Stray dogs 
ಸುದ್ದಿಗಳು

ಡಿಆರ್‌ಡಿಒ ಕ್ಯಾಂಪಸ್‌ನಲ್ಲಿ 21 ಬೀದಿನಾಯಿಗಳ ನಾಪತ್ತೆ: ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶಿಸಿದ ಹೈಕೋರ್ಟ್‌

ಡಿಆರ್‌ಡಿಒ ಕ್ಯಾಂಪಸ್‌ನಲ್ಲಿ ಬೀದಿ ನಾಯಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. 2026ರ ಮಾರ್ಚ್ 5 ರಂದು 21 ಬೀದಿ ನಾಯಿಗಳ ಮೇಲೆ ದೌರ್ಜನ್ಯ ನಡೆದಿದೆ ಎಂದು ಆರೋಪಿಸಲಾಗಿತ್ತು.

Bar & Bench

ಬೆಂಗಳೂರಿನ ಕಗ್ಗದಾಸಪುರದಲ್ಲಿರುವ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಎರಡನೇ ಹಂತದ ಕ್ಯಾಂಪಸ್‌ನಲ್ಲಿ ಮುಕ್ತವಾಗಿ ಸುತ್ತಾಡುತ್ತಿದ್ದ 21 ಬೀದಿ ನಾಯಿಗಳು ಈಗ ಎಲ್ಲಿವೆ ಎಂದು ಈಚೆಗೆ ಪ್ರಶ್ನಿಸಿರುವ ಕರ್ನಾಟಕ ಹೈಕೋರ್ಟ್‌, ಈ ಸಂಬಂಧ ದಾಖಲಾಗಿರುವ ದೂರಿಗೆ ಸಂಬಂಧಿಸಿದಂತೆ ಡಿಆರ್‌ಡಿಒ ಅಧಿಕಾರಿಗಳ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ನಿರ್ದೇಶಿಸಿದೆ.

ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಸಿ ವಿ ರಾಮನ್‌ ನಗರದಲ್ಲಿರುವ ಡಿಆರ್‌ಡಿಒ ಟೌನ್‌ಷಿಪ್‌ ಮೊದಲನೇ ಹಂತದ ಎಸ್ಟೇಟ್‌ ಮ್ಯಾನೇಜರ್‌ ರಾಕೇಶ್‌ ಕುಮಾರ್ ಸಾಹು ಹಾಗೂ ಡಿಆರ್‌ಡಿಒ ಸ್ವಚ್ಛತಾ ಮೇಲ್ವಿಚಾರಕ ಟಿ ಜಿ ಸುಧಾಕರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ ಕಾಮತ್ ಅವರು “ಅರ್ಜಿದಾರರ ವಿರುದ್ಧ ಬಿಎನ್‌ಎಸ್‌ ಕಾಯಿದೆಯ ಸೆಕ್ಷನ್ 240 (ಮಾಡಿದ ಅಪರಾಧಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡುವುದು), 270 (ಸಾರ್ವಜನಿಕ ಉಪದ್ರವ), 325 (ಪ್ರಾಣಿಯನ್ನು ಕೊಲ್ಲುವ ಅಥವಾ ಅಂಗವಿಕಲಗೊಳಿಸುವ ಮೂಲಕ ದುಷ್ಕೃತ್ಯ) ಮತ್ತು 61ರ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಆಪಾದನೆ ಹೊರಿಸಲಾಗಿದೆ. ಆದರೆ, ಇವೆಲ್ಲಾ ಅಸಂಬದ್ಧ” ಎಂದು ಆಕ್ಷೇಪಿಸಿದರು.

“ಡಿಆರ್‌ಡಿಒ ಕ್ಯಾಂಪಸ್‌ಗೆ ಯಾರು ಪ್ರವೇಶಿಸಿದರು? ಪ್ರಾಣಿಗಳಿಗೆ ಏನಾಯಿತು ಎಂಬುದಕ್ಕೆ ಅರ್ಜಿದಾರರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ನಾಯಿಗಳನ್ನು ಸೆರೆಹಿಡಿಯಲಾಗಿದೆ ಅಥವಾ ಅವು ಕಣ್ಮರೆಯಾಗಿವೆ ಎಂಬ ಸಂಗತಿಯಲ್ಲಿ ಡಿಆರ್‌ಡಿಒ ಸಿಬ್ಬಂದಿಯ ಯಾವುದೇ ಪಾತ್ರವಿಲ್ಲ. ಆದಾಗ್ಯೂ, ನಾಯಿಗಳನ್ನು ಯಾರು ತೆಗೆದುಕೊಂಡು ಹೋದರು ಮತ್ತು ಅವುಗಳ ಪ್ರಸ್ತುತ ಸ್ಥಿತಿ ಏನೆಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ಅಗತ್ಯ” ಎಂದು ಪ್ರತಿಪಾದಿಸಿದರು.

ಬಿಬಿಎಂಪಿ ಪರ ಹಾಜರಾಗಿದ್ದ ವಕೀಲೆ ವೈಶಾಲಿ ಹೆಗ್ಡೆ ಅರ್ಜಿದಾರರ ಪರ ವಕೀಲರ ಹೇಳಿಕೆಯನ್ನು ಅಲ್ಲಗಳೆದರು. “ಡಿಆರ್‌ಡಿಒ ಟೌನ್‌ಶಿಪ್‌ ಒಳಗೆ ಅನುಮತಿಯಿಲ್ಲದೆ ಯಾರೂ ಪ್ರವೇಶಿಸಲಾಗದು. ಸಾಕಷ್ಟು ಭದ್ರತೆಯನ್ನು ಹೊಂದಿರುವ ಈ ಕ್ಯಾಂಪಸ್‌ನಲ್ಲಿ ಯಾರು ಒಳ ಪ್ರವೇಶಿಸಿದರು? ನಾಯಿಗಳನ್ನು ಯಾರು ತೆಗೆದುಕೊಂಡು ಹೋದರು ಮತ್ತು ಅವುಗಳು ಈಗ ಎಲ್ಲಿವೆ ಎಂಬ ಪ್ರಶ್ನೆಗಳು ತನಿಖೆಗೆ ಅಗತ್ಯವಾದ ವಿಷಯ” ಎಂದು ವಾದಿಸಿದರು.

ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಎಫ್‌ಐಆರ್‌ನಲ್ಲಿ ಅಪರಾಧಗಳನ್ನು ತಪ್ಪಾಗಿ ಉಲ್ಲೇಖಿಸಿರಬಹುದು. ಆದರೆ ಡಿಆರ್‌ಡಿಒ ಟೌನ್‌ಶಿಪ್‌ನಲ್ಲಿ ಕೊನೆಯದಾಗಿ ಕಾಣಿಸಿಕೊಂಡ 21 ನಾಯಿಗಳಿಗೆ ಏನಾಯಿತು ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆಯನ್ನು ಮುಂದುವರಿಸಲು ಅನುಮತಿಸಬೇಕು” ಎಂದು ಪೀಠಕ್ಕೆ ಮನವಿ ಮಾಡಿದರು.

ವಾದ–ಪ್ರತಿವಾದ ಆಲಿಸಿದ ಪೀಠವು ತನಿಖೆಗೆ ಸಹಕರಿಸಬೇಕು ಎಂದು ಅರ್ಜಿದಾರರಿಗೆ ನಿರ್ದೇಶಿಸಿತು. ಅಂತೆಯೇ, ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು. ನಾಯಿಗಳು ಕಣ್ಮರೆಯಾಗಿರುವ ಬಗ್ಗೆ ಆಗಸ್ಟ್ 11ರೊಳಗೆ ತನಿಖಾ ವರದಿಯನ್ನು ಸಲ್ಲಿಸಿ ಎಂದು ಮಹದೇವಪುರ ಠಾಣೆಯ ಪೊಲೀಸರಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ಡಿಆರ್‌ಡಿಒ ಕ್ಯಾಂಪಸ್‌ನಲ್ಲಿ ಬೀದಿ ನಾಯಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. 2026ರ ಮಾರ್ಚ್ 5 ರಂದು 21 ಬೀದಿ ನಾಯಿಗಳ ಮೇಲೆ ದೌರ್ಜನ್ಯ ನಡೆದಿದೆ. ಅವುಗಳ ಕಾಲು ಮತ್ತು ಬಾಯಿಗಳನ್ನು ಕಟ್ಟಿ ಗೋಣಿಚೀಲದಲ್ಲಿ ಹಾಕಿ ಸಾಗಿಸಲಾಗಿದೆ. ಮೂರು ನಾಯಿಗಳನ್ನು ಸ್ಥಳೀಯರು  ರಕ್ಷಣೆ ಮಾಡಿದ್ದಾರೆ ಎಂಬ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

‘ಬೀದಿನಾಯಿಗಳು ರಾತ್ರೋರಾತ್ರಿ ನಾಪತ್ತೆಯಾಗಿವೆ’ ಎಂದು ಪ್ರಾಣಿಪ್ರಿಯ ಕಾರ್ಯಕರ್ತರು ಮತ್ತು ಸಾರ್ವಜನಿಕರು ಸಾಮಾಜಿಕ ಮಾಧ್ಯಮಗಳ ಮೂಲಕ ಕಳವಳ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರು (ಬೆಂಗಳೂರು ಪೂರ್ವ) ಮಹದೇವಪುರ ಪೊಲೀಸ್ ಠಾಣೆಯಲ್ಲಿ 2026ರ ಮಾರ್ಚ್‌ 9ರಂದು ದೂರು ನೀಡಿದ್ದರು. 

ಇದರನ್ವಯ ಪೊಲೀಸರು ಅರ್ಜಿದಾರರ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ ಸೆಕ್ಷನ್‌ 11 ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್‌) ಸೆಕ್ಷನ್ 240, 325, 270, 61(1)ರ ಅಡಿ ಎಫ್‌ಐಆರ್‌ ದಾಖಲಿಸಲಾಗಿತ್ತು. ಈ ಕುರಿತ ನ್ಯಾಯಿಕ ವಿಚಾರಣೆಯನ್ನು ಮೆಯೊ ಹಾಲ್‌ನ 29ನೇ ಹೆಚ್ಚುವರಿ ಚೀಫ್‌ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ನಡೆಸುತ್ತಿದೆ.