ಮಂಗಳೂರು ಕಡಲ ವ್ಯಾಪ್ತಿಯಲ್ಲಿ ವಿದೇಶಿ ನೌಕೆ ಮತ್ತು ಸ್ಥಳೀಯ ಮೀನುಗಾರರನ್ನು ಒಳಗೊಂಡಿದ್ದ ಹಡಗಿನ ನಡುವೆ ಏಪ್ರಿಲ್ 2021ರಲ್ಲಿ ಡಿಕ್ಕಿ ಸಂಭವಿಸಿ 12 ಮಂದಿ ಮೀನುಗಾರರ ಸಾವಿಗೆ ಕಾರಣವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ಪ್ರಶ್ನಿಸಿ ಸಿಂಗಾಪುರ್ ಮೂಲದ ಶಿಪ್ಪಿಂಗ್ ಕಂಪೆನಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ವಜಾಗೊಳಿಸಿದೆ.
ಸಿಂಗಾಪುರ್‌ನ ಸಿಎಂಎ ಸಿಜಿಎಂ ಏಷ್ಯಾ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಇತ್ತೀಚೆಗೆ ವಿಚಾರಣೆ ನಡೆಸಿ ಈ ಆದೇಶ ಮಾಡಿದೆ.
ಕೇಂದ್ರ ಸರ್ಕಾರದ 1981ರ ಅಧಿಸೂಚನೆಯ ಪ್ರಕಾರ ಐಪಿಸಿ ಮತ್ತು ಸಿಆರ್‌ಪಿಸಿಯ ನಿಬಂಧನೆಗಳು ವಿದೇಶಿ ಕಂಪೆನಿಗೆ ಅನ್ವಯಿಸುತ್ತವೆ ಎಂದು ಪೀಠವು ಹೇಳಿದೆ. ಸಂವಿಧಾನದ 297ನೇ ವಿಧಿಯ ಅಡಿಯಲ್ಲಿ ಅಧಿಸೂಚನೆ ಹೊರಡಿಸಲು ಸರ್ಕಾರ ಅಧಿಕಾರ ಹೊಂದಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಕೇರಳದ ಕಡಲ ತಡಿಯಲ್ಲಿ ಸಂಭವಿಸಿದ್ದ ಮೀನುಗಾರರ ಹತ್ಯೆಯಾಗಿದ್ದ ರಿಪಬ್ಲಿಕ್ ಆಫ್ ಇಟಲಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿರುವ ನ್ಯಾಯಾಲಯವು 220 ನಾಟಿಕಲ್ ಮೈಲುಗಳ ಮಿತಿಯ ಕುರಿತು ಯುಎನ್‌ಸಿಎಲ್‌ಒಎಸ್‌ನ (ವಿಶ್ವಸಂಸ್ಥೆಯ ಕಡಲ ಕಾನೂನಿನ ಕುರಿತಾದ ಜಾಗತಿಕ ಒಪ್ಪಂದ) 27ನೇ ವಿಧಿಯಲ್ಲಿ ಸೂಚಿಸಲಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲೂ ಅದನ್ನು ಪರಿಗಣಿಸಲಾಗಿದೆ. ಕಡಲ ವಲಯಗಳ ಕಾಯಿದೆ ನಿಬಂಧನೆಗಳು ಯುಎನ್‌ಸಿಎಲ್‌ಒಎಸ್ ನಿಯಮಗಳಿಗೆ ಅನುಗುಣವಾಗಿ ಇಇಝಡ್‌ನ (ವಿಶೇಷ ವಿತ್ತೀಯ ವಲಯ) ಮಿತಿಯನ್ನು ನಿಗದಿಪಡಿಸಿದೆ ಎಂದು ಆದೇಶದಲ್ಲಿ ಹೇಳಿದೆ. ಅಲ್ಲದೆ, ಆ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಯುಎನ್‌ಸಿಎಲ್‌ಒಎಸ್‌ನ 97ನೇ ವಿಧಿಯು ಇಇಝಡ್ ವಲಯಕ್ಕೆ ಅನ್ವಯಿಸುವುದಿಲ್ಲ, ಅದು ಯಾವುದೇ ದೇಶಗಳ ಗಡಿ ವ್ಯಾಪ್ತಿಗೆ ಬಾರದ ಮುಕ್ತ ಸಮುದ್ರ ವಲಯಕ್ಕೆ (ಹೈ ಸೀ) ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿರುವುದನ್ನು ಪೀಠವು ಆಧರಿಸಿದೆ.
2021ರ ಏಪ್ರಿಲ್ 13ರಂದು ಮಂಗಳೂರಿನ ಕಡಲ ತೀರದಿಂದ 49 ನಾಟಿಕಲ್ ಮೈಲು ದೂರದಲ್ಲಿ, ಅಂತಾರಾಷ್ಟ್ರೀಯ ಜಲಮಾರ್ಗದಲ್ಲಿ ಹಾಯುತ್ತಿದ್ದ ಸಿಎಂಎ ಸಿಜಿಎ ಏಷ್ಯಾ ಶಿಪ್ಪಿಂಗ್ ನೌಕೆಗೆ 14 ಮಂದಿ ಮೀನುಗಾರರನ್ನು ಹೊಂದಿದ್ದ ಮೀನುಗಾರಿಕೆಯಲ್ಲಿ ತೊಡಗಿದ್ದ ʼರಬ್ಹಾʼ ಎಂಬ ಸ್ಥಳೀಯ ಹಡಗು ಡಿಕ್ಕಿ ಹೊಡೆದಿತ್ತು. ಪ್ರಕರಣದಲ್ಲಿ ಹನ್ನೆರಡು ಮೀನುಗಾರರು ಸಾವನ್ನಪ್ಪಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ನಡೆಸಲು ನಾಟಿಕಲ್ ಸರ್ವೇಯರ್ ಹಾಗೂ ಉಪ ನಿರ್ದೇಶಕರಿಗೆ ಆದೇಶ ಮಾಡಲಾಗಿತ್ತು.
ನೌಕೆಯ ಬೇಜವಾಬ್ದಾರಿ ಮತ್ತು ಉಪೇಕ್ಷೆಯ ನಡೆಯಿಂದ ಡಿಕ್ಕಿ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಹೇಳಿದ್ದರಿಂದ 2021ರ ಆಗಸ್ಟ್ 21ರಂದು ಪ್ರಕರಣ ದಾಖಲಿಸಲಾಗಿತ್ತು. ವಿಚಾರಣಾಧೀನ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿರುವುದನ್ನು ಪ್ರಶ್ನಿಸಿ ಸಿಂಗಾಪುರ್ ಕಂಪೆನಿಯು ಹೈಕೋರ್ಟ್ ಕದತಟ್ಟಿತ್ತು. ಹಾಲಿ ಪ್ರಕರಣದಲ್ಲಿ ವ್ಯಾಪಾರ ನೌಕಾ ಕಾಯಿದೆಯ ಸೆಕ್ಷನ್‌ಗಳಾದ 285 ಮತ್ತು 286 ಅನ್ವಯಿಸುವುದಿಲ್ಲ. ಸಮುದ್ರಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆ ಕಾನೂನು (ಯುಎನ್‌ಸಿಎಲ್‌ಒಎಸ್) 1982ಕ್ಕೆ ವಿರುದ್ಧವಾದ ನೀತಿ ಅನುಸರಿಸಲಾಗಿದೆ ಎಂದು ಕಂಪೆನಿ ವಾದಿಸಿತ್ತು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ಬಿ ಎಸ್ ವೆಂಕಟನಾರಾಯಣ ಅವರು “ವಿಶೇಷ ಆರ್ಥಿಕ ವಲಯದಲ್ಲಿ ಅಪಘಾತ ಸಂಭವಿಸಿದರೆ ವಿದೇಶಿಯರಿಗೂ ಐಪಿಸಿ ಮತ್ತು ಸಿಆರ್‌ಪಿಸಿ ಅನ್ವಯಿಸುತ್ತವೆ” ಎಂದು ವಾದಿಸಿದ್ದರು.