ಮಣಿಪುರ ಹಿಂಸಾಚಾರ ಮತ್ತು ಸುಪ್ರೀಂ ಕೋರ್ಟ್
ಮಣಿಪುರ ಹಿಂಸಾಚಾರ ಮತ್ತು ಸುಪ್ರೀಂ ಕೋರ್ಟ್ 
ಸುದ್ದಿಗಳು

ಹಿಂಸಾಚಾರಕ್ಕೆ ತುತ್ತಾದ ಮಹಿಳೆಯರ ನಿಧಿಗೆ ₹5 ಕೋಟಿ; ಆಧಾರ್ ಮರು ವಿತರಣೆ: ಸುಪ್ರೀಂಗೆ ಮಣಿಪುರ ಸರ್ಕಾರ ಮಾಹಿತಿ

Bar & Bench

ಮಣಿಪುರ ಜನಾಂಗೀಯ ಸಂಘರ್ಷಕ್ಕೆ ಬಲಿಯಾದ ಮಹಿಳೆಯರಿಗೆ ಪರಿಹಾರ ನೀಡಲು ರಚಿಸಲಾದ ಮಹಿಳಾ ಸಂತ್ರಸ್ತರ ಪರಿಹಾರ ನಿಧಿಗೆ ₹ 5 ಕೋಟಿಗಳನ್ನು ವಿತರಿಸಿರುವುದಾಗಿ ಮಣಿಪುರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.

ಹಿಂಸಾಚಾರಕ್ಕೆ ತುತ್ತಾದ ಮಹಿಳೆಯರಿಗೆ ಒದಗಿಸಲಾದ ಪರಿಹಾರ, ಮರು ನೀಡಲಾದ ಆಧಾರ್ ಕಾರ್ಡ್ ಗಳ ಸಂಖ್ಯೆ, ಸುಗಮ ನ್ಯಾಯದಾನ ಮತ್ತು ಇತರ ಶೀರ್ಷಿಕೆಗಳನ್ನು ಸೂಚಿಸುವ ಹೊಸ ಸ್ಥಿತಿಗತಿ ವರದಿ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಈ ಹಿಂದಿನ ವಿಚಾರಣೆ ವೇಳೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.

ಅದರಂತೆ ನವೆಂಬರ್ 19ರಂದು ಸಲ್ಲಿಸಲಾದ ಸ್ಥಿತಿಗತಿ ವರದಿಯಲ್ಲಿ "ಲೈಂಗಿಕ ದೌರ್ಜನ್ಯ / ಇತರ ಅಪರಾಧಗಳ ಸಂತ್ರಸ್ತ ಮಹಿಳೆಯರಿಗೆ ಮಣಿಪುರ ಪರಿಹಾರ ಯೋಜನೆ, 2023 ರ ಅಡಿಯಲ್ಲಿ ಪರಿಹಾರ ವಿತರಣೆಗಾಗಿ ಮಹಿಳಾ ಸಂತ್ರಸ್ತರ ಪರಿಹಾರ ನಿಧಿಯನ್ನು ಈಗಾಗಲೇ ರಚಿಸಲಾಗಿದೆ. ಮಣಿಪುರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ / ಜಿಲ್ಲಾಧಿಕಾರಿಗಳು / ಸಕ್ಷಮ ಪ್ರಾಧಿಕಾರಗಳಿಂದ ಪರಿಹಾರವನ್ನು ಬಿಡುಗಡೆ ಮಾಡಲು ಎಂಎಎಸ್ಎಲ್ಎಸ್ಎ ಸದಸ್ಯ ಕಾರ್ಯದರ್ಶಿ ನಿರ್ವಹಿಸುವ ಬ್ಯಾಂಕ್ ಖಾತೆಗೆ 5 ಕೋಟಿ ರೂ.ಗಳನ್ನು ಜಮಾ ಮಾಡಲಾಗಿದೆ" ಎಂದು ತಿಳಿಸಲಾಗಿದೆ

ಅರ್ಜಿದಾರರರಲ್ಲೊಬ್ಬರ ಪರ ಹಾಜರಾದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್‌, ನಿರ್ದಿಷ್ಟ ಸಮುದಾಯದ ವಕೀಲರನ್ನು ಹೈಕೋರ್ಟ್ ಮುಂದೆ ಖುದ್ದಾಗಿ ಹಾಜರಾಗದಂತೆ ತಡೆಯಲಾಗುತ್ತಿದೆ ಎಂದು ದೂರಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, "ವರ್ಚುವಲ್ ವಿಧಾನದ ಮೂಲಕ ಹೈಕೋರ್ಟ್ ಮುಂದೆ ಹಾಜರಾಗಲು ಅನುಕೂಲವಾಗುವಂತೆ 16 ಸ್ಥಳಗಳನ್ನು ಇ-ಸೇವಾ ಕೇಂದ್ರಗಳಾಗಿ ಗುರುತಿಸಲು ಅಧಿಸೂಚನೆ ಹೊರಡಿಸಲಾಗಿದೆ ಎಂದು ಸರ್ಕಾರ ಹೇಳಿದೆ. "ನ್ಯಾಯಾಲಯದ ಕಲಾಪಗಳಲ್ಲಿ ಪಾಲ್ಗೊಳ್ಳದಂತೆ ಯಾವುದೇ ವಕೀಲರನ್ನು ತಡೆಹಿಡಿಯುತ್ತಿಲ್ಲ" ಎಂದು ಹೈಕೋರ್ಟ್ ವಕೀಲರ ಸಂಘ ಹೇಳಿಕೆ ನೀಡಿರುವುದಾಗಿ ಅದು ತಿಳಿಸಿದೆ.

ಕಳೆದ ವಿಚಾರಣೆ ವೇಳೆ ರಾಜ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿದವರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಸಿಜೆಐ ಚಂದ್ರಚೂಡ್ ಅದನ್ನು ಪರಿಶೀಲಿಸುವುದು ಮುಖ್ಯ ಎಂದಿದ್ದರು. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಲ್ಲಿ (ಯುಐಡಿಎಐ) ದಾಖಲೆಗಳನ್ನು ಹೊಂದಿರುವ ಎಲ್ಲಾ ನಿರಾಶ್ರಿತರಿಗೆ ಆಧಾರ್‌ ಕಾರ್ಡ್‌ಗಳನ್ನು ಒದಗಿಸಬೇಕು ಎಂದು ಪೀಠ ನಿರ್ದೇಶಿಸಿತ್ತು,

ವಿಶೇಷ ಆಧಾರ್ ಶಿಬಿರಗಳನ್ನು ತೆರೆಯುವ ಮೂಲಕ ಪರಿಹಾರ ಶಿಬಿರಗಳಲ್ಲಿ ವಾಸಿಸುವ ಜನರಿಗೆ ಇದುವರೆಗೆ 3,928 ಆಧಾರ್ ಕಾರ್ಡ್‌ಗಳನ್ನು ಮರು ಹಂಚಿಕೆ ಮಾಡಲಾಗಿದೆ ಎಂದು ಮಣಿಪುರ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.