Supreme Court of India
Supreme Court of India 
ಸುದ್ದಿಗಳು

ಸಿಬಿಐ, ಇ ಡಿ ದುರ್ಬಳಕೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ 14 ರಾಜಕೀಯ ಪಕ್ಷಗಳು; ಬಂಧನಪೂರ್ವ ಮಾರ್ಗಸೂಚಿ ಕೋರಿಕೆ

Bar & Bench

ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯಗಳನ್ನು (ಇ ಡಿ) ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆಕ್ಷೇಪಿಸಿ ಹದಿನಾಲ್ಕು ರಾಜಕೀಯ ಪಕ್ಷಗಳು ಶುಕ್ರವಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿವೆ.

ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌, ಡಿಎಂಕೆ ಮತ್ತು ಆರ್‌ಜೆಡಿ ಪಕ್ಷಗಳು ಬಂಧನಪೂರ್ವ ಮಾರ್ಗಸೂಚಿ ರೂಪಿಸುವಂತೆ ಕೋರಿವೆ. ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ಪ್ರಕರಣವನ್ನು ತುರ್ತಾಗಿ ವಿಚಾರಣೆಗೆ ಪಟ್ಟಿ ಮಾಡುವಂತೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರಿಗೆ ಕೋರಿದರು.

“ಬಂಧನಪೂರ್ವ ಮಾರ್ಗಸೂಚಿ ಮತ್ತು ಅವುಗಳ ಜಾರಿ ಕೋರಿ 14 ರಾಜಕೀಯ ಪಕ್ಷಗಳು ಏಕಕಾಲಕ್ಕೆ ಒಟ್ಟಿಗೆ ಬಂದಿವೆ. ಸಿಬಿಐ ಮತ್ತು ಇ ಡಿಗಳನ್ನು ಇಂದು ನಮ್ಮ ವಿರುದ್ಧ ಬಳಕೆ ಮಾಡಲಾಗುತ್ತಿದೆ. ಶೇ. 95ರಷ್ಟು ತನಿಖೆಯಲ್ಲಿ ವಿರೋಧ ಪಕ್ಷಗಳ ನಾಯಕರೇ ಸೇರಿದ್ದಾರೆ” ಎಂದು ಸಿಂಘ್ವಿ ಹೇಳಿದರು. ಇದನ್ನು ಆಲಿಸಿದ ಸಿಜೆಐ ಚಂದ್ರಚೂಡ್‌ ಅವರು ಪ್ರಕರಣವನ್ನು ಏಪ್ರಿಲ್‌ 5ಕ್ಕೆ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ತಿಳಿಸಿದರು.