BBMP and Karnataka HC 
ಸುದ್ದಿಗಳು

ಗೋಪಾಲನ್‌ ಮಾಲ್‌ ಆಸ್ತಿ ತೆರಿಗೆ ಪ್ರಕರಣ: ವ್ಯತ್ಯಯದ ಶೇ.50ರಷ್ಟು ತೆರಿಗೆ ಪಾವತಿಸಲು ಒತ್ತಾಯಿಸಬಾರದು ಎಂದ ಹೈಕೋರ್ಟ್‌

ಹಲವು ಪ್ರಕರಣಗಳಲ್ಲಿ ಬಿಬಿಎಂಪಿ ತಾನು ಹೊರಡಿಸುವ ಮಾರ್ಗಸೂಚಿ (ಎಸ್‌ಒಪಿ) ಅನ್ವಯ ಶೇ.50 ರಷ್ಟು ತೆರಿಗೆ ಮೊತ್ತಕ್ಕೆ ಮಾಲೀಕರಿಗೆ ಬಲವಂತಪಡಿಸುತ್ತಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ ಎಂದು ಪೀಠ ಹೇಳಿದೆ.

Bar & Bench

ನಿಗದಿಗಿಂತ ಕಡಿಮೆ ತೆರಿಗೆ ಅಂದಾಜು ಮಾಡಲಾಗಿದೆ ಎಂದು ವ್ಯತ್ಯಯದ ಶೇ.50ರಷ್ಟು ತೆರಿಗೆ ಪಾವತಿಸಲು ಆಸ್ತಿದಾರರನ್ನು ಬಲವಂತಪಡಿಸುವಂತಿಲ್ಲ ಎಂದು ಗೋಪಾಲನ್‌ ಮಾಲ್ ಆಸ್ತಿ ತೆರಿಗೆ ಕುರಿತಾದ ಪ್ರಕರಣದಲ್ಲಿ ಬಿಬಿಎಂಪಿಗೆ ಹೈಕೋರ್ಟ್‌ ಆದೇಶಿಸಿದೆ.

ಬೆಂಗಳೂರಿನ ಗೋಪಾಲನ್ ಮಾಲ್ ವಿರುದ್ಧ ಆಸ್ತಿ ತೆರಿಗೆ ಪಾವತಿ ಸಂಬಂಧ ಬಿಬಿಎಂಪಿ ನೀಡಿರುವ ಹಲವು ನೋಟಿಸ್‌ಗಳ ಕುರಿತಂತೆ ವಿಚಾರಣೆ ನಡೆಸಿ ನ್ಯಾಯಮೂರ್ತಿ ಸುನಿಲ್ ದತ್‌ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿದೆ. ಬಿಬಿಎಂಪಿ ಮಾಲ್‌ಗೆ ನೀಡಿದ್ದ ಹಲವು ತೆರಿಗೆ ನೋಟಿಸ್‌ಗಳಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯವು “ಹಲವು ಪ್ರಕರಣಗಳಲ್ಲಿ ಬಿಬಿಎಂಪಿ ತಾನು ಹೊರಡಿಸುವ ಮಾರ್ಗಸೂಚಿ (ಎಸ್‌ಒಪಿ) ಅನ್ವಯ ಶೇ.50 ರಷ್ಟು ತೆರಿಗೆ ಮೊತ್ತಕ್ಕೆ ಮಾಲೀಕರಿಗೆ ಬಲವಂತಪಡಿಸುತ್ತಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ. ಮಾಲೀಕರು ಆ ತೆರಿಗೆ ಬೇಡಿಕೆ ನೋಟಿಸ್ ಗೆ ಉತ್ತರ ನೀಡಲಿಲ್ಲ ಎಂದರೆ ಆಗ ಶೇ.50 ರಷ್ಟು ಪಾವತಿಗೆ ಒತ್ತಾಯ ಹೇರಬಹುದು. ಆದರೆ ಅದಕ್ಕೂ ಮುನ್ನವೇ ಬಲವಂತಪಡಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.

2008-09ರಿಂದ 2022-23ರ ಅವಧಿಗೆ ಸಂಬಂಧಿಸಿ ಬಿಬಿಎಂಪಿ 2023ರ ಅಕ್ಟೋಬರ್‌ 3ರಂದು ನೀಡಿದ್ದ ವ್ಯತ್ಯಯದ 19.7 ಕೋಟಿ ರೂಪಾಯಿ ಆಸ್ತಿ ತೆರಿಗೆ ಪಾವತಿಸುವಂತೆ ನೀಡಿದ್ದ ನೋಟಿಸ್ ಅನ್ನು ಗೋಪಾಲನ್ ಮಾಲ್ ಪ್ರಶ್ನಿಸಿತ್ತು. ಜೊತೆಗೆ 2024ರ ಜನವರಿ 22ರಂದು ಮತ್ತೊಂದು ನೋಟಿಸ್ ನೀಡಿದ್ದ ಪಾಲಿಕೆ ಅದೇ ಅವಧಿಗೆ 29.5 ಕೋಟಿ ರೂಪಾಯಿ ತೆರಿಗೆ ಪಾವತಿಸಲು ಸೂಚಿಸಿತ್ತು. ಅದನ್ನೂ ಸಹ ಅರ್ಜಿದಾರರು ಪ್ರಶ್ನಿಸಿದ್ದರು.

ಅರ್ಜಿದಾರರ ಪರ ವಕೀಲರು ವಾದಿಸಿ, ವಲಯ ಜಂಟಿ ಆಯುಕ್ತರು 2015ರ ಮಾರ್ಚ್‌ 20ರಂದು ಸ್ಥಳ ಪರಿಶೀಲನೆ ನಡೆಸಿ ಆಸ್ತಿ ತೆರಿಗೆಯನ್ನು ನಿಗದಿಪಡಿಸಿದ್ದರು. ಅದರಂತೆ ತೆರಿಗೆ ಪಾವತಿಸಲಾಗುತ್ತಿತ್ತು. ಆಸ್ತಿ ತೆರಿಗೆಯನ್ನು ಮರು ನಿಗದಿ ಮಾಡುವ ಅವಶ್ಯಕತೆ ಇರಲಿಲ್ಲ. ಆದರೂ ಮರು ನಿಗದಿ ಮಾಡಿ ವ್ಯತ್ಯಯವಾಗಿದೆ ಎನ್ನಲಾದ ತೆರಿಗೆ ಮೊತ್ತಕ್ಕೆ ಬೇಡಿಕೆ ಇಟ್ಟಿರುವುದು ಕಾನೂನು ಬಾಹಿರ. ಬಿಬಿಎಂಪಿ ತೆರಿಗೆ ಪಾವತಿಸಿದ ಐದು ವರ್ಷಗಳ ನಂತರ ಮತ್ತೆ ಮರು ನಿಗದಿಗೆ ಅವಕಾಶವಿಲ್ಲ ಎಂದು ಪೀಠಕ್ಕೆ ತಿಳಿಸಿದ್ದರು.

ತೆರಿಗೆ ನೋಟಿಸ್‌ಗೆ ಉತ್ತರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯಿದೆ ಸೆಕ್ಷನ್ 144 (15) (ಇ) ಅಡಿ 30 ದಿನ ಸಮಯ ಕೇಳಿದ್ದರೂ ಮತ್ತೆ ನೋಟಿಸ್ ನೀಡಲಾಗಿದೆ. ಹೀಗಾಗಿ ತಡೆ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದ್ದರು.