Vakeelara Bhavana, AAB 
ಸುದ್ದಿಗಳು

ನ್ಯಾಯಮೂರ್ತಿಗಳಿಗೆ ಪ್ರಾಣ ಬೆದರಿಕೆ: ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಳ್ಳಲು ಕೋರಿ ಸಿಜೆಐಗೆ ಪತ್ರ ಬರೆದ ಎಎಬಿ

Bar & Bench

ಇತ್ತೀಚೆಗೆ ರಾಜ್ಯ ಹೈಕೋರ್ಟ್‌ನ 6 ಮಂದಿ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ಸಾರ್ವಜನಿಕರು ಮತ್ತು ವಕೀಲರ ವಲಯದಲ್ಲಿ ಆಘಾತಕ್ಕೆ ಕಾರಣವಾಗಿದ್ದು, ಈ ಸಂಬಂಧ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿಕೊಂಡು ವಿಚಾರಣೆ ನಡೆಸಬೇಕು ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಬೆಂಗಳೂರು ವಕೀಲರ ಸಂಘ ಪತ್ರ ಬರೆದಿದೆ.

ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ದಿಟ್ಟ ಮತ್ತು ನಿರ್ಭೀತ ನ್ಯಾಯಪ್ರದಾನತೆ ಬಹುಮುಖ್ಯ. ಅದರೆ, ಆರು ಮಂದಿ ನ್ಯಾಯಮೂರ್ತಿಗಳ ಪ್ರಾಣಕ್ಕೆ ಬೆದರಿಕೆಯೊಡ್ಡಲಾಗಿದೆ. ಅಲ್ಲದೆ, ಬೃಹತ್‌ ಪ್ರಮಾಣದ ಹಣಕ್ಕೆ ಬೇಡಿಕೆ ಇರಿಸಿ ವಾಟ್ಸಪ್‌ ಸಂದೇಶವನ್ನು ಕಳುಹಿಸಲಾಗಿದೆ ಎನ್ನಲಾಗಿದೆ. ಇದು ಸಾರ್ವಜನಿಕರು ಹಾಗೂ ವಕೀಲ ಸಮುದಾಯದಲ್ಲಿ ಭೀತಿಯ ಅಲೆಗಳನ್ನೆಬ್ಬಿಸಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದಲ್ಲಿ ಹೊರಗಿನ ಶಕ್ತಿಗಳು ನ್ಯಾಯಾಂಗ ವಲಯದಲ್ಲಿ ಹಸ್ತಕ್ಷೇಪ ಮಾಡುವುದಕ್ಕೆ ಅವಕಾಶ ನೀಡಿದಂತಾಗಲಿದೆ ಎಂದು ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.

ಅಲ್ಲದೆ, ಪ್ರಸ್ತುತ ಸಂದರ್ಭದಲ್ಲಿ ನ್ಯಾಯಮೂರ್ತಿಗಳಿಗೆ ಒದಗಿಸಿರುವ ರಕ್ಷಣೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪುನರ್ ಪರಿಶೀಲಿಸುವ ಅಗತ್ಯತೆ ಎದುರಾಗಿದೆ. ರಕ್ಷಣೆಯ ವಿಚಾರದಲ್ಲಿ ಆಧುನಿಕ ಯುಗದ ಸವಾಲುಗಳನ್ನು ಎದುರಿಸಲಾಗುತ್ತಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕಾಗಿದೆ ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.

ನ್ಯಾಯಾಂಗ ಕ್ಷೇತ್ರದ ಮೇಲೆ ಈ ರೀತಿಯಲ್ಲಿ ಬೆದರಿಕೆ ಹಾಕಿದಲ್ಲಿ ಜನತೆ ನ್ಯಾಯಾಂಗದ ಮೇಲೆ ವಿಶ್ವಾಸ ಕಳೆದುಕೊಳ್ಳುವಂತಾಗಲಿದೆ. ಆದ್ದರಿಂದ ಅಪರಾಧಿಗಳನ್ನು ವಿಚಾರಣೆಗೊಳ್ಳಪಡಿಸಬೇಕಾದ ಅಗತ್ಯವಿದ್ದು, ನ್ಯಾಯಾಧೀಶರಿಗೆ ರಕ್ಷಣೆ ಖಚಿತಪಡಿಸಬೇಕಿದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿಕೊಂಡು ವಿಚಾರಣೆ ನಡೆಸಬೇಕು. ಅಪರಾಧಿಗಳನ್ನು ಶಿಕ್ಷಿಸಿ, ನ್ಯಾಯಮೂರ್ತಿಗಳ ರಕ್ಷಣೆ ಖಚಿತಪಡಿಸಬೇಕು ಎಂದು ಪತ್ರದಲ್ಲಿ ಕೋರಲಾಗಿದೆ.