High Court of Karnataka 
ಸುದ್ದಿಗಳು

ಸಿದ್ದಗಂಗಾ ಮಠಕ್ಕೆ ಮಂಜೂರಾಗಿದ್ದ 14 ಎಕರೆ: ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಸಮ್ಮತಿ

ಮಂಜೂರಾತಿ ರದ್ದುಪಡಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮಠದ ಆಡಳಿತಾಧಿಕಾರಿ ಎಸ್ ವಿಶ್ವನಾಥಯ್ಯ ಮತ್ತು ರಾಜ್ಯ ಕಂದಾಯ ಇಲಾಖೆ ಸಲ್ಲಿಸಿದ್ದ ಮೇಲ್ಮನವಿಗಳನ್ನು ಪುರಸ್ಕರಿಸಿರುವ ನ್ಯಾಯಾಲಯ.

Bar & Bench

ತುಮಕೂರಿನ ಸಿದ್ದಗಂಗಾ ಮಠದ ದಾಸೋಹ ಪ್ರಸಾದ ವಿತರಣಾ ಕೇಂದ್ರಕ್ಕೆ ಬೆಂಗಳೂರು ವ್ಯಾಪ್ತಿಯ ಕದರನಹಳ್ಳಿಯಲ್ಲಿ 14 ಎಕರೆ ಜಮೀನು ಮಂಜೂರು ಮಾಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ಎತ್ತಿಹಿಡಿದಿದೆ.

ಮಂಜೂರಾತಿ ರದ್ದುಪಡಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮಠದ ಆಡಳಿತಾಧಿಕಾರಿ ಎಸ್ ವಿಶ್ವನಾಥಯ್ಯ ಮತ್ತು ರಾಜ್ಯ ಕಂದಾಯ ಇಲಾಖೆ ಸಲ್ಲಿಸಿದ್ದ ಮೇಲ್ಮನವಿಗಳನ್ನು ಪುರಸ್ಕರಿಸಿರುವ ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್‌ ಮತ್ತು ಟಿ ಎಂ ನದಾಫ್‌ ಅವರ ನೇತೃತ್ವದ ವಿಭಾಗೀಯ ಪೀಠ, ಈ ಕುರಿತಂತೆ, ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ ನೀಡಿದ್ದ ಆದೇಶವನ್ನು ಸಮರ್ಥಿಸಿದೆ.

ಈ ಪ್ರಕರಣದಲ್ಲಿ ಸರ್ಕಾರದ ಅಮೂಲ್ಯ ಆಸ್ತಿಯನ್ನು ನುಂಗಲು ಕೆಲವು ಕಾಣದ ಕೈಗಳು ತೆರೆಮರೆಯಲ್ಲಿ ಕೆಲಸ ಮಾಡಿರುವುದು ಕಂಡು ಬರುತ್ತಿದೆ. ಅರ್ಜಿಯ ಪ್ರತಿವಾದಿಗಳು ಸಾಗುವಳಿ ಚೀಟಿಯ ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುವುದು ಮತ್ತು ನಕಲಿ ಹಂಚಿಕೆ ದಾಖಲೆ ಹೊಂದಿರುವುದು ವೇದ್ಯವಾಗಿದೆ. ನ್ಯಾಯಾಲಯವನ್ನು ವಂಚಿಸುವ ಇಂತಹವರನ್ನು ಸುಲಭಕ್ಕೆ ಕೈಬಿಡಲು ಆಗುವುದಿಲ್ಲ. ಆದಾಗ್ಯೂ, ಪ್ರತಿವಾದಿಗಳು ಬಡವರಾಗಿರುವ ಕಾರಣ ಯಾವುದೇ ದಂಡ ಅಥವಾ ಕಠಿಣ ಕ್ರಮಕ್ಕೆ ಮುಂದಾಗಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಮಠದ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ ವಾದ ಮಂಡಿಸಿದ್ದರು. ಹೈಕೋರ್ಟ್‌ ವಕೀಲೆ ಸಂಜೀವಿನಿ ಪಿ. ನಾವದಗಿ ವಕಾಲತ್ತು ವಹಿಸಿದ್ದರು.

ಪ್ರಕರಣದ ಹಿನ್ನೆಲೆ: ತುಮಕೂರಿನ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ, ದಾಸೋಹ ಪ್ರಸಾದ ವಿತರಣಾ ಕೇಂದ್ರ ನಿರ್ಮಿಸುವ ಉದ್ದೇಶಕ್ಕಾಗಿ ಸೂಕ್ತ ಜಮೀನು ಮಂಜೂರು ಮಾಡುವಂತೆ 2007ರ ಏಪ್ರಿಲ್‌ ಮತ್ತು 2008ರ ಜೂನ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ಈ ಮನವಿ ಪರಿಗಣಿಸಿದ್ದ ರಾಜ್ಯ ಕಂದಾಯ ಇಲಾಖೆಯು 2009ರ ಮೇನಲ್ಲಿ ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿ ಕದರನಹಳ್ಳಿಯ ಸರ್ವೇ ನಂಬರ್ 41ರಲ್ಲಿನ 14.25 ಎಕರೆ ಗೋಮಾಳ ಜಮೀನನ್ನು ಮಠಕ್ಕೆ ಮಂಜೂರು ಮಾಡಿ ಆದೇಶಿಸಿತ್ತು.

ಇದನ್ನು ಆಕ್ಷೇಪಿಸಿದ್ದ ಪ್ರತಿವಾದಿಗಳಾದ ಕದರನಹಳ್ಳಿಯ ಕೆ ಎಸ್ ಮಂಜೇಶ್‌ ಬಿನ್‌ ಲೇಟ್‌ ಸೀತಾರಾಮಯ್ಯ ಸೇರಿದಂತೆ ಒಟ್ಟು ಐವರು, “ನಾವು ಆದಿ ಕರ್ನಾಟಕ ಪಂಗಡಕ್ಕೆ ಸೇರಿದವರು. ಮಠಕ್ಕೆ ಹಂಚಿಕೆ ಮಾಡಿರುವ ಜಮೀನಿಗೆ ಸಾಗುವಳಿ ಚೀಟಿ ಹೊಂದಿದ್ದೇವೆ. ಹೀಗಾಗಿ, ಸರ್ಕಾರ ಮಠಕ್ಕೆ ಜಮೀನು ಮಂಜೂರು ಮಾಡಿರುವ ಆದೇಶವನ್ನು ರದ್ದುಪಡಿಸಬೇಕು” ಎಂದು ತಕರಾರು ಎತ್ತಿದ್ದರು.

ಈ ಪ್ರಕರಣ, ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಇತ್ಯರ್ಥಗೊಂಡಿತ್ತು ಮತ್ತು ನ್ಯಾಯಮಂಡಳಿ ಮಠದ ಪರವಾಗಿ ಆದೇಶ ಮಾಡಿತ್ತು. ಇದನ್ನು ಪ್ರಶ್ನಿಸಿ ಮಂಜೇಶ್‌ ಮತ್ತಿತರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಈ ಕುರಿತಾದ ರಿಟ್‌ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಇ.ಎಸ್‌.ಇಂದಿರೇಶ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ 2025ರ ಜುಲೈನಲ್ಲಿ ನ್ಯಾಯಮಂಡಳಿ ಆದೇಶವನ್ನು ರದ್ದುಗೊಳಿಸಿ ಆದೇಶಿಸಿತ್ತು. ‘ವಿವಾದಿತ ಜಮೀನಿನಲ್ಲಿ ಮಂಜೇಶ್‌ ಸೇರಿದಂತೆ ಐವರು ಅರ್ಜಿದಾರರ ಹೆಸರನ್ನು ಕಂದಾಯ ದಾಖಲೆಗಳಲ್ಲಿ ತಕ್ಷಣವೇ ನಮೂದಿಸಬೇಕು’ ಎಂದು ಸ್ಥಳೀಯ ತಹಶೀಲ್ದಾರ್‌ ಅವರಿಗೆ ನಿರ್ದೇಶಿಸಿತ್ತು. ಇದನ್ನು ಪ್ರಶ್ನಿಸಿದ್ದ ಮಠ ವಿಭಾಗೀಯ ನ್ಯಾಯಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು.

Siddaganga Mutt Vs State of Karnataka.pdf
Preview