Karnataka HC and LGBT 
ಸುದ್ದಿಗಳು

ನಿಗಮ, ಮಂಡಳಿಗಳಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ: ಹೈಕೋರ್ಟ್‌ಗೆ ಅನುಪಾಲನಾ ವರದಿ ಸಲ್ಲಿಸಿದ ರಾಜ್ಯ ಸರ್ಕಾರ

ಅನುಪಾಲನಾ ವರದಿಯನ್ನು ಅರ್ಜಿದಾರರ ವಕೀಲರಿಗೆ ಎರಡು ದಿನಗಳಲ್ಲಿ ಪೂರೈಸುವಂತೆ ಪೀಠವು ಆದೇಶ ಮಾಡಿದೆ. ಆದರೆ, ಸರ್ಕಾರವು ಇನ್ನೂ ಅನುಪಾಲನಾ ವರದಿಯನ್ನು ತಮಗೆ ಕಳುಹಿಸಿಕೊಟ್ಟಿಲ್ಲ ಎಂದು ಅರ್ಜಿದಾರರ ಪರ ವಕೀಲ ಬಿ ಟಿ ವೆಂಕಟೇಶ್‌ ತಿಳಿಸಿದ್ದಾರೆ.

Bar & Bench

ರಾಜ್ಯ ಸರ್ಕಾರದ ಪ್ರಾಧಿಕಾರಗಳು ಮತ್ತು ನಿಗಮ ಮಂಡಳಿಗಳ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳಿಗೆ ಶೇ.1ರಷ್ಟು ಸಮತಲ ಮೀಸಲಾತಿ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ನಿರ್ದೇಶನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕಳೆದ ಬುಧವಾರ (ಫೆಬ್ರವರಿ 9) ಕರ್ನಾಟಕ ಹೈಕೋರ್ಟ್‌ಗೆ ಅನುಪಾಲನಾ ವರದಿ ಸಲ್ಲಿಸಿದೆ.

ಲೈಂಗಿಕ ಅಲ್ಪಸಂಖ್ಯಾತರು, ಎಚ್‌ಐವಿ ಪೀಡಿತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸಂಗಮ ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮತ್ತು ʼಜೀವʼ ಎನ್‌ಜಿಓ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಅನುಪಾಲನಾ ವರದಿಯನ್ನು ಅರ್ಜಿದಾರರ ವಕೀಲರಿಗೆ ಎರಡು ದಿನಗಳಲ್ಲಿ ಸಲ್ಲಿಸುವಂತೆ ಪೀಠವು ಆದೇಶ ಮಾಡಿದೆ. ಈ ಸಂಬಂಧ “ಬಾರ್‌ ಅಂಡ್‌ ಬೆಂಚ್‌” ಅರ್ಜಿದಾರರ ಪರ ವಕೀಲ ಬಿ ಟಿ ವೆಂಕಟೇಶ್‌ ಅವರ ಜೊತೆ ಮಾತನಾಡಿದ್ದು, “ಇನ್ನೂ ಸರ್ಕಾರವು ಅನುಪಾಲನಾ ವರದಿಯನ್ನು ತಮಗೆ ಕಳುಹಿಸಿಕೊಟ್ಟಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ. ಪೀಠವು ವಿಚಾರಣೆಯನ್ನು ಮಾರ್ಚ್‌ 2ಕ್ಕೆ ಮುಂದೂಡಿದೆ.

ಜೀವ ಎನ್‌ಜಿಒ ಪರ ಹಿರಿಯ ವಕೀಲೆ ಜಯ್ನಾ ಕೊಠಾರಿ ಅವರು “ರಾಜ್ಯ ಸರ್ಕಾರದ ಎಲ್ಲ ಹುದ್ದೆಗಳ ನೇಮಕಾತಿ ವೇಳೆ ತೃತೀಯ ಲಿಂಗಿಗಳಿಗೆ ಎಲ್ಲಾ ವರ್ಗಗಳಲ್ಲಿ ಶೇ.1ರಷ್ಟು ಸಮತಲ ಮೀಸಲಾತಿ ಕಲ್ಪಿಸಲು ಕರ್ನಾಟಕ ನಾಗರಿಕ ಸೇವಾ ನೇಮಕಾತಿ ನಿಯಮ-1977ರ ನಿಯಮ 9ಕ್ಕೆ ತಿದ್ದುಪಡಿ ತಂದು 1(ಡಿ)ಯನ್ನು ಸೇರ್ಪಡೆಗೊಳಿಸಿ 2021ರ ಜುಲೈ 6ರಂದು ಅಂತಿಮ ಅಧಿಸೂಚನೆ ಪ್ರಕಟಿಸಿದೆ. ಸರ್ಕಾರದ ತಿದ್ದುಪಡಿ ನಿಯಮವು ಕೇವಲ ಸರ್ಕಾರಿ ಹುದ್ದೆಗಳಿಗೆ ಮಾತ್ರ ಅನ್ವಯಿಸುತ್ತದೆ. ಸರ್ಕಾರದ ಇತರೆ ಪ್ರಾಧಿಕಾರ ಹಾಗೂ ನಿಗಮ-ಮಂಡಳಿಗಳ ನೇಮಕಾತಿಯಲ್ಲಿ ಈ ತಿದ್ದುಪಡಿ ನಿಯಮವನ್ನು ಜಾರಿಗೆ ತರಲು ನಿರ್ದೇಶನ ನೀಡಬೇಕು ಎಂಬುದು ನಮ್ಮ ಮನವಿ. ಈ ನಿಟ್ಟಿನಲ್ಲಿ ಸರ್ಕಾರಿ ಪ್ರಾಧಿಕಾರ, ನಿಗಮ-ಮಂಡಳಿಗಳಿಗೆ ಸಲಹೆ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸರ್ಕಾರಕ್ಕೆ ಆ.18ರಂದು ನಿರ್ದೇಶಿಸಿತ್ತು. ಆ ಆದೇಶ ಪಾಲನೆಯಾಗಿಲ್ಲ” ಎಂದು ಪೀಠದ ಗಮನಕ್ಕೆ ತಂದಿದ್ದರು.

ಇದನ್ನು ಪರಿಗಣಿಸಿದ್ದ ಪೀಠವು 2021ರ ಆಗಸ್ಟ್‌ 18ರಂದು ನ್ಯಾಯಾಲಯ ಹೊರಡಿಸಿರುವ ನಿರ್ದೇಶನವನ್ನು ಪಾಲಿಸಲು ರಾಜ್ಯ ಸರ್ಕಾರಕ್ಕೆ ಕೊನೆಯದಾಗಿ ನಾಲ್ಕು ವಾರ ಕಾಲಾವಕಾಶ ನೀಡಲಾಗುವುದು ಎಂದು ಹೇಳಿ ವಿಚಾರಣೆ ಮುಂದೂಡಿತ್ತು.