ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯಿದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರಾಜ್ಯ ಸರ್ಕಾರದ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಗಳು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ರಾಜ್ಯ ಕಾರ್ಮಿಕ ಇಲಾಖೆಯು 2025ರ ನವೆಂಬರ್ 20ರಂದು ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಖಾಸಗಿ ಕಂಪನಿಗಳ ಪ್ರಮುಖ ಹುದ್ದೆಗಳಲ್ಲಿರುವ ವರ್ಷಾ ಸೇರಿ 17 ಮಹಿಳೆಯರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ರಾಜ್ಯ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರನ್ನು ಪ್ರತಿವಾದಿ ಮಾಡಲಾಗಿದೆ.
ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರಾಜ್ಯ ಕಾರ್ಮಿಕ ಇಲಾಖೆ ಹೊರಡಿಸಿರುವ ಅಧಿಸೂಚನೆ ಪರೋಪಕಾರಿ ದೃಷ್ಟಿಯಿಂದ ಕೂಡಿದೆ. ಆದರೆ, ನೈಜವಾಗಿ ಹೇಳುವುದಾದರೆ, ರಾಜ್ಯ ಸರ್ಕಾರದ ಈ ಆದೇಶವು ಸಂವಿಧಾನದ 14ನೇ ವಿಧಿ ಅಡಿಯ ಸಮಾನತೆ ಹಕ್ಕಿಗೆ ವಿರುದ್ಧವಾಗಿದೆ. ಲಿಂಗ ತಾರತಮ್ಯಗೆ ಎಡೆ ಮಾಡಿಕೊಡುತ್ತದೆ. ಮಹಿಳೆಯರು ಪುರುಷರಿಗಿಂತ ದುರ್ಬಲರು ಎಂಬ ಭಾವನೆಯನ್ನು ಉದ್ಯೋಗದಾತರಲ್ಲಿ ಮೂಡಿಸುತ್ತದೆ. ಇದರಿಂದ ಮಹಿಳಾ ಉದ್ಯೋಗಿಗಳನ್ನು ನೇಮಕ ಮಾಡಲು ಹಾಗೂ ಬಡ್ತಿಗೆ ಕಂಪೆನಿಗಳು ಹಿಂದೇಟು ಹಾಕುತ್ತವೆ ಎಂದು ಮಹಿಳೆಯರು ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ.
ಋತುಚಕ್ರ ಸಮಯದಲ್ಲಿ ಮಾಸಿಕ ಒಂದು ದಿನ ಕಡ್ಡಾಯ ರಜೆ ನೀಡುವುದರಿಂದ ಸ್ಪರ್ಧಾತ್ಮಕ ವೃತ್ತಿ ಜೀವನದಲ್ಲಿ ಮಹಿಳೆಯರಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಉದ್ಯೋಗದಾತರಿಗೆ ಹೊರೆ ಹೆಚ್ಚುತ್ತದೆ. ಮಹಿಳಾ ಉದ್ಯೋಗಿಗಳ ದಕ್ಷತೆ ಕಡಿಮೆ ಮಾಡುತ್ತದೆ. ಮಹಿಳಾ ನೌಕರರ ಸಬಲೀಕರಣಕ್ಕೂ ಅಡ್ಡಿಯಾಗುತ್ತದೆ ಎಂದು ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ನೀತಿಯು ಪ್ರತಿ ಮಹಿಳೆಗೂ ಋತುಚಕ್ರ ರಜೆ ಅಗತ್ಯ ಎಂಬ ಊಹೆ ಸೃಷ್ಟಿಸುತ್ತದೆ. ಆದರೆ, ಋತುಚಕ್ರದ ಕಾರಣಕ್ಕೆ ಕಡ್ಡಾಯ ರಜೆ ನೀಡುವ ಅಗತ್ಯವಿಲ್ಲ. ಮತ್ತೊಂದೆಡೆ ಈ ನೀತಿ ರೂಪಿಸುವಾಗ ಸರ್ಕಾರ ಮಹಿಳೆಯರ ಅಭಿಪ್ರಾಯ ಪಡೆದಿಲ್ಲ. ಇದು ಸಹಜ ನ್ಯಾಯದ ಉಲ್ಲಂಘನೆಯಾಗಿದ್ದು, ರಾಜ್ಯ ಸರ್ಕಾರದ ಅಧಿಸೂಚನೆ ವಜಾಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಈ ಮಧ್ಯೆ, ಅರ್ಜಿ ವಿಚಾರಣೆಯನ್ನು ಇಂದೂ ನಡೆಸಿರುವ ನ್ಯಾಯಮೂರ್ತಿ ಅನಂತ ರಾಮನಾಥ್ ಹೆಗ್ಡೆ ಅವರ ಏಕಸದಸ್ಯ ಪೀಠವು ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 1ಕ್ಕೆ ಮುಂದೂಡಿದೆ.