ಸುಪ್ರೀಂ ಕೋರ್ಟ್ ಕಟ್ಟಡ ವಿಸ್ತರಣೆ ಮತ್ತಿತರ ಸೌಲಭ್ಯಗಳಿಗಾಗಿ 800 ಕೋಟಿ ರೂಪಾಯಿ ವಿನಿಯೋಗಿಸಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ಘೋಷಿಸಿದ್ದಾರೆ
ನವದೆಹಲಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸುಪ್ರೀಂ ಕೋರ್ಟ್ ಪ್ರಥಮ ಕಲಾಪದ ವಜ್ರ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾಯಾಂಗದ ಭೌತಿಕ ಮೂಲಸೌಕರ್ಯ ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಬದ್ಧತೆಯನ್ನು ತಿಳಿಸಿದ ಅವರು 2014ರಿಂದ ಈ ಉದ್ದೇಶಕ್ಕಾಗಿ 7,000 ಕೋಟಿ ರೂ.ಗಿಂತ ಹೆಚ್ಚು ಹಣ ವಿನಿಯೋಗ ಮಾಡಲಾಗಿದೆ ಎಂದು ಪ್ರಸ್ತಾಪಿಸಿದರು.
ಸೆಂಟ್ರಲ್ ವಿಸ್ಟಾ ನಿರ್ಮಾಣದ ವೇಳೆ ಆದಂತೆ ಈ ಕಟ್ಟಡ ನಿರ್ಮಾಣಕ್ಕಾಗಿ ಮಾಡುತ್ತಿರುವ ವೆಚ್ಚ ಪ್ರಶ್ನಿಸಿ ಯಾವುದೇ ಅರ್ಜಿ ಸಲ್ಲಿಸುವುದಿಲ್ಲ ಎಂದು ಭಾವಿಸುವುದಾಗಿ ಪ್ರಧಾನಿ ಇದೇ ವೇಳೆ ಹಾಸ್ಯ ಪಟಾಕಿ ಹಾರಿಸಿದರು.
"ಸುಪ್ರೀಂ ಕೋರ್ಟ್ ಕಟ್ಟಡದ ವಿಸ್ತರಣೆಗೆ ನಾವು 800 ಕೋಟಿ ರೂ.ಗಳ ಅನುಮೋದನೆ ನೀಡಿದ್ದೇವೆ. ಸೆಂಟ್ರಲ್ ವಿಸ್ಟಾ ನಿರ್ಮಾಣದ ಸಮಯದಲ್ಲಿ ಸಂಭವಿಸಿದಂತೆ ಇದು ನಿಷ್ಪ್ರಯೋಜಕ ವೆಚ್ಚ ಎಂದು ಹೇಳುವ ಅರ್ಜಿಯನ್ನು ಯಾರೂ ಸಲ್ಲಿಸುವುದಿಲ್ಲ ಎಂದು ಭಾವಿಸುತ್ತೇವೆ" ಎಂದು ಪ್ರಧಾನಿ ಹೇಳಿದರು.
ಇದಲ್ಲದೆ, ಎರಡನೇ ಹಂತದ ಇ- ಕೋರ್ಟ್ ಯೋಜನೆಗೆ ಮಾಡಿದ ವೆಚ್ಚಕ್ಕಿಂತ ನಾಲ್ಕು ಪಟ್ಟು ವೆಚ್ಚವನ್ನು ಮೂರನೇ ಹಂತದ ಇ-ಕೋರ್ಟ್ ಯೋಜನೆಗೆ ನೀಡಲಾಗಿದೆ ಎಂದು ಪ್ರಧಾನಿ ತಿಳಿಸಿದರು. ನ್ಯಾಯಾಲಯದ ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸುವ ಕಾರ್ಯ ಆರಂಭವಾಗಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದ ಅವರು ದೇಶದ ಉಳಿದ ನ್ಯಾಯಾಲಯಗಳು ಇದನ್ನು ಅನುಸರಿಸುತ್ತವೆ ಎಂದು ಆಶಿಸುವುದಾಗಿ ತಿಳಿಸಿದರು.
ವಿಕಸಿತ ಭಾರತಕ್ಕೆ ಶಕ್ತಿಯುತ ನ್ಯಾಯಾಂಗ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು. ಜೊತೆಗೆ ಜನ ವಿಶ್ವಾಸ್ ಮಸೂದೆ ಎಂಬುದು ಅನಗತ್ಯ ಹೊರೆ ಕಡಿಮೆ ಮಾಡುವ ಮೂಲಕ ನ್ಯಾಯಾಂಗವನ್ನು ಬಲಪಡಿಸಲು ಇರಿಸಿದ ಹೆಜ್ಜೆಯಾಗಿದೆ ಎಂದು ಅವರು ಒತ್ತಿ ಹೇಳಿದರು.