Arvind Kejriwal, ED and Delhi High Court  
ಸುದ್ದಿಗಳು

ಲೆ. ಗವರ್ನರ್ ಸಹಿತ 15 ಅಧಿಕಾರಿಗಳು ಅಬಕಾರಿ ನೀತಿಗೆ ಸಹಿ ಹಾಕಿದ್ದರು: ಸಿಬಿಐ ತರ್ಕಕ್ಕೆ ಕೇಜ್ರಿವಾಲ್ ಪ್ರತ್ಯುತ್ತರ

ತನ್ನನ್ನು ಬಂಧಿಸುವ ಸಿಬಿಐ ತರ್ಕವನ್ನು ಮನ್ನಿಸಿದರೆ, ಅಬಕಾರಿ ನೀತಿ ಪ್ರಕರಣದಲ್ಲಿ ಅನೇಕ ಅಧಿಕಾರಿಗಳನ್ನಷ್ಟೇ ಅಲ್ಲದೆ ದೆಹಲಿ ಲೆ. ಗವರ್ನರ್ ಅವರನ್ನು ಕೂಡ ಆರೋಪಿಗಳನ್ನಾಗಿ ಮಾಡಬೇಕಾದೀತು ಎಂದು ಕೇಜ್ರಿವಾಲ್‌ ಪರ ವಾದ.

Bar & Bench

ವಿವಾದಿತ ದೆಹಲಿ ಅಬಕಾರಿ ನೀತಿಗೆ ಅಂದಿನ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಮತ್ತು ದೆಹಲಿ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹದಿನೈದು ಮಂದಿ ಸಹಿ ಹಾಕಿದ್ದಾರೆ ಎಂದು ಅರವಿಂದ್‌ ಕೇಜ್ರಿವಾಲ್‌ ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಕೇಜ್ರಿವಾಲ್‌ ಅವರಿಗೆ ಹಗರಣದ ಬಗ್ಗೆ ಅರಿವಿತ್ತು, ಅವರೇ ಹಗರಣದ ಸೂತ್ರಧಾರ ಎಂಬ ಸಿಬಿಐ ಪರ ವಕೀಲ ಡಿ ಪಿ ಸಿಂಗ್‌ ವಾದಕ್ಕೆ ಪ್ರತಿಕ್ರಿಯಿಸಿರುವ ಅವರು ತನ್ನನ್ನು ಬಂಧಿಸುವ ಸಿಬಿಐ ತರ್ಕವನ್ನು ಮನ್ನಿಸಿದರೆ, ಅಬಕಾರಿ ನೀತಿ ಪ್ರಕರಣದಲ್ಲಿ ಸುಮಾರು 50 ಅಧಿಕಾರಿಗಳನ್ನಷ್ಟೇ ಅಲ್ಲದೆ ದೆಹಲಿ ಲೆ. ಗವರ್ನರ್ ಅವರನ್ನು ಕೂಡ ಆರೋಪಿಗಳನ್ನಾಗಿ ಮಾಡಬೇಕಾದೀತು ಎಂದು ಕೇಜ್ರಿವಾಲ್‌ ಪರ ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ ವಾದ ಮಂಡಿಸಿದರು.

ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ತೀರ್ಪು ಕಾಯ್ದಿರಿಸಿದರು.  ಇ ಡಿ ತನಿಖೆ ನಡೆಸುತ್ತಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಕೇಜ್ರಿವಾಲ್ ಅವರನ್ನು ಜೂನ್ 26 ರಂದು ಸಿಬಿಐ  ಬಂಧಿಸಿತ್ತು .

ಅದರ ಬೆನ್ನಲ್ಲೇ ಇ ಡಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಮಧ್ಯಂತರ ಜಾಮೀನು ನೀಡಿತಾದರೂ ಸಿಬಿಐ ಪ್ರಕರಣದಲ್ಲಿ ಇನ್ನೂ ಜಾಮೀನು ದೊರೆಯದೇ ಇರುವುದರಿಂದ ಅವರು ಸೆರೆವಾಸ ಅನುಭವಿಸುತ್ತಿದ್ದಾರೆ.

ಜಾಮೀನು ಕೋರಿ ಹಾಗೂ ಸಿಬಿಐ ಬಂಧನ ಪ್ರಶ್ನಿಸಿ- ಹೀಗೆ ಎರಡು ಪ್ರತ್ಯೇಕ ಅರ್ಜಿಗಳನ್ನು ಕೇಜ್ರಿವಾಲ್‌ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆದಿದ್ದು ಬಂಧನ ಪ್ರಶ್ನಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಈಗಾಗಲೇ ತೀರ್ಪು ಕಾಯ್ದಿರಿಸಲಾಗಿದೆ.

ಬಂಧನ ಕಾನೂನುಬದ್ಧವಾಗಿದೆ ಎಂದು ವಿಚಾರಣಾ ನ್ಯಾಯಾಲಯ ಈಗಾಗಲೇ ತಿಳಿಸಿದೆ. ಎಂದು ಸಿಬಿಐ ಪರವಾಗಿ ಡಿಪಿ ಸಿಂಗ್‌ ವಾದಿಸಿದರು. ತನಿಖಾಧಿಕಾರಿ ನಿರ್ಧಾರವನ್ನು ವಿಚಾರಣಾ ನ್ಯಾಯಾಧೀಶರು ಎತ್ತಿ ಹಿಡಿದಿದ್ದರೆ ಅದನ್ನು ಇಲ್ಲಿ ಪ್ರಶ್ನಿಸಬಾರದು ಎಂದು ಅವರು ವಾದಿಸುತ್ತಿದ್ದಾರೆಯೇ ಎಂಬುದಾಗಿ ಕೇಜ್ರಿವಾಲ್ ಪರವಾಗಿ ವಾದ ಮಂಡಿಸಿದ ಮತ್ತೊಬ್ಬ ಹಿರಿಯ ವಕೀಲ ಎನ್ ಹರಿಹರನ್ ಪ್ರಶ್ನಿಸಿದರು.

ವಾದದ ಒಂದು ಹಂತದಲ್ಲಿ ಸಿಂಗ್‌ ಅವರು ಸುಪ್ರೀಂ ಕೋರ್ಟ್‌ ಜಾಮೀನು ನೀಡಿರುವುದು ಅರ್ಹತೆಯ ಕಾರಣಕ್ಕಲ್ಲ, ಬದಲಿಗೆ  ಸಾಂವಿಧಾನಿಕ ಪ್ರಶ್ನೆಯೊಂದು ಬಾಕಿ ಇರುವ ಕಾರಣಕ್ಕಾಗಿ. ತನಿಖೆ ಮುಂದುವರೆದಂತೆ ಕೇಜ್ರಿವಾಲ್ ಹಗರಣದಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗಿದೆ. ಹಗರಣಕ್ಕೆ ಸಂಬಂಧಿಸಿದಂತೆ ₹ 44 ಕೋಟಿ ಪತ್ತೆಯಾಗಿದೆ ಎಂದು ಸಿಂಗ್ ಹೇಳಿದರು.

ಆರೋಪಪಟ್ಟಿ ಸಲ್ಲಿಸಿದ ನಂತರ ಜಾಮೀನು ನೀಡಬೇಕು ಎಂಬ ಕೇಜ್ರಿವಾಲ್ ಅವರ ವಾದವನ್ನು ತಳ್ಳಿಹಾಕಿದ ಅವರು ವಿಚಾರಣೆ ಪೂರ್ಣಗೊಳ್ಳುವವರೆಗೆ ನ್ಯಾಯಾಲಯ ಅವರನ್ನು ಜೈಲಿನಲ್ಲಿಡಬಹುದು ಎಂದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಎ ಎಂ ಸಿಂಘ್ವಿ ಅವರು ಮುಂದಾಲೋಚನೆಯಿಂದ ಕೇಜ್ರಿವಾಲ್‌ ಅವರನ್ನು ಬಂಧಿಸಲಾಗಿದೆ ಎಂಬ ತಮ್ಮ ವಾದವನ್ನು ಪುನರುಚ್ಚರಿಸಿದರು. ಕೇಜ್ರಿವಾಲ್‌ ಅವರನ್ನು ಬಂಧಿಸುವವರೆಗೂ ಸಿಬಿಐ ತನಿಖೆಯನ್ನೇ ನಡೆಸಿಲ್ಲ. ಅವರ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲ ಎಂದು ನುಡಿದರು.