ದೇಶದ ಹೈಕೋರ್ಟುಗಳಲ್ಲಿ, ಸೆಪ್ಟೆಂಬರ್ 1ರವರೆಗೆ 398 ಹುದ್ದೆಗಳು ಖಾಲಿ ಇವೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. ರಾಜ್ಯಸಭಾ ಸದಸ್ಯ ಡಿಎಂಕೆ ಪಕ್ಷದ ಪಿ ವಿಲ್ಸನ್ ಅವರು ಫೆಬ್ರವರಿಯಲ್ಲಿ ಕೇಳಿದ ಪ್ರಶ್ನೆಗೆ ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ ಅವರು ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊಲಿಜಿಯಂನ ಸುಮಾರು 213 ಶಿಫಾರಸುಗಳು ಬಾಕಿ ಉಳಿದಿದ್ದು ಇದಕ್ಕೆ ಇನ್ನೂ ಕೇಂದ್ರ ಸರ್ಕಾರ ಸಹಿ ಹಾಕಿಲ್ಲ ಎಂದು ಅವರು ತಿಳಿಸಿದ್ದಾರೆ.
"ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ನಿರಂತರ ಸಹಕಾರದ ಪ್ರಕ್ರಿಯೆಯಾಗಿದ್ದು, ಇದಕ್ಕೆ ವಿವಿಧ ಸಾಂವಿಧಾನಿಕ ಅಧಿಕಾರಿಗಳ ಸಮಾಲೋಚನೆ ಮತ್ತು ಅನುಮೋದನೆ ಅಗತ್ಯವಿರುತ್ತದೆ." ಎಂದು ಅವರು ಹೇಳಿದ್ದು ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸೂಕ್ತ ವ್ಯಕ್ತಿಗಳನ್ನು ಮಾತ್ರ ಹೈಕೋರ್ಟ್‌ಗೆ ನೇಮಕ ಮಾಡಿಕೊಳ್ಳುವ ಉದ್ದೇಶದಿಂದ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಕೂಡ ಕಾರ್ಯಾಂಗ ಮತ್ತು ನ್ಯಾಯಾಂಗ ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಲಿವೆ ಎಂದು ಪ್ರಸಾದ್ ಹೇಳಿದ್ದಾರೆ.
"ಅಸ್ತಿತ್ವದಲ್ಲಿರುವ ಖಾಲಿ ಹುದ್ದೆಗಳನ್ನು ತ್ವರಿತವಾಗಿ ತುಂಬಲು ಎಲ್ಲಾ ಯತ್ನ ಮಾಡಲಾಗಿದ್ದರೂ, ನಿವೃತ್ತಿ, ರಾಜೀನಾಮೆ ಅಥವಾ ನ್ಯಾಯಾಧೀಶರ ಬಡ್ತಿ ಕಾರಣದಿಂದಾಗಿ ಖಾಲಿ ಹುದ್ದೆಗಳು ಹೆಚ್ಚುತ್ತಲೇ ಇರುತ್ತವೆ. ನಿಯಮಗಳ ಪ್ರಕಾರ, ಹೈಕೋರ್ಟುಗಳಲ್ಲಿ ಹುದ್ದೆ ಖಾಲಿಯಾಗುವ ಆರು ತಿಂಗಳ ಮೊದಲೇ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ. ಆದರೆ ಈ ಗಡುವನ್ನು ವಿರಳವಾಗಿ ಪಾಲಿಸಲಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಹೈಕೋರ್ಟ್‌ಗಳಲ್ಲಿನ ಖಾಲಿ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಪ್ರಸಾದ್ ಈ ಸಂದರ್ಭದಲ್ಲಿ ಆಶ್ವಾಸನೆ ನೀಡಿದ್ದಾರೆ. ಸೆ 1ರವರೆಗೆ ಹೈಕೋರ್ಟ್‌ಗಳಿಗೆ 48 ಹೊಸ ನ್ಯಾಯಮೂರ್ತಿಗಳನ್ನು ಕೇಂದ್ರ ಸರ್ಕಾರ ನೇಮಿಸಿದೆ ಎಂದು ಅವರು ವಿವರಿಸಿದ್ದಾರೆ.