ರಾಜ್ಯದಲ್ಲಿರುವ 48 ಹಿರಿಯ ಶ್ರೇಣಿಯ ದೇವಾಲಯಗಳು ಹುಂಡಿ ತೆರೆಯುವುದನ್ನು ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲು ನಿರ್ದೇಶಿಸಲಾಗಿದೆ ಎಂದು ಈಚೆಗೆ ತಮಿಳುನಾಡು ಸರ್ಕಾರವು ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದೆ.
ಹುಂಡಿಯಲ್ಲಿ ಹಾಕಿದ ಹಣ ಮತ್ತು ಚಿನ್ನ ಕದಿಯುವುದನ್ನು ಉಲ್ಲೇಖಿಸಿ ರಂಗರಾಜನ್ ನರಸಿಂಹನ್ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎಸ್ ವಿ ಗಂಗಾಪುರ್‌ವಾಲಾ ಮತ್ತು ನ್ಯಾಯಮೂರ್ತಿ ಭರತ ಚಕ್ರವರ್ತಿ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ದೇವಸ್ಥಾನದ ನಿಧಿ ನಿರ್ವಹಣೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ವಿವರಣೆ ನೀಡಿದೆ. ಅಳವಡಿಕೆ, ರಕ್ಷಣೆ ಮತ್ತು ಹುಂಡಿಯ ನಿಯಮಗಳು 1975ರ ನಿಬಂಧನೆಯ ಪ್ರಕಾರ ಹುಂಡಿ ತೆರೆಯುವುದನ್ನು ಯೂಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮ್ ಮಾಡುವಂತೆ 48 ಹಿರಿಯ ಶ್ರೇಣಿಯ ದೇವಾಲಯಗಳಿಗೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ ಎಂದು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ನ್ಯಾಯಾಲಯಕ್ಕೆ ತಿಳಿಸಿದೆ.
ಹುಂಡಿಯನ್ನು ಒಮ್ಮೆ ತೆರೆದ ಮೇಲೆ ಅಲ್ಲಿರುವ ಹಣ, ಆಭರಣ, ಇತರೆ ವಸ್ತುಗಳ ಪಟ್ಟಿಯನ್ನು ದೇವಸ್ಥಾನ ಆಡಳಿತ ಸಿದ್ಧಪಡಿಸಬೇಕು. ಸಾಮಾನ್ಯ ಜನರ ಸಮ್ಮುಖದಲ್ಲಿ ಕೆಲವೊಮ್ಮೆ ಹುಂಡಿ ತೆರೆಯಲಾಗುತ್ತದೆ. ದೇವಸ್ಥಾನದ ರಿಜಿಸ್ಟ್ರಿನಲ್ಲಿ ಹುಂಡಿಯಲ್ಲಿ ಏನೆಲ್ಲಾ ಇತ್ತು ಎಂಬುದರ ಮಾಹಿತಿಯ ಪಟ್ಟಿಗೆ ಇಬ್ಬರು ಸಾರ್ವಜನಿಕರ ಸಹಿ ಸಹ ಇರುತ್ತದೆ ಎಂದು ತಿಳಿಸಲಾಗಿದೆ.
ರಾಜ್ಯ ಸರ್ಕಾರದ ವಾದವನ್ನು ದಾಖಲಿಸಿಕೊಂಡಿರುವ ನ್ಯಾಯಾಲಯವು ವಿಚಾರಣೆಯನ್ನು 2024ರ ಜನವರಿ 11ಕ್ಕೆ ಮುಂದೂಡಿದೆ.