ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌ 
ಸುದ್ದಿಗಳು

ಪತ್ನಿ ಆತ್ಮಹತ್ಯೆ ಮಾಡಿಕೊಂಡ 30 ವರ್ಷಗಳ ನಂತರ ಪತಿಯ ಖುಲಾಸೆಗೊಳಿಸಿದ ಸುಪ್ರೀಂ; 10 ನಿಮಿಷದಲ್ಲಿ ಪ್ರಕರಣದ ಇತ್ಯರ್ಥ

Bar & Bench

ಪತ್ನಿಯು 1993ರಲ್ಲಿ ಮಾಡಿಕೊಂಡಿದ್ದ ಆತ್ಮಹತ್ಯೆ ಪ್ರಕರಣವೊಂದರಲ್ಲಿ ಪ್ರಚೋದನೆ ನೀಡಿದ ಆರೋಪಕ್ಕೆ ಗುರಿಯಾಗಿದ್ದ ಪತಿಗೆ ವಿಧಿಸಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ ಈಚೆಗೆ ರದ್ದುಗೊಳಿಸಿದೆ (ನರೇಶ್ ಕುಮಾರ್ ಮತ್ತು ಹರಿಯಾಣ ಸರ್ಕಾರ ನಡುವಣ ಪ್ರಕರಣ).

ಆರೋಪಿಗಳು ಎದುರಿಸುತ್ತಿರುವ ದೀರ್ಘಕಾಲದ ವಿಚಾರಣೆ ಬಗ್ಗೆ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತು.

"ನಮ್ಮ ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯೇ ಸ್ವತಃ ಶಿಕ್ಷೆಯಾಗಿ ಪರಿಣಮಿಸಬಹುದು. ಈ ಪ್ರಕರಣದಲ್ಲಿ ನಿಜವಾಗಿಯೂ ಅದು ನಡೆದಿದೆ. ಐಪಿಸಿಯ ಸೆಕ್ಷನ್ 306ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕಾಗಿ ಮೇಲ್ಮನವಿದಾರ ಅಪರಾಧಿಯ ಶಿಕ್ಷೆಯು ಕಾನೂನಿನಲ್ಲಿ ಸಮರ್ಥನೀಯವಲ್ಲ ಎಂಬ ಅನಿವಾರ್ಯ ತೀರ್ಮಾನಕ್ಕೆ ಬರಲು ಈ ನ್ಯಾಯಾಲಯಕ್ಕೆ 10 ನಿಮಿಷಗಳಿಗಿಂತ ಹೆಚ್ಚು ಸಮಯ ಹಿಡಿಯಲಿಲ್ಲ. ಮೇಲ್ಮನವಿದಾರನ ವಿಚಾರಣೆ 1993ರ ಸುಮಾರಿಗೆ ಆರಂಭವಾಗಿದ್ದು ಅದು 2024ರವರೆಗೆ ತಲುಪಿದೆ ಅಂದರೆ ಅದು ಸುಮಾರು 30 ವರ್ಷಗಳ ಯಾತನೆ" ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

ಆರು ತಿಂಗಳ ಮಗು ಇದ್ದ ವಿವಾಹಿತೆ ಸಾವನ್ನಪ್ಪಿದ್ದಾಳೆ ಎಂಬುದು ಸೂಕ್ಷ್ಮವಾಗಿ ಪರಿಶೀಲಿಸುವಂತಹ ಅಂಶವಾಗಿದ್ದು ಯಾವುದೇ ಅಪರಾಧಕ್ಕೆ ಶಿಕ್ಷೆಯಾಗದೇ ಇರಬಾರದು. ಆದರೆ ಇದೇ ವೇಳೆ ಆರೋಪಿಯ ಅಪರಾಧವನ್ನು ಕಾನೂನಿನ ಪ್ರಕಾರ ನಿರ್ಧರಿಸಬೇಕಾಗುತ್ತದೆ ಎಂದು ಅದು ಹೇಳಿತು.

ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ 2008ರಲ್ಲಿ ಹೊರಡಿಸಿದ ಆದೇಶದ ವಿರುದ್ಧ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸುವಾಗ ಸುಪ್ರೀಂ ಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪತಿ ಮೃತ ಪತ್ನಿಗೆ ಕಿರುಕುಳ ನೀಡಿದ್ದ ಎಂಬ ಆರೋಪವಷ್ಟೇ ಆತ್ಮಹತ್ಯೆಗೆ ಪ್ರಚೋದನೆ ಎನಿಸಿಕೊಳ್ಳುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. "ಮೃತರನ್ನು ಆತ್ಮಹತ್ಯೆಗೆ ಪ್ರೇರೇಪಿಸುವಂತಹ ಸಕ್ರಿಯ ಕ್ರಿಯೆ ಅಥವಾ ನೇರ ಕ್ರಿಯೆಯ ಅಗತ್ಯವಿರುತ್ತದೆ. ವ್ಯಕ್ತಿಯ ಪ್ರಚೋದನೆ ಇತ್ತು ಎಂದು ಊಹಿಸಿದರೆ ಸಾಕಾಗುವುದಿಲ್ಲ ಬದಲಿಗೆ ಅದು ಗೋಚರಿಸುವಂತಿರಬೇಕು ಮತ್ತು ಎದ್ದು ಕಾಣಬೇಕು" ಎಂದು ನ್ಯಾಯಾಲಯ ವಿವರಿಸಿದೆ. ಪ್ರಸ್ತುತ ಪ್ರಕರಣದಲ್ಲಿ ಪತಿಯನ್ನು ಶಿಕ್ಷಿಸಲು ಬಲವಾದ ಪುರಾವೆಗಳಿಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿತು.

ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್ 113 ಎ (ವಿವಾಹಿತ ಮಹಿಳೆಯಿಂದ ಆತ್ಮಹತ್ಯೆಗೆ ಪ್ರಚೋದನೆ ನೀಡುವ ಊಹೆ) ಅಡಿಯಲ್ಲಿ ಮದುವೆಯಾದ ಏಳು ವರ್ಷಗಳಲ್ಲಿ ಮೃತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅಂಶವನ್ನು ತನ್ನಿಂತಾನೇ ಅನ್ವಯಿಸಲಾಗದು. ಬದಲಾಗಿ, ಅಂತಹ ಪ್ರಕರಣಗಳಲ್ಲಿ ಕ್ರೌರ್ಯದ ಪುರಾವೆಗಳನ್ನು ನಿರ್ಣಯಿಸುವುದು ಕಠಿಣ ಮತ್ತು ಪ್ರಯಾಸಕರ ಕೆಲಸವಾಗಿರುವುದರಿಂದ ನ್ಯಾಯಾಲಯಗಳು ಬಹಳ ಜಾಗರೂಕವಾಗಿರಬೇಕು ಎಂದು ಪೀಠ ನುಡಿಯಿತು.

ಆದ್ದರಿಂದ ತನ್ನ ಶಿಕ್ಷೆ ಪ್ರಶ್ನಿಸಿದ್ದ ಆರೋಪಿಯ ಮೇಲ್ಮನವಿಯನ್ನು ಪುರಸ್ಕರಿಸಿದ ಅದು ಆತನನ್ನು ಖುಲಾಸೆಗೊಳಿತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Naresh Kumar vs State of Haryana.pdf
Preview