Madras High Court 
ಸುದ್ದಿಗಳು

ಉದ್ಯಮಿಯೊಬ್ಬರ ಅಣತಿಯಂತೆ ಸ್ಟೆರಲೈಟ್ ಗೋಲಿಬಾರ್: ಮದ್ರಾಸ್ ಹೈಕೋರ್ಟ್

Bar & Bench

ತೂತ್ತುಕುಡಿಯ ಸ್ಟೆರಲೈಟ್ ತಾಮ್ರದ ಸ್ಥಾವರ ವಿರೋಧಿಸಿ 2018ರಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಒಟ್ಟು 13 ನಿರಾಯುಧರನ್ನು ಬಲಿ ಪಡೆದ ಪೊಲೀಸರ ಗೋಲಿಬಾರ್ ಒಬ್ಬ ನಿರ್ದಿಷ್ಟ ಕೈಗಾರಿಕೋದ್ಯಮಿಯ ಅಣತಿಯಂತೆ ನಡೆದ ಪೂರ್ವಯೋಜಿತ ಕೃತ್ಯ ಎಂದು ಮದ್ರಾಸ್ ಹೈಕೋರ್ಟ್ ಸೋಮವಾರ ಹೇಳಿದೆ.

ಆ ಹುನ್ನಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಯಾವುದೇ ಹಣಕಾಸಿನ ಲಾಭ ಪಡೆದಿದ್ದರೆ ತಮಿಳುನಾಡು ಸರ್ಕಾರ ತನಿಖೆ ನಡೆಸಬೇಕು ಎಂದು ನ್ಯಾಯಮೂರ್ತಿಗಳಾದ ಎಸ್‌ ಎಸ್ ಸುಂದರ್ ಮತ್ತು ಎನ್ ಸೆಂಥಿಲ್ ಕುಮಾರ್ ಅವರಿದ್ದ ಪೀಠ ಹೇಳಿದೆ.

"ಒಬ್ಬ ನಿರ್ದಿಷ್ಟ ಕೈಗಾರಿಕೋದ್ಯಮಿ ಇದು ಆಗಬೇಕೆಂದು ಬಯಸಿದ್ದರಿಂದ ಈ ಎಲ್ಲಾ ಸಂಗತಿಗಳು ಸಂಭವಿಸಿದವು. ನೀವೆಲ್ಲರೂ (ಪೊಲೀಸ್ ಮತ್ತು ಜಿಲ್ಲಾಧಿಕಾರಿಗಳು) ಅವರ ಆದೇಶದಂತೆ ವರ್ತಿಸಿದ್ದೀರಿ. ಅವರು ಜನರಿಗೆ ಪಾಠ ಕಲಿಸಲು ಬಯಸಿದ್ದರು ಮತ್ತು ನೀವು ಅದಕ್ಕೆ ಅನುಕೂಲ ಮಾಡಿಕೊಟ್ಟಿದ್ದೀರಿ... ಈ ಬಗ್ಗೆ ಕಣ್ಣುಮುಚ್ಚಿ ಕೂರಬೇಕೆ?" ಎಂದು ಹೈಕೋರ್ಟ್ ಖಾರವಾಗಿ ಪ್ರಶ್ನಿಸಿತು.

ಹಾಗಾಗಿ, ತೂತ್ತುಕುಡಿಯಲ್ಲಿ ಘಟನೆ ನಡೆದ ವೇಳೆ ನಿಯೋಜನೆಗೊಂಡಿದ್ದ ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳ ಸಂಪತ್ತಿನ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ವಿಚಕ್ಷಣಾ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯಕ್ಕೆ (ಡಿವಿಎಸಿ) ನಿರ್ದೇಶನ ನೀಡಿದೆ.

ವೇದಾಂತ ಲಿಮಿಟೆಡ್‌ನ ಸ್ಟೆರಲೈಟ್ ತಾಮ್ರದ ಸ್ಥಾವರದ ವಿರುದ್ಧ 2018ರಲ್ಲಿ ಪ್ರತಿಭಟನೆ ನಡೆದಿತ್ತು. 2018ರಲ್ಲಿ ಸ್ಥಾವರ ಮುಚ್ಚುವವರೆಗೂ ಅದು ದೇಶದ ಅತಿದೊಡ್ಡ ತಾಮ್ರ ಸಂಸ್ಕರಣಾ ಘಟಕ ಆಗಿತ್ತು. ತೂತ್ತುಕುಡಿ ಪರಿಸರಕ್ಕೆ ಹಾನಿಯನ್ನುಂಟುಮಾಡುವುದರಿಂದ ಸ್ಥಾವರ ಮುಚ್ಚಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು.

ಅಕ್ಟೋಬರ್ 25, 2018ರಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಮುಕ್ತಾಯಗೊಳಿಸಿದ್ದ ಘಟನೆಯ ತನಿಖೆಯನ್ನು ಪುನಃ ಆರಂಭಿಸಬೇಕೆಂದು ಕೋರಿ ಸಾಮಾಜಿಕ ಹೋರಾಟಗಾರ ಹೆನ್ರಿ ಟಿಫಾಗ್ನೆ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಪೀಠ ಈ ವಿಚಾರಗಳನ್ನು ತಿಳಿಸಿದೆ.

ಘಟನೆಯ ಸ್ವಯಂ ಪ್ರೇರಿತ ತನಿಖೆಯನ್ನು ದಿಢೀರನೆ ಅಂತ್ಯಗೊಳಿಸಿದ್ದ ಎನ್‌ಎಚ್‌ಆರ್‌ಸಿ ನಿರ್ಧಾರವನ್ನು ಪ್ರಶ್ನಿಸಿ ಟಿಫಾಗ್ನೆ 2021ರಲ್ಲಿ ಅರ್ಜಿ ಸಲ್ಲಿಸಿದ್ದರು.

ಇಂದಿನ ವಿಚಾರಣೆ ವೇಳೆ ನ್ಯಾಯಾಲಯ‌"ಅಧಿಕಾರಿಗಳ ಆಸ್ತಿಯನ್ನು ನಿಜವಾಗಿಯೂ ಮೌಲ್ಯಮಾಪನ ಮಾಡಬೇಕು. ಅವರ ಪ್ರಸ್ತುತ ಆಸ್ತಿ ಎಷ್ಟಿದೆ ಎಂಬುದನ್ನು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಜಿಲ್ಲಾಧಿಕಾರಿ ಕಚೇರಿಯಿಂದ ಏಳು ಕಿಲೋಮೀಟರ್‌ಗಿಂತ ಕಡಿಮೆ ಅಂತರದಲ್ಲೇ ಪ್ರತಿಭಟನಾಕಾರರೊಬ್ಬರ ಮೇಲೆ ಗುಂಡು ಹಾರಿಸಲಾಗಿದೆ. ಕೆಲವು ಪೊಲೀಸ್ ಅಧಿಕಾರಿಗಳು ಗುಂಡಿನ ದಾಳಿಗೆ ಅವಕಾಶ ನೀಡಿದ್ದಾರೆ ಎಂಬ ಅನುಮಾನ ಇದೆ. ಅಲ್ಲದೆ ಆ ಸಮಯದಲ್ಲಿ ಮಾತ್ರವಲ್ಲದೆ ಅದಕ್ಕಿಂತ ಎರಡು ವರ್ಷಗಳ ಹಿಂದಿನಿಂದ ತೂತ್ತುಕುಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸರ್ಕಾರಿ ಅಧಿಕಾರಿಗಳು ಹಾಗೂ ಅವರ ಪತ್ನಿಯರ ಮತ್ತು ಹತ್ತಿರದ ಸಂಬಂಧಿಕರ ಆಸ್ತಿಯನ್ನು ವಿಚಕ್ಷಣಾ ಮತ್ತು ಭ್ರಷ್ಟಾಚಾರ ನಿಗ್ರಹ ದಳ ತನಿಖೆ‌ ನಡೆಸಬೇಕು.‌ಮತ್ತವರ ಕುಟುಂಬಸ್ಥರ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು" ಎಂದು‌ ಪೀಠ ಆದೇಶಿಸಿದೆ.

ತನಿಖೆ ನಡೆಸಿ ಎರಡು ವಾರಗಳಲ್ಲಿ ಪ್ರಾಥಮಿಕ ವರದಿ ಸಲ್ಲಿಸುವಂತೆ ಡಿವಿಎಸಿಗೆ ಅದು ನಿರ್ದೇಶಿಸಿದೆ.