IDIA, CLAT
IDIA, CLAT 
ಸುದ್ದಿಗಳು

ಐಡಿಐಎ ವಿದ್ಯಾರ್ಥಿಗಳ ಸಾಧನೆ: ಅಗ್ರ ರಾಷ್ಟ್ರೀಯ ಕಾನೂನು ಶಾಲೆಗಳಲ್ಲಿ ಪ್ರವೇಶ ಪಡೆದ 12 ವಿದ್ಯಾರ್ಥಿಗಳು

Bar & Bench

ಪ್ರಸಕ್ತ ವರ್ಷದ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯಲ್ಲಿ (ಸಿಎಲ್‌ಎಟಿ) ಐಡಿಐಎಯಿಂದ ತರಬೇತಿ, ಮಾರ್ಗದರ್ಶನ ಪಡೆದ 12 ಮಂದಿ ವಿದ್ಯಾರ್ಥಿಗಳು ಅಗ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ (ಎನ್‌ಎಲ್‌ಯು) ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಐಡಿಐಎ ದತ್ತಿ ಟ್ರಸ್ಟ್‌ನಿಂದ ತರಬೇತಿ ಪಡೆದ ಮತ್ತು ಮಾರ್ಗದರ್ಶನ ಪಡೆದ ಹೆಚ್ಚಿನ ವಿದ್ಯಾರ್ಥಿಗಳು ಮುಂದಿನ ಅರ್ಹತಾ ಪಟ್ಟಿಗಳಲ್ಲಿ ವಿವಿಧ ಕಾನೂನು ಶಾಲೆಗಳಿಗೆ ಪ್ರವೇಶ ಪಡೆಯುವ ನಿರೀಕ್ಷೆಯಿದೆ. ಅಗ್ರ ಕಾನೂನು ಶಾಲೆಗಳಲ್ಲಿ ಐದು ವರ್ಷ ಓದುವ ಈ ವಿದ್ಯಾರ್ಥಿಗಳಿಗೆ ಸಂಸ್ಥೆಯು ನೆರವು ನೀಡಲಿದೆ.

“ಸುಸ್ಥಿತಿಯ ಕುಟುಂಬಗಳಿಂದ ಬಂದವರಿಗೆ ಸುಲಭವಾಗಿ ಲಭ್ಯವಾಗುವಂತಹ ಸಂಪನ್ಮೂಲ ಮತ್ತು ಅವಕಾಶಗಳನ್ನು ಹೊಂದಿಲ್ಲದ ದುರ್ಬಲ ವರ್ಗಗಳಿಂದ ಬಂದ ಈ ಯುವ ವಿದ್ಯಾರ್ಥಿಗಳು ಹಲವು ಅಡೆತಡೆಗಳನ್ನು ಮೀರಿ ದೃಢ ನಿರ್ಧಾರ, ಕಠಿಣ ಪರಿಶ್ರಮದಿಂದ ಸಾಧನೆ ಮೆರೆದಿದ್ದಾರೆ. ದೇಶದ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾದ ಈ ಪರೀಕ್ಷೆಯಲ್ಲಿ (ಸಿಎಲ್‌ಎಟಿ) ಯಶಸ್ವಿಯಾಗುವಲ್ಲಿನ ಅವರ ಪಯಣವು ಅಷ್ಟು ಸುಲಭದ್ದಾಗಿರಲಿಲ್ಲ” ಎಂದು ಐಡಿಐಎ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

2023ನೇ ಸಾಲಿನ ಐಡಿಐಎ ವಿದ್ಯಾರ್ಥಿಗಳು ಲಡಾಕ್‌, ಪಶ್ಚಿಮ ಬಂಗಾಳ, ಗುಜರಾತ್‌, ತೆಲಂಗಾಣ, ಆಂಧ್ರಪ್ರದೇಶ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಸೇರಿದಂತೆ ಭಾರತದ ವಿವಿಧ ಭಾಗಗಳಿಂದ ಬಂದವರಾಗಿದ್ದಾರೆ. ಇಲ್ಲಿನ ಹಲವು ಪ್ರದೇಶಗಳಲ್ಲಿ ಸೀಮಿತ ಸಂಪನ್ಮೂಲ, ಅವಕಾಶ ಮತ್ತು ಸಂಪರ್ಕವಿದೆ. ಎನ್‌ಎಲ್‌ಯುಗಳಲ್ಲಿ ಸ್ಥಾನ ಪಡೆದಿರುವ ಹನ್ನೆರಡು ವಿದ್ಯಾರ್ಥಿಗಳ ಪೈಕಿ ಐವರು ದೈಹಿಕ ನ್ಯೂನತೆ ಹೊಂದಿದ್ದು, ಎಂಟು ಮಂದಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ.

ಈ ಎಲ್ಲಾ ವಿದ್ಯಾರ್ಥಿಗಳು ಸಾಕಷ್ಟು ಆರ್ಥಿಕ ಸಮಸ್ಯೆಗಳಿಂದ ಬಾದಿತರಾಗಿದ್ದು, ಅವರ ಪೋಷಕರು ರೈತರು, ದಿನಗೂಲಿ ಕಾರ್ಮಿಕರು, ಮನೆಕೆಲಸದವರು, ಕಾರ್ಖಾನೆಗಳಲ್ಲಿ ದುಡಿಯುವವರು, ವೆಲ್ಡರ್‌, ಕಿರಾಣಿ ಅಂಗಡಿ ನಡೆಸುವವರು, ಅಳತೆ ಯಂತ್ರಗಳ ರಿಪೇರಿ ಮತ್ತು ಮಾರಾಟಗಾರರಾಗಿ ಕೆಲಸ ಮಾಡುವವರಾಗಿದ್ದಾರೆ. ಕೆಲವರು ಬಡತನ ರೇಖೆಗಿಂತ ಕೆಳಗಿದ್ದು, ಹಲವರು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ್ದಾರೆ. ಈ ವಿದ್ಯಾರ್ಥಿಗಳ ಸಾಧನೆಯು ಐಡಿಐಎ ಸಂಸ್ಥೆಯು ಕಾನೂನು ಕ್ಷೇತ್ರದಲ್ಲಿ ವೈವಿಧ್ಯತೆಯನ್ನು, ಭಿನ್ನ ದನಿಗಳನ್ನು ತರುವ ನಿಟ್ಟಿನಲ್ಲಿ ಮಾಡುತ್ತಿರುವ ಮಹತ್ವದ ಪ್ರಯತ್ನದ ದ್ಯೋತಕವಾಗಿದೆ.

ಐಡಿಐಎ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ https://www.idialaw.org/