Delhi Lieutenant Governor VK Saxena
Delhi Lieutenant Governor VK Saxena  Twitter
ಸುದ್ದಿಗಳು

[ಛಾವಲಾ ಪ್ರಕರಣ] ಆರೋಪಿಗಳ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಲು ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಅನುಮೋದನೆ

Bar & Bench

ದೆಹಲಿಯ ಛಾವಲಾದಲ್ಲಿ 2012ರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣದಂಡನೆಗೊಳಗಾಗಿದ್ದ ಮೂವರು ಅಪರಾಧಿಗಳನ್ನು ಸುಪ್ರೀಂ ಕೋರ್ಟ್ ಖುಲಾಸೆಗೊಳಿಸಿದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗುತ್ತಿರುವ ಅರ್ಜಿಗೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ವಿನಯ್‌ ಕುಮಾರ್ ಸಕ್ಸೇನಾ ಅವರು ಅನುಮೋದನೆ ನೀಡಿದ್ದಾರೆ.

ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ  ಅವರ ನೇಮಕಕ್ಕೆ ಕೂಡ ಸಕ್ಸೇನಾ ಅನುಮೋದನೆ ನೀಡಿದ್ದಾರೆ.

ಖುಲಾಸೆ ಹಿನ್ನೆಲೆಯಲ್ಲಿ ಮೂವರು ಆರೋಪಿಗಳಲ್ಲಿ ಇಬ್ಬರು ಜೈಲಿನಿಂದ ಬಿಡುಗಡೆಯಾದ ಹಿನ್ನೆಲೆಯಲ್ಲಿ 19 ವರ್ಷದ ಸಂತ್ರಸ್ತೆಯ ಪೋಷಕರು ಭಯದಿಂದ ಪೊಲೀಸ್‌ ರಕ್ಷಣೆ ಕೋರಿದ್ದರು.

ಫೆಬ್ರವರಿ 9, 2012ರ ರಾತ್ರಿ, ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಅಪಹರಣಕ್ಕೊಳಗಾದ ಹುಡುಗಿಯೊಂದಿಗೆ ಇದ್ದ ಸ್ನೇಹಿತೆ ನೀಡಿದ ದೂರಿನ ಮೇಲೆ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿತ್ತು. ಬಳಿಕ ಸಂತ್ರಸ್ತೆಯ ಶವ ರೋಡೈ ಗ್ರಾಮದ ಜಮೀನಿನಲ್ಲಿ ಪತ್ತೆಯಾಗಿತ್ತು. ಆಕ್ಷೇಪಾರ್ಹ ರೀತಿಯಲ್ಲಿ ಕಾರನ್ನು ಓಡಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ತಡೆದಾಗ ಘಟನೆ ಬೆಳಕಿಗೆ ಬಂದಿತ್ತು.

ವಿಚಾರಣಾ ನ್ಯಾಯಾಲಯವೊಂದು ಆರೋಪಿಗಳಾದ ರಾಹುಲ್, ರವಿಕುಮಾರ್ ಮತ್ತು ವಿನೋದ್ ಅವರಿಗೆ 2014ರಲ್ಲಿ ಮರಣದಂಡನೆ ವಿಧಿಸಿತ್ತು. ಶಿಕ್ಷೆಯನ್ನು ದೆಹಲಿ ಹೈಕೋರ್ಟ್‌ ಎತ್ತಿಹಿಡಿದಿತ್ತು. ಆದರೆ ಕಳೆದ ನವೆಂಬರ್ 7ರಂದು ಅಂದಿನ  ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಮತ್ತು ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ತೀರ್ಪು ನೀಡುವಾಗ ಪೊಲೀಸರ ವಾದದಲ್ಲಿ ಹಲವು ಹುಳುಕುಗಳನ್ನು ಪತ್ತೆಹಚ್ಚಿತು. ಪರಿಣಾಮ ಮೂವರೂ ಅಪರಾಧಿಗಳು ಖುಲಾಸೆಗೊಂಡಿದ್ದರು.  

ನ್ಯಾಯಮೂರ್ತಿಗಳು ಅಪರಾಧವನ್ನು ಹೇಯ ಎಂದು ಒಪ್ಪಿಕೊಂಡರಾದರೂ ಬಾಹ್ಯ ನೈತಿಕ ಒತ್ತಡಗಳಿಂದ ಪ್ರಭಾವಿತರಾಗಬಾರದೆಂಬ ಕಾರಣಕ್ಕೆ  ಆರೋಪಿಗಳನ್ನು ಖುಲಾಸೆಗೊಳಿಸದೆ ಬೇರೆ ದಾರಿ ಇಲ್ಲ ಎಂದಿದ್ದರು.