Vidhana Soudha  
ಸುದ್ದಿಗಳು

ಆರ್ಥಿಕ ಇಲಾಖೆ ಪರಿಶೀಲನೆಯಲ್ಲಿ 19 ಹೊಸ ತಾಲ್ಲೂಕುಗಳಲ್ಲಿ ಜೆಎಂಎಫ್‌ಸಿ ನ್ಯಾಯಾಲಯ ಸ್ಥಾಪನೆ ಕಡತ: ಸಚಿವ ಪಾಟೀಲ್‌

ಮೊದಲ ಹಂತದಲ್ಲಿ ಆದ್ಯತೆಯ ಮೇಲೆ 19 ನ್ಯಾಯಾಲಯಗಳಿಗೆ ಮಂಜೂರಾತಿ ನೀಡಿ, ನಂತರ ರಾಜ್ಯದ ಉಳಿದ ನ್ಯಾಯಾಲಯಗಳ ಸ್ಥಾಪನೆಗೆ ಸಹಮತಿಸುವಂತೆ ಆರ್ಥಿಕ ಇಲಾಖೆಗೆ ಕಡತ ಸಲ್ಲಿಕೆಯಾಗಿದೆ ಎಂದು ತಿಳಿಸಿರುವ ಕಾನೂನು ಸಚಿವ ಪಾಟೀಲ್.‌

Bar & Bench

ಹೊಸದಾಗಿ ರಚಿಸಲಾಗಿರುವ 38 ತಾಲ್ಲೂಕುಗಳ ಪೈಕಿ ಆದ್ಯತೆ ಮೇರೆಗೆ 19 ಕಡೆ ಸಿವಿಲ್‌ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಸ್ಥಾಪಿಸಲು ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಅವರು ರಾಜ್ಯ ಸರ್ಕಾರಕ್ಕೆ ಪರಿಷ್ಕೃತ ಪಟ್ಟಿ ಸಲ್ಲಿಸಿದ್ದಾರೆ ಎಂದು ರಾಜ್ಯ ಸರ್ಕಾರವು ವಿಧಾನಸಭೆಗೆ ತಿಳಿಸಿದೆ.

ಜೆಡಿಎಸ್‌ನ ಯಾದಗಿರಿ ಜಿಲ್ಲೆಯ ಗುರುಮಿಠ್ಕಲ್‌ ಶಾಸಕ ಶರಣಗೌಡ ಕಂದಕೂರ ಅವರು ತಮ್ಮ ಕ್ಷೇತ್ರದಲ್ಲಿ ಕಾಯಂ ನ್ಯಾಯಪೀಠ ಅಗತ್ಯವಿರುವುದು ಸರ್ಕಾರದ ಗಮನಕ್ಕೆ ಇದೆಯೇ? ಇದಕ್ಕಾಗಿ ಏನು ಕ್ರಮಕೈಗೊಳ್ಳಲಾಗಿದೆ ಮತ್ತು ಎಷ್ಟು ದಿನಗಳಲ್ಲಿ ಕಾಯಂ ನ್ಯಾಯಪೀಠ ಸ್ಥಾಪಿಸಲಾಗುವುದು ಎಂಬ ಚುಕ್ಕೆಗುರುತಿಲ್ಲದ ಪ್ರಶ್ನೆ ಕೇಳಿದ್ದರು.

ಇದಕ್ಕೆ ಉತ್ತರಿಸಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ ಕೆ ಪಾಟೀಲ್‌ ಅವರು ಗುರುಮಿಠ್ಕಲ್‌ ಒಳಗೊಂಡು ಹೊಸದಾಗಿ ರಚಿಸಲಾದ 38 ತಾಲ್ಲೂಕುಗಳಲ್ಲಿ ಸಿವಿಲ್‌ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ಸ್ಥಾಪಿಸಲು ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಪ್ರಸ್ತಾವ ಸಲ್ಲಿಸಿದೆ ಎಂದು ತಿಳಿಸಿದ್ದಾರೆ.

ಮುಂದುವರಿದು, ಕೆಲವು ಜಿಲ್ಲೆಗಳಲ್ಲಿ ಪ್ರಕರಣಗಳು ಹೆಚ್ಚಿರುವುದರಿಂದ ಸರ್ಕಾರವು ಆದ್ಯತೆಯ ಮೇಲೆ ಮಂಜೂರು ಮಾಡಬೇಕಾದ 19 ನ್ಯಾಯಾಲಯಗಳ ಪರಿಷ್ಕೃತ ಪಟ್ಟಿಯನ್ನು ರಿಜಿಸ್ಟ್ರಾರ್‌ ಜನರಲ್‌ ಸಲ್ಲಿಸಿದ್ದಾರೆ. ಇದರಲ್ಲಿ ಗುರುಮಿಠ್ಕಲ್‌ನಲ್ಲಿ ನ್ಯಾಯಾಲಯ ಸ್ಥಾಪನೆ ಪ್ರಸ್ತಾಪವಾಗಿಲ್ಲ. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಆದ್ಯತೆಯ ಮೇಲೆ 19 ನ್ಯಾಯಾಲಯಗಳಿಗೆ ಮಂಜೂರಾತಿ ನೀಡಿ, ನಂತರ ರಾಜ್ಯದ ಉಳಿದ ನ್ಯಾಯಾಲಯಗಳ ಸ್ಥಾಪನೆಗೆ ಸಹಮತಿಸುವಂತೆ ಆರ್ಥಿಕ ಇಲಾಖೆಗೆ ಕಡತ ಸಲ್ಲಿಕೆಯಾಗಿದೆ. ಸದ್ಯ ಇದು ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿದೆ ಎಂದು ಸಚಿವರು ಉತ್ತರಿಸಿದ್ದಾರೆ.

ಹೊಸ ತಾಲ್ಲೂಕುಗಳಲ್ಲಿ ನ್ಯಾಯಪೀಠ ಸ್ಥಾಪನೆ.pdf
Preview