Gujarat High Court 
ಸುದ್ದಿಗಳು

ಅದಾನಿ ಪೋರ್ಟ್ಸ್‌ಗೆ ಮಂಜೂರಾದ 108 ಹೆಕ್ಟೇರ್ ಭೂಮಿ ಗ್ರಾಮಸ್ಥರಿಗೆ ವಾಪಸ್‌: ಗುಜರಾತ್ ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

Bar & Bench

ಅದಾನಿ ಪೋರ್ಟ್ಸ್‌ಗೆ ಮಂಜೂರಾಗಿದ್ದ ಗುಜರಾತ್‌ನ ಕಚ್‌ ಜಿಲ್ಲೆಯ 108 ಹೆಕ್ಟೇರ್ ಭೂಮಿಯನ್ನು ಗೋಮಾಳವಾಗಿ ಬಳಸಲು ಗ್ರಾಮಸ್ಥರಿಗೆ ಹಿಂತಿರುಗಿಸುವುದಾಗಿ ರಾಜ್ಯ ಸರ್ಕಾರ ಶುಕ್ರವಾರ ಗುಜರಾತ್ ಹೈಕೋರ್ಟ್‌ಗೆ ತಿಳಿಸಿದೆ [ಫಕೀರ್ ಮಮದ್ ಸುಲೇಮಾನ್ ಸಮೇಜ ಮತ್ತಿತರರು ಹಾಗೂ ಗುಜರಾತ್‌ ಸರ್ಕಾರ ನಡುವಣ ಪ್ರಕರಣ].

ನವಿನಾಳ್ ಗ್ರಾಮದ ನಿವಾಸಿಗಳಿಗೆ ಗೋಮಾಳ ಕೊರತೆ ಪರಿಹರಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಹೈಕೋರ್ಟ್ ನೀಡಿದ ಆದೇಶಕ್ಕೆ ಪ್ರತಿಕ್ರಿಯೆಯಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

 ನವಿನಾಳ್‌ ಗ್ರಾಮದ ಗೋಮಾಳ ಭೂಮಿಯನ್ನು ಮರಳಿಸುವುದು ಸರ್ಕಾರದ ಕರ್ತವ್ಯ ಎಂದು ನ್ಯಾಯಾಲಯ ಏಪ್ರಿಲ್ 19 ರ ಆದೇಶದಲ್ಲಿ ಹೇಳಿತ್ತು.

 ಜೂನ್ 21 ರಂದು, ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಪ್ರಣವ್ ತ್ರಿವೇದಿ ಅವರ ಪೀಠವು ಏಪ್ರಿಲ್ 19 ರ ಆದೇಶಕ್ಕೆ ಅನುಸಾರವಾಗಿ ಅಫಿಡವಿಟ್ ಸಲ್ಲಿಸಲು ರಾಜ್ಯ ಕಂದಾಯ ಇಲಾಖೆ ಮತ್ತು ಕಛ್ ಜಿಲ್ಲಾಧಿಕಾರಿಗೆ ಕೊನೆಯ ಅವಕಾಶವನ್ನು ನೀಡಿತ್ತು.

ಜುಲೈ 5 ರಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ತನ್ನ ಆದೇಶದಲ್ಲಿ  “ನವೀನಾಳ್‌ ಗ್ರಾಮಕ್ಕೆ ಗೋಮಾಳ ಕೊರತೆ ಇರುವುದನ್ನು ಸರಿಪಡಿಸುವುದಕ್ಕಾಗಿ ಅದಾನಿ ಪೋರ್ಟ್ಸ್‌ನಿಂದ 108 ಹೆಕ್ಟೇರ್ ಪ್ರದೇಶವನ್ನು ವಾಪಸ್‌ ಪಡೆಯಲು ನಿರ್ಧರಿಸಲಾಗಿದ್ದು ಈ ಕುರಿತಾದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಮುಂದಿಡಲಾಗಿದೆ” ಎಂದು ಉಲ್ಲೇಖಿಸಿದೆ.

ಅದಾನಿ ಗ್ರೂಪ್‌ನ  ಮುಂದ್ರಾ ಬಂದರು ವಿಶೇಷ ಆರ್ಥಿಕ ವಲಯ ಯೋಜನೆಗಾಗಿ ರಾಜ್ಯ ಸರ್ಕಾರ 2005ರಲ್ಲಿ  ಕೆಲ ಭಾಗಗಳನ್ನು ಮಂಜೂರು ಮಾಡಿತ್ತು. 2010ರಲ್ಲಿ ಜಾನುವಾರುಗಳನ್ನು ಮೇಯಿಸಲು ಬಳಸುತ್ತಿದ್ದ ಜಮೀನಿನ ಸುತ್ತ ಬೇಲಿ ಹಾಕಿರುವುದನ್ನು ನೋಡಿದ ನಿವಾಸಿಗಳಿಗೆ ಗೋಮಾಳವನ್ನು ಯೋಜನೆಗಾಗಿ ಮಂಜೂರು ಮಾಡಿರುವುದು ತಿಳಿದುಬಂದಿತ್ತು. 2011ರಲ್ಲಿ ಅವರು ಜಮೀನು ಹಂಚಿಕೆ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ  (ಪಿಐಎಲ್) ಸಲ್ಲಿಸಿದ್ದರು.  

ನವಿನಾಳ್‌ ಗ್ರಾಮದಲ್ಲಿ 732 ಜಾನುವಾರುಗಳಿದ್ದು ಅವುಗಳ ಮೇವಿಗಾಗಿ ಸುಮಾರು 130 ಹೆಕ್ಟೇರ್ ಪ್ರದೇಶ ಅಗತ್ಯವಿದ್ದು ಅದಾನಿ ಗ್ರೂಪ್‌ಗೆ ಹಂಚಿಕೆಯಾದ ನಂತರ, ಗ್ರಾಮಸ್ಥರಿಗೆ ಉಳಿದಿರುವುದು ಕೇವಲ 17 ಹೆಕ್ಟೇರ್ ಜಮೀನು ಮಾತ್ರ ಎಂದಿತ್ತು.

ರಾಜ್ಯ ಸರ್ಕಾರ ಆರಂಭದಲ್ಲಿ 387 ಹೆಕ್ಟೇರ್ ಸರ್ಕಾರಿ ಭೂಮಿ ಮತ್ತು ಗ್ರಾಮ ಪಂಚಾಯಿತಿಗೆ ಸೇರಿದ ಸುಮಾರು 85 ಹೆಕ್ಟೇರ್ ಭೂಮಿಯನ್ನು ಗೋಮಾಳಕ್ಕಾಗಿ ಮೀಸಲಿಡುವುದಾಗಿ ತಿಳಿಸಿತ್ತು. ಹೀಗಾಗಿ 2014ರಲ್ಲಿ ಹೈಕೋರ್ಟ್‌ ಪ್ರಕರಣ ಇತ್ಯರ್ಥಗೊಳಿಸಿತ್ತು.

ಆದರೆ ರಾಜ್ಯ ಸರ್ಕಾರ ತನ್ನ ಆರಂಭಿಕ ಪ್ರಸ್ತಾವನೆ ಅಸಮಂಜಸವಾಗಿರುವುದನ್ನು ವಿವರಿಸಿ ಅದನ್ನು ಹಿಂಪಡೆಯುವುದಾಗಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ಮತ್ತೆ ಆರಂಭವಾಗಿತ್ತು.   

ಏಪ್ರಿಲ್ 19ರ ಆದೇಶಕ್ಕೆ ಅನುಗುಣವಾಗಿ 108 ಹೆಕ್ಟೇರ್ ಜಮೀನನ್ನು ಗೋಮಾಳ ಉದ್ದೇಶಕ್ಕಾಗಿ ಮರಳಿಸಲಾಗುವುದು ಎಂದು ಜುಲೈ 7 ರಂದು, ರಾಜ್ಯ ಸರ್ಕಾರ ತಿಳಿಸಿದೆ.