Lokayukta and Karnataka HC 
ಸುದ್ದಿಗಳು

[ಲೋಕಾಯುಕ್ತ] ಭ್ರಷ್ಟಾಚಾರ ನಿಯಂತ್ರಣ ಕಾಯಿದೆ: ವಿಚಾರಣೆ ಹಂತದಲ್ಲಿ 808 ಪ್ರಕರಣಗಳು

ಕರ್ನಾಟಕ ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ಮತ್ತಿತರ ಆರೋಪದ ಹಿನ್ನೆಲೆಯಲ್ಲಿ ನವೆಂಬರ್‌ ಅಂತ್ಯಕ್ಕೆ ದಾಖಲಾಗಿರುವ 7,828 ಪ್ರಕರಣಗಳು ವಿಲೇವಾರಿಗೆ ಬಾಕಿ ಉಳಿದಿದ್ದು, 8,201 ಪ್ರಕರಣಗಳು ಇತ್ಯರ್ಥಗೊಂಡಿವೆ.

Bar & Bench

ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ವಿವಿಧ ಅಧಿಕಾರಿಗಳ ಮನೆ, ಕಚೇರಿ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿರುವ ಅಕ್ರಮ ಹಣ, ಆಸ್ತಿ ದಾಖಲೆಯ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ದಾಖಲಿಸಿರುವ 808 ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ಕಳೆದ ವರ್ಷದ (2021) ನವೆಂಬರ್‌ ಅಂತ್ಯಕ್ಕೆ ವಿಚಾರಣೆಯ ಹಂತದಲ್ಲಿವೆ. ಕೆಲವು ಪ್ರಕರಣಗಳಲ್ಲಿ ಕರ್ನಾಟಕ ಹೈಕೋರ್ಟ್‌ ತಡೆ ನೀಡಿದೆ. ಕೆಲವು ಪ್ರಕರಣಗಳಲ್ಲಿ ವಾದ-ಪ್ರತಿವಾದ ನಡೆಯುತ್ತಿದ್ದು, ಇನ್ನು ಕೆಲವು ಪ್ರಕರಣಗಳು ಸಾಕ್ಷಿ ದಾಖಲು ಹಂತದಲ್ಲಿವೆ. ಮತ್ತೆ ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ತೀರ್ಪು ಕಾಯ್ದಿರಿಸಿವೆ.

ಕಳೆದ ವರ್ಷದ ನವೆಂಬರ್‌ ಅಂತ್ಯಕ್ಕೆ ಕರ್ನಾಟಕ ಹೈಕೋರ್ಟ್‌ನಲ್ಲಿ ಸರ್ಕಾರಿ ಅಧಿಕಾರಿಗಳು, ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳು 169 ಪ್ರಕರಣ ಮತ್ತು ಮೇಲ್ಮನವಿಗಳಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಪ್ರತಿವಾದಿಯಾಗಿಸಿದ್ದು, ಅವು ವಿಚಾರಣೆಗೆ ಬಾಕಿ ಇವೆ. 668 ಕ್ರಿಮಿನಲ್‌ ಮೇಲ್ಮನವಿಗಳು, 36 ಕ್ರಿಮಿನಲ್‌ ಮನವಿಗಳಲ್ಲಿ ಲೋಕಾಯುಕ್ತ ಸಂಸ್ಥೆಯು ಪ್ರತಿವಾದಿ ಸ್ಥಾನದಲ್ಲಿದೆ.

ಇನ್ನು ಲೋಕಾಯಕ್ತ ಸಂಸ್ಥೆಯು ತೀರ್ಪು ಮರುಪರಿಶೀಲನೆ ಕೋರಿ ಸಲ್ಲಿಸಿರುವ 50 ಮನವಿಗಳು ವಿಚಾರಣೆಗೆ ಬಾಕಿ ಇವೆ. ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿಯಲ್ಲಿ ದಾಖಲಿಸಲಾಗಿರುವ 46 ಕ್ರಿಮಿನಲ್‌ ಪ್ರಕರಣಗಳಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಪ್ರತಿವಾದಿಯನ್ನಾಗಿಸಲಾಗಿದೆ.

ಇನ್ನು ನವೆಂಬರ್‌ ಅಂತ್ಯಕ್ಕೆ ಕರ್ನಾಟಕ ರಾಜ್ಯ ಆಡಳಿತಾತ್ಮ ನ್ಯಾಯಾಧಿಕರಣದಲ್ಲಿ (ಕೆಎಟಿ) 703 ಪ್ರಕರಣಗಳು ವಿಲೇವಾರಿ ಬಾಕಿ ಉಳಿದಿವೆ. ಈ ಎಲ್ಲಾ ಪ್ರಕರಣಗಳಲ್ಲಿ ಲೋಕಾಯುಕ್ತ ಸಂಸ್ಥೆಯು ಪ್ರತಿವಾದಿಯಾಗಿದೆ. ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ದಾಳಿಗೆ ಒಳಗಾದ ಅಧಿಕಾರಿಗಳು ಕೆಎಟಿ ಮೊರೆ ಹೋಗಿದ್ದಾರೆ. ಲೋಕಾಯುಕ್ತ ಸಂಸ್ಥೆಯನ್ನು ಪ್ರತಿವಾದಿಯಾಗಿಸಿ ಎರಡು ಪ್ರಕರಣಗಳಲ್ಲಿ ತೀರ್ಪು ಮರು ಪರಿಶೀಲನೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳು ಕೆಎಟಿಯಲ್ಲಿ ಬಾಕಿ ಇವೆ.

ಕರ್ನಾಟಕ ಲೋಕಾಯುಕ್ತದಲ್ಲಿ ಈವರೆಗೆ ಭ್ರಷ್ಟಾಚಾರ ಮತ್ತಿತರ ಆರೋಪದ ಹಿನ್ನೆಲೆಯಲ್ಲಿ ನವೆಂಬರ್‌ ಅಂತ್ಯಕ್ಕೆ ದಾಖಲಾಗಿರುವ 7,828 ಪ್ರಕರಣಗಳು ವಿಲೇವಾರಿಗೆ ಬಾಕಿ ಉಳಿದಿದ್ದು, 8,201 ಪ್ರಕರಣಗಳು ಇತ್ಯರ್ಥಗೊಂಡಿವೆ.