ಉಪವಿಭಾಗಾಧಿಕಾರಿ ನ್ಯಾಯಾಲಯಗಳಲ್ಲಿ ಸುಮಾರು 80 ಸಾವಿರ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದವು. ಅವುಗಳಲ್ಲಿ 32,787 ಪ್ರಕರಣಗಳು ಐದು ವರ್ಷ ಮೀರಿದ್ದು, ನಮ್ಮ ಸರ್ಕಾರ ಆಡಳಿತಕ್ಕೆ ಬಂದ 4 ತಿಂಗಳಲ್ಲಿ 20,500 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ತಹಶೀಲ್ದಾರ್, ಉಪವಿಭಾಗಾಧಿಕಾರಿ, ಜಿಲ್ಲಾ ದಂಡಾಧಿಕಾರಿ ನ್ಯಾಯಾಲಯಗಳಲ್ಲಿ ಸಾವಿರಾರು ಪ್ರಕರಣಗಳು ಐದಾರು ವರ್ಷಗಳಾದರೂ ಇತ್ಯರ್ಥವಾಗಿರಲಿಲ್ಲ. ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ನ್ಯಾಯಾಲಯಗಳಲ್ಲಿನ ಪ್ರಕರಣಗಳ ತುರ್ತು ಇತ್ಯರ್ಥಕ್ಕಾಗಿ ವಿಶೇಷ ಅಭಿಯಾನ ಸೇರಿ ಕಂದಾಯ ಇಲಾಖೆಯಲ್ಲಿ ಜನಕೇಂದ್ರೀತ ಆಡಳಿತ ನೀಡಲು ಕ್ರಮವಹಿಸಲಾಗಿದೆ. ಕಂದಾಯ ದಾಖಲೆಗಳ ಡಿಜಿಟಲೀಕರಣ, ತಾಲ್ಲೂಕು ಕಚೇರಿಗಳಲ್ಲಿ ಇ-ಆಫೀಸ್ ಅನುಷ್ಠಾನಕ್ಕೆ ಹೆಜ್ಜೆ ಇರಿಸಲಾಗಿದೆ ಎಂದರು.
ಅರ್ಜಿ ವಿಲೇವಾರಿ ವಿಳಂಬವಾಗುವುದನ್ನು ತಪ್ಪಿಸಲು ತಾಲ್ಲೂಕು ಕಚೇರಿಗಳಲ್ಲಿ ಹಂತ-ಹಂತವಾಗಿ ಇ-ಆಫೀಸ್ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ವಿವರಿಸಿದರು.