S N Krishnaiah Shetty 
ಸುದ್ದಿಗಳು

ಸಾಲ ವಂಚನೆ ಪ್ರಕರಣ: ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿ ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌

ಕೃಷ್ಣಯ್ಯ ಶೆಟ್ಟಿ ನಾಲ್ಕು ವರ್ಷಗಳ ಅವಧಿಯಲ್ಲಿ ಬಡಾವಣೆ ನಿರ್ಮಾಣಕ್ಕಾಗಿ ಬ್ಯಾಂಕ್‌ನಿಂದ ಪಡೆದಿದ್ದ ಸಾಲ ₹ 7.17 ಕೋಟಿಗೂ ಹೆಚ್ಚಿದ್ದು, ಇದರಲ್ಲಿ ಅವರು ₹ 3.25 ಕೋಟಿ ಸಾಲವನ್ನು ಇನ್ನೂ ತೀರಿಸಿಲ್ಲ ಎಂದು ಸಿಬಿಐ ಪ್ರಕರಣ ದಾಖಲಿಸಿತ್ತು.

Bar & Bench

ವಿವಿಧ ಬ್ಯಾಂಕ್‌ಗಳಲ್ಲಿ ₹ 3.25 ಕೋಟಿ ಸಾಲ ಪಡೆದು ವಂಚಿಸಿರುವ ಪ್ರಕರಣದ ಆರೋಪ ಪಟ್ಟಿಯಿಂದ ತಮ್ಮ ಹೆಸರು ಕೈಬಿಡುವಂತೆ ಕೋರಿ ಮಾಲೂರು ಕ್ಷೇತ್ರದ ಮಾಜಿ ಶಾಸಕ ಎಸ್‌ ಎನ್‌ ಕೃಷ್ಣಯ್ಯ ಶೆಟ್ಟಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ತಿರಸ್ಕರಿಸಿದೆ.

ಎಸ್ ಎನ್‌ ಕೃಷ್ಣಯ್ಯ ಶೆಟ್ಟಿ ಸಲ್ಲಿಸಿದ್ದ ಕ್ರಿಮಿನಲ್‌ ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಲಾಗಿದ್ದ ಆದೇಶವನ್ನು ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ ಅವರ ನೇತೃತ್ವದ ಏಕಸದಸ್ಯ ಪೀಠವು ಪ್ರಕಟಿಸಿತು.

ಮೆಸರ್ಸ್‌ ಬಾಲಾಜಿ ಕೃಪ ಎಂಟರ್‌ಪ್ರೈಸಸ್‌ ಮಾಲೀಕತ್ವ ಹೊಂದಿದ್ದ ಕೃಷ್ಣಯ್ಯ ಶೆಟ್ಟಿ ನಾಲ್ಕು ವರ್ಷಗಳ ಅವಧಿಯಲ್ಲಿ ಬಡಾವಣೆ ನಿರ್ಮಾಣಕ್ಕಾಗಿ ಬ್ಯಾಂಕ್‌ನಿಂದ ಪಡೆದಿದ್ದ ಸಾಲ ₹ 7.17 ಕೋಟಿಗೂ ಹೆಚ್ಚಿದ್ದು, ಇದರಲ್ಲಿ ಅವರು ₹ 3.25 ಸಾಲವನ್ನು ಇನ್ನೂ ತೀರಿಸಿಲ್ಲ ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಈ ಪ್ರಕರಣ ದಾಖಲಿಸಿತ್ತು. ಹೈಕೋರ್ಟ್‌ನ ತೀರ್ಪಿನಿಂದಾಗಿ, ಕೃಷ್ಣಯ್ಯ ಶೆಟ್ಟಿ ಅವರು ಸಿಬಿಐ ವಿಚಾರಣಾ ನ್ಯಾಯಾಲಯದಲ್ಲಿ ಖುದ್ದು ಹಾಜರಾಗಿ ವಿಚಾರಣೆ ಎದುರಿಸಬೇಕಾಗಿದೆ.

ಪ್ರಕರಣದ ಹಿನ್ನೆಲೆ: ಬೆಂಗಳೂರು ಉತ್ತರ ತಾಲ್ಲೂಕಿನ ನಾಗವಾರ ಗ್ರಾಮದ ಸರ್ವೇ ನಂಬರ್‌ 98ರಲ್ಲಿ 3 ಎಕರೆಗೂ ಹೆಚ್ಚಿನ ಜಾಗದಲ್ಲಿ ಗೃಹ ನಿರ್ಮಾಣ ಯೋಜನೆಗೆ ಕೃಷ್ಣಯ್ಯ ಶೆಟ್ಟಿ ಬಾಲಾಜಿ ಎಂಟರ್‌ಪ್ರೈಸಸ್‌ ಹೆಸರಿನಲ್ಲಿ 2003ರಿಂದ 2008ರವರೆಗೆ ಚಾಲ್ತಿ ಖಾತೆಯಲ್ಲಿ ಎಸ್‌ಬಿಎಂನಿಂದ ಸಾಲ ಪಡೆದಿದ್ದಾರೆ. ಇದಕ್ಕಾಗಿ ಅವರು ಖೊಟ್ಟಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಸಿಬಿಐ ಆರೋಪಿಸಲಾಗಿತ್ತು.

ಲೇ ಔಟ್‌ ನಿರ್ಮಾಣಕ್ಕೆ ಇವರು ಬಯಾಪದಿಂದ (ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ) ಯೋಜನಾ ಮಂಜೂರಾತಿ ಪಡೆದಿಲ್ಲ. ಬೆಸ್ಕಾಂ ಮತ್ತು ಬೆಂಗಳೂರು ಜಲಮಂಡಳಿಯಿಂದ ನಿರಾಕ್ಷೇಪಣಾ ಪತ್ರವನ್ನೂ ಪಡೆದಿಲ್ಲ. ಅಂತೆಯೇ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಅಭಿವೃದ್ಧಿ ಶುಲ್ಕವನ್ನೂ ಪಾವತಿ ಮಾಡಿರುವುದಿಲ್ಲ ಎಂದು ಸಿಬಿಐ ಬಲವಾಗಿ ಆಕ್ಷೇಪಿಸಿತ್ತು. ಸಿಬಿಐ ಪರ ವಕೀಲ ಪಿ ಪ್ರಸನ್ನಕುಮಾರ್ ವಾದ ಮಂಡಿಸಿದ್ದರು.