Ram Jethmalani 
ಅಂಕಣಗಳು

ರಾಂ ಜೇಠ್ಮಲಾನಿ : ಬದಲಾಗದ, ಪಶ್ಚಾತ್ತಾಪವಿಲ್ಲದ ನಿರ್ಭೀತ ಮನ

ದೇಶ ಕಂಡ ಮಹಾನ್ ವಕೀಲ, ಕಾನೂನು ಲೋಕದ ದಂತಕತೆ ರಾಂ ಜೇಠ್ಮಲಾನಿ ಅವರ ಮೊದಲ ಪುಣ್ಯತಿಥಿಯ ಹೊತ್ತಿನಲ್ಲಿ ಅವರಿಗೆ ನುಡಿನಮನ ಸಲ್ಲಿಸುತ್ತಿದ್ದಾರೆ ಅವರನ್ನು ತಮ್ಮ ಗುರುವೆಂದೇ ಭಾವಿಸಿರುವ ಸೌರಭ್‌ ಅಜಯ್‌ ಗುಪ್ತ.

Bar & Bench

ದೇಶದ ಕಾನೂನುಶಾಸ್ತ್ರ ರೂಪಿಸಲು ನಿರ್ಭೀತ, ಅವಿರತ ಮತ್ತು ಅಜರಾಮರ ಕೊಡುಗೆಗಳನ್ನು ನೀಡಿದ ಕಾರಣಕ್ಕೆ ನನ್ನ ಮಾರ್ಗದರ್ಶಕರು ಹಾಗೂ ದಂತಕತೆಯೇ ಆಗಿರುವ ರಾಂ ಬೂಲ್‌ಚಂದ್ ಜೇಠ್ಮಲಾನಿ ಅವರನ್ನಿಲ್ಲಿ ಸ್ಮರಿಸುತ್ತಿರುವೆ.

ಹೆಸರಾಂತ ಕ್ರಿಮಿನಲ್ ವಕೀಲ ಮತ್ತು ವಿದ್ವತ್ಪೂರ್ಣ ನ್ಯಾಯಶಾಸ್ತ್ರಜ್ಞರೂ ಆದ ಜೇಠ್ಮಲಾನಿ ನಮ್ಮ ನಡುವೆ ದೈಹಿಕವಾಗಿ ಇಲ್ಲದೇ ಇರಬಹುದು. ಆದರೆ ಜಗತ್ತನ್ನು ಉತ್ತಮಗೊಳಿಸಲು ಅವರು ಎತ್ತಿದ ಧ್ವನಿ ನ್ಯಾಯಾಂಗದ ಉಸಿರಾಗಿ ಉಳಿಯುತ್ತದೆ. ತಮ್ಮ ಪ್ರತಿಭೆ, ಘನತೆ ಹಾಗೂ ಹಾಸ್ಯಪ್ರಜ್ಞೆಯ ಕಾರಣಕ್ಕೆ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ಶಿಷ್ಯರನ್ನು ಹಾಗೂ ಅವರ ಪ್ರೀತಿಯನ್ನು ಸಂಪಾದಿಸಿದ್ದರು. ತನಗಿಂತಲೂ ಕಿರಿಯರೊಂದಿಗೆ ಸ್ನೇಹಿತನಾಗಿಯೂ ಮಾರ್ಗದರ್ಶಕನಾಗಿಯೂ ಇರುತ್ತಿದ್ದ ಜೇಠ್ಮಲಾನಿ ತಮ್ಮನ್ನು ಭೇಟಿಯಾದ ಎಲ್ಲರೊಟ್ಟಿಗೆ ಗೆಳೆತನ ಬೆಳೆಸಿಕೊಳ್ಳುತ್ತಿದ್ದರು. ಸ್ವಜನಪಕ್ಷಪಾತಕ್ಕೆ ವಿರುದ್ಧವಾಗಿದ್ದ ಅವರು ಕಾನೂನು ವೃತ್ತಿಯಲ್ಲಿ ಎಲ್ಲರನ್ನೂ ಸಮನಾಗಿ ಕಾಣುತ್ತಿದ್ದರು.

ಅವರದು ನಿರ್ಭೀತ ವ್ಯಕ್ತಿತ್ವ ಮತ್ತು ಪ್ರತಿಯೊಬ್ಬ ವ್ಯಕ್ತಿ ಕೂಡ ರಕ್ಷಣೆಗೆ ಅರ್ಹ ಎಂಬ ಕಾನೂನಿನ ಮೂಲಮಂತ್ರದ ಮೇಲೆ ನಂಬಿಕೆ ಇರಿಸಿದ್ದರು. ಈ ನಂಬಿಕೆಯಿಂದಾಗಿ ಒಂದು ಹಂತದಲ್ಲಿ ಸಮಾಜದ ಅನುಮೋದನೆಗೆ ಕಾಯದೆಯೂ ಅವರು ವಿವಿಧ ಪ್ರಕರಣಗಳಲ್ಲಿ ಹೋರಾಟ ನಡೆಸಿದ್ದುಂಟು. ಒಮ್ಮೆ ಅವರಾಡಿದ ಮಾತು ಹೀಗಿದೆ:

“ನನ್ನ ಆತ್ಮಸಾಕ್ಷಿಯ ಪ್ರಕಾರ ಯಾರನ್ನು ರಕ್ಷಿಸಬೇಕು ಎಂದು ನಾನು ನಿರ್ಧರಿಸುತ್ತೇನೆ. ಒಬ್ಬ ವ್ಯಕ್ತಿಯನ್ನು ತಪ್ಪಿತಸ್ಥ ಎಂದು ಜನ ಭಾವಿಸುತ್ತಾರೆ ಎಂಬ ಕಾರಣಕ್ಕೆ ಆ ವ್ಯಕ್ತಿಯನ್ನು ಸಮರ್ಥಿಸಲು ನಿರಾಕರಿಸುವ ವಕೀಲರು ವೃತ್ತಿಗೆ ಅಪಚಾರ ಎಸಗುವ ತಪ್ಪಿತಸ್ಥರು. ”

ಕಪ್ಪುಹಣ ವಾಪಸ್ಸು ತರುವ ಹೋರಾಟ ವಿದ್ಯುಕ್ತವಾಗಿ ಮೊದಲುಗೊಂಡಿದ್ದು ಜೇಠ್ಮಲಾನಿ ಅವರು 2009ರಲ್ಲಿ ರಿಟ್ ಅರ್ಜಿ ಸಲ್ಲಿಸುವ ಮೂಲಕ. ತಮ್ಮ ಅಧಿಕೃತ ಬ್ಲಾಗಿನಲ್ಲಿ ಕಪ್ಪುಹಣದ ವಿರುದ್ಧ ನಿರ್ಭೀತ ಸಮರವನ್ನೇ ಸಾರಿದರು. ಈ ಸಂಬಂಧ 2015ರ ಏಪ್ರಿಲ್ ತಿಂಗಳಲ್ಲಿ ಅವರು ಉಲ್ಲೇಖಿಸಿದ ಸಂಗತಿ ಇಲ್ಲಿದೆ:

"ಹಿಂದಿನ ಸರ್ಕಾರವಿರಲಿ ಅಥವಾ ಈಗಿನ ಸರ್ಕಾರವೇ ಇರಲಿ, ವಿದೇಶಿ ಬ್ಯಾಂಕುಗಳಲ್ಲಿ ಅಕ್ರಮವಾಗಿ ಠೇವಣಿ ಇರಿಸಿದ ರಾಷ್ಟ್ರೀಯ ಸಂಪತ್ತು ಎನಿಸಿಕೊಂಡ, ಭಾರತೀಯ ರೂಪಾಯಿಗಳಲ್ಲಿ 90 ಲಕ್ಷ ಕೋಟಿ ರೂಪಾಯಿಗೆ ಸರಿಸಮನಾದ, ಸುಮಾರು 1,500 ಶತಕೋಟಿ ಅಮೆರಿಕನ್ ಡಾಲರ್ ಹಣವನ್ನು ದೇಶದ ಬೊಕ್ಕಸಕ್ಕೆ ಮರಳಿ ತರುವವರೆಗೆ ನನ್ನ ಹೋರಾಟ ಅವ್ಯಾಹತವಾಗಿ ಮುಂದುವರಿಯಲಿದೆ. ನನ್ನ ಸಮರ ಸಂಪೂರ್ಣ ನೈತಿಕ ಬಲದಿಂದ ಆರಂಭಗೊಂಡಿದ್ದು, ಬಹುಪಾಲು ಏಕಾಂಗಿ ಹೋರಾಟವಾಗಿ ಮಾರ್ಪಟ್ಟಿದ್ದರೂ ಸಹ, ನಾನು ಇದನ್ನು ಮುಂದುವರಿಸದೆ ಇದ್ದರೆ ಅದು ಭಾರತ ದೇಶಕ್ಕೆ ಎಸಗಿದ ದ್ರೋಹ ಎಂದು ನಾನು ಭಾವಿಸುತ್ತೇನೆ ”

ಸಾರ್ವಜನಿಕರ ಹಿತ ಮತ್ತು ಒಳಿತಿಗಾಗಿ ಕಪ್ಪು ಹಣ ಮರಳಿ ತರಲು ಅವರು ನಡೆಸಿದ ಹೋರಾಟವನ್ನು ಮುಂದಿನ ಪೀಳಿಗೆ ಮರೆಯದು.

ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ವಕೀಲರಲ್ಲಿ ಒಬ್ಬರಾಗಿದ್ದರೂ ಕೂಡ, ಅಗತ್ಯವಿರುವವರಿಗೆ ಉಚಿತ ಕಾನೂನು ಸೇವೆ ಒದಗಿಸುತ್ತಿದ್ದರು. ಅಸಾರಾಂ ಬಾಪು ವಿಚಾರಣೆಯ ಸಮಯದಲ್ಲಿ, ಅವರು ಒಮ್ಮೆ ಹೇಳಿದ ಮಾತುಗಳಿವು:

“ನನ್ನ ವಕೀಲಿಕೆ ಇತರ ವಕೀಲರಿಗಿಂತಲೂ ಭಿನ್ನವಾಗಿದೆ. ನಾನು ಟನ್‌ಗಟ್ಟಲೆ ಹಣ ಸಂಪಾದಿಸುತ್ತೇನೆ, ಆದರೆ ನನ್ನ 10% ಕಕ್ಷಿದಾರರಿಂದ ಆ ಹಣ ಸಂಗ್ರಹವಾಗುತ್ತದೆ. ಬಾಪು ಆ 10% ಮಂದಿಯಲ್ಲಿ ಇದ್ದಾರೆ "

ಮುಂದುವರೆದು ಅವರು,

“ಹೌದು, ನಾನು ಜಯಲಲಿತಾ ಅವರಿಗೆ ಶುಲ್ಕ ವಿಧಿಸುತ್ತಿದ್ದೇನೆ. ಆದರೆ ನಾನು ಅನೇಕ ಪ್ರಕರಣಗಳಲ್ಲಿ ಹಣ ಪಡೆಯದೇ ಹೋರಾಡುತ್ತೇನೆ. ಶೇ 10ರಷ್ಟು ಕಕ್ಷೀದಾರರಿಂದ ನನ್ನೆಲ್ಲಾ ಹಣ ಸಂಪಾದಿಸುತ್ತೇನೆ. "

ಅವರೊಂದು ರೀತಿ ಬೇರೆ ನಮೂನೆಯ ವ್ಯಕ್ತಿಯಾಗಿದ್ದರು. ಜನರ ಒಳಿತಿಗಾಗಿ ದೃಢ ಧ್ವನಿ ಎತ್ತುತ್ತಿದ್ದಕ್ಕಾಗಿ ಅವರನ್ನು ಸ್ಮರಿಸಲಾಗುತ್ತದೆ. ಕೇಂದ್ರ ಸರ್ಕಾರ ಒಂದು ರ್ಯಾಂಕ್ ಒಂದು ಪಿಂಚಣಿ (ಒಆರ್‌ಒಪಿ) ಭರವಸೆ ಹಿಂಪಡೆದ ಹಿನ್ನೆಲೆಯಲ್ಲಿ 2016ರಲ್ಲಿ ನವದೆಹಲಿಯ ಜಂತರ್ ಮಂತರ್ ನಲ್ಲಿ ಸೇನೆಯಿಂದ ನಿವೃತ್ತರಾಗಿದ್ದ ಅನೇಕರು ಹೋರಾಟ ನಡೆಸಿದ್ದರು. ಆ ಸಂದರ್ಭದಲ್ಲಿ ಜೇಠ್ಮಲಾನಿ ಹೇಳಿದ ಮಾತು ಹೀಗಿದೆ:

"ನನಗೀಗ 93 ವರ್ಷ ವಯಸ್ಸು. ಯಾವುದೇ ದಿನ ನಾನು ಸಾಯಬಹುದು, ಆದರೆ ಸುಪ್ರೀಂಕೋರ್ಟಿನಿಂದ ನ್ಯಾಯ ದೊರೆಯುವವರೆಗೆ ನನಗೆ ಸಾವು ಬರುವುದಿಲ್ಲ ಎಂದು ನಿಮಗೆ ಭರವಸೆ ನೀಡುತ್ತೇನೆ."

ವಾಸ್ತವವಾಗಿ ಯಾವುದೇ ಸಂಭಾವನೆ ಪಡೆಯದೆ ಅವರು ನಿವೃತ್ತರ ಸೌಲಭ್ಯಗಳಿಗಾಗಿ ಹೋರಾಡಿದರು.

ಅವರ ಸಾಧನೆಗಳ ಪಟ್ಟಿ ದೊಡ್ಡದು. ಸಾಮಾನ್ಯ ಜನರ ಒಳಿತಿಗಾಗಿ ದಶಕಗಳ ಕಾಲ ಬೇಷರತ್ತಾಗಿ ಅವರು ಸಲ್ಲಿಸಿದ ಸೇವೆಯನ್ನು ಬಣ್ಣಿಸಲು ಯಾವುದೇ ಪದ ಸಾಲದು. ಪ್ರಕರಣಗಳ ಆಯ್ಕೆಗೆ ಸಂಬಂಧಿಸಿದಂತೆ ಅವರದು ಅತ್ಯಂತ ಅನಿರೀಕ್ಷಿತ ನಡೆ ಆಗಿರಬಹುದು. ಆದರೆ ಅವರು ಮಾಡಿದ ಎಲ್ಲ ಕಾರ್ಯದಲ್ಲೂ ದೀರ್ಘಾವಧಿಯ ಪರಿಶ್ರಮ ಕಾಣುತ್ತಿತ್ತು. ಜೇಠ್ಮಲಾನಿ ಅವರನ್ನು ಬ್ಯಾಡ್ಮಿಂಟನ್ ಹಾಗೂ ಸಂಜೆಯ ಪಾನಗೋಷ್ಠಿಯಿಂದ ಬೇರ್ಪಡಿಸಲಾಗುತ್ತಿರಲಿಲ್ಲ.

ನ್ಯಾಯಾಂಗ ನಿರ್ಧಾರಗಳು ಮಾಧ್ಯಮ ವಿಚಾರಣೆಯ ಸಂಗತಿಯಾಗುತ್ತಿರುವ ಈ ಸಮಯದಲ್ಲಿ, ನ್ಯಾಯಾಂಗದ ಮಹತ್ವ ಕುರಿತಂತೆ ಅವರಾಡಿದ ಮಾತುಗಳು ಗಮನಾರ್ಹವಾಗಿವೆ. ಕಲ್ಕತ್ತಾ ಹೈಕೋರ್ಟ್‌ನ ಹಿಂದಿನ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಅವರಿಗೆ ಬರೆದ ಬಹಿರಂಗ ಪತ್ರದಲ್ಲಿ ಹೀಗೆಂದಿದ್ದರು:

"ಭ್ರಷ್ಟಾಚಾರ ಬಲವಾಗಿರುವ ದೇಶದಲ್ಲಿ ನ್ಯಾಯಾಂಗ ಒಂದೇ ನಮಗೆ ಶ್ರೀರಕ್ಷೆಯಾಗಿದೆ. ಅದನ್ನು ನಾಶಮಾಡಬೇಡಿ ಅಥವಾ ದುರ್ಬಲಗೊಳಿಸಬೇಡಿ. ”

ನನ್ನ ಕಾನೂನು ವೃತ್ತಿಯಲ್ಲಿ ಜೇಠ್ಮಲಾನಿ ಅವರ ತತ್ವ ಮತ್ತು ಬೋಧನೆಗಳನ್ನು ಅನುಸರಿಸಲು ಯತ್ನಿಸಿದ್ದೇನೆ. ಅವರ ಆತ್ಮಕತೆ ರಾಮ್ ಜೇಠ್ಮಲಾನಿ: ಮೇವರಿಕ್ ಅನ್ ಚೇಂಜಡ್ ಕೃತಿಯಲ್ಲಿ ಉಲ್ಲೇಖವಾದ ಸಂಗತಿ ಇದು:

" ನಾನು ದೋಷಾತೀತ ಎಂದು ಹೇಳಿಕೊಳ್ಳಲಾರೆ. ಆದರೆ ವೈಯಕ್ತಿಕ ನಿರ್ಧಾರಗಳ ಆಚೆಗೆ ದನಿ ಎತ್ತುತ್ತೇನೆ ಮತ್ತು ವರ್ತಿಸುತ್ತೇನೆ ಎಂಬುದನ್ನು ನನ್ನನ್ನು ತೀವ್ರವಾಗಿ ಟೀಕಿಸುವವರು ಕೂಡ ನಿರಾಕರಿಸುವುದಿಲ್ಲ. ವಾಗ್ವಾದ ನಡೆಯಲೆಂದೇ ನಾನು ಬರೆಯುತ್ತೇನೆ. ಅಂತಹ ವಾಗ್ವಾದಗಳಲ್ಲಿ ಉತ್ತಮವಾದದ್ದು ಇದ್ದಾಗ ನನ್ನ ಅಭಿಪ್ರಾಯಗಳನ್ನು ಹಿಂತೆಗೆದುಕೊಳ್ಳುವ ನಮ್ರತೆ ಇದೆ. ಅದರಿಂದ ನನ್ನನ್ನು ನಿರ್ಭೀತ (Maverick ) ಎಂದು ಕರೆಯುವುದಾದರೆ ನಾನು ಆ ವಿಶೇಷಣವನ್ನು ಆನಂದಿಸುತ್ತ ಒಪ್ಪಿಕೊಳ್ಳುತ್ತೇನೆ. ಇದೆಲ್ಲದರ ನಡುವೆಯೂ ಗರ್ವದಿಂದ ‘ಬದಲಾಗದೆ ಮತ್ತು ಪಶ್ಚಾತ್ತಾಪ ಪಡದೆ’ ಉಳಿಯುತ್ತೇನೆ. ”

ಅವರು ಎಂದೆಂದಿಗೂ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಬದಲಾಗದ, ಪಶ್ಚಾತ್ತಾಪಪಡದ ನಿರ್ಭೀತ ಮನವಾಗಿಯೇ ಉಳಿಯುತ್ತಾರೆ.

(ಲೇಖಕ ಸೌರಭ್ ಅಜಯ್ ಗುಪ್ತಾ ಅವರು, ರಾಮ್ ಜೇಠ್ಮಲಾನಿ ಅವರ ಕಚೇರಿಯ ಕಿರಿಯ ವಕೀಲ (ಚೇಂಬರ್ ಜೂನಿಯರ್) ಆಗಿದ್ದರು. ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ಛತ್ತೀಸ್‌ ಗಢದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.)