Srinivasa Babu L President, KSBC
ಸುದ್ದಿಗಳು

ವಕೀಲಿಕೆಯಲ್ಲಿ ತೊಡಗಿರುವವರು 45 ಸಾವಿರ ಮಂದಿ, 1.10 ಲಕ್ಷ ವಕೀಲರಿಗೆ ಸೌಲಭ್ಯ: ಶ್ರೀನಿವಾಸ ಬಾಬು

ನಿವೃತ್ತಿ ಹೊಂದಿದವರು, ಅಂಗವಿಕಲತೆ, ಸಾವು, ವೈದ್ಯಕೀಯ ಭತ್ಯೆ ಸೇರಿದಂತೆ ನಾನಾ ಕಾರಣಗಳಿಗಾಗಿ ಈ ವರ್ಷ ಒಟ್ಟಾರೆ 23 ಕೋಟಿ ರೂಪಾಯಿಯನ್ನು ರಾಜ್ಯ ವಕೀಲರ ಕಲ್ಯಾಣ ನಿಧಿಯಿಂದ ಹಲವು ವಕೀಲರಿಗೆ ಪಾವತಿಸಿದ್ದೇವೆ.

Siddesh M S

“ಕೋವಿಡ್‌ ಸುರಕ್ಷಾ ವಿಮೆ, ವಕೀಲರಿಗೆ ವೈದ್ಯಕೀಯ ಭತ್ಯೆ, ಸಣ್ಣ ಮೊತ್ತದ ಪರಿಹಾರ, ವೆಬಿನಾರ್‌, ಕಾರ್ಯಾಗಾರ ಹೀಗೆ ನಾನಾ ರೀತಿಯಲ್ಲಿ ಕೊರೊನಾದ ಈ ಕಾಲಘಟ್ಟದಲ್ಲಿ ವಕೀಲ ಸಮುದಾಯಕ್ಕೆ ಅನುಕೂಲವಾಗುವ ಪೂರಕ ಕೆಲಸವನ್ನು ಮಾಡಿದ್ದೇವೆ” ಎನ್ನುತ್ತಲೇ ಮಾತಿಗಿಳಿದವರು ರಾಜ್ಯ ವಕೀಲರ ಪರಿಷತ್‌ನ ನೂತನ ಅಧ್ಯಕ್ಷರಾದ ಶ್ರೀನಿವಾಸ ಬಾಬು ಎಲ್‌.

ಕಳೆದ ಒಂದು ವರ್ಷದಿಂದ ನ್ಯಾಯಾಲಯದ ಕಾರ್ಯ-ಕಲಾಪಗಳಿಗೆ ಅಡ್ಡಿಯಾಗಿರುವುದರಿಂದ ವಕೀಲರ ಬದುಕು ದುಸ್ತರವಾಗಿದೆ. ವಕೀಲರ ಪರಿಷತ್ತು ನಿರೀಕ್ಷಿತ ಪ್ರಮಾಣದಲ್ಲಿ ಸಮುದಾಯದ ಅಹವಾಲುಗಳಿಗೆ ಸ್ಪಂದಿಸಿಲ್ಲ ಎಂಬ ಅಸಮಾಧಾನ ವಕೀಲರಲ್ಲಿದೆ. ಆದರೆ, ಇದೇ ವೇಳೆ ಇಂತಹ ಗಂಭೀರ ಸಂಕಷ್ಟ ತಂದೊಡ್ಡುವ ಸವಾಲುಗಳು ಸಹ ಜಗತ್ತಿಗೇ ಅನಿರೀಕ್ಷಿತ ಎನ್ನುವುದನ್ನೂ ಅಲ್ಲಗಳೆಯಲಾಗದು. ಕೋವಿಡ್‌ ಸಂಕಷ್ಟದ ಸಮಯದಲ್ಲಿ ಎದುರಾದ ಬಿಕ್ಕಟ್ಟುಗಳು, ಪರಿಷತ್‌ನ ಇತಿಮಿತಿಯಲ್ಲಿಯೇ ಕೈಗೊಂಡ ಕಾರ್ಯಗಳು, ಭವಿಷ್ಯದ ಬಗೆಗಿನ ಆಲೋಚನೆಗಳು ಈ ಎಲ್ಲಾ ವಿಚಾರಗಳ ಕುರಿತು ಶ್ರೀನಿವಾಸ ಬಾಬು ಅವರು “ಬಾರ್‌ ಅಂಡ್‌ ಬೆಂಚ್‌”ಗೆ ನೀಡಿದ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಉದ್ಯೋಗವಿಲ್ಲದೇ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ರಾಜ್ಯ ಬಾರ್ ಕೌನ್ಸಿಲ್ (ಕೆಎಸ್‌ಬಿಸಿ) ಯಾವ ರೀತಿಯ ನೆರವು ನೀಡಿದೆ?

ಕೋವಿಡ್‌ ಸೃಷ್ಟಿಸುತ್ತಿರುವ ಅವಾಂತರದ ಕಾರಣಕ್ಕಾಗಿ ರಾಜ್ಯದಲ್ಲಿ ನೋಂದಾಯಿತ ವಕೀಲರ ಪೈಕಿ 50ರ ವಯೋಮಾನದ ವಕೀಲರಿಗೆ 74 ಲಕ್ಷ ರೂಪಾಯಿ ಪಾವತಿಸಿ ಕೋವಿಡ್‌ ಸುರಕ್ಷಾ ವಿಮೆ ಮಾಡಿಸಿದ್ದೇವೆ. 60 ವರ್ಷದ ಮೇಲ್ಪಟ್ಟವರಿಗೆ ವೈದ್ಯಕೀಯ ಭತ್ಯೆ ಎಂದು ಗರಿಷ್ಠ 50 ಸಾವಿರ ರೂಪಾಯಿ ಪಾವತಿಸಲಾಗುತ್ತಿದೆ. ಕರ್ನಾಟಕ ವಕೀಲರ ಕಲ್ಯಾಣ ಸಮಿತಿಯು ಅದನ್ನು ನಿರ್ಧರಿಸುತ್ತದೆ. ಸರ್ಕಾರ ನೀಡಿದ 5 ಕೋಟಿ ರೂಪಾಯಿ, ಭಾರತೀಯ ವಕೀಲರ ಪರಿಷತ್‌ ನೀಡಿದ ಒಂದು ಕೋಟಿ ರೂಪಾಯಿ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಕಡೆಯಿಂದ ಒಂದೂವರೆ ಕೋಟಿ ರೂಪಾಯಿ ಸೇರಿದಂತೆ ಏಳೂವರೆ ಕೋಟಿ ರೂಪಾಯಿಗಳನ್ನು ನಮ್ಮ ವಕೀಲರಿಗೆ ವಿತರಿಸಿದ್ದೇವೆ. ವೆಬಿನಾರ್‌, ಕಾನೂನು ಕಾರ್ಯಾಗಾರ ನಡೆಸುವ ಮೂಲಕ ವಕೀಲರ ಸೇವೆಯಲ್ಲಿ ತೊಡಗಿದ್ದೇವೆ. ಕೋವಿಡ್‌ ಲಸಿಕೆ ನೀಡುವಾಗ ವಕೀಲರ ಸಮುದಾಯಕ್ಕೆ ಅಗತ್ಯ ಪ್ರಾಮುಖ್ಯತೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ನಿವೃತ್ತಿ ಹೊಂದಿದವರು, ಅಂಗವೈಕಲ್ಯ, ಸಾವು, ವೈದ್ಯಕೀಯ ಭತ್ಯೆ ಸೇರಿದಂತೆ ನಾನಾ ಕಾರಣಗಳಿಗಾಗಿ ಈ ವರ್ಷ ಒಟ್ಟಾರೆ 23 ಕೋಟಿ ರೂಪಾಯಿಯನ್ನು ರಾಜ್ಯ ವಕೀಲರ ಕಲ್ಯಾಣ ನಿಧಿಯಿಂದ ಹಲವು ವಕೀಲರಿಗೆ ಪಾವತಿಸಲಾಗಿದೆ.

ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ವಕೀಲ ಸಮುದಾಯದಲ್ಲಿ ಆತಂಕ ಮನೆ ಮಾಡಿದೆ. ಸರ್ಕಾರದ ನೆರವಿಗೆ ಕಾಯದೇ ಈ ಪರಿಸ್ಥಿತಿಯನ್ನು ಎದುರಿಸಲು ಕೆಎಸ್‌ಬಿಸಿ ಏನೆಲ್ಲಾ ಯೋಜನೆ ಹಾಕಿಕೊಂಡಿದೆ?

ವಿಮೆ ಜಾರಿ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ವರ್ಚುವಲ್‌ ನ್ಯಾಯಾಲಯಕ್ಕೆ ಹೊಂದಿಕೊಳ್ಳುವಂತೆ ವಕೀಲರಿಗೆ ಸಲಹೆ ನೀಡುತ್ತಿದ್ದೇವೆ. ವಕೀಲರ ಕಲ್ಯಾಣ ನಿಧಿಗೆ ವಕೀಲರು ಪಾವತಿಸುವ ಹಣದಲ್ಲಿ ಗಣನೀಯ ಇಳಿಕೆಯಾಗಿದೆ. ನ್ಯಾಯಾಲಯದ ಕಾರ್ಯಕಲಾಪಗಳೇ ಇಲ್ಲದಿರುವುದರಿಂದ ಸ್ಟಾಂಪ್‌ ಮಾರಾಟ ನಿಂತು ಹೋಗಿದೆ. ಇದಕ್ಕಾಗಿ ಪೂರಕ ಬಜೆಟ್‌ನಲ್ಲಿ 50 ಕೋಟಿ ರೂಪಾಯಿ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಬಿಸಿಐಗೂ ನೆರವಾಗುವಂತೆ ಕೋರಿಕೆ ಸಲ್ಲಿಸಿದ್ದೇವೆ. ಎರಡೂ ಕಡೆಯಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಕೋವಿಡ್ ಸಂಕಷ್ಟದ ಈ ಸಂದರ್ಭದಲ್ಲಿ ವಕೀಲರ ಪರಿಷತ್‌ ಜವಾಬ್ದಾರಿಗಳೇನು?

1.10 ಲಕ್ಷ ವಕೀಲರನ್ನು ನೋಡಿಕೊಳ್ಳುವುದು ವಕೀಲರ ಪರಿಷತ್‌ನ ಕರ್ತವ್ಯ. ಎಲ್ಲಾ ವಕೀಲರ ಸಂಘಗಳ ಜೊತೆ ಜೂಮ್‌ ಮೂಲಕ ಸಭೆ ನಡೆಸಲಾಗಿದೆ. ಆಡಳಿತ ಮಂಡಳಿ ಸದಸ್ಯರು ನಿರಂತರವಾಗಿ ವಕೀಲರ ಸಂಘಗಳ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಮುಂದೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅನೌಪಚಾರಿಕ ಚರ್ಚೆ ನಡೆದಿದೆ.

ಕೋವಿಡ್ ಹಿನ್ನೆಲೆಯಲ್ಲಿ ಬಹುತೇಕ ಒಂದು ವರ್ಷದಿಂದ ವಕೀಲರ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ವಕೀಲಿಕೆ ಹೊರತು ಪಡಿಸಿ ಯಾವುದೇ ಉದ್ಯೋಗವನ್ನು ವಕೀಲರು ಕೈಗೊಳ್ಳುವಂತಿಲ್ಲ. ಬ್ಯಾಂಕ್ ಗಳು ಸಹ ವಕೀಲರಿಗೆ ಸಾಲ ಸೌಲಭ್ಯ ಕಲ್ಪಿಸಲು ಮುಂದಾಗುತ್ತಿಲ್ಲ. ವಕೀಲರ ಬಳಿ ಕೆಲಸ ಮಾಡುವವರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಸ್ಯೆಗೆ ಬಾರ್ ಹೇಗೆ ಸ್ಪಂದಿಸಲಿದೆ?

ನಾವು ವೃತ್ತಿಪರರಾಗಿದ್ದು, ನ್ಯಾಯಾಲಯದ ಅಧಿಕಾರಿಗಳು ಮತ್ತು ಸಲಹೆಗಾರರು ಹೌದು. ಯಾರಿಗೂ ಕಾಯಂ ಆದಾಯವಿಲ್ಲ. ಗಳಿಕೆಯಲ್ಲಿಯೇ ಒಂದು ಭಾಗವನ್ನು ಉಳಿತಾಯವನ್ನಾಗಿ ಮಾಡಿಕೊಂಡಿದ್ದೇವೆ. ವಕೀಲರುಗಳಾದ ನಾವು ನಮ್ಮದೇ ಆದ ಒಂದು ಬದುಕಿನ ಯೋಜನೆ ರೂಪಿಸಿಕೊಂಡಿರುತ್ತೇವೆ. ಜನರು ತಿಳಿದುಕೊಂಡಿರುವಂತೆ ನಾವೇನು ಅಷ್ಟು ಇತರರನ್ನು ಅವಲಂಬಿಸಿಲ್ಲ. ನಮ್ಮದೇ ಮಿತಿಯಲ್ಲಿ ಬದುಕಿನ ಯೋಜನೆ ರೂಪಿಸಿರುತ್ತೇವೆ. ಇದೆಲ್ಲದರ ಜೊತೆಗೆ ಎಲ್ಲಾ ವಕೀಲರ ಹಿತಾಸಕ್ತಿ ಕಾಯುವುದಕ್ಕೆ ಪರಿಷತ್‌ ಬದ್ಧವಾಗಿದೆ.

ರಾಜಕಾರಣಿಗಳು ಹಾಗೂ ಸರ್ಕಾರದ ಬಳಿ ಹಣ ಪಡೆದು ವಕೀಲರಿಗೆ ಹಂಚುವುದನ್ನು ಸ್ವಾಭಿಮಾನಿ ವಕೀಲರು ಒಪ್ಪುವುದಿಲ್ಲ. ಇದಕ್ಕೆ ಬದಲಾಗಿ ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಸಾಲಸೌಲಭ್ಯ ಕಲ್ಪಿಸುವ ಯತ್ನವನ್ನು ಬಾರ್ ಕೌನ್ಸಿಲ್ ಏಕೆ ಮಾಡಬಾರದು ಎಂಬ ವಾದವಿದೆಯಲ್ಲಾ?

ಬ್ಯಾಂಕ್‌ಗಳು ವ್ಯವಹಾರಸ್ಥರು. ತಮ್ಮದೇ ಆದ ರೀತಿಯಲ್ಲಿ ಬ್ಯಾಂಕ್‌ಗಳು ಕೆಲಸ ಮಾಡುತ್ತವೆ. ಅದಾಗ್ಯೂ, ವಕೀಲರಿಗೆ ಬ್ಯಾಂಕ್‌ಗಳಲ್ಲಿ ಸಾಲ-ಸೌಲಭ್ಯ ಕೊಡಿಸುವ ಸಂಬಂಧ ಭಾರತೀಯ ವಕೀಲರ ಪರಿಷತ್‌ ಭಾರತೀಯ ರಿಸರ್ವ್‌ ಬ್ಯಾಂಕ್‌ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದೆ ಎಂಬ ಮಾಹಿತಿ ಇದೆ.

ಬಜೆಟ್‌ನಲ್ಲಿ ವಕೀಲರ ಸಮುದಾಯಕ್ಕೆ ನೆರವಾಗುವ ಯೋಜನೆ ಘೋಷಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಿರಿ. ನಿಮ್ಮ ಮನವಿಗೆ ಸರ್ಕಾರದ ಸ್ಪಂದನೆಯ ಬಗ್ಗೆ ಏನು ಹೇಳುತ್ತೀರಿ?

ಎಲ್ಲಾ ಸಾಧ್ಯತೆಯೂ ಇತ್ತು. ಆದರೆ, ವಿನಾ ಕಾರಣ ಸದನದಲ್ಲಿ ಸಮಯದ ವ್ಯರ್ಥವಾಗಿದ್ದರಿಂದ ವಕೀಲರ ರಕ್ಷಣಾ ಕಾಯಿದೆ ಮತ್ತು ಬಜೆಟ್‌ನಲ್ಲಿನ ಅನುದಾನ ಹಂಚಿಕೆಯ ಕುರಿತು ಚರ್ಚೆಯಾಗಲಿಲ್ಲ, ಅದು ಆಗಬೇಕಿತ್ತು. ಬಳಿಕ ಹೆಚ್ಚುವರಿ ಬಜೆಟ್‌ನಲ್ಲಾದರೂ ನಮ್ಮ ಬೇಡಿಕೆಗಳನ್ನು ಸೇರ್ಪಡೆಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇವೆ. ನಮ್ಮ ಅನುದಾನ ಕೋರಿಕೆಯ ವಿಚಾರ ಹಣಕಾಸು ಇಲಾಖೆಯಲ್ಲಿಯೂ ಪ್ರಸ್ತಾಪವಾಗಿದೆ. ಹಣಕಾಸು ಇಲಾಖೆಯೂ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಆದರೂ, ವಕೀಲರ ಹಿತಾಸಕ್ತಿ ಕಾಯುವ ಭರವಸೆ ದೊರೆತಿದೆ. ಗೃಹ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ವೈಯಕ್ತಿಕವಾಗಿ ಭರವಸೆ ನೀಡಿದ್ದಾರೆ.

ಕೊರೊನಾ ಸಂಕಷ್ಟ ಒಂದು ಕಡೆಯಾದರೆ ರಾಜ್ಯದ ಕೆಲವೆಡೆ ವಕೀಲರ ಮೇಲೆ ಹಲ್ಲೆ ಹಾಗೂ ಕೊಲೆ ನಡೆದಿದೆ. ಈ ಘಟನೆಗಳನ್ನು ಪರಿಷತ್‌ ಹೇಗೆ ನೋಡುತ್ತಿದೆ?

ವಕೀಲರ ರಕ್ಷಣಾ ಮಸೂದೆಯು ಮಾರ್ಚ್‌ 20ರಂದು ಚರ್ಚೆಗೆ ನಿಗದಿಯಾಗಿತ್ತು. ಆದರೆ, ಸದನದಲ್ಲಿ ಕೋಲಾಹಲ ಸೃಷ್ಟಿಯಾಗಿದ್ದರಿಂದ ಅದು ಚರ್ಚೆಗೆ ಒಳಗಾಗಲಿಲ್ಲ.

ವಕೀಲರ ಪರಿಷತ್‌ನಲ್ಲಿ ನಿರ್ದಿಷ್ಟ ಮೊತ್ತದ ಠೇವಣಿ ಹಣವಿದೆ. ಕೊರೊನಾ ಹಾಗೂ ಆನಂತರ ಸಂಕಷ್ಟಗಳಿಂದ ಇಡೀ ವಕೀಲರ ಸಮುದಾಯ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಠೇವಣಿಯ ಮೊತ್ತದಲ್ಲಿನ ಅಲ್ಪಭಾಗವನ್ನು ತೆಗೆದು ಅಗತ್ಯವಿರುವವರೆಗೆ ನೀಡುವ ಮೂಲಕ ನೆರವಾಗಬೇಕು. ಪರಿಸ್ಥಿತಿ ಸುಧಾರಿಸಿದ ಬಳಿಕ ಅದನ್ನು ಬಡ್ಡಿ ಸಮೇತ ಹಿಂಪಡೆಯಬಹುದು ಎಂಬ ವಾದದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮನೆಯಲ್ಲಿ ಸೌದೆ ಖಾಲಿಯಾಗಿದೆ. ಅಡುಗೆ ಆಗಬೇಕು. ಹಾಗೆಂದು ಮನೆ ನಿರ್ಮಾಣಕ್ಕಾಗಿ ಬಳಸಲಾಗಿರುವ ತೊಲೆಯನ್ನು ಅಡುಗೆ ಮಾಡಲು ಬಳಸಬಹುದೇ? ಹಿಂದಿನ ಪದಾಧಿಕಾರಿಗಳು ಹಣ ಸೋರಿಕೆ ಮಾಡದೇ ಉಳಿಸಿದ್ದಾರೆ. ಇದರಿಂದಾಗಿಯೇ ಸಂಕಷ್ಟದ ಸಂದರ್ಭದಲ್ಲಿ ವಿಮೆ ಮಾಡಿಸಲು, ವಿವಿಧ ಭತ್ಯೆಗಳನ್ನು ನೀಡಲು, ನಿವೃತ್ತಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿದೆ. ಕೋಳಿ ಚಿನ್ನದ ಮೊಟ್ಟ ಇಡುತ್ತದೆ ಎಂದು ಅದರ ಹೊಟ್ಟೆ ಬಗೆಯಲಾಗುತ್ತದೆಯೇ? ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿ ಇಡಲಾಗಿದ್ದು, ಅದರಿಂದ ಬರುವ ಬಡ್ಡಿಯ ಹಣದಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದ್ದೇವೆ. ರಾಜ್ಯದಲ್ಲಿ ಒಟ್ಟಾರೆ 1.10 ಲಕ್ಷ ನೋಂದಾಯಿತ ವಕೀಲರಿದ್ದಾರೆ. ಸಕ್ರಿಯವಾಗಿ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರು ಸುಮಾರು 45 ಸಾವಿರ ವಕೀಲರು ಮಾತ್ರ. ಉಳಿದವರು ಸಕ್ರಿಯವಾಗಿ ವೃತ್ತಿ ಮಾಡುತ್ತಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಸರ್ಟಿಫಿಕೇಟ್‌ ಆಫ್‌ ಪ್ರಾಕ್ಟೀಸಿಂಗ್‌ಗೆ (ಸಿಒಪಿ) ಸಂಬಂಧಿಸಿದ ಪ್ರಕರಣ ಬಾಕಿ ಇದೆ. ಐದು ವರ್ಷಕ್ಕೊಮ್ಮೆ ವಕೀಲರು ತಮ್ಮ ಸನ್ನದನ್ನು ಪುನರ್‌ ನವೀಕರಿಸಬೇಕು ಎಂಬುದು ನಿಯಮ. ಈಗ ನಾವು 45 ಸಾವಿರ ವಕೀಲರು 1.10 ಲಕ್ಷ ವಕೀಲರಿಗೆ ಸೌಲಭ್ಯ ಕಲ್ಪಿಸುತ್ತಿದ್ದೇವೆ.