1984ರ ಸಿಖ್ ವಿರೋಧಿ ಗಲಭೆಗೆ ಸಂಬಂಧಿಸಿದ ದಂಗೆ ಮತ್ತು ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಅವರಿಗೆ ಜಾಮೀನು ನೀಡಿದ್ದ ಕೆಳ ನ್ಯಾಯಾಲಯದ ಆದೇಶಕ್ಕೆ ದೆಹಲಿ ಹೈಕೋರ್ಟ್ ಸೋಮವಾರ ತಡೆ ನೀಡಿದೆ.
ಈ ಸಂಬಂಧ ನೋಟಿಸ್ ಜಾರಿಗೊಳಿಸಿದ ನ್ಯಾಯಮೂರ್ತಿ ಯೋಗೇಶ್ ಖನ್ನಾ ಅವರು ವಿಚಾರಣೆಯನ್ನು ಜುಲೈ 15ಕ್ಕೆ ಮುಂದೂಡಿದರು. ಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡಿದ್ದ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ಆದೇಶವನ್ನು 1984ರ ಗಲಭೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸುತ್ತಿರುವ ಎಸ್ಐಟಿ ಪ್ರಶ್ನಿಸಿತ್ತು.
ಸಜ್ಜನ್ ಕುಮಾರ್ ಘೋರ ಅಪರಾಧದಲ್ಲಿ ಭಾಗಿಯಾಗಿದ್ದು ಕೆಲ ಪ್ರಮುಖ ಸಾಕ್ಷಿಗಳನ್ನು ಇನ್ನೂ ವಿಚಾರಣೆಗೆ ಒಳಪಡಿಸಬೇಕಿದೆ. ಹಾಗಾಗಿ ಜಾಮೀನಿನ ಮೇಲೆ ಬಿಡುಗಡೆಯಾದರೆ ಸಾಕ್ಷ್ಯಗಳನ್ನು ತಿರುಚಬಹುದು ಎಂದು ಎಸ್‌ಐಟಿ ವಾದಿಸಿದೆ.
ಪ್ರಸ್ತುತ ಪ್ರಕರಣ, ತಂದೆ-ಮಗ ಜಸ್ವಂತ್ ಸಿಂಗ್ ಮತ್ತು ತರುಣ್ ದೀಪ್ ಸಿಂಗ್ ಅವರ ಹತ್ಯೆಗೆ ಸಂಬಂಧಿಸಿದ್ದಾಗಿದೆ. 1984ರ ಗಲಭೆಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸಜ್ಜನ್ ಕುಮಾರ್ ಜೈಲಿನಲ್ಲಿದ್ದಾರೆ.