Delhi HC, 2G 
ಸುದ್ದಿಗಳು

2ಜಿ ಹಗರಣ: 5 ವರ್ಷ, 7 ಮಂದಿ ನ್ಯಾಯಮೂರ್ತಿಗಳು, 95 ಬಾರಿ ವಿಚಾರಣೆ ಕಂಡ ಪ್ರಕರಣ ಅಂತೂ ಮುಂದುವರಿಯುವ ಸೂಚನೆ ಕಂಡಿದೆ

ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಿಬಿಐ ಮತ್ತು ಇ ಡಿ ಸಲ್ಲಿಸಿರುವ ಮನವಿಗಳು ಇನ್ನಷ್ಟೇ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಬೇಕಾದ ಅನುಮತಿಯ ಹಂತವನ್ನು ದಾಟಬೇಕಿದೆ.

Bar & Bench

2ಜಿ ತರಂಗಾಂತರ ಹಂಚಿಕೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದ ಆದೇಶ ಪ್ರಶ್ನಿಸಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಮೇಲ್ಮನವಿಗಳು 5 ವರ್ಷ, 7 ಮಂದಿ ನ್ಯಾಯಮೂರ್ತಿಗಳು ಹಾಗೂ 95 ಬಾರಿ ವಿಚಾರಣೆಯನ್ನು ಕಂಡ ನಂತರ ಅಂತಿಮವಾಗಿ ದೆಹಲಿ ಹೈಕೋರ್ಟ್‌ನಲ್ಲಿ ಅಂತೂ ಇಂತೂ ತಾರ್ಕಿಕ ಅಂತ್ಯದೆಡೆಗೆ ಮುಂದುವರಿಯುವ ಸೂಚನೆಯನ್ನು ಕಾಣುತ್ತಿವೆ.

ಕುತೂಹಲಕಾರಿ ಸಂಗತಿ ಎಂದರೆ ಕೇಂದ್ರೀಯ ಸಂಸ್ಥೆಗಳ ಮೇಲ್ಮನವಿಗಳನ್ನು ಮಾರ್ಚ್‌ 2018ರಿಂದ ಕನಿಷ್ಠ ಏಳು ನ್ಯಾಯಮೂರ್ತಿಗಳು ವಿಚಾರಣೆ ನಡೆಸಿದ್ದು ಇನ್ನೂ ಪ್ರಾಥಮಿಕ ಅನುಮತಿ ಹಂತವನ್ನು ದಾಟಿಲ್ಲ.

ದೂರಸಂಪರ್ಕ  ಖಾತೆ ಮಾಜಿ ಸಚಿವ ಎ ರಾಜಾ, ದಯಾನಿಧಿ ಮಾರನ್, ಕನಿಮೋಳಿ ಕರುಣಾನಿಧಿ ಹಾಗೂ ಅನೇಕ ಉನ್ನತ ರಾಜಕಾರಣಿಗಳು, ಉದ್ಯಮಿಗಳು ಮತ್ತು ಅಧಿಕಾರಿಗಳನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಸಿಬಿಐ ಮತ್ತು ಇಡಿ ಪ್ರಶ್ನಿಸಿದ್ದವು.

ಏಳನೇ ನ್ಯಾಯಮೂರ್ತಿ ದಿನೇಶ್‌ ಕುಮಾರ್‌ ಶರ್ಮಾ ಅವರು ಗುರುವಾರ ಪ್ರಕರಣದ ವಿಚಾರಣೆ ನಡೆಸಿ ತನಿಖಾ ಸಂಸ್ಥೆಗಳು ಹಾಗೂ ಪ್ರಕರಣದ ಎಲ್ಲಾ ಪ್ರತಿವಾದಿಗಳು ನ್ಯಾಯಾಲಯ ಅನುಮತಿ ನೀಡುವ ವಿಚಾರವಾಗಿ ತಮ್ಮ ಲಿಖಿತ ಸಲ್ಲಿಕೆಗಳನ್ನು ನೀಡುವಂತೆ ಸೂಚಿಸಿದರು.

ಸಿಬಿಐ ವಕೀಲರು ಪ್ರಕರಣದ ಬಗ್ಗೆ ತುರ್ತು ಮತ್ತು ಶೀಘ್ರ ವಿಚಾರಣೆ ನಡೆಸುವಂತೆ ಒತ್ತಾಯಿಸಿದರು. ನ್ಯಾಯಾಲಯ ಮೇ 22 ಮತ್ತು 23ರಂದು ವಾದ  ಆಲಿಸುವುದಾಗಿ ಹೇಳಿತು.