. ರಾತ್ರಿಯಿಡೀ ಓದುವುದು ಮಾನಸಿಕವಾಗಿ ದೈಹಿಕವಾಗಿ ನಿಮ್ಮನ್ನು ಖಾಲಿ ಮಾಡುತ್ತದೆ. ಪರೀಕ್ಷಾ ಕೇಂದ್ರಕ್ಕೆ ಹೊರಡುವ ಮೊದಲು, ಹಾಲ್‌ ಟಿಕೆಟ್‌, ಗುರುತಿನ ಚೀಟಿ ಸೇರಿದಂತೆ ಬೇಕಿರುವ ಸಾಮಗ್ರಿಗಳನ್ನು ಎರಡು ಬಾರಿ ಪರಿಶೀಲಿಸಿ ಕೊಂಡೊಯ್ಯಿರಿ.  

ಪರೀಕ್ಷಾ ಕೇಂದ್ರಕ್ಕೆ ಬೇಗ ತಲುಪಿ. ವರದಿ ಮಾಡುವ ಸಮಯಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಅಲ್ಲಿ ಇರಿ. ಸಮಯಪ್ರಜ್ಞೆಯು ಅನಗತ್ಯವಾದ ಒತ್ತಡವನ್ನು ನಿವಾರಿಸುತ್ತದೆ ಅಥವಾ ಅನಿರೀಕ್ಷಿತ ವಿಳಂಬ ತಪ್ಪಿಸುತ್ತದೆ. ಸುತ್ತಮುತ್ತಲಿನ ಪರಿಸರದೊಂದಿಗೆ ನಿಮ್ಮನ್ನು ಪರಿಚಯ ಮಾಡಿಕೊಳ್ಳಲು, ನಿಮ್ಮ ಪರೀಕ್ಷಾ ಕೊಠಡಿಯನ್ನು  ಪತ್ತೆಹಚ್ಚಲು ಮತ್ತು ಮಾನಸಿಕವಾಗಿ ನೆಲೆಗೊಳ್ಳಲು ಇದು ನಿಮಗೆ ಸಮಯ ನೀಡುತ್ತದೆ. ನೆನಪಿಡಿ, ಕೊನೆಯ ನಿಮಿಷದ ಗೊಂದಲಗಳು ನಿಮ್ಮ ಗಮನಕ್ಕೆ ಅಡ್ಡಿ ಉಂಟುಮಾಡಬಹುದು. ಪರೀಕ್ಷೆಯ ಬೆಳಿಗ್ಗೆ ಸರಳ, ಶಾಂತ ಮತ್ತು ಸುಸಂಘಟಿತವಾಗಿರಲು ಪ್ರಯತ್ನಿಸಿ. ಈ ಸಣ್ಣ ಪ್ರಯತ್ನ ನೀವು ಪರೀಕ್ಷೆಯಲ್ಲಿ ಉತ್ತಮ ರೀತಿಯಲ್ಲಿ ಬರೆಯುವಂತೆ ಮಾಡುತ್ತದೆ.   

ಪರೀಕ್ಷೆ ಬರೆಯುವಾಗ ಶಾಂತವಾಗಿ ಮತ್ತು ಸಂಯೋಜಿತವಾಗಿ ಇರಿ

ಪರೀಕ್ಷೆ ಪ್ರಾರಂಭವಾದಾಗ ಶಾಂತವಾಗಿ ಮತ್ತು ಸಂಯೋಜಿತವಾಗಿರುವುದು ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ತಿಣುಕುವ ಪ್ರಶ್ನೆ ಅಥವಾ ವಿಭಾಗದಿಂದಾಗಿ ವಿದ್ಯಾರ್ಥಿಗಳ ಅಮೂಲ್ಯ ಸಮಯ ಮತ್ತು ಆತ್ಮವಿಶ್ವಾಸ ಹಾಳಾಗುತ್ತದೆ. ನಿಮಗೆ ತಿಳಿದಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ. ಗಮನ ಬೇರೆಡೆ ಹೋದಾಗ ಕೆಲ ಕ್ಷಣಗಳ ಕಾಲ ವಿರಾಮ ತೆಗೆದುಕೊಂಡು ದೀರ್ಘವಾಗಿ ಉಸಿರೆಳೆದು ಕಣ್ಣುಗಳನ್ನು ಅರೆ ಮುಚ್ಚಿ ಗಮನ ಕೇಂದ್ರೀಕರಿಸಿಕೊಳ್ಳಿ

ಕೊನೆಯದಾಗಿ ಒಂದು ಕಠಿಣ ಪ್ರಶ್ನೆ ವಿಭಾಗವಷ್ಟೇ ನಿಮ್ಮಿಡೀ ಉತ್ತರ ಪತ್ರಿಕೆಯ ಹಣೆಬರಹ ಬರೆಯುವುದಿಲ್ಲ ಎಂಬುದನ್ನು ನೆನಪಿಡಿ. ಕಷ್ಟ ಅನ್ನಿಸಿರುವ ಪ್ರಶ್ನೆ ನಿಮ್ಮ ಆತ್ಮವಿಶ್ವಾಸ ಅಲುಗಾಡಿಸಲು ಬಿಡದಿರಿ. ಆ ಪ್ರಶ್ನೆ ಬಿಟ್ಟು ಮುಂದೆ ಸಾಗಿ. ಆಗ ಉಳಿದ ಭಾಗ ಪ್ರಶ್ನೆಗಳನ್ನು ನಿರ್ವಹಿಸಲು ನಿಮಗೆ ಸಹಾಯಕವಾಗುತ್ತದೆ. ಸ್ವಲ್ಪ ಹೊತ್ತಿನ ನಂತರ ಅದೇ ಪ್ರಶ್ನೆಗೆ ಮರಳಿದರೆ ಆಗ ಕಷ್ಟವಾಗಿದ್ದ ಪ್ರಶ್ನೆ ಕೆಲಕಾಲದ ನಂತರ ಸುಲಭವಾಗಿದೆ ಎನಿಸಲೂಬಹುದು.

ಸಾಮಾನ್ಯವಾಗಿ ಉಂಟಾಗುವ ಮೋಸ ತಪ್ಪಿಸಿ

ಹೆಚ್ಚು ಸಿದ್ಧರಾಗಿರುವ ವಿದ್ಯಾರ್ಥಿಗಳು ಸಹ ಪರೀಕ್ಷೆಯ ಸಮಯದಲ್ಲಿ ತೊಂದರೆಗೆ ಒಳಗಾಗುವರು. ತಪ್ಪು ಊಹೆ, ವಿಪರೀತ ಯೋಚನೆ, ಒಂದೇ ಪ್ರಶ್ನೆಗೆ ಅತಿಯಾದ ಸಮಯ ವಿನಿಯೋಗ, ಕಠಿಣ ಪ್ರಶ್ನೆಗಳ ಬೆನ್ನತ್ತಿ ಸುಲಭ ಪ್ರಶ್ನೆಗಳಿಗೆ ಉತ್ತರಿಸದೇ ಇರುವಂತಹ ಸ್ವಯಂ ವಂಚನೆಗಳಿಗೆ ಒಳಗಾಗದಿರಿ. ಪ್ರತಿ ಪ್ರಶ್ನೆಯನ್ನು ಎಚ್ಚರಿಕೆಯಿಂದ ಓದಿ ಸ್ಪಷ್ಟತೆಗೆ ಬರುವುದು ಅತಿಮುಖ್ಯ.

ನಿಮ್ಮ ಪ್ರವೃತ್ತಿ ಮೇಲೆ ನಿಮಗೆ ನಂಬಿಕೆ ಇರಲಿ. ವೃಥಾ ಊಹೆ, ಅನಗತ್ಯವಾಗಿ ಉತ್ತರ ಬದಲಿಸುವುದು ಬೇಡ. ಇದರಿಂದ ನಿಮ್ಮ ಅಂಕ ಅನಗತ್ಯವಾಗಿ ಸಿಗದಿರುವುದು ತಪ್ಪುತ್ತದೆ.

ಪ್ರಶ್ನೆ ಪತ್ರಿಕೆಯಲ್ಲಿ ಬರೆಯಬೇಡಿ

ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯಲ್ಲಿ ಬರೆಯುವುದನ್ನು ಸಿಎಲ್‌ಎಟಿಯಲ್ಲಿ ನಿರ್ಬಂಧಿಸಲಾಗಿದೆ ಎಂಬುದನ್ನು ನೆನಪಿಡಿ. ಇದೇ ವೇಳೆ ಅಂಡರ್‌ ಲೈನ್‌ ಮಾಡುವುದನ್ನು ಬಿಡಿ. ಅಂಡರ್‌ಲೈನ್ ಮಾಡುವುದು ಉತ್ತಮ ಅಭ್ಯಾಸವಲ್ಲ ಏಕೆಂದರೆ ದೀರ್ಘಾವಧಿಯಲ್ಲಿ, ಕಾನೂನು ವಿದ್ಯಾರ್ಥಿಗಳು ವ್ಯಾಪಕವಾಗಿ ಓದಬೇಕಾಗುತ್ತದೆ ಮತ್ತು ಅಂಡರ್‌ಲೈನ್ ಮಾಡುವುದು ಸಾಮಾನ್ಯವಾಗಿ ಆಯ್ಕೆಯಾಗಿರುವುದಿಲ್ಲ. ಪರೀಕ್ಷೆಯ ಸಮಯದಲ್ಲಿ ಪ್ರಶ್ನೆ ಪತ್ರಿಕೆಯ ಮೇಲೆ ಬರೆಯುವುದು ವಂಚನೆ ಎನಿಸಿಕೊಳ್ಳುತ್ತದೆ.

ಪರೀಕ್ಷೆಯ ನಂತರ ಪಾಲಿಸಬೇಕಾದದ್ದು

ಪರೀಕ್ಷೆ ಮುಗಿದ ನಂತರ, ಧನಾತ್ಮಕವಾಗಿರುವುದು ಮುಖ್ಯ. ನಿಮ್ಮ ಕಾರ್ಯಕ್ಷಮತೆಯನ್ನು ಅತಿಯಾಗಿ ವಿಶ್ಲೇಷಿಸುವುದು ಅಥವಾ ನೀವು ತಪ್ಪಾಗಿ ಉತ್ತರಿಸಿದ್ದೀರಿ ಎಂದು ಭಾವಿಸುವ ಪ್ರಶ್ನೆಗಳ ಬಗ್ಗೆಯೇ ಆಲೋಚಿಸುವುದರಿಂದ ಫಲಿತಾಂಶ ಬದಲಾಗದು. ಅದರ ಬದಲು, ನೀವು ಮಾಡಿದ ಪ್ರಯತ್ನ ಮತ್ತು ಅನುಭವದಿಂದ ಕಲಿತ ಪಾಠಗಳನ್ನು ಮೆಲಕು ಹಾಕಿ. ಉಳಿದ ಪರೀಕ್ಷೆಗಳಿಗೆ ಇದು ಮತ್ತೊಂದು ಪ್ರವೇಶ ಪರೀಕ್ಷೆಯಾಗಿರಲಿ. ಪರೀಕ್ಷೆಯ ಈಗಿನ  ಬಿಸಿ ಆರಲು ಬಿಡದೆ ಮುಂದಿನ ಪರೀಕ್ಷೆಗಳಿಗೆ ಗಮನ ತೀಕ್ಷ್ಣವಾಗಿರಿಸಿಕೊಳ್ಳಿ. ಪ್ರತಿ ಪರೀಕ್ಷೆಯೂ ನಿಮ್ಮ ದೊಡ್ಡ ಆಕಾಂಕ್ಷೆಗಳ ಒಂದೊಂದು ಮೆಟ್ಟಿಲು.

ಎಲ್ಲಾ ಅಭ್ಯರ್ಥಿಗಳಿಗೆ,  ನನ್ನದೊಂದು ಸಂದೇಶ: ನೀವು ಈಗಾಗಲೇ ಕಷ್ಟಪಟ್ಟು ಕೆಲಸ ಮಾಡಿದ್ದೀರಿ ಮತ್ತು ಅತ್ಯುತ್ತಮ ಕೊಡುಗೆ ನೀಡಿದ್ದೀರಿ. ನಿಮ್ಮನ್ನು ಮತ್ತು ನಿಮ್ಮ  ಪ್ರಯತ್ನವನ್ನು ನಂಬಿ. ಸಿಎಲ್‌ಎಟಿ ಒಂದು ಮಹತ್ವದ ಮೈಲಿಗಲ್ಲು, ಆದರೆ ಇದು ನಿಮ್ಮ ಪ್ರಯಾಣದ ಒಂದು ಭಾಗ. ಜೀವನ ನಿಮಗೆ ಅನೇಕ ಅವಕಾಶಗಳನ್ನು ನೀಡುತ್ತದೆ. ಚೇತರಿಸಿಕೊಳ್ಳುವವರಿಗೆ ಹಾಗೂ ಗಮನ ಹರಿಸುವವರಿಗೆ ಯಶಸ್ಸು ಒಲಿಯುತ್ತದೆ. ನೀವೇ ರೂಪಿಸಿಕೊಂಡ ಯೋಜನೆಗಳಿಗೆ ಬದ್ಧವಾಗಿರಿ. ಪರೀಕ್ಷೆ ನಿಮ್ಮ ಹಣೆಬರಹ ಬರೆಯುವುದಿಲ್ಲ. ಇದು ಆ ಸಮಯದ ನಿಮ್ಮ ಕೌಶಲ್ಯಗಳ ಪರೀಕ್ಷೆಯಷ್ಟೇ.

ದೊಡ್ಡ ಗುರಿ ಇರಲಿ. ನಿಮ್ಮ ಆಲೋಚನೆಗಳಿಗೆ ಬದ್ಧವಾಗಿರಿ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮುಂದುವರೆಸಿ. ಫಲಿತಾಂಶ ಏನೇ ಬಂದಿರಲಿ ಅದು ನಿಮ್ಮ ಉಜ್ವಲ ಭವಿಷ್ಯದ ಆರಂಭ ಎಂದು ತಿಳಿಯಿರಿ. ಸಕಾರಾತ್ಮಕವಾಗಿರಿ. ದೃಢ ನಿಶ್ಚಯವಿರಲಿ. ಗುರಿಯಿಂದ ಕದಲದಿರಿ. ಆಲ್‌ ದ ಬೆಸ್ಟ್!

[ರಜನೀಶ್ ಸಿಂಗ್ ಅವರು ಸಿಎಲ್‌ಎಟಿ ಎಸೆನ್ಷಿಯಲ್ಸ್‌ ಸಂಸ್ಥೆಯ ಸಂಸ್ಥಾಪಕ ಮತ್ತು ಮುಖ್ಯ ಮಾರ್ಗದರ್ಶಕರಾಗಿದ್ದಾರೆ]. ಇದು ಅವರ ಮೂಲ ಲೇಖನದ ಸಂಗ್ರಹಾನುವಾದ.