ಧರ್ಮಸ್ಥಳದಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಅಸಹಜ ರೀತಿಯಲ್ಲಿ ನಾಪತ್ತೆಯಾಗುವುದು ಮತ್ತು ಸಾವನ್ನಪ್ಪಿರುವುದು ಗಂಭೀರ ವಿಚಾರವಾಗಿದೆ ಎಂದು ಸೌಜನ್ಯಾ ತಾಯಿ ಪ್ರತಿನಿಧಿಸಿರುವ ಹಿರಿಯ ವಕೀಲೆ ವೃಂದಾ ಗ್ರೋವರ್ ಮಂಗಳವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದರು.
ಧರ್ಮಸ್ಥಳದಲ್ಲಿ 2012ರಲ್ಲಿ ಸಾಮೂಹಿಕ ಅತ್ಯಾಚಾರಕ್ಕೀಡಾಗಿ ಕೊಲೆಯಾದ ವಿದ್ಯಾರ್ಥಿನಿ ಸೌಜನ್ಯಾ ತಾಯಿ ಕುಸುಮವತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲೆ ವೃಂದಾ ಗ್ರೋವರ್ ಅವರು “ಅಪರಾಧ ಪ್ರಕ್ರಿಯೆ ಸಂಹಿತಾ ಸೆಕ್ಷನ್ 174 ಮತ್ತು ಕರ್ನಾಟಕ (ಅಸ್ವಾಭಾವಿಕ ಮರಣಗಳ ತನಿಖೆ ಮತ್ತು ವಿಚಾರಣೆಗಳ ನಡವಳಿಕೆ) ನಿಯಮ 2004ರಡಿ ಕಡ್ಡಾಯವಾಗಿ ಕಾನೂನು ಪ್ರಕ್ರಿಯೆ ಪಾಲಿಸದೇ ಶವ ಸಂಸ್ಕಾರ ಮಾಡಲಾಗಿದೆ” ಎಂದರು.
“74 ಮಂದಿ ಅಸಹಜವಾಗಿ ಸಾವನ್ನಪ್ಪಿದ ಪಟ್ಟಿಯನ್ನು ಅರ್ಜಿದಾರೆ ಸಲ್ಲಿಸಿದ್ದಾರೆ. ಅಸಹಜ ರೀತಿಯಲ್ಲಿ ಸಾವನ್ನಪ್ಪಿದವರನ್ನು ಅಂದೇ ಅಂತ್ಯ ಸಂಸ್ಕಾರ ಮಾಡಲಾಗಿದೆ. ಅಂತ್ಯ ಸಂಸ್ಕಾರ ಮಾಡಲ್ಪಟ್ಟ ಸ್ಥಳಗಳನ್ನು ದಾಖಲಿಸಲಾಗಿಲ್ಲ. ಸಂತ್ರಸ್ತರನ್ನು ಒಂದೇ ರೀತಿಯಲ್ಲಿ, ಅವರ ಹೆಸರು, ವಯಸ್ಸನ್ನು ಉಲ್ಲೇಖಿಸದೇ ಅನಾಮಿಕರು ಎಂದು ಉಲ್ಲೇಖಿಸಲಾಗಿದೆ. ಒಂದೊಮ್ಮೆ ಸಂತ್ರಸ್ತ ವ್ಯಕ್ತಿಯು ಪ್ರವಾಸಿ ಸ್ಥಳಗಳಲ್ಲಿ ಉಳಿದುಕೊಂಡಿದ್ದರೆ ಅವರ ವಿಳಾಸ, ವಯಸ್ಸು, ನೋಂದಣಿ ದಾಖಲೆಗಳು ಇರುತ್ತವೆ. ಗೆಸ್ಟ್ ಹೌಸ್ ಮತ್ತು ಲಾಡ್ಜ್‌ಗಳಲ್ಲಿ ಸಿಕ್ಕಿರುವ ಮೃತದೇಹಗಳನ್ನೂ ಅನಾಮಿಕರು ಎಂದು ಅಂತ್ಯ ಸಂಸ್ಕಾರ ಮಾಡಲಾಗಿದೆ. ಕೆಲವನ್ನು ಆತ್ಮಹತ್ಯೆ ಎಂದು ಉಲ್ಲೇಖಿಸಲಾಗಿದ್ದು, ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂದೂ ಉಲ್ಲೇಖಿಸಿಲ್ಲ. ಮೂರು ಪ್ರಕರಣಗಳಲ್ಲಿ ಪೊಲೀಸರು ಯುಡಿಆರ್ ಸಂಖ್ಯೆಯನ್ನೂ ನೀಡಿಲ್ಲ” ಎಂದರು.
“2025ರ ಜುಲೈ 19ರಂದು ರಾಜ್ಯ ಸರ್ಕಾರವು ಈ ಪ್ರಕರಣಗಳನ್ನು ಪರಿಶೀಲಿಸಲು ಎಸ್‌ಐಟಿ ರಚಿಸಿದೆ. ಎಸ್‌ಐಟಿಯನ್ನೇ ಪೊಲೀಸ್ ಠಾಣೆ ಎಂದು ಗುರುತಿಸಲಾಗಿದ್ದು, ಹಿರಿಯ ಶ್ರೇಣಿಯ ಅಧಿಕಾರಿಯನ್ನು ಠಾಣಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಬಿಎನ್‌ಎಸ್ ಅಡಿ ಪ್ರಕ್ರಿಯೆ ನಡೆಸಿ ಅಂತಿಮ ವರದಿ ಸಲ್ಲಿಸಲು ಎಸ್‌ಐಟಿ ರಚಿಸಲಾಗಿದೆ. ಮೇಲಿಂದ ಮೇಲೆ ಎಸ್‌ಐಟಿಯು ಪ್ರಕರಣದ ಸಮಗ್ರ ವರದಿ ನೀಡಬೇಕು ಎಂದೂ ಅಧಿಸೂಚನೆಯಲ್ಲಿ ಹೇಳಲಾಗಿದೆ” ಎಂದರು.
“ಲಾಡ್ಜ್‌ನಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಪೊಲೀಸರು ಪಂಚಾಯಿತಿಗೆ ತಿಳಿಸಿ ಕೊಲೆ ಎಂದು ಬರೆಸಿದ್ದಾರೆ. ಆನಂತರ ಮೃತ ದೇಹದ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ರಸ್ತೆಯ ಬದಿಯಲ್ಲಿ ಮೃತದೇಹ ಸಿಕ್ಕರೂ ಪೊಲೀಸರು ಕಾನೂನಿನ ಅನ್ವಯ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಮಧ್ಯ ವಯಸ್ಸಿನ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಧರ್ಮಸ್ಥಳದ ಟ್ರಸ್ಟ್‌ನಲ್ಲಿ ಇನ್ನೊಬ್ಬ ಮಹಿಳೆ ಸಾವನ್ನಪ್ಪಿದ್ದರೂ ಸರಿಯಾದ ರೀತಿಯಲ್ಲಿ ಪ್ರಕ್ರಿಯೆ ನಡೆಸಿ, ವರದಿ ಮಾಡಲಾಗಿಲ್ಲ” ಎಂದರು.
ಅಲ್ಲದೇ, “ಮುಂದಿನ ವಿಚಾರಣೆಯಲ್ಲಿ ಈ ಅಸಹಜ ಸಾವುಗಳ ಕುರಿತು ಮಾಹಿತಿ ನೀಡಲು ಎಸ್‌ಐಟಿ ಮುಖ್ಯಸ್ಥರು ನ್ಯಾಯಾಲಯದ ಮುಂದೆ ಹಾಜರು ಇರಲು ನಿರ್ದೇಶಿಸಬೇಕು” ಎಂದು ಕೋರಿದರು.
ಈ ಹಂತದಲ್ಲಿ ಸರ್ಕಾರದ ವಕೀಲೆ ನಿಲೋಫರ್ ಅಕ್ಬರ್ ಅವರು ಅಡ್ವೊಕೇಟ್ ಜನರಲ್ ಇಲ್ಲದಿರುವುದರಿಂದ 74 ಅಸಹಜ ಸಾವುಗಳಿಗೆ ಸಂಬಂಧಿಸಿದ ದಾಖಲೆಯ ಕುರಿತು ಉತ್ತರಿಸಲು ಸಾಧ್ಯವಾಗಿಲ್ಲ. ಈ ಸಂಬಂಧ ಉತ್ತರಿಸಲು ಕಾಲಾವಕಾಶ ನೀಡಬೇಕು” ಎಂದು ಕೋರಿದರು. ಇದನ್ನು ಆಲಿಸಿದ ಪೀಠವು ವಿಚಾರಣೆಯನ್ನು ಆಗಸ್ಟ್ 24ಕ್ಕೆ ಮುಂದೂಡಿತು.