“ರಾಜಧಾನಿಯಲ್ಲಿ ಸದ್ಯ ಅಸ್ತಿತ್ವದಲ್ಲಿರುವ 185 ಕೆರೆಗಳ ನಿರ್ವಹಣೆಗೆ ವರ್ಷಕ್ಕೆ ₹650 ಕೋಟಿ ಬೇಕು. ಅದಕ್ಕಾಗಿ ಖಾಸಗಿ ಸಂಸ್ಥೆಗಳಿಂದ ನೆರವು ಪಡೆದುಕೊಳ್ಳಲಾಗುತ್ತಿದೆಯೇ ಹೊರತು ಅವುಗಳನ್ನು ಖಾಸಗಿಯವರ ತೆಕ್ಕೆಗೇ ಒಪ್ಪಿಸುವುದಿಲ್ಲ” ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕರ್ನಾಟಕ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.
ಬೆಂಗಳೂರಿನ ಕೆರೆಗಳು ಮತ್ತು ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಿ ಅವುಗಳನ್ನು ರಕ್ಷಿಸಲು ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡಬೇಕು ಎಂದು ಕೋರಿ 2014ರಲ್ಲಿ ಸಲ್ಲಿಸಲಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಹಿರಿಯ ವಕೀಲೆ ಜಯ್ನಾ ಕೊಠಾರಿ ಅವರು “ಬೆಂಗಳೂರಿನ ಎಲ್ಲಾ ಕೆರೆಗಳ ನಿರ್ವಹಣೆ ಹಾಗೂ ಅಭಿವೃದ್ಧಿ ಚಟುವಟಿಕೆಗಳನ್ನು ಖಾಸಗಿ ಸಂಸ್ಥೆಗಳ ಮಡಿಲಿಗೆ ಹಾಕಲಾಗಿದೆ. ಈ ನಿಟ್ಟಿನಲ್ಲಿ ಒಡಂಬಡಿಕೆಯನ್ನೂ ಮಾಡಿಕೊಳ್ಳಲಾಗಿದೆ. ಈ ಕ್ರಮ ಆತಂಕಕಾರಿಯಾಗಿದೆ. ಅರ್ಜಿದಾರರಿಗೆ ಇದರಲ್ಲಿ ಯಾವುದೇ ಸ್ವಹಿತಾಸಕ್ತಿ ಇಲ್ಲ. ಕೇವಲ ಸಾರ್ವಜನಿಕ ಸ್ವತ್ತಿನ ಉಳಿವಿನ ಕಾಳಜಿ ಮಾತ್ರವೇ ಅಡಗಿದೆ” ಎಂದು ಪ್ರತಿಪಾದಿಸಿದರು.
“ಕೆರೆಗಳನ್ನು ಉಳಿಸಬೇಕು, ರಕ್ಷಿಸಬೇಕು ಎನ್ನುವುದೇ ನಮ್ಮ ಉದ್ದೇಶ. ಹಣ ಖರ್ಚಾಗುತ್ತದೆ ಎಂದು ಕೆರೆಗಳನ್ನು ಸಂಪೂರ್ಣವಾಗಿ ಖಾಸಗಿಯವರ ಸುಪರ್ದಿಗೆ ನೀಡುವುದು ಅಪಾಯಕಾರಿ. ಹೀಗಾದರೆ ಬಿಬಿಎಂಪಿ ಮತ್ತು ಸರ್ಕಾರದ ಜವಾಬ್ದಾರಿಯಾದರೂ ಏನು” ಎಂದು ಪ್ರಶ್ನಿಸಿದರು.
“ನಿರ್ವಹಣೆಗೆ ಖಾಸಗಿ ಸಂಸ್ಥೆಗಳಿಂದ ಹಣ ಪಡೆದುಕೊಳ್ಳಲಿ, ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ, ನಿರ್ವಹಣೆಯನ್ನೆಲ್ಲಾ ಖಾಸಗಿಯವರಿಗೇ ನೀಡಿದರೆ ಅದು ಮಾರಕವಾದ ಕ್ರಮವಾಗುತ್ತದೆ. ಬಹಳ ಮುಖ್ಯವಾಗಿ, ಸರ್ಕಾರದ ಈ ನೀತಿ 2020ರ ಹೈಕೋರ್ಟ್ ಆದೇಶಕ್ಕೆ ಸಂಪೂರ್ಣ ವಿರುದ್ಧವಾಗಿದೆ” ಎಂದು ಬಲವಾಗಿ ಆಕ್ಷೇಪಿಸಿದರು.
ಅರ್ಜಿದಾರರ ವಾದವನ್ನು ಪ್ರಬಲವಾಗಿ ಅಲ್ಲಗಳೆದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ “ಅರ್ಜಿದಾರರು ತಪ್ಪು ಗ್ರಹಿಕೆಯಿಂದ ವಾದ ಮಂಡಿಸುತ್ತಿದ್ದಾರೆ. ವಾಸ್ತವದಲ್ಲಿ ಕೆರೆಗಳನ್ನು ಖಾಸಗಿಯವರಿಗೆ ನೀಡುವ ಯಾವುದೇ ಉದ್ದೇಶ ಸರ್ಕಾರದ ಮನದಲ್ಲಿ ಇಲ್ಲ” ಎಂದರು.
ಅರ್ಜಿದಾರರ ಪರ ಮತ್ತೊಬ್ಬ ಹಿರಿಯ ವಕೀಲ ಸಿ ಕೆ ನಂದಕುಮಾರ್ ಮತ್ತು ಜಿ ಆರ್ ಮೋಹನ್ ಕೂಡಾ ವಾದಿಸಿದರು. ಬಿಬಿಎಂಪಿ ಪರ ವಕೀಲ ಎಚ್ ಎಸ್ ಪ್ರಶಾಂತ್ ಹಾಜರಿದ್ದರು.