ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೋ) ಗ್ರಾಫಿಕ್ ಡಿಸೈನರ್ ಕೆಲಸ ಪಡೆಯಲು ₹1.03 ಕೋಟಿ ನೀಡಿದ್ದ ದೂರುದಾರನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶಿಸುವ ಮೂಲಕ ಕರ್ನಾಟಕ ಹೈಕೋರ್ಟ್ ಮಂಗಳವಾರ ಮಹತ್ವದ ಆದೇಶ ಮಾಡಿದೆ. ಅಲ್ಲದೇ, ಆದೇಶದ ಪ್ರತಿಯನ್ನು ಇಸ್ರೋ ಮುಖ್ಯಸ್ಥರಿಗೆ ಕಳುಹಿಸಲು ಹೈಕೋರ್ಟ್‌ನ ನ್ಯಾಯಾಂಗ ರಿಜಿಸ್ಟ್ರಾರ್ ಜನರಲ್‌ಗೆ ಆದೇಶಿಸಿದ್ದು, ಸ್ವೀಕೃತಿ ಪ್ರತಿಯನ್ನು ಮುಂದಿನ ವಿಚಾರಣೆಗೆ ಹಾಜರುಪಡಿಸಲು ನಿರ್ದೇಶಿಸಿದೆ.
ಕೆಲಸ ಕೊಡಿಸುವುದಾಗಿ ನಂಬಿಸಿ, ವಂಚಿಸಿರುವ ಆರೋಪ ಎದುರಿಸುತ್ತಿರುವ ವಿಜಯನಗರದ ಎಂ ಇ ವಿನುತಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ರಜಾಕಾಲೀನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
“ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದ್ದು, ಅರ್ಜಿದಾರೆ ವನಿತಾ ವಿರುದ್ಧ ಕೊಳ್ಳೆಗಾಲ ಮತ್ತು ಚಿಕ್ಕಮಗಳೂರು ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳ ಮಾಹಿತಿಯನ್ನು ಅರ್ಜಿದಾರೆಯ ಪರ ವಕೀಲರು ಮುಂದಿನ ವಿಚಾರಣೆ ವೇಳೆಗೆ ಸಲ್ಲಿಸಬೇಕು. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ದೂರುದಾರ ನಾಗರಭಾವಿಯ ಎನ್ ಸಂಜಯ್ ವಿರುದ್ಧ ಇಸ್ರೋದಲ್ಲಿ ಹುದ್ದೆ ಪಡೆಯಲು ₹1.03 ಕೋಟಿ ಲಂಚ ನೀಡಿರುವುದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಬೇಕು. ಆದೇಶದ ಪ್ರತಿಯನ್ನು ಇಸ್ರೋ ಮುಖ್ಯಸ್ಥರಿಗೆ ಹೈಕೋರ್ಟ್‌ನ ನ್ಯಾಯಾಂಗ ರಿಜಿಸ್ಟ್ರಾರ್ ಆದೇಶದ ಪ್ರತಿ ಕಳುಹಿಸಿಕೊಡಬೇಕು. ಈ ಸ್ವೀಕೃತ ಪ್ರತಿಯನ್ನು ಜೂನ್ 4ರ ವಿಚಾರಣೆಯಂದು ನ್ಯಾಯಾಲಯದ ಮುಂದೆ ಇಡಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.
ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲರು “ವಿನುತಾ ಮತ್ತು ಇತರ ಮೂವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದು, ಮೊದಲನೇ ಆರೋಪಿಯು ವಿನುತಾ ಅವರ ಪತಿಯಾಗಿದ್ದಾರೆ. ಇಸ್ರೋದಲ್ಲಿ ಕೆಲಸ ಕೊಡಿಸುವುದಾಗಿ ಒಂದು ಕೋಟಿ ರೂಪಾಯಿ ಪಡೆದಿರುವ ಆರೋಪ ಮಾಡಲಾಗಿದೆ. ಆರೋಪಿಗಳಿಂದ ಒಂದು ರೂಪಾಯಿಯನ್ನೂ ಜಫ್ತಿ ಮಾಡಲಾಗಿಲ್ಲ. ನಾವು ಪ್ರಕರಣ ವಜಾ ಕೋರುತ್ತಿಲ್ಲ. ಮೊದಲ ಮತ್ತು ಮೂರನೇ ಆರೋಪಿ ಜಾಮೀನಿನ ಮೇಲಿದ್ದಾರೆ. ಹೀಗಾಗಿ, ಜಾಮೀನು ಕೋರುತ್ತಿದ್ದೇವೆ. ಆಕೆ ಗೃಹಣಿಯಾಗಿದ್ದಾರೆ” ಎಂದರು.
ಆಗ ಪೀಠವು “ದೂರುದಾರ ಸಂಜಯ್ ವಿರುದ್ಧವೂ ಪ್ರಕರಣ ದಾಖಲಿಸಲು ಆದೇಶಿಸಲಾಗುವುದು. ಎರಡೂ ಪ್ರಕರಣದ ತನಿಖೆ ನಡೆಯಲಿ. ಸಂಜಯ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ನಿರ್ದೇಶಿಸಲಾಗುವುದು. ₹1.03 ಕೋಟಿ ರೂಪಾಯಿಯನ್ನು ಇಸ್ರೊದಲ್ಲಿ ಕೆಲಸ ಪಡೆಯಲು ನೀಡಿದ್ದಾರೆ. ಹೀಗಾಗಿ, ಪ್ರಕರಣ ದಾಖಲಾಗಿ, ತನಿಖೆ ನಡೆಯಲಿ. ಅರ್ಜಿದಾರೆ ಮತ್ತೆರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಚಿಕ್ಕಮಗಳೂರು ನಗರ ಮತ್ತು ಕೊಳ್ಳೇಗಾಲದಲ್ಲಿ ಇಂಥದ್ದೇ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಆಕೆ ಹವ್ಯಾಸಿ ಆರೋಪಿಯಾಗಿದ್ದಾರೆ. ಎಲ್ಲರ ಹತ್ತಿರ ಹಣ ಪಡೆದು ಕೆಲಸ ಕೊಡಿಸುವ ಆರೋಪವಿದೆ” ಎಂದು ಪೀಠ ಹೇಳಿತು.
ಪ್ರಕರಣದ ಹಿನ್ನೆಲೆ: ನಾಗರಭಾವಿಯ 28 ವರ್ಷದ ಎನ್ ಸಂಜಯ್ 2025ರ ಮೇ 5ರಂದು ನೀಡಿರುವ ದೂರಿನ ಅನ್ವಯ, ಬೆಂಗಳೂರಿನ ಲಗ್ಗೆರೆ ಮನೆಯಲ್ಲಿ ಬಾಡಿಗೆಗೆ ಇದ್ದ ಪ್ರಭಾಕರ್ ಮತ್ತು ಆತನ ಪತ್ನಿ ಎಂ ಇ ವಿನುತಾ ಅವರು 2024ರ ಆಗಸ್ಟ್‌ನಲ್ಲಿ ನಾಗರಭಾವಿಯಲ್ಲಿರುವ ತಮ್ಮ ಮನೆಗೆ ಬಂದು ಇಸ್ರೋ ಸಂಸ್ಥೆಯಲ್ಲಿ ಗ್ರಾಫಿಕ್ ಡಿಸೈನರ್ ಹುದ್ದೆ ಕೊಡಿಸುವುದಾಗಿ ಹೇಳಿ ₹37 ಲಕ್ಷ ಪಡೆದು ನೇಮಕಾತಿ ಪತ್ರ ಬರಲಿದೆ ಎಂದು ತಿಳಿಸಿದ್ದರು. ಆನಂತರ ಅಕ್ಟೋಬರ್ 12ರಂದು ವಿಕ್ಟೋರಿಯಾ ಆಸ್ಪತ್ರೆಯ ಡಾ. ಜಿ ಶ್ರೀನಿವಾಸ ಎಂಬವರ ಬಳಿ ವೈದ್ಯಕೀಯ ಫಿಟ್ನೆಸ್ ಸರ್ಟಿಫಿಕೇಟ್ ಮತ್ತು ದೈಹಿಕ ಫಿಟ್ನೆಸ್ ಸರ್ಟಿಫಿಕೇಟ್ ಮಾಡಿಸಿದ್ದು, ಆನಂತರ ಎರಡು-ಮೂರು ತಿಂಗಳಾದರೂ ನೇಮಕಾತಿ ಪತ್ರ ಬಂದಿಲ್ಲ ಎಂದು ಪ್ರಶ್ನಿಸಲಾಗಿ ನವೆಂಬರ್ 5ಕ್ಕೆ ನೇಮಕಾತಿ ಪತ್ರ ಬರುತ್ತದೆ. ಅದಕ್ಕೆ ತಾವು ಇನ್ನೂ ₹23 ಲಕ್ಷವನ್ನು ನಗದಿನ ಮೂಲಕ ನೀಡಬೇಕು ಎಂದಿದ್ದರು ಎನ್ನಲಾಗಿದೆ.
ಮುಂದುವರೆದು, ಇಲ್ಲವಾದರೆ ಹಿಂದೆ ನೀಡಿರುವ ₹37 ಲಕ್ಷ ವಾಪಸ್ ಬರುವುದಿಲ್ಲ ಮತ್ತು ಕೆಲಸ ಸಿಗುವುದಿಲ್ಲ ಎಂದು ಹೆದರಿಸಿ, ಇಸ್ರೊ ಸಂಸ್ಥೆಗೆ ಕರೆದೊಯ್ದು ನಂಬಿಸಿದ್ದರು. ಹಿಂದೆ ನೀಡಿರುವ ಹಣ ವಾಪಸ್ ಬಾರದೇ ಹೋದರೆ ಎಂಬ ಭಯದಲ್ಲಿ ₹23 ಲಕ್ಷ ನೀಡಿದ್ದೆವು. ಅಲ್ಲದೇ, ಇಸ್ರೊದಲ್ಲಿ ಸುಪ್ರತೊ ಫಾಥೋ, ರೆಡ್ಡಪ್ಪ, ರಾಜೇಂದ್ರ ಮತ್ತು ಎ ಕೆ ಅನಿಲ್ ಕುಮಾರ್ ಎಂಬವರನ್ನು ಪರಿಚಿಯಿಸಿ, ಅವರಿಗೆ ಹಣ ನೀಡಬೇಕು ಎಂದು ಹೆದರಿಸಿ, ಒಟ್ಟು ₹1.03 ಕೋಟಿ ಪಡೆದು ನಕಲಿ ನೇಮಕಾತಿ ಪತ್ರ, ಇಸ್ರೊ ಹೆಸರಿನ ಇತರೆ ವಸ್ತುಗಳನ್ನು ನೀಡಿ ಯಾವುದೇ ಕೆಲಸ ಕೊಡಿಸದೇ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನು ಆಧರಿಸಿ ಅನ್ನಪೂರ್ಣೇಶ್ವರಿ ಠಾಣೆಯ ಪೊಲೀಸರು ಪ್ರಭಾಕರ್, ಎಂ ಇ ವಿನುತಾ ಮತ್ತು ಇತರೆ ವ್ಯಕ್ತಿಗಳನ್ನು ಆರೋಪಿಗಳನ್ನಾಗಿಸಿ ಬಿಎನ್‌ಎಸ್ ಸೆಕ್ಷನ್‌ಗಳಾದ 115(2), 3(2), 318(4), 336(2), 336(3), 340(2), 351(2), 352ರ ಅಡಿ ಪ್ರಕರಣ ದಾಖಲಿಸಿದ್ದರು.