ಸುಪ್ರೀಂ ಕೋರ್ಟ್ ಇದೇ ಮೊದಲ ಬಾರಿಗೆ ಎಂಬಂತೆ 11 ಮಹಿಳಾ ವಕೀಲರನ್ನು ಈಚೆಗೆ ಹಿರಿಯ ನ್ಯಾಯವಾದಿಗಳಾಗಿ ಪದೋನ್ನತಿ ನೀಡಿದೆ. ಜನವರಿ 19ರಂದು ಒಟ್ಟು 56 ವಕೀಲರಿಗೆ ಹಿರಿಯ ವಕೀಲರ ಸ್ಥಾನಮಾನ ನೀಡುವಾಗ ಹನ್ನೊಂದು ವಕೀಲೆಯರೂ ಆ ಸ್ಥಾನವನ್ನು ಅಲಂಕರಿಸಿದ್ದಾರೆ.
ಸುಪ್ರೀಂ ಕೋರ್ಟ್ 2021ರಲ್ಲಿ ಹದಿನೇಳು ವಕೀಲರಿಗೆ ಹಿರಿಯ ನ್ಯಾಯವಾದಿ ಪದವಿ ನೀಡಿತ್ತು. ಆಗ ಕೇವಲ ಒಬ್ಬ ವಕೀಲೆಗೆ ಮಾತ್ರ ಆ ಸ್ಥಾನ ದೊರೆತಿತ್ತು. ಈಚೆಗೆ ನೇಮಕಗೊಂಡಿರುವ ಹನ್ನೊಂದು ಹಿರಿಯ ವಕೀಲೆಯರ ಹಿನ್ನೆಲೆ, ಸಾಧನೆಯ ಸಂಕ್ಷಿಪ್ತ ಚಿತ್ರಣ ಇಲ್ಲಿದೆ:
ಶೋಭಾ ಗುಪ್ತಾ
ಮಹಿಳಾ ಹಕ್ಕು ಮತ್ತು ಸ್ವಾತಂತ್ರ್ಯದ ಪರ ಪ್ರಕರಣಗಳ ವಾದ ಮಂಡನೆಯಲ್ಲಿ ಪ್ರಸಿದ್ಧ ಹೆಸರು. 16 ವರ್ಷಗಳಿಗೂ ಹೆಚ್ಚು ಕಾಲ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್ಎಚ್ಆರ್‌ಸಿ) ಸ್ಥಾಯಿ ಸಲಹೆಗಾರರಾಗಿದ್ದವರು. ಆರ್ಥಿಕವಾಗಿ ದೀನದಲಿತರಿಗೆ ಹಲವು ಕಾನೂನು ನೆರವು ಶಿಬಿರಗಳನ್ನು ಆಯೋಜಿಸಿದ್ದಾರೆ.
ವಿಶೇಷ ಎಂದರೆ 2002ರ ಗುಜರಾತ್ ಗಲಭೆ ಸಂದರ್ಭದಲ್ಲಿ ನಡೆದ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಲ್ಕಿಸ್ ಪರ ವಕಾಲತ್ತು ವಹಿಸಿದ್ದವರು. ಬಿಲ್ಕಿಸ್ ಅವರ ಎಲ್ಲಾ ಪ್ರಕರಣಗಳಲ್ಲಿ ಆಕೆಯ ಪರ ಹಾಜರಿದ್ದವರು.
ವಿಶೇಷವೆಂದರೆ, ಅವರು 2003 ರಿಂದ ಬಿಲ್ಕಿಸ್ ಬಾನೊ ಅವರ ವಕೀಲರಾಗಿದ್ದರು ಮತ್ತು ಅವರ ಎಲ್ಲಾ ಪ್ರಕರಣಗಳಲ್ಲಿ ಪರವಾಗಿ ಹಾಜರಾಗಿದ್ದರು. ಶೋಭಾ ಅವರ ವಕೀಲಿಕೆಯ ಪರಿಣಾಮ ಅತ್ಯಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಗರಿಷ್ಠ ಪರಿಹಾರ ನೀಡಲು ಕಾರಣವಾಯಿತು.
ಸ್ವರೂಪಮಾ ಚತುರ್ವೇದಿ
1999ರಲ್ಲಿ ಕಾನೂನು ಪದವಿ ಪಡೆದ ಸ್ವರೂಪಮಾ ಅವರು 2000ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡರು. 2012ರಲ್ಲಿ ಸುಪ್ರೀಂ ಕೋರ್ಟ್ ಅಡ್ವೊಕೇಟ್-ಆನ್-ರೆಕಾರ್ಡ್ ಆದರು. ಅಲ್ಲದೆ 2020ರಿಂದ 2023ರವರೆಗೆ ಮಧ್ಯಪ್ರದೇಶ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ದೆಹಲಿ ಅತ್ಯಾಚಾರ ಸಂತ್ರಸ್ತೆಯ ಪೋಷಕರೊಂದಿಗಿನ ತನ್ನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕೃತ್ಯ ಗಂಭೀರ ಅಪರಾಧ ಎಂದು ಅವರು ಈಚೆಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್ಸಿಪಿಸಿಆರ್) ಪರವಾಗಿ ದೆಹಲಿ ಹೈಕೋರ್ಟ್‌ನಲ್ಲಿ ವಾದಿಸಿದ್ದರು.
ಸಲಿಂಗ ವಿವಾಹ ಪ್ರಕರಣದಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಪರವಾಗಿ ಅವರು ವಕಾಲತ್ತು ವಹಿಸಿದ್ದರು.
ಲಿಜ್ ಮ್ಯಾಥ್ಯೂ
ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯಿಂದ (ಎನ್‌ಎಲ್‌ಎಸ್‌ಐಯು) ಪದವಿ ಪಡೆದಿರುವ ಲಿಜ್ ಮ್ಯಾಥ್ಯೂ ದೆಹಲಿಯಲ್ಲಿ ವಕೀಲಿಕೆ ನಡೆಸುವ ಮುನ್ನ ರಿಲಯನ್ಸ್ ಕಂಪೆನಿಯಲ್ಲಿ ಕೆಲಸ ಮಾಡಿದ್ದರು.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಹಿರಿಯ ವಕೀಲೆ ಇಂದು ಮಲ್ಹೋತ್ರಾ ಅವರ ಕಚೇರಿಯಲ್ಲಿ ಕೆಲಸ ಮಾಡಿದ ಲಿಜ್ ಅವರು ಸ್ವತಂತ್ರವಾಗಿ ವಾದ ಮಂಡನೆಗೆ ತೊಡಗುವ ಮುನ್ನ ಹಿರಿಯ ವಕೀಲ ಮತ್ತು ಭಾರತದ ಮಾಜಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರ ಗರಡಿಯಲ್ಲಿ ಪಳಗಿದ್ದರು.
ಅಡ್ವೊಕೇಟ್ ಆನ್ ರೆಕಾರ್ಡ್ ಆದ ಅವರು 2011 ರಿಂದ 2014 ರವರೆಗೆ ಕೇರಳ ಸರ್ಕಾರದ ಸ್ಥಾಯಿ ವಕೀಲರಾಗಿಯೂ ದುಡಿದಿದ್ದಾರೆ.
ಲೈಂಗಿಕ ಕಾಮನೆ ನಿಯಂತ್ರಿಸಿಕೊಳ್ಳುವಂತೆ ಹುಡುಗಿಯರಿಗೆ ಕಿವಿಮಾತು ಹೇಳಿ ಸುಪ್ರೀಂ ಕೋರ್ಟ್ ಅಸಮಾಧಾನಕ್ಕೆ ತುತ್ತಾಗಿದ್ದ ಕಲ್ಕತ್ತಾ ಹೈಕೋರ್ಟ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ಗೆ ಸಹಾಯ ಮಾಡುವ ಅಮಿಕಸ್ ಕ್ಯೂರಿ ಆಗಿದ್ದವರು ಇದೇ ಲಿಜ್ ಅವರು.
ಜಾರಿ ನಿರ್ದೇಶನಾಲಯ (ಇ ಡಿ) ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಈಚೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರ ಪತ್ನಿ ವೈಎಸ್ ಭಾರತಿ ರೆಡ್ಡಿ ಪರ ಹಾಜರಿದ್ದರು.
ಕರುಣಾ ನಂದಿ
ಸಾಂವಿಧಾನಿಕ ಮತ್ತು ಕಾನೂನು ಕರಡು ಮತ್ತು ನೀತಿ ನಿರೂಪಣೆಗೆ ಸಂಬಂಧಿಸಿದಂತೆ ವಿದೇಶದ ಸರ್ಕಾರಗಳೊಂದಿಗೆ ಕೆಲಸ ಮಾಡುತ್ತಾರೆ. 2022-2023ನೇ ಸಾಲಿನ ವಿಶ್ವದ 100 ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರೆಂದು ಅವರನ್ನು ಟೈಮ್ ಮ್ಯಾಗಜೀನ್ ಗುರುತಿಸಿದೆ.
ನೇಪಾಳದ ಮಧ್ಯಂತರ ಸಂವಿಧಾನ ರಚನೆ, ಪಾಕಿಸ್ತಾನದ ಸೆನೆಟ್‌ನೊಂದಿಗೆ ಕಾನೂನು ಕಾರ್ಯಾಗಾರ, ಭೂತನ್ ಮಾನವ ಹಕ್ಕು ಒಪ್ಪಂದ ಪಾಲನೆ ಬಗ್ಗೆ ಸರ್ಕಾರಕ್ಕೆ ಸಲಹೆ, ಅಟಾರ್ನಿ ಜನರಲ್ ಕಚೇರಿ ಮತ್ತು ಮಾಲ್ಡೀವ್ಸ್ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯೊಂದಿಗೆ ಸೇರಿ ಮಾಲ್ಡೀವ್ಸ್‌ನಲ್ಲಿ ಕಾನೂನು ಸುಧಾರಣೆ ಕುರಿತು ಅನೇಕ ಕೊಡುಗೆಗಳನ್ನು ಅವರು ನೀಡಿದ್ದಾರೆ.
1984 ರ ಭೋಪಾಲ್ ಅನಿಲ ದುರಂತ ಮತ್ತು ವಿಷಕಾರಿ ತ್ಯಾಜ್ಯಗಳಿಗೆ ಸಂಬಂಧಿಸಿದ ಮೊಕದ್ದಮೆ, ಶಂಕಿತ ಭಯೋತ್ಪಾದಕರು, ಮಾನಸಿಕ ಅಸ್ವಸ್ಥರ ಹಕ್ಕುಗಳು ಮತ್ತು ಲೈಂಗಿಕ ಕಿರುಕುಳದ ಬಗೆಗಿನ ಕ್ರಮಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿಯೂ ಅವರ ವಾದ ಚಾತುರ್ಯ ಇದೆ.
ಸಲಿಂಗ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲಿಂಗ ಜೋಡಿಯ ಮಿಲನದ ಹಕ್ಕಿನ ಪರ ವಾದಿಸಿದ್ದರು. ಜೊತೆಗೆ ವೈವಾಹಿಕ ಅತ್ಯಾಚಾರವನ್ನು ಅಪರಾಧೀಖರಿಸಬೇಕು ಎಂದು ಕೋರಿದ್ದ ಪ್ರಕರಣದಲ್ಲಿಯೂ ಅವರು ವಾದ ಮಂಡಿಸಿದ್ದರು.
ನಿಶಾ ಬಾಗ್ಚಿ
ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದ ಇವರು ಒಂದು ದಶಕಕ್ಕೂ ಹೆಚ್ಚು ಕಾಲ ಸುಪ್ರೀಂ ಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡಿದ್ದಾರೆ.
ಕಸ್ಟಮ್ಸ್, ಸಿವಿಲ್, ವಾಣಿಜ್ಯ ಹಾಗೂ ಮಧ್ಯಸ್ಥಿಕೆ ಪ್ರಕರಣಗಳಲ್ಲಿ ವಾದ ಮಂಡಿಸಿದ್ದಾರೆ. ಕಸ್ಟಮ್ಸ್ ಸುಂಕ ಕಾಯಿದೆ 1975ರ (ಸಿಟಿಎ) ಅಡಿಯಲ್ಲಿ ಸರಕುಗಳ ವರ್ಗೀಕರಣವು ಸಾಮಾನ್ಯ ವಿವರಣೆಗಿಂತ ಹೆಚ್ಚು ನಿರ್ದಿಷ್ಟ ಶೀರ್ಷಿಕೆ ಹೊಂದಿರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದ್ದ ಪ್ರಕರಣದಲ್ಲಿ ಇವರು ವಕಾಲತ್ತು ವಹಿಸಿದ್ದರು.
ಲೈಂಗಿಕ ಕಿರುಕುಳ ದೂರುಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ರಚಿಸಿದ ಲಿಂಗ ಸಂವೇದನಾ ಸಮಿತಿಯಲ್ಲಿ ಬಾಗ್ಚಿ ಅವರು ಮಹತ್ವದ ಕೆಲಸ ಮಾಡಿದ್ದರು.
ಉತ್ತರಾ ಬಬ್ಬರ್
ಬೆಂಗಳೂರಿನ ಎನ್ಎಲ್ಎಸ್ಐಯುನಿಂದ ಕಾನೂನು ಪದವಿ ಪಡೆದ ಇವರು ಕೊಲಂಬಿಯಾ ಕಾನೂನು ಶಾಲೆಯಲ್ಲಿ ಎಲ್ಎಲ್ಎಂ ಪದವಿ ಪಡೆದಿದ್ದಾರೆ.
ಅಡ್ವೊಕೇಟ್-ಆನ್-ರೆಕಾರ್ಡ್ ಆಗಿರುವ ದೇವಾಲಯದ ವೆಚ್ಚ ಮತ್ತು ನಿರ್ವಹಣೆ ಪ್ರಕರಣದಲ್ಲಿ ತಿರುವನಂತಪುರಂನ ಪದ್ಮನಾಭಸ್ವಾಮಿ ದೇವಾಲಯದ ಆಡಳಿತ ಮಂಡಳಿ ಪರವಾಗಿ ವಾದಿಸಿದ್ದರು.
ಅಂತಾರಾಷ್ಟ್ರೀಯ ವಾಣಿಜ್ಯ ಮಧ್ಯಸ್ಥಿಕೆಯನ್ನು ಹೊರತುಪಡಿಸಿ ಮಧ್ಯಸ್ಥಿಕೆ ಮತ್ತು ಸಂಧಾನ ಕಾಯಿದೆಯಡಿ ಮಧ್ಯಸ್ಥಿಕೆಯಿಂದ ಉದ್ಭವಿಸುವ ಎಲ್ಲಾ ಅರ್ಜಿಗಳು ಅಥವಾ ಮೇಲ್ಮನವಿಗಳನ್ನು ನಿಯೋಜಿತ ವಾಣಿಜ್ಯ ನ್ಯಾಯಾಲಯಗಳು ಆಲಿಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಪ್ರಕರಣದಲ್ಲಿ ಬಬ್ಬರ್ ಮೇಲ್ಮನವಿದಾರರ ಪರವಾಗಿ ಹಾಜರಾಗಿದ್ದರು.
ಹರಿಪ್ರಿಯಾ ಪದ್ಮನಾಭನ್
ಪದ್ಮನಾಭನ್ ಅವರು ಸ್ವತಂತ್ರ ವಕೀಲರಾಗಿದ್ದು, 25 ವರ್ಷಗಳಿಂದ ಸುಪ್ರೀಂ ಕೋರ್ಟ್‌ನಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದಾರೆ.
ಬೆಂಗಳೂರಿನ ಎನ್ಎಲ್ಎಸ್ಐಯುನಿಂದ ಕಾನೂನು ಪದವಿ ಪಡೆದ ಅವರು ಖ್ಯಾತ ಅಮರ್‌ಚಂದ್ ಮಂಗಲ್ ದಾಸ್ ಕಾನೂನು ಸಂಸ್ಥೆ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದರು.
ದೆಹಲಿಯ ಗಾಳಿಯ ಗುಣಮಟ್ಟ ಕುಸಿಯಲು ಕಾರಣವಾದ ಪಟಾಕಿಗಳ ಮಾರಾಟವನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದ ಪ್ರಕರಣದಲ್ಲಿ ಹರಿಪ್ರಿಯಾ ಹಾಜರಾಗಿದ್ದರು. ಲೂಥ್ರಾ ಅಂಡ್ ಲೂಥ್ರಾ ಕಾನೂನು ಕಚೇರಿಗಳ ಮಾಲೀಕತ್ವದ ಬಗ್ಗೆ ಮೋಹಿತ್ ಸರಾಫ್ ಮತ್ತು ದಿವಂಗತ ರಾಜೀವ್ ಲೂತ್ರಾ ನಡುವಣ ವ್ಯಾಜ್ಯದಲ್ಲಿ ಅವರು ವಾದ ಮಂಡಿಸಿದ್ದರು.
ಅರ್ಚನಾ ಪಾಠಕ್ ದವೆ
ದವೆ ಅವರು ರಾಜಸ್ಥಾನ ವಿಶ್ವವಿದ್ಯಾಲಯದ ಕಾನೂನು ಪದವೀಧರರಾಗಿದ್ದು, ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದಿಂದ ಎಲ್ಎಲ್ಎಂ ಪದವಿ ಪಡೆದಿದ್ದಾರೆ. 20 ವರ್ಷಗಳ ವೃತ್ತಿಜೀವನದಲ್ಲಿ ಅವರು ಕೇಂದ್ರ ಮತ್ತು ಗುಜರಾತ್ ಸರ್ಕಾರಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿನಿಧಿಸಿದ್ದಾರೆ.
ಅವರು ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್, ನೌಕರರ ಭವಿಷ್ಯ ನಿಧಿ ಸಂಸ್ಥೆ ಮತ್ತು ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್‌ನ ವಕೀಲರಾಗಿ ಕೆಲಸ ಮಾಡಿದ್ದಾರೆ. ಓರಿಯಂಟಲ್ ಇನ್ಶೂರೆನ್ಸ್ ಕಂಪನಿ, ಬಜಾಜ್ ಅಲಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿ ಹಾಗೂ ಭಾರ್ತಿ ಆಕ್ಸಾ ಜನರಲ್ ಇನ್ಶೂರೆನ್ಸ್ ಕಂಪನಿ ಸೇರಿದಂತೆ ಕಾರ್ಪೊರೇಟ್ ಕಕ್ಷಿದಾರರನ್ನು ದವೆ ಪ್ರತಿನಿಧಿಸಿದ್ದಾರೆ.
ಭಾರತೀಯ ಸೇನೆಯಲ್ಲಿ ಮಹಿಳೆಯರಿಗೆ ಶಾಶ್ವತ ಕಮಿಷನ್‌ಗೆ ಕ್ರಮ, ಖಾಸಗಿತನದ ಹಕ್ಕು ಮತ್ತು ಪೊಲೀಸ್ ಸುಧಾರಣೆಗಳಂತಹ ಮಹತ್ವದ ತೀರ್ಪು ಬಂದ ಪ್ರಕರಣಗಳಿಗೆ ಅವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಎನ್.ಎಸ್. ನಪ್ಪಿಣಯ್
ಸುಪ್ರೀಂ ಕೋರ್ಟ್ ಮತ್ತು ಬಾಂಬೆ ಹೈಕೋರ್ಟ್‌ನಲ್ಲಿ ನಪ್ಪಿಣಯ್ ಅವರು 30 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.
ಅವರು ಸೈಬರ್ ಕಾನೂನು, ಸಾಂವಿಧಾನಿಕ ಹಾಗೂ ಕ್ರಿಮಿನಲ್ ಕಾನೂನು, ಮಧ್ಯಸ್ಥಿಕೆ, ಬೌದ್ಧಿಕ ಆಸ್ತಿ ಹಕ್ಕುಗಳು, ಕಾರ್ಪೊರೇಟ್ ಮತ್ತು ವಾಣಿಜ್ಯ ವಿಷಯಗಳಲ್ಲಿ ಅವರು ಪರಿಣತರು.
ಅವರು ಓರ್ವ ತರಬೇತಿ ಪಡೆದ ಮಧ್ಯವರ್ತಿಯಾಗಿದ್ದು, ತಮಿಳುನಾಡು ಇ-ಆಡಳಿತ ಏಜೆನ್ಸಿಯ (ಟಿಎನ್ಇಜಿಎ) ಗೌರವ ಸಲಹೆಗಾರರಾಗಿದ್ದಾರೆ. ಅವರು ಕೇಂದ್ರ ಮತ್ತು ಪಶ್ಚಿಮ ರೈಲ್ವೆಯ ಹಿರಿಯ ಪ್ಯಾನಲ್ ವಕೀಲರಾಗಿದ್ದಾರೆ.
ಇತ್ತೀಚೆಗೆ ಅವರು ಲೈಂಗಿಕ ದೌರ್ಜನ್ಯ ಎಸಗಿದ ವೀಡಿಯೊ ಹಂಚಿಕೊಳ್ಳುವಿಕೆ ಮತ್ತು ಮಕ್ಕಳ ಅಶ್ಲೀಲ ಚಿತ್ರಗಳಿಗೆ ಸಂಬಂಧಿಸಿದ ಪ್ರಜ್ವಲಾ ಪ್ರಕರಣದಲ್ಲಿ ವಾದಿಸಿದ್ದರು.
ಅಮೆರಿಕದ ಸ್ಟ್ಯಾನ್ಫೋರ್ಡ್ ಸೆಂಟರ್ ಆಫ್ ಡೆಮಾಕ್ರಸಿ, ಡೆವಲಪ್ಮೆಂಟ್ & ರೂಲ್ ಆಫ್ ಲಾ ಫೆಲೋಶಿಪ್‌ನ ಹಳೆಯ ವಿದ್ಯಾರ್ಥಿಯಾಗಿರುವ ನಪ್ಪಿಣಯ್ ಅವರು ಸೈಬರ್ ಸುರಕ್ಷತೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಬಗ್ಗೆ ಬರೆಯುವ ಲೇಖಕರು ಹಾಗೂ ವಾಗ್ಮಿಯಾಗಿದ್ದಾರೆ.
ಎಸ್ ಜನನಿ
ಜನನಿ ಸ್ವತಂತ್ರ ವಕೀಲರಾಗಿದ್ದು, ಉದ್ಯೋಗ, ಆಸ್ತಿ ಕಾನೂನು, ಸೈಬರ್ ಅಪರಾಧ, ಕ್ರಿಮಿನಲ್ ಮತ್ತು ಗ್ರಾಹಕ ರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಾಕ್ಟೀಸ್ ಮಾಡಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದ ಮೊದಲ ತಲೆಮಾರಿನ ವಕೀಲರಾದ ಅವರು 1986ರಿಂದ ವೃತ್ತಿಯಲ್ಲಿದ್ದಾರೆ.
ಶಿರಿನ್ ಖಜುರಿಯಾ
ಖಜುರಿಯಾ ಅವರು ತರಬೇತಿ ಪಡೆದ ಮಧ್ಯವರ್ತಿ ಮತ್ತು ಅಡ್ವೊಕೇಟ್-ಆನ್-ರೆಕಾರ್ಡ್ ಆಗಿದ್ದು, 30 ವರ್ಷಗಳ ಸೇವಾನುಭವ ಹೊಂದಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದ ಅವರು ವಾಣಿಜ್ಯ, ಗುತ್ತಿಗೆ, ವಿವಾಹ, ಕುಟುಂಬ, ಆಸ್ತಿ, ಮಧ್ಯಸ್ಥಿಕೆ, ನೇರ ಮತ್ತು ಪರೋಕ್ಷ ತೆರಿಗೆ, ಕಾರ್ಮಿಕ ಮತ್ತು ಸೇವೆ, ಟೆಲಿಕಾಂ, ಗ್ರಾಹಕ ಮತ್ತು ಪ್ರಸಾರ ಪ್ರಕರಣಗಳಲ್ಲಿ ವಾದ ಮಂಡಿಸಿದ್ದಾರೆ.
ಅಪರಾಧ ದೃಶ್ಯಗಳು ಮತ್ತು ತನಿಖೆಗಳಲ್ಲಿ ಪೊಲೀಸರು ಬಳಸಬೇಕಾದ ವೀಡಿಯೊಗ್ರಫಿ ಮತ್ತಿತರ ಆಧುನಿಕ ವಿಧಾನಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಅವರು ಪ್ರಸಿದ್ಧರು.