Narendra Modi and cheetah
Narendra Modi and cheetah Facebook & wikipedia
ಸುದ್ದಿಗಳು

ಸುಪ್ರೀಂ ಕೋರ್ಟ್‌ ಆದೇಶದ ಎರಡು ವರ್ಷಗಳ ನಂತರ ಪ್ರಧಾನಿ ಮೋದಿ ಜನ್ಮದಿನದಂದು ಗ್ವಾಲಿಯರ್‌ಗೆ ಬಂದ 8 ಚೀತಾಗಳು

Bar & Bench

ಎರಡು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್‌ ಅನುಮತಿಸಿದ್ದ ಆಫ್ರೀಕಾದ ಚೀತಾಗಳಿಗೆ ಭಾರತದಲ್ಲಿ ಪುನರ್ವಸತಿ ಕಲ್ಪಿಸುವ ಪ್ರಸ್ತಾವನೆಯ ಭಾಗವಾಗಿ ನಮೀಬಿಯಾದಿಂದ ಎಂಟು ಚೀತಾಗಳನ್ನು ಗ್ವಾಲಿಯರ್‌ಗೆ ಶನಿವಾರ ತರಲಾಯಿತು. ನಂತರ ಅವುಗಳನ್ನು ತಮ್ಮ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಮೋದಿಯವರು ಮದ್ಯಪ್ರದೇಶದ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆ ಮಾಡಿದರು.

ಭಾರತದಲ್ಲಿ ನಶಿಸಿ ಹೋಗಿದ್ದ ಚೀತಾ ಪ್ರಭೇದವನ್ನು ಮರಳಿ ಪರಿಚಯಿಸಲು ಕೋರಿ ಸುಪ್ರೀಂ ಕೋರ್ಟ್‌ ಮುಂದೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು (ಎನ್‌ಟಿಸಿಎ) 2017ರಲ್ಲಿ ಮನವಿ ಸಲ್ಲಿಸಿತ್ತು.

ಕೋರಿಕೆಯನ್ನು ಮನ್ನಿಸಿದ್ದ ಸುಪ್ರೀಂ ಕೋರ್ಟ್‌ ಇದೇ ವೇಳೆ ಪ್ರಮುಖ ಅವಲೋಕನವೊಂದನ್ನು ಸಹ ಮಾಡಿತ್ತು. "ಪರಿಚಯಿಸಲಾಗುತ್ತಿರುವ ಜೀವಪ್ರಭೇದವು ಆಫ್ರಿಕನ್‌ ಚೀತಾ ಆಗಿದ್ದು ಇದು ಭಾರತದಲ್ಲಿ ಎಂದೂ ಇರಲಿಲ್ಲ. ಹಾಗಾಗಿ, ಈ ಪ್ರಸ್ತಾವನೆಯು ಮರಳಿ ಪರಿಚಯಿಸುವುದಲ್ಲ ಬದಲಿಗೆ ಅವುಗಳ ವಾಸಸ್ಥಾನದ ಸ್ಥಳಾಂತರಿಸುವಿಕೆಯಾಗಿದೆ" ಎಂದು ಅದು ಹೇಳಿತ್ತು.

ಚೀತಾಗಳ ಈ ಸ್ಥಳಾಂತರವನ್ನು ಪ್ರಾಯೋಗಿಕವಾಗಿ ಕೈಗೊಳ್ಳಲಾಗುವುದು. ನಂತರ ಅವುಗಳು ಭಾರತದ ಹವಾಗುಣದ ಪರಿಸ್ಥಿತಿಯಲ್ಲಿ ಹೇಗೆ ಹೊಂದಿಕೊಳ್ಳಲಿವೆ ಎನ್ನುವುದನ್ನು ಗಮನಿಸಲಾಗುವುದು ಎಂದು ಅಂದಿನ ಸಿಜೆಐ ಎಸ್ ಎ ಬೊಬ್ಡೆ ನೇತೃತ್ವದ ಪೀಠವು ತನ್ನ ಆದೇಶದಲ್ಲಿ ದಾಖಲಿಸಿತ್ತು. ಈ ವಿಷಯದಲ್ಲಿ ಎನ್‌ಟಿಸಿಎಗೆ ವಿಷಯ ತಜ್ಞರು, ಪರಿಣತರು ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿತ್ತು.

ಜೀವ ಪ್ರಭೇದಗಳನ್ನು ಮರಳಿ ಪರಿಚಯಿಸುವುದು ನ್ಯಾಯಬದ್ಧವಾದ ಪ್ರಕ್ರಿಯೆ ಎಂದು ಪರಿಸರ ಮತ್ತು ಪರಿಸರ ಸಂಪನ್ಮೂಲಗಳ ಅಂತಾರಾಷ್ಟ್ರೀಯ ಸಂರಕ್ಷಣಾ ಸಂಸ್ಥೆಯು (ಐಯುಸಿಎನ್‌) ತನ್ನ ಮಾರ್ಗಸೂಚಿಯಲ್ಲಿ ಹೇಳಿದೆ ಎನ್ನುವ ಅಂಶವನ್ನು ಹಿರಿಯ ವಕೀಲ ಪ್ರಶಾಂತೋ ಚಂದ್ರ ಸೇನ್‌ ಅವರು ಸುಪ್ರೀಂ ಕೋರ್ಟ್‌ ಗಮನಕ್ಕೆ ತಂದಿದ್ದರು. ಅಲ್ಲದೆ, ಚೀತಾಗಳನ್ನು ಭಾರತಕ್ಕೆ ಮರಳಿ ತರುವ ಬಗ್ಗೆ ಹೆಚ್ಚಿನ ಅಧ್ಯಯನಗಳನ್ನು ಮಾಡಲಾಗಿದ್ದು ಇದಕ್ಕಾಗಿ ಅನೇಕ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದ್ದರು.